ಅನುದಿನದ ಮನ್ನಾ
ಮನುಷ್ಯರಿಂದ ಬರುವ ಹೊಗಳಿಕೆಗಿಂತಲೂ ದೇವರು ಕೊಡುವ ಪ್ರತಿಫಲವನ್ನು ಎದುರು ನೋಡುವುದು.
Tuesday, 16th of April 2024
3
2
163
Categories :
ಕೊಡುವ (Giving)
" ನೀನಾದರೆ ಧರ್ಮಕೊಡುವಾಗ ನೀನು ಧರ್ಮಕೊಟ್ಟದ್ದು ಅಂತರಂಗವಾಗುವ ಹಾಗೆ ನಿನ್ನ ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ. [4] ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು."(ಮತ್ತಾಯ 6:3-4 )
ಜನರ ಮನ್ನಣೆ ಎದುರು ನೋಡುವುದರಲ್ಲಿರುವ ಅಪಾಯ
ನಮ್ಮ ಕ್ರಿಸ್ತೀಯ ಜೀವಿತದಲ್ಲಿ ಇತರರಿಂದ ಸಿಗುವ ಅನುಮೋದನೆ ಮತ್ತು ಇತರರಿಂದ ಸಿಗುವ ಹೊಗಳಿಕೆಯ ಜಾಲಕೆ ಬೀಳುವಂತದ್ದು ಅತಿ ಸುಲಭ. ನಮ್ಮ ಸುತ್ತಲಿರುವವರಿಂದ ಮನ್ನಣೆ ಅಥವಾ ವಿಶೇಷ ಉಪಚಾರವನ್ನು ಹೊಂದುವ ಉದ್ದೇಶದಿಂದ ಕರ್ತನ ಕೆಲಸಕ್ಕೆ ಕಾಣಿಕೆ ನೀಡುವ ಪ್ರಲೋಭನೆಗೆ ನಾವು ಸುಲಭವಾಗಿ ಒಳಗಾಗಬಹುದು.ಹಾಗಾಗಿ ಯೇಸು ಸ್ವಾಮಿ ಈ ಕುರಿತು 6:1 ರಲ್ಲಿ ಹೀಗೆ ಎಚ್ಚರಿಸಿದ್ದಾನೆ. "ಜನರು ನೋಡಲಿ ಎಂದು ನಿಮ್ಮ ಧರ್ಮಕಾರ್ಯಗಳನ್ನು ಅವರ ಮುಂದೆ ಮಾಡಬಾರದು, ನೋಡಿರಿ; ಹಾಗೆ ಮಾಡಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯ ಹತ್ತಿರ ನಿಮಗೆ ಫಲದೊರೆಯದು."(ಮತ್ತಾಯ 6:1) ಎಂದು.
ಎಲ್ಲರೂ ನಮ್ಮನ್ನು ನೋಡಲಿ ಎಂದು ಎಲ್ಲರ ಮನಸೆಳೆಯುವ ಉದ್ದೇಶದಿಂದ ನಾವು ಕಾಣಿಕೆಯನ್ನು ನೀಡಿದಾಗ ನಾವು ಕ್ಷಣಿಕವಾದ, ತಾತ್ಕಾಲಿಕವಾದ ಹೊಗಳಿಕೆಗಾಗಿ ಶಾಶ್ವತವಾದಂತವುಗಳನ್ನು ಮಾರಿಕೊಂಡಂತವರಾಗುತ್ತೇವೆ. ಇತರರ ಅಭಿನಂದನೆಗಳು ಮತ್ತು ಹೊಗಳಿಕೆಗಳು ಆ ಕ್ಷಣಕ್ಕೆ ಮನಸ್ಸಿಗೆ ಮುದ ನೀಡಬಹುದು. ಆದರೆ ನಾವು ನಮ್ಮ ಪರಲೋಕದ ತಂದೆಯನ್ನು ಮೆಚ್ಚಿಸುವ ಕಾರ್ಯಗಳ ಮುಂದೆ ಇವುಗಳೆಲ್ಲವೂ ಪೇಲವ ಎನಿಸಿಬಿಡುತ್ತದೆ.
ರಹಸ್ಯವಾಗಿ ಕೊಡುವಿಕೆಯಲ್ಲಿರುವ ಸೌಂದರ್ಯ.
ಯೇಸು ಸ್ವಾಮಿಯು ರಹಸ್ಯವಾಗಿ
ಕಾಣಿಕೆಯನ್ನು ಕೊಡುವುದನ್ನು ಕುರಿತು ಹೀಗೆ ಸೂಚಿಸಿದ್ದಾನೆ.. "ನೀನಾದರೆ ಧರ್ಮಕೊಡುವಾಗ ನೀನು ಧರ್ಮಕೊಟ್ಟದ್ದು ಅಂತರಂಗವಾಗುವ ಹಾಗೆ ನಿನ್ನ ಬಲಗೈ ಮಾಡಿದ್ದು ಎಡಗೈಗೂ ತಿಳಿಯದಿರಲಿ." ನಾವು ಕೊಡುವಾಗ ರಹಸ್ಯವಾಗಿ ಯಾವುದೇ ಸ್ವಯಂ -ಪ್ರಚಾರದ ಮತ್ತು ಅಭಿಮಾನಿಗಳನ್ನು ಹುಟ್ಟಿ ಹಾಕಿಕೊಳ್ಳಬೇಕೆಂಬ ಇರಾದೆಯಲ್ಲಿ ಕೊಡಬಾರದು. ನಾವು ಈ ರೀತಿ ರಹಸ್ಯವಾಗಿ ಕೊಡುವಾಗ ನಾವು ದೇವರ ಮೇಲಿನ ವಿಶ್ವಾಸವನ್ನು ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಆತನನ್ನೇ ಸನ್ಮಾನಿಸುವ ನಮ್ಮ ಯತಾರ್ಥ ಬಯಕೆಯನ್ನು ಪ್ರದರ್ಶಿಸುವವರಾಗುತ್ತೇವೆ.
ಅಪೋಸ್ತಲನಾದ ಪೌಲನು ಸಹ ತನ್ನ ಎರಡನೇ ಕೊರಿಯಂತೆ ಪತ್ರಿಕೆ 9:7 ರಲ್ಲಿ ಇದನ್ನೇ ಪ್ರತಿಧ್ವನಿಸುತ್ತಾ ಹೀಗೆ ಹೇಳುತ್ತಾನೆ. "ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು." ನಮ್ಮ ಕೊಡುವಿಕೆಯು ಯಾವಾಗಲೂ ಕೃತಜ್ಞತಾ ಹೃದಯದಿಂದಲೂ - ದೇವರ ಮೇಲಿನ ಪ್ರೀತಿಯಿಂದಲೂ ಬರಬೇಕಷ್ಟೆ ಹೊರತು ನಮ್ಮ ವೈಯಕ್ತಿಕ ಲಾಭದ ಎಣಿಕೆಯಿಂದಲೂ ಕೊಡಲೇಬೇಕಲ್ಲ ಎಂಬ ಮನೋ ಭಾರದಿಂದಲೂ ಇರಬಾರದು.
ಪರಲೋಕದ ತಂದೆಯಿಂದ ಬರುವ ಪ್ರತಿಫಲ
"ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು."(ಮತ್ತಾಯ 6:4).
"ಆದರೆ ಪರಲೋಕದಲ್ಲಿ ಗಂಟು ಮಾಡಿ ಇಟ್ಟುಕೊಳ್ಳಿರಿ; ಅಲ್ಲಿ ಅದು ನುಸಿಹಿಡಿದು ಕಿಲುಬುಹತ್ತಿ ಕೆಟ್ಟುಹೋಗುವದಿಲ್ಲ; ಅಲ್ಲಿ ಕಳ್ಳರು ಕನ್ನಾಕೊರೆಯುವದೂ ಇಲ್ಲ, ಕದಿಯುವದೂ ಇಲ್ಲ."(ಮತ್ತಾಯ 6:20 )
ಲೂಕ 6:38 ರಲ್ಲಿ ಯೇಸು ಸ್ವಾಮಿಯು ಕೊಟ್ಟಿರುವ ವಾಗ್ದಾನವೇನೆಂದರೆ.."ಕೊಡಿರಿ, ಆಗ ನಿಮಗೂ ಕೊಡುವರು; ಜಡಿದು ಅಲ್ಲಾಡಿಸಿ ಹೊರಚೆಲ್ಲುವ ಹಾಗೆ ತುಂಬಾ ಅಳತೆಯನ್ನು ಅಳೆದು ನಿಮ್ಮ ಸೆರಗಿಗೆ ಹಾಕುವರು. ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.. " ಎಂದು.
ನಾವು ಉದಾರವಾಗಿಯೂ ರಹಸ್ಯವಾಗಿಯೂ ಕೊಡುವಾಗ ದೇವರು ನಮ್ಮನ್ನು ಸಮೃದ್ಧಿಕರವಾಗಿ ಆಶೀರ್ವದಿಸುವನು ಎಂದು ಭರವಸೆ ಇಡಬಹುದು. ಇದು ಕೇವಲ ಬೌತಿಕವಾದ ಸಂಪತ್ತಿನ ಆಶೀರ್ವಾದವಲ್ಲದೆ ಆತನ ಪ್ರಸನ್ನತೆಯಿಂದಲೂ ಮತ್ತು ಆತನು ನಮಗೆ ಒಪ್ಪಿಸಿದ ಕೆಲಸಗಳಲ್ಲಿ ನಾವು ನಂಬಿಗಸ್ತರಾದ ಮನೆವಾರ್ತೆಯವರಾಗಿದ್ದೇವೆ ಎನ್ನುವ ಸಂತೃಪ್ತಿಯಿಂದಲೂ ಕೂಡಿದ ಸಮೃದ್ಧಿ ಕರವಾದ ಆಶೀರ್ವಾದವನ್ನು ನಾವು ಅನುಭವಿಸಬಹುದು.
ದೀನ ಹೃದಯದಿಂದ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು
ಮನುಷ್ಯರ ಹೊಗಳಿಕೆಯನ್ನು ಎದುರು ನೋಡದೆ ಕಾಣಿಕೆ ನೀಡುವುದಕ್ಕಾಗಿ ಮೊದಲು ನಾವು ನಮ್ಮ ಆಲೋಚನಾ ಕ್ರಮವನ್ನು ಮತ್ತು ನಿರಂತರವಾಗಿ ನೂತನ ಮನಸ್ಸನ್ನು ಹೊಂದಿಕೊಳ್ಳುವ ತರಬೇತಿಯನ್ನು ನಮಗೆ ನಾವೇ ಕೊಟ್ಟುಕೊಳ್ಳುವಂತದ್ದು ಬಹಳ ಮುಖ್ಯವಾದ ಕಾರ್ಯ.
ನಾವು ಇದನ್ನು ಹೇಗೆ ಮಾಡಲು ಸಾಧ್ಯ? ರೋಮ 12:2 ನಮಗೆ ಹೇಳುವ ಪ್ರಕಾರ "ಇಹಲೋಕದ ನಡವಳಿಕೆಯನ್ನು ಅನುಸರಿಸದೆ ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಬೇಕು ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುತ್ತೇವೆ."
ನಮ್ಮ ಗುರಿಯು ದೇವರನ್ನು ಮೆಚ್ಚಿಸುವಂಥದ್ದು ಮತ್ತು ಆತನ ನಾಮಕ್ಕೆ ಮಹಿಮೆ ತರುವಂತದ್ದೇ ಆಗಿರಬೇಕು ವಿನಹ ನಮ್ಮನ್ನು ಘನಪಡಿಸಿಕೊಳ್ಳುವುದಕಲ್ಲ ಎಂಬುವ ವಾಕ್ಯವನ್ನು ನಾವು ನಿಯಮಿತವಾಗಿ ನಮಗೆ ನಾವೇ ಹೇಳಿಕೊಳ್ಳುತ್ತಲೇ ಇರಬೇಕು.
ಪ್ರಾರ್ಥನಾ ಪೂರ್ವಕವಾಗಿ ದೀನ ಮನಸ್ಸಿನಿಂದ ಕೊಡುವುದಕ್ಕಾಗಿ ಇರುವ ಒಂದು ಪ್ರಾಯೋಗಿಕ ಮಾರ್ಗವೆಂದರೆ ಅದು ಕೊಲಸೆ 3:23 -24ರ ವಾಕ್ಯ.
"ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ; 24ಕರ್ತನಿಂದ ಪರಲೋಕ ಬಾಧ್ಯತೆಯೆಂಬ ಪ್ರತಿಫಲವನ್ನು ಹೊಂದುವೆವೆಂದು ತಿಳಿದಿದ್ದೀರಲ್ಲಾ. ನೀವು ಕರ್ತನಾದ ಕ್ರಿಸ್ತನಿಗೇ ದಾಸರಾಗಿದ್ದೀರಿ."ನಮ್ಮ ದೃಷ್ಟಿಯನ್ನು ಕ್ರಿಸ್ತನ ಮೇಲೆಯೂ ಮತ್ತು ನಮ್ಮ ಪರಲೋಕದ ಬಾಧ್ಯತೆಯ ಮೇಲೆಯೂ ಲಕ್ಷ್ಯ ವಿಡುವ ಮುಖಾಂತರ ಮನುಷ್ಯರಿಂದ ಬರುವ ಹೊಗಳಿಕೆಯ ಪ್ರಲೋಭನೆಯನ್ನು ನಾವು ಸುಲಭವಾಗಿ ಪ್ರತಿರೋಧಿಸಬಹುದು.
ಆದುದರಿಂದ, ಕರ್ತನ ಕಾರ್ಯಕ್ಕಾಗಿ ಕೊಡುವ ಉದ್ದೇಶಗಳ ಬಗ್ಗೆ ಎಚ್ಚರಿಕೆಯಿಂದ ಇರೋಣ. ಪರಲೋಕದ ತಂದೆಯನ್ನು ಮೆಚ್ಚಿಸುವಂತ ಆಳವಾದ ಬಯಕೆಯೊಂದಿಗೆ ಶುದ್ಧ ಹೃದಯದಿಂದ ರಹಸ್ಯವಾಗಿ ಕೊಡುವುದಕ್ಕಾಗಿ ಹಂಬಲಿಸೋಣ.ನಾವು ಹೀಗೆ ಮಾಡುವಾಗ ಆತನು ಇಹಲೋಕದಲ್ಲಿ ಮಾತ್ರವಲ್ಲದೆ ಬರುವ ಲೋಕದಲ್ಲಿಯೂ ಸಹ ಬಹಿರಂಗವಾಗಿ ನಮಗೆ ಪ್ರತಿಫಲವನ್ನು ಕೊಡುವನು ಎಂದು ಭರವಸೆ ಇಡಬಹುದು."ನಂಬಿಕೆಯನ್ನು ಹುಟ್ಟಿಸುವವನು ಪೂರೈಸುವವನು ಆಗಿರುವ ಯೇಸುವಿನ ಮೇಲೆ ನಮ್ಮ ದೃಷ್ಟಿಯನ್ನು ಇಟ್ಟು" (ಇಬ್ರಿಯ 12:2)ನಮ್ಮ ಪ್ರತಿಫಲವು ನಿತ್ಯ ಲೋಕದಲ್ಲಿ ನಮಗುಂಟು ಎಂಬ ನಿರೀಕ್ಷೆ ಉಳ್ಳವರಾಗಿ ಸಂತೋಷದಿಂದಲೂ ಉದಾರತೆಯಿಂದಲೂ ಕೊಡುವವರಾಗೋಣ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿನ್ನ ಅನುಮೋದನೆ ಮತ್ತು ನಿನ್ನ ಮಹಿಮೆಯನ್ನು ಮಾತ್ರ ಎದುರು ನೋಡುವಂತಹ ರಹಸ್ಯವಾಗಿಯೂ ಸಂತೋಷವಾಗಿ ಕೊಡುವಂತಹ ಹೃದಯವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. ನಾನು ಸಮರ್ಪಿಸುವ ಕಾಣಿಕೆಗಳು ನಿನ್ನ ಮುಂದೆ ಸುಗಂಧ ಹೋಮವಾಗಿಯೂ ನಿನ್ನನ್ನು ಮೆಚ್ಚಿಸುವಂತೆಯೂ ಇರಲಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.
Join our WhatsApp Channel
Most Read
● ಕರ್ತನನ್ನು ಮೆಚ್ಚಿಸಲಿರುವ ಖಚಿತವಾದ ಮಾರ್ಗ.● ರಹಸ್ಯವಾದ ಆತ್ಮೀಕ ದ್ವಾರಗಳು
● ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದು
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಡೆಯುವುದನ್ನು ಕಲಿಯುವುದು
● ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
● ಕೆಲವು ನಾಯಕರು ಪಾಪದಲ್ಲಿ ಬಿದ್ದು ಹೋದದರಿಂದ ನಾವು ಸಹ ನಂಬಿಕೆಯನ್ನು ತ್ಯಜಿಸಬೇಕೆ?
ಅನಿಸಿಕೆಗಳು