ಕ್ರೈಸ್ತರಾಗಿ ನಾವು ಒಬ್ಬರೊನ್ನೊಬ್ಬರು ನಂಬಿಕೆಯಲ್ಲಿ ಉತ್ತೇಜಿಸುತ್ತಾ- ಪರಿಶುದ್ಧರಾಗಿ ಜೀವಿಸುವುದಕ್ಕಾಗಿ ಕರೆಯಲ್ಪಟ್ಟಿದ್ದೇವೆ. ಆದಾಗಿಯೂ ನಮ್ಮ ಉತ್ಸಾಹವು ಸತ್ಯವೇದ ಆಧಾರಿತ ಮಟ್ಟವನ್ನು ಎತ್ತಿ ಹಿಡಿಯುವಂತಿರಬೇಕು. ವಿವೇಚನೆ ಮಾಡುವಂತಹ ಸಂದರ್ಭದಲ್ಲಿ ತೀರ್ಪು ಮಾಡುವವರಾಗದಂತೆ ನಮ್ಮ ಮಿತಿಗಳನ್ನು ಮೀರದಂತೆ ಜಾಗ್ರತೆ ವಹಿಸಬೇಕು.
ವಿವೇಚನೆ ಮತ್ತು ತೀರ್ಪು ಇವೆರಡೂ ಮೇಲ್ಮುಖವಾಗಿ ಒಂದೇ ರೀತಿ ಕಾಣುತ್ತಿದ್ದರೂ ನಮ್ಮ ನಡೆಯಿಂದಾಗಲೀ ನಮ್ಮ ಮಾತುಗಳಿಂದಾಗಲೀ ನಾವು ಪಾಪ ಮಾಡದಂತೆ ಎರಡರ ನಡುವಿನ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳುವಂತದ್ದು ಬಹಳ ಮುಖ್ಯವಾದದ್ದು.
ನಮ್ಮನ್ನು ನಾವು ಮೊದಲು ಪರೀಕ್ಷಿಸಿಕೊಳ್ಳುವುದು.
ವಿವೇಚನೆ ಮತ್ತು ತೀರ್ಪು ಇವೆರಡನ್ನೂ ವಿಭಜಿಸಲು ಇರುವಂತಹ ಒಂದು ಕೀಲಿ ಕೈ ಎಂದರೆ ಮತ್ತೊಬ್ಬರ ಕೆಲಸಗಳನ್ನು ತೂಕ ಮಾಡುವುದಕ್ಕಿಂತ ಮುಂಚಿತವಾಗಿ ನಾವು ನಮ್ಮನ್ನು ಸರಿಯಾಗಿ ಪರೀಕ್ಷಿಸಿಕೊಳ್ಳಬೇಕು.
ಅಪೋಸ್ತಲನಾದ ಪೌಲನು 1ಕೊರಿಯಂತೆ 11:28,31 ರಲ್ಲಿ "ಪ್ರತಿಮನುಷ್ಯನು ತನ್ನನ್ನು ಪರೀಕ್ಷಿಸಿಕೊಳ್ಳಲಿ .....
...ನಮ್ಮನ್ನು ನಾವೇ ವಿಚಾರಿಸಿಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ."ಎಂದು ಸೂಚಿಸುತ್ತಾನೆ.
ಆದರೆ ಇದಕ್ಕೆ ತದ್ವಿರುದ್ಧವಾಗಿ ಒಬ್ಬರು ಯಾವಾಗಲೂ ಇನ್ನೊಬ್ಬರನ್ನು ಖಂಡಿಸುವಂಥದ್ದು ಸಭೆಯಲ್ಲಿ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಕೆಲವರು ಅವರ ಜೀವಿತದಲ್ಲಿ ಈ ಸಮಸ್ಯೆಗಳಿಂದ ಹೊರ ಬರಬೇಕಾದ ಅವಶ್ಯಕತೆ ಇದೆ. "ಆದದರಿಂದ ಎಲೈ ಮನುಷ್ಯನೇ, ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಯಾವನಾದರೂ ಸರಿಯೇ, ಉತ್ತರ ಹೇಳುವದಕ್ಕೆ ನಿನಗೆ ಮಾರ್ಗವಿಲ್ಲ. ಹೇಗಂದರೆ ಮತ್ತೊಬ್ಬರಲ್ಲಿ ದೋಷವೆಣಿಸುವದರಿಂದ ನಿನ್ನನ್ನು ನೀನೇ ದೋಷಿಯೆಂದು ತೀರ್ಪುಮಾಡಿಕೊಂಡ ಹಾಗಾಯಿತು. ಮತ್ತೊಬ್ಬರಲ್ಲಿ ದೋಷವೆಣಿಸುವ ನೀನು ಆ ದೋಷಗಳನ್ನೇ ನಡಿಸುತ್ತೀಯಲ್ಲಾ."ಎಂದು ರೋಮಾಪುರದವರಿಗೆ 2:1 ನಮ್ಮನ್ನು ಎಚ್ಚರಿಸುತ್ತದೆ.
ನಾವು ಬೇರೆಯವರ ಕಣ್ಣುಗಳಲ್ಲಿ ಬಿದ್ದಿರುವ ರವೆಯನ್ನು ತೆಗೆಯುವ ಮುನ್ನ ನಮ್ಮ ಕಣ್ಣುಗಳಲ್ಲಿ ಬಿದ್ದಿರುವ ತೊಲೆಯನ್ನು ತೆಗೆದು ಹಾಕಬೇಕು (ಮತ್ತಾಯ 7:5)
ಯಾವುದೇ ನಿರ್ಣಯಕ್ಕೆ ಬರುವ ಮುಂಚೆ ಸತ್ಯಗಳನ್ನು ಕಲೆ ಹಾಕುವುದು.
ವಿವೇಚನೆ ಮತ್ತು ತೀರ್ಪಿನ ನಡುವಿನ ಮತ್ತೊಂದು ವ್ಯತ್ಯಾಸ ನಾವು ಹೇಗೆ ಮಾಹಿತಿಗಳನ್ನು ಕಾರ್ಯಗತಗೊಳಿಸುತ್ತೇವೆ ಎಂಬುದಕ್ಕೆ ಸಂಬಂಧಿಸಿದೆ. ವಿವೇಚನೆಯು ಒಂದು ತೀರ್ಮಾನಕ್ಕೆ ಬರುವ ಮೊದಲು ಅದಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ಮಾಹಿತಿಯು ನಿಖರವಾಗಿದೆಯೋ ಇಲ್ಲವೋ ಎಂಬುದನ್ನು ಎಚ್ಚರಿಕೆಯಿಂದ ಪರಿಶೀಲಿಸುವುದನ್ನು ಒಳಗೊಂಡಿರುತ್ತದೆ."ಆದರೆ ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ;" ಎಂದು 1 ಥೆಸಲೋನಿಕದವರಿಗೆ 5:21 ನಮ್ಮನ್ನು ಉತ್ತೇಜಿಸುತ್ತದೆ.
ಮತ್ತೊಂದೆಡೆ ತೀರ್ಪು ಮಾಡುವಂತದ್ದು ಸಾಮಾನ್ಯವಾಗಿ ಮೊದಲ ಅನಿಸಿಕೆಗಳು, ಮೊದಲು ಕೇಳಿದ ಸಂಗತಿಗಳು ಮುಂತಾದ ಸೀಮಿತ ಮಾಹಿತಿಗಳ ಆಧಾರದ ಮೇಲೆ ಒಂದು ನಿರ್ಣಯಕ್ಕೆ ತಕ್ಷಣವೇ ನೆಗೆದು ಬಿಡುತ್ತದೆ.ತೀರ್ಪು ಮಾಡುವವರು ಈಗಾಗಲೇ ಅವರಲ್ಲಿರುವ ಪೂರ್ವಗ್ರಹ ಪೀಡಿತ ಅಭಿಪ್ರಾಯಗಳನ್ನು ಸರಿಯಾದದೆಂದು ಸಮರ್ಥನೆ ನೀಡಲು ಅದಕ್ಕೆ ಬೆಂಬಲಿಸುವಂತಹ ಸಾಕ್ಷಿಗಳನ್ನು ಹುಡುಕುತ್ತಾರೆ. ಆದರೆ ಜ್ಞಾನೋಕ್ತಿ 18:13 "ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು." ಎಂದು ಎಚ್ಚರಿಸುತ್ತದೆ.ಹಾಗಾಗಿ ನಾವು ಯಾವುದೇ ರೀತಿಯ ತೀರ್ಪು ಮಾಡುವ ಮೊದಲು ನಾವು ಸತ್ಯಗಳನ್ನು ಸಂಗ್ರಹಿಸಬೇಕು ಮತ್ತು ಸಾಕ್ಷಿಗಳ ಮಾತುಗಳನ್ನು ಕೇಳಿಸಿಕೊಳ್ಳಬೇಕು
ಪ್ರತ್ಯೇಕವಾಗಿ ಕರೆದು ಸಂಗತಿಗಳ ಕುರಿತು ವಿಚಾರಿಸುವುದು.
ಮೂರನೇ ವ್ಯತ್ಯಾಸವೆಂದರೆ ವಿವೇಚನೆ ಮಾಡುವಂಥದ್ದು ಸಾಮಾನ್ಯವಾಗಿ ಸಮಸ್ಯೆಗಳನ್ನು ಸಾಧ್ಯವಾದಷ್ಟು ಖಾಸಗಿಯಾಗಿ ಪರಿಹರಿಸಲು ಪ್ರಯತ್ನಿಸುತ್ತದೆ. ಆದರೆ ತೀರ್ಪು ಮಾಡುವಂತದ್ದು ಸಾರ್ವಜನಿಕವಾಗಿ ಬಹಿರಂಗಪಡಿಸಿ ಖಂಡಿಸುತ್ತದೆ.ಮತ್ತಾಯ 18 15 ರಲ್ಲಿ ನಮ್ಮ ಕರ್ತನಾದ ಯೇಸು ಸ್ವಾಮಿಯು ಈ ರೀತಿ ಖಾಸಗಿಯಾಗಿ ಕರೆದು ಸಮಸ್ಯೆಗಳನ್ನು ವಿಚಾರಿಸುವ ತತ್ವವನ್ನು ತಾನೇ ಎತ್ತಿ ಹಿಡಿಯುತ್ತಾನೆ "ಇದಲ್ಲದೆ ನಿನ್ನ ಸಹೋದರನು ತಪ್ಪುಮಾಡಿದರೆ ನೀನು ಹೋಗಿ ನೀನೂ ಅವನೂ ಇಬ್ಬರೇ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ."
ವಿವೇಚನೆಯು ಮುಗ್ಗರಿಸುವ ಸಹೋದರ -ಸಹೋದರಿಯರ ಸಂಬಂಧಗಳನ್ನು ಪುನಸ್ತಾಪಿಸುವ ಗುರಿಯನ್ನು ಹೊಂದಿದೆಯೇ ಹೊರತು ಎಂದಿಗೂ ಅವರನ್ನು ಸಾರ್ವಜನಿಕವಾಗಿ ಅವಮಾನಕ್ಕೀಡು ಮಾಡುವುದಿಲ್ಲ.
"ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ. ನೀನಾದರೋ ದುಷ್ಪ್ರೇರಣೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು."ಎಂದು ಗಲಾತ್ಯದವರಿಗೆ 6:1 ನಮ್ಮನ್ನು ಮಾರ್ಗದರ್ಶಿಸುತ್ತದೆ.ನಮಗೆ ಯಾರಾದರೂ ಹೇಗೆ ಕರುಣೆ ತೋರಿಸಿದರೆ ಒಳ್ಳೆಯದೆಂದು ನಾವು ಬಯಸುತ್ತೇವೆಯೋ ಅದೇ ರೀತಿಯ ಕರುಣೆಯನ್ನು ನಾವೂ ಸಹ ತೋರಿಸಬೇಕು.
ನಾವು ಕೊಡಬೇಕಾದ ಲೆಕ್ಕದ ವಿಚಾರವನ್ನು ಗುರುತಿಸಿಕೊಳ್ಳಬೇಕು.
ಕಟ್ಟಕಡೆಯದಾಗಿ "ತೀರ್ಪು ಮಾಡುವುದು ದೇವರ ಕೆಲಸವೇ ಹೊರತು ನಮ್ಮದಲ್ಲ" ಎಂಬುದನ್ನು ನಾವು ಗುರುತಿಸಿಕೊಳ್ಳಬೇಕು. "ತಿನ್ನದವನೇ, ನಿನ್ನ ಸಹೋದರನ ವಿಷಯವಾಗಿ ನೀನು ತೀರ್ಪುಮಾಡುವದೇನು? ತಿನ್ನುವವನೇ, ನಿನ್ನ ಸಹೋದರನನ್ನು ನೀನು ಹೀನೈಸುವದೇನು? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕಲ್ಲಾ. ...ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು." ಎಂದು ರೋಮಾಪುರದವರಿಗೆ 14:10,12 ನಮ್ಮನ್ನು ಕೇಳುತ್ತದೆ.
ಒಂದು ದಿನ ನಾವೆಲ್ಲರೂ ನಾವು ನಡೆಸಿದ ಜೀವಿತದ ಕುರಿತು ಉತ್ತರ ಹೇಳಬೇಕಾಗಿದೆಯೇ ಹೊರತು ಬೇರೆಯವರು ನಮ್ಮನ್ನು ಏನೆಲ್ಲಾ ಟೀಕಿಸಿದರು ಎಂಬುದಕಲ್ಲ. ಯಾರಾದರೂ ಒಂದು ದೋಷದಲ್ಲಿದ್ದರೆ ನಾವು ಖಂಡಿತವಾಗಿಯೂ ಸಮಾಧಾನವಾಗಿ ವಿವೇಚಿಸಿ ಅವರನ್ನು ತಿದ್ದಬೇಕು ನಿಜವೇ. ಆದರೆ ಇದನ್ನು ದೀನತೆಯಿಂದಲೂ ಜಾಗರೂಕತೆಯಿಂದಲೂ ಮತ್ತು ನಾವು ಸಹ ಬಲಹೀನತೆ ಉಳ್ಳವರೇ ಎಂಬ ಜ್ಞಾನವಿಟ್ಟುಕೊಂಡು ಮಾಡಬೇಕಷ್ಟೆ.
ಆತ್ಮ ಪರೀಕ್ಷೆ, ವಾಸ್ತವತೆಯ ತಿಳುವಳಿಕೆ ಮತ್ತು ಪುನಸ್ತಾಪಿಸುವ ಬಯಕೆಯಿಂದ ಕೂಡಿದ ವಿವೇಚನೆಯಿಂದ ಕಾರ್ಯನಿರ್ವಹಿಸಬೇಕೆಂದು ನಮ್ಮ ಹೃದಯಗಳಲ್ಲಿ ಯೋಚಿಸಿಕೊಳ್ಳೋಣ. ಅದಕ್ಕೆ ಬದಲು "ಸತ್ಯಗಳು ನಿಮ್ಮ ಸ್ನೇಹಿತರು ಆದರೆ ಊಹೆಗಳು ನಿಮ್ಮ ಶತ್ರುಗಳು" ಎಂಬ ಗಾದೆಯಂತೆ ಎಂದಿಗೂ ಸಹ ಬೂಟಾಟಿಕೆಗಳಿಂದ ಊಹೆಗಳಿಂದ ಸಾರ್ವಜನಿಕವಾಗಿ ಅವಮಾನ ಮಾಡುವಂತಹ ತೀರ್ಪುಗಳ ಯೋಚನೆಗಳು ನಮಗೆ ಬೇಡವೇ ಬೇಡ.
ಪ್ರಾರ್ಥನೆಗಳು
ಪ್ರೀತಿಯುಳ್ಳ ಪರಲೋಕದ ತಂದೆಯೇ ಒಬ್ಬರನ್ನು ತೂಗಿ ನೋಡುವ ಮೊದಲು ನಾನು ನನ್ನ ಹೃದಯವನ್ನು ಪರೀಕ್ಷಿಸಿಕೊಳ್ಳುವಂತೆಯೂ ಜ್ಞಾನದಿಂದಲೂ ಕೃಪೆಯಿಂದಲೂ ವಿವೇಚನೆ ಮಾಡುವಂತೆಯೂ ನನಗೆ ಸಹಾಯ ಮಾಡು.ತೀರ್ಪು ಮಾಡುವಂತದ್ದು ನಿನ್ನ ಕೆಲಸವೆಂಬುದನ್ನು ನಾನು ಯಾವಾಗಲೂ ನೆನಪಿಟ್ಟುಕೊಳ್ಳುವಂತೆ ಸಹಾಯ ಮಾಡು. ನನ್ನ ಆಲೋಚನೆಗಳನ್ನು, ಮಾತುಗಳನ್ನು, ನನ್ನ ನಡೆ-ನುಡಿಗಳನ್ನು ಪರಿಶುದ್ಧ ಮಾಡು ಆಗ ಮಾತ್ರವೇ ನಾನು ನಿನ್ನನ್ನು ಯಾವಾಗಲೂ ಗೌರವಿಸಲು ಸಾಧ್ಯವಾಗುತ್ತದೆ. ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ, ಆಮೆನ್.
Join our WhatsApp Channel
Most Read
● ಇಸ್ಕಾರಿಯೋತ ಯೂದನ ಜೀವನದಿಂದ ಕಲಿಯಬೇಕಾದ ಪಾಠಗಳು- 3● ಬದಲಾಗಲು ಇನ್ನೂ ತಡವಾಗಿಲ್ಲ
● ಯೇಸುವಿನ ಹೆಸರು.
● ಕೃಪೆಯ ಉಡುಗೊರೆ
● ದೇವರಿಗಾಗಿ ದಾಹದಿಂದಿರುವುದು
● ಯೇಸುವನ್ನು ನೋಡುವ ಬಯಕೆ
● ನಿಮ್ಮ ಜೀವದದಲ್ಲಿ ಎಂದೂ ಅಳಿಯದಂತ ಬದಲಾವಣೆಯನ್ನು ತರುವುದು ಹೇಗೆ?-1
ಅನಿಸಿಕೆಗಳು