ಅನುದಿನದ ಮನ್ನಾ
2
1
75
ಒಂದೇ ವಿಷಯ: ಕ್ರಿಸ್ತನಲ್ಲಿ ನಿಜವಾದ ಸಂಪತ್ತನ್ನು ಕಂಡುಕೊಳ್ಳುವುದು.
Monday, 19th of January 2026
ಪ್ರತಿಯೊಂದು ಮಾನವ ಹೃದಯದ ಆಳದಲ್ಲಿ ಇನ್ನೂ ಏನೋ ಹೆಚ್ಚಿನದನ್ನು ಹೊಂದಿಕೊಳ್ಳಬೇಕೆಂಬ ತೀವ್ರ ಬಯಕೆಯಿದೆ. ಹೆಚ್ಚು ಯಶಸ್ವಿಯಾಗಿ ಕಾಣುವ ಜನರು ಸಹ ಜೀವನ ಎಂದರೆ ತಿನ್ನುವುದು, ಕೆಲಸ ಮಾಡುವುದು, ಸಂಪಾದಿಸುವುದು ಮತ್ತು ಮಲಗುವುದಕ್ಕಿಂತಲೂ ಹೆಚ್ಚಿನದಾಗಿರಬೇಕು ಎಂದು ಭಾವಿಸುತ್ತಾರೆ. "ಇದೇ ನಿಜವೇ?" ಎಂದು ಸದ್ದಿಲ್ಲದೆ ಕೇಳುವ ಒಂದು ಆಂತರಿಕ ಧ್ವನಿ ಇದೆ. ಆಳವಾದ ಅರ್ಥಕ್ಕಾಗಿ ಹುಟ್ಟುವ ಈ ಹಸಿವು ದೇವರು ಸ್ವತಃ ನಮ್ಮೊಳಗೆ ಇಟ್ಟಿರುವ ವಿಷಯವಾಗಿದೆ. ಈ ಆಂತರಿಕ ಹುಡುಕಾಟವು ಯೇಸು ಮತ್ತು ಐಶ್ವರ್ಯವಂತನಾದ ಯೌವ್ವನಸ್ಥನ ಕಥೆಯಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.
ಆ ಯುವಕನು ಶ್ರೀಮಂತನಾಗಿದ್ದನು, ಸಮಾಜದಲ್ಲಿ ಗೌರವಾನ್ವಿತನಾಗಿದ್ದನು ಮತ್ತು ಧಾರ್ಮಿಕ ನಿಯಮಗಳನ್ನು ಪಾಲಿಸುವಲ್ಲಿ ಶಿಸ್ತುಬದ್ಧನಾಗಿದ್ದನು. ಹೊರಗಿನಿಂದ, ಅವನ ಜೀವನವು ಪರಿಪೂರ್ಣವಾಗಿ ಇರುವಂತೆ ಕಾಣುತ್ತದೆ. ಆದರೂ ಯಾವುದೋ ಒಂದು ಬಯಕೆ ಅವನನ್ನು ಆಳವಾಗಿ ತೊಂದರೆಗೊಳಿಸಿ ಅದಕ್ಕಾಗಿಯೇ ಅವನು ನಿತ್ಯ ಜೀವನದ ಕುರಿತಾದ ಒಂದು ಪ್ರಮುಖ ಪ್ರಶ್ನೆಯೊಂದಿಗೆ ಕರ್ತನಾದ ಯೇಸುವಿನ ಬಳಿಗೆ ಓಡಿ ಬರುವಂತೆ ಮಾಡಿತು. ಅವನಲ್ಲಿ ಎಲ್ಲಾ ಸಾಧನೆಗಳಿದ್ದರೂ ಸಹ, ತನ್ನಲ್ಲಿ ಯಾವುದೋ ಒಂದು
ಪ್ರಮುಖವಾದ ಕೊರತೆಯಿದೆ ಎಂಬುದಾಗಿ ಅವನು ಗ್ರಹಿಸಿದನು.
ಆಗ ಯೇಸು ಅವನಿಗೆ
"ಇನ್ನೂ ನಿನಗೆ ಒಂದು ಕಡಿಮೆಯಾಗಿದೆ; ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು ಎಂದು ಹೇಳಿದನು."(ಲೂಕ 18:22)
ಮೊದಲು ಇದನ್ನು ನೋಡುವಾಗ, ಇದು ವಿಪರೀತವಾಗಿ ತೋರುತ್ತದೆ. ಆದರೆ ಯೇಸು ಆ ಮನುಷ್ಯನ ಸಂಪತ್ತಿನ ಮೇಲೆ ದಾಳಿ ಮಾಡಬೇಕೆಂದು ಬಯಸದೇ - ಆತನು ಆ ಮನುಷ್ಯನ ಹೃದಯವನ್ನು ಬದಲಾಯಿಸಬೇಕೆಂದು ಉದ್ದೇಶಿಸುತ್ತಿದ್ದನು. ಮಾರ್ಕನ ಸುವಾರ್ತೆಯು ಯೇಸುವಿನ ಉದ್ದೇಶ ಏನಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುವ ಒಂದು ಪ್ರಮುಖ ವಿವರವನ್ನು ಸೇರಿಸುತ್ತದೆ ಅದೇನೆಂದರೆ:
"ಯೇಸು ಅವನನ್ನು ದೃಷ್ಟಿಯಿಟ್ಟು ನೋಡಿ ಅವನನ್ನು ಪ್ರೀತಿಸಿ." ಎನ್ನುತ್ತದೆ(ಮಾರ್ಕ್ 10:21)
ಯೇಸು ಕರ್ತನು ಈ ಮಾತುಗಳನ್ನು ಕೋಪದಿಂದಲ್ಲ, ಪ್ರೀತಿಯಿಂದಲೇ ಹೇಳಿದನು. ಆತನು ಮನುಷ್ಯನನ್ನು ಎಲ್ಲವನ್ನು ಕಳೆದುಕೊಂಡು ಬಡತನಕ್ಕೆ ಬರಲಿ ಎಂದು ಕರೆಯದೇ, ಸ್ವಾತಂತ್ರ್ಯಕ್ಕೆ ಕರೆದನು. ಸಂಪತ್ತು ಸ್ವತಃ ಕೆಟ್ಟದ್ದಲ್ಲ, ಆದರೆ ಸಂಪತ್ತು ಹೃದಯವನ್ನೇ ನಿಯಂತ್ರಿಸುವಾಗ, ಅದು ಆ ವ್ಯಕ್ತಿ ಮತ್ತು ದೇವರ ನಡುವೆ ತಡೆಗೋಡೆಯಾಗುತ್ತದೆ. ಆದರಿಂದ ಯೇಸು ಅವನನ್ನು ತಾತ್ಕಾಲಿಕ ತೃಪ್ತಿಗಲ್ಲ, ಶಾಶ್ವತ ಮೌಲ್ಯದಿಂದ ತುಂಬಿದ ಜೀವನಕ್ಕೆ - ನಿಜವಾದ ಸಂಪತ್ತಿನ ಕಡೆಗೆ ಅವನನ್ನು ಆಹ್ವಾನಿಸುತ್ತಿದ್ದನು.
ಆ ಯುವಕನು ಲೋಕದ ಮಾನದಂಡಗಳಲ್ಲಿ ಯಶಸ್ವಿಯಾಗಿದ್ದನು, ಆದರೆ ಅವನ ಆ ಯಶಸ್ಸು ಅವನಿಗೆ ಸಮಾಧಾನವನ್ನು ನೀಡಿರಲಿಲ್ಲ. ಒಬ್ಬರು ಒಮ್ಮೆ ಜ್ಞಾನದಿಂದ ಬರೆದಿದ್ದಾರೆ ಅದೇನೆಂದರೆ:
"ನಮ್ಮ ಕರ್ತನು ನಮ್ಮಲ್ಲಿರುವ ಸ್ವಾಭಾವಿಕವಾದ ಸದ್ಗುಣಗಳನ್ನು ಎಂದಿಗೂ ಸರಿಪಡಿಸುವುದಿಲ್ಲ; ಆದರೆ ಆತನು ಇಡೀ ವ್ಯಕ್ತಿಯನ್ನು ಆಂತರ್ಯದಿಂದ ಪುನರ್ನಿರ್ಮಿಸುತ್ತಾನೆ."
ಇದು ಸಮಸ್ಯೆಯನ್ನು ಸ್ಪಷ್ಟವಾಗಿ ವಿವರಿಸುತ್ತದೆ. ಆ ಐಶ್ವರ್ಯ ವಂತನಾದ ಯೌವ್ವನಸ್ಥನು ಬಾಹ್ಯವಾಗಿ ಅನೇಕ ನೀತಿಯ ಕಾರ್ಯಗಳನ್ನು ಮಾಡುತ್ತಿದ್ದನು, ಆದರೆ ಒಳಗೆ, ಅವನು ಇನ್ನೂ ಖಾಲಿಯಾಗಿದ್ದನು. ಧರ್ಮಶಾಸ್ತ್ರಕ್ಕೆ ಅವನು ತೋರುತ್ತಿದ್ದ ವಿಧೇಯತೆಗೆ ಅವನ ಹೃದಯವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ಯೇಸು ತನ್ನ ಮತ್ತು ನಿಜವಾದ ಶಿಷ್ಯತ್ವದ ನಡುವೆ ಅಲ್ಲಿ ನಿಂತಿರುವ ಒಂದು ವಿಷಯವನ್ನು ಗುರುತಿಸಿದನು - ಅದುವೇ ಅವನ ಸಂಪತ್ತು. ಅದು ಸದ್ದಿಲ್ಲದೆ ಅವನ ಹೃದಯದಲ್ಲಿ ವಿಗ್ರಹವಾಗಿತ್ತು.
ಅದೇ ರೀತಿಯಲ್ಲಿ, ಯೇಸು ನಮ್ಮಲ್ಲಿ ಪ್ರತಿಯೊಬ್ಬರನ್ನು ನಮ್ಮ ಸ್ವಂತ ಹೃದಯಗಳನ್ನು ಪರೀಕ್ಷಿಸಿಕೊಳ್ಳಬೇಕೆಂದು ಪ್ರೀತಿಯಿಂದ ಕರೆಯುತ್ತಾನೆ. ನಮ್ಮ "ಒಂದು ವಿಷಯ" ಹಣವಾಗಿಲ್ಲದಿರಬಹುದು. ಕೆಲವರಿಗೆ, ಅದು ಯಾವಾಗಲೂ ಯಶಸ್ಸನ್ನು ಬೆನ್ನಟ್ಟುವ- ಮಹತ್ವಾಕಾಂಕ್ಷೆಯಾಗಿರಬಹುದು . ಇತರರಿಗೆ, ಅದು ಸಂಬಂಧಗಳು, ಜನರ ಭಯ, ಸಾಂತ್ವನ, ಹೆಮ್ಮೆ ಅಥವಾ ನಿಯಂತ್ರಣ ಮಾಡುವ ಸ್ಥಾನದಲ್ಲಿ ನಿಲ್ಲುವ ಬಯಕೆಯಾಗಿರಬಹುದು.
ಈ ವಿಷಯಗಳೆಲ್ಲ ಸಾಮಾನ್ಯವಾಗಿ ಸ್ವತಃ ಪಾಪಮಯ ಕಾರ್ಯವಲ್ಲ, ಆದರೆ ಅವು ನಮ್ಮ ಹೃದಯಗಳಲ್ಲಿ ದೇವರ ಸ್ಥಾನವನ್ನು ಪಡೆಯುವಾಗ, ಅವು ಆತನನ್ನು ಸಂಪೂರ್ಣವಾಗಿ ಅನುಸರಿಸಲು ಅಡೆತಡೆಗಳಾಗುತ್ತವೆ.
"ನಿಮ್ಮ ಸಂಪತ್ತು ಎಲ್ಲಿದೆಯೋ ಅಲ್ಲಿಯೇ ನಿಮ್ಮ ಹೃದಯವೂ ಇರುತ್ತದೆ." (ಮತ್ತಾಯ 6:21 )
ಎಂದು ಕರ್ತನಾದ ಯೇಸು ಈ ತತ್ವವನ್ನು ಬಹಳ ಸ್ಪಷ್ಟವಾಗಿ ಬೋದಿಸಿದನುಸರಳವಾಗಿ ಹೇಳುವುದಾದರೆ, ನಾವು ಹೆಚ್ಚು ಮೌಲ್ಯಯುತವಾಗಿರುವುದು ಅಂತಿಮವಾಗಿ ನಮ್ಮ ಆಲೋಚನೆಗಳು, ನಿರ್ಧಾರಗಳು ಮತ್ತು ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಅದಕ್ಕಾಗಿಯೇ ಅಪೊಸ್ತಲ ಪೌಲನು ಈ ಸೂಚನೆಯನ್ನು ನೀಡುತ್ತಾನೆ:
“ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ. (ಕೊಲೊಸ್ಸೆ 3:2)
ಹಾಗೆಂದು ನೀವು ನಿಮ್ಮ ದೈನಂದಿನ ಜವಾಬ್ದಾರಿಗಳನ್ನು ನಿರ್ಲಕ್ಷಿಸಬೇಕೆಂದು ಅಪೊಸ್ತಲ ಪೌಲನು ಇಲ್ಲಿ ಹೇಳುತ್ತಿಲ್ಲ.ಆದರೆ ನಮ್ಮ ಆಳವಾದ ಗಮನ ಮತ್ತು ದೊಡ್ಡ ಭರವಸೆಯನ್ನು ತಾತ್ಕಾಲಿಕ ವಿಷಯಗಳ ಮೇಲೆ ಅಲ್ಲ, ಬದಲಾಗಿ ದೇವರ ಮೇಲೆ ಇಡಬೇಕೆಂದು ಎಂದು ಅವನು ನಮಗೆ ನೆನಪಿಸುತ್ತಿದ್ದಾನೆ.
ಯೇಸುವನ್ನು ಅನುಸರಿಸುವುದು ಎಂದರೆ ಸರಿಯಾದ ಸಿದ್ಧಾಂತಗಳನ್ನು ನಂಬುವುದು ಮಾತ್ರವಲ್ಲ - ಬದಲಾಗಿ ನಮ್ಮ ಜೀವನವನ್ನು ಆತನಿಗೇ ಒಪ್ಪಿಸುವುದಾಗಿದೆ. ನಿಜವಾದ ನಂಬಿಕೆ ಯಾವಾಗಲೂ ಗೋಚರಿಸುವಂತ ಬದಲಾವಣೆಯನ್ನು ಉಂಟುಮಾಡುತ್ತದೆ.
"ಕ್ರಿಯೆಗಳಿಲ್ಲದ ನಂಬಿಕೆಯು ಸತ್ತದ್ದು" ಎಂದು ಬೈಬಲ್ ಸ್ಪಷ್ಟವಾಗಿ ಹೇಳುತ್ತದೆ (ಯಾಕೋಬ 2:17)
ಇದರರ್ಥ ನಿಜವಾದ ನಂಬಿಕೆಯು ವಿಧೇಯತೆ, ಔದಾರ್ಯ, ಕ್ಷಮೆ ಮತ್ತು ಪ್ರೀತಿಯ ಮೂಲಕ ತನ್ನನ್ನು ತಾನು ವ್ಯಕ್ತಪಡಿಸಿಕೊಳ್ಳುತ್ತದೆ. ರೂಪಾಂತರಗೊಂಡ ಹೃದಯವು ರೂಪಾಂತರಗೊಂಡ ಜೀವನಕ್ಕೆ ಕಾರಣವಾಗುತ್ತದೆ.
ಐಶ್ವರ್ಯವಂತನಾದ ಯೌವ್ವನಸ್ಥನಿಗೆ ಕೊಟ್ಟ ಯೇಸುವಿನ ಅದೇ ಆಹ್ವಾನವು ಇಂದಿಗೂ ನಮಗೆ ಹೇಳಲ್ಪಡುತ್ತಿದೆ ಅದೇನೆಂದರೆ:
"ಬಂದು, ನನ್ನನ್ನು ಹಿಂಬಾಲಿಸು." (ಮಾರ್ಕ 10:21)
ಈ ಆಹ್ವಾನವು ವ್ಯಕ್ತಿಗತವಾದ ಆಮಂತ್ರಣಪತ್ರವಾಗಿದೆ. ಯೇಸು ಯಾರನ್ನೂ ತನ್ನನ್ನು ಹಿಂಬಾಲಿಸುವಂತೆ ಒತ್ತಾಯಿಸುವುದಿಲ್ಲ. ಆತನು ನಮ್ಮನ್ನು ತನ್ನ ಮೇಲೆ ನಂಬಿಕೆ ಇಡಬೇಕೆಂದು, ಅದಕ್ಕೆ ನಮ್ಮಲ್ಲಿ ತಡೆಹಿಡಿಯುವುದನ್ನು ಬಿಟ್ಟುಬಿಡಲು ಮತ್ತು ಪ್ರತಿದಿನ ಆತನೊಂದಿಗೆ ನಡೆಯಲು ಆಹ್ವಾನಿಸುತ್ತಾನೆ.
ಶಿಷ್ಯತ್ವದ ಪ್ರಯಾಣವು ಒಂದು ಬಾರಿಯ ನಿರ್ಧಾರವಲ್ಲ; ಅದು ಜೀವಿತಾವಧಿಯ ನಡಿಗೆ. ದಾರಿಯುದ್ದಕ್ಕೂ, ದೇವರು ನಮ್ಮನ್ನು ವಿಭಿನ್ನ ಸಮಯಗಳಲ್ಲಿ ವಿಭಿನ್ನ ವಿಷಯಗಳನ್ನು ತ್ಯಜಿಸಲು ಕೇಳಬಹುದು. ಆದರೆ ನಮ್ಮ ಆ"ಒಂದು ವಿಷಯವನ್ನು" ತ್ಯಜಿಸುವ ಮೂಲಕ ನಾವು ಖಂಡಿತವಾಗಿಯೂ ಕ್ರಿಸ್ತನಲ್ಲಿ ನಿಜವಾದ ಸ್ವಾತಂತ್ರ್ಯ, ಶಾಶ್ವತ ಸಂತೋಷ ಮತ್ತು ನಿಜವಾದ ಜೀವನವನ್ನು ಅನುಭವಿಸುತ್ತೇವೆ.
Bible Reading: Exodus 4-6
ಪ್ರಾರ್ಥನೆಗಳು
ತಂದೆಯೇ, ನಿನ್ನ ಶಿಷ್ಯನಾಗಿ ಬದ್ಧತೆಯಲ್ಲಿ ನಡೆಯದಂತೆ ನನ್ನನ್ನು ತಡೆಯುವ ಎಲ್ಲಾ ಅಡೆತಡೆಗಳನ್ನು ಬಿಟ್ಟುಬಿಡಲು ನಮಗೆ ಸಹಾಯ ಮಾಡು. ಎಲ್ಲಕ್ಕಿಂತ ಹೆಚ್ಚಾಗಿ ನಿನ್ನನ್ನೇ ಅಮೂಲ್ಯವಾಗಿ ಪರಿಗಣಿಸುವದನ್ನು ನನಗೆ ಕಲಿಸಿಕೊಡು ಮತ್ತು ನಿನ್ನ ಹೆಜ್ಜೆಗಳಲ್ಲಿ ಹೆಜ್ಜೆಯಿಡುವಂತೆ ನನ್ನನ್ನು ಸತ್ಯವಾದ ಜೀವನದ ಹಾದಿಯಲ್ಲಿ ಯೇಸುನಾಮದಲ್ಲಿ ನಡೆಸು. ಆಮೆನ್.
Join our WhatsApp Channel
Most Read
● ಕೃಪೆಯನ್ನು ತೋರಿಸುವ ಪ್ರಾಯೋಗಿಕ ವಿಧಾನ.● ಅಭಿಷೇಕಕ್ಕಿರುವ ಪ್ರಪ್ರಥಮ ಶತೃ
● ಯೇಸುವಿನ ಕರ್ತತ್ವವನ್ನು ಅರಿಕೆ ಮಾಡುವುದು
● ಅನಿಶ್ಚಿತತೆಯ ಸಮಯದಲ್ಲಿ ಮಾಡುವ ಆರಾಧನೆಗಿರುವ ಶಕ್ತಿ
● ಶರಣಾಗತಿಯ ಸ್ಥಳ
● ಆತ್ಮವಂಚನೆ ಎಂದರೇನು? - II
● ವ್ಯಸನಗಳನ್ನು ನಿಲ್ಲಿಸುವುದು
ಅನಿಸಿಕೆಗಳು
