ಅನುದಿನದ ಮನ್ನಾ
ಸಮಾಧಾನದ ಮೂಲ :ಕರ್ತನಾದ ಯೇಸು
Friday, 18th of October 2024
3
1
123
Categories :
ಮಾನಸಿಕ ಆರೋಗ್ಯ (Mental Health)
“ನಾನು ನನ್ನ ಸಮಾಧಾನವನ್ನು ನಿಮಗೆ ಕೊಟ್ಟು ಹೋಗುತ್ತಿದ್ದೇನೆ. ನನ್ನಲ್ಲಿರುವಂಥ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ."(ಯೋಹಾ 14:27)
ಜೀವನದ ಎಲ್ಲಾ ಗೊಂದಲಗಳು ಸವಾಲುಗಳನ್ನು ಮಧ್ಯದಲ್ಲೂ ಸಮಾಧಾನವನ್ನು ಅರಸುವಂತದ್ದು ಅದೊಂದು ಮುಗಿಯದಂತಹ ಪ್ರಯಾಣ ಎನಿಸುತ್ತದೆ. ನಾವಿದನ್ನು ಪ್ರವಾಸ, ಯಶಸ್ಸು, ಸಂಬಂಧಗಳು ಮತ್ತು ಹಣಕಾಸಿನ ಸುಭದ್ರತೆ ಈ ರೀತಿ ಅನೇಕ ಸ್ಥಳಗಳಲ್ಲಿ ಹುಡುಕಲು ಯತ್ನಿಸುತ್ತೇವೆ. ಈ ಎಲ್ಲಾ ಹೊರಗಿನ ಮೂಲಗಳು ನಮ್ಮ ಹೃದಯದ ಹಂಬಲವನ್ನು ಎಂದಿಗೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಮೊದಲು ಅರ್ಥಮಾಡಿಕೊಳ್ಳಬೇಕು. ಸಮಾಧಾನ ಎನ್ನುವಂಥದ್ದು ಅದೊಂದು ಅಂತಿಮ ನಿಲ್ದಾಣವಲ್ಲ, ಸಾಧನೆಯಲ್ಲ ಅಥವಾ ಅದೊಂದು ಕೊಂಡುಕೊಳ್ಳಬಹುದಾದ ಸಂಗತಿಯೂ ಅಲ್ಲ. ನಿಜವಾದ ಸಮಾಧಾನ ಎನ್ನುವಂಥದ್ದು ನಾವು ಒಬ್ಬ ವ್ಯಕ್ತಿಯಲ್ಲಿ ಕಂಡುಕೊಳ್ಳುತ್ತೇವೆ: ಆತನೇ ಕರ್ತನಾದ ಯೇಸು ಕ್ರಿಸ್ತನು.
ಈ ಪ್ರಪಂಚವು ಕೊಡುವ ಯಾವುದೇ ರೀತಿಯ ಸಮಾಧಾನಕ್ಕಿಂತ ಕರ್ತನಾದ ಯೇಸುಕ್ರಿಸ್ತನು ಅನುಗ್ರಹಿಸುವ ಶಾಂತಿಯು, ವ್ಯತ್ಯಾಸವಾದದ್ದಾಗಿದೆ. ಆತನ ಸಮಾಧಾನ ತಾತ್ಕಾಲಿಕವಾದದ್ದಲ್ಲ ಅಥವಾ ನಮ್ಮ ಸುತ್ತಲೂ ನಡೆಯುತ್ತಿರುವ ಸಂಗತಿಗಳ ಮೇಲೆ ಅವಲಂಬಿತವಾಗಿಲ್ಲ. ಆ ಶಾಂತಿಯು ನಮ್ಮಲ್ಲಿ ನೆಲೆಸಿದ್ದು ಕಠಿಣವಾದ ಬಿರುಗಾಳಿಯಲ್ಲಿಯೂ ನೆಲೆಗೊಂಡಿರುತ್ತದೆ. ಏಕೆಂದರೆ ಅದು ಆತನಲ್ಲಿರುವ ನಿತ್ಯ ಪ್ರಸನ್ನತೆ ಮತ್ತು ಪ್ರೀತಿಯಲ್ಲಿ ಬೇರೂರಿದೆ.
ನಾನು ಒಂದು ದಿನ ನನ್ನ ಸಭಾ ಕಾರ್ಯ ಮುಗಿಸಿದ ಮೇಲೆ ಒಬ್ಬ ವ್ಯಕ್ತಿ ನನ್ನ ಬಳಿಗೆ ಬಂದು ನಾನು ನನ್ನ ಕೆಲಸಕ್ಕೆ ರಾಜೀನಾಮೆ ನೀಡಿ ನನ್ನ ಎಲ್ಲಾ ಜವಾಬ್ದಾರಿಗಳನ್ನು ಬದಿಗೊತ್ತಿ ಒಂದು ತಿಂಗಳ ಕಾಲ ಬೆಟ್ಟಗಾಡು ಪ್ರದೇಶಗಳಿಗೆ ಶಾಂತಿಯನ್ನು ಪಡೆದುಕೊಳ್ಳಲು ಹೋಗುತ್ತೇನೆ ಎಂದರು. ನಮ್ಮಲ್ಲಿ ಅನೇಕರು ಈ ರೀತಿ ಹೇಳುವುದುಂಟು. ಶಾಂತಿ ಎಂಬುದು ಸ್ಥಳ ಬದಲಾವಣೆಯಿಂದ, ನೂತನವಾದ ಅನುಭವಗಳಿಂದ ಅಥವಾ ಯಾವುದೋ ಒಂದು ಹೊರ ಚಟುವಟಿಕೆಗಳಿಂದ ದೊರಕಬಹುದೆಂದು ನಂಬುತ್ತಾ ಆಗಾಗ ನಾವು ಯೋಚಿಸುವುದೇನೆಂದರೆ " ನಾನು ಒಂದು ವೇಳೆ ಇದನ್ನು ಪಡೆದುಕೊಂಡರೆ ಅಥವಾ ನಾನು ಆ ಸ್ಥಾನವನ್ನು ಪಡೆದುಕೊಂಡರೆ ನನಗೆ ಸಮಾಧಾನ ಸಿಗಬಹುದು" ಎಂದು ಹೇಳತ್ತಿರಬಹುದು. ಆದರೆ ಇದು ಸಮಯ ಕಳೆದಂತೆ ಮತ್ತೆ ಮತ್ತೆ ಮರಕಳಿಸಿ, ಬೇಕೆನ್ನುವ ಸಮಯಗಳ ಸರಪಳಿ ಎಂದು ನಂತರ ಅರ್ಥವಾಗುತ್ತದೆ.
ಸತ್ಯವೇನೆಂದರೆ ಸಮಾಧಾನ ಎನ್ನುವಂತದ್ದು ಯಾವುದೋ ಒಂದು ಸ್ಥಳಕೊ ಅಥವಾ ಯಾವುದೋ ಲೌಕಿಕ ವಸ್ತುಗಳ ಸಂಪಾದನೆಯಲ್ಲಿ ಬಂಧಿಯಾಗಿಲ್ಲ.ಯೋಹಾನ14: 27ರಲ್ಲಿ ಕರ್ತನಾದ ಯೇಸು" ನನ್ನಲ್ಲಿರುವಂಥ ಸಮಾಧಾನವನ್ನು ನಾನು ನಿಮಗೆ ಕೊಡುತ್ತೇನೆ. ಲೋಕವು ಕೊಡುವಂತೆ ನಾನು ನಿಮಗೆ ಕೊಡುವುದಿಲ್ಲ." ಎಂದು ಹೇಳುತ್ತಾನೆ ಇದು ನಾವೇನೋ ಸಾಧಿಸಿಕೊಳ್ಳುವಂತದ್ದು ಅಥವಾ ನಾವು ನಮ್ಮ ಸ್ವಂತ ಪರಿಶ್ರಮದಿಂದ ಕಂಡುಕೊಳ್ಳುವಂತದ್ದು ಅಲ್ಲ. ಇದು ಯೇಸುವಿನಲ್ಲಿ ಭರವಸೆ ಇಡಲ್ಪಟ್ಟವರಿಗೆ ಆತನು ಮನಸಾರೆ ಇಷ್ಟಪಟ್ಟು ಕೊಡುವ ವರವಾಗಿದೆ. ಆತನು ಕೊಡುವ ಸಮಾಧಾನವು ವಿಶಿಷ್ಟವಾದದ್ದು ಏಕೆಂದರೆ ಅದು ಬಾಹ್ಯ ಸನ್ನಿವೇಶಗಳಿಂದ ಬರುವಂತದ್ದಲ್ಲ, ಬದಲಾಗಿ ಆತನಲ್ಲಿ ನಾವು ಹೊಂದುವ ಆಳವಾದ ಅನ್ಯೋನ್ಯತೆಯಿಂದ ಹೊರಹೊಮ್ಮುವ ಸಂಗತಿಯಾಗಿದೆ. ನಾವು ಯೇಸುವಿನ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸುವಾಗ ನಮ್ಮ ಸುತ್ತಲೂ ಏನು ನಡೆಯುತ್ತಿದೆ ಎನ್ನುವ ಯಾವುದನ್ನು ಸಹ ಲೆಕ್ಕಿಸದೆ ನಮ್ಮ ಹೃದಯಗಳಲ್ಲಿ ವಿಶ್ರಾಂತಿಯನ್ನು ನಾವು ಅನುಭವಿಸಬಹುದು.
ಯೇಸುವಿನಿಂದ ದೊರೆಯುವ ಸಮಾಧಾನ ಎಂದರೆ ಅಲ್ಲಿ ಯಾವುದೇ ಉಪದ್ರವಗಳು ಇಲ್ಲ ಎಂದಲ್ಲ. ಅನೇಕ ಬಾರಿ ನಮ್ಮ ಎಲ್ಲಾ ಕಷ್ಟ ಸಂಕಟಗಳು ಪರಿಹಾರವಾಗಿ ಬಿಟ್ಟರೆ, ನಾವು ಸಮಾಧಾನದಿಂದಿರುತ್ತೇವೆ ಎಂದು ಅಂದುಕೊಳ್ಳುತ್ತೇವೆ ಆದರೆ ನಿಮ್ಮ ಜೀವಿತದಲ್ಲಿ ಯಾವುದೇ ಕಷ್ಟ ಸಂಕಟಗಳು ಇರುವುದೇ ಇಲ್ಲ ಎಂದು ಎಂದಿಗೂ ಸಹ ಯೇಸು ಭರವಸೆ ನೀಡಿಲ್ಲ. ವಾಸ್ತವವಾಗಿ, ಆತನು ತನ್ನ ಶಿಷ್ಯರಿಗೆ ಈ ಲೋಕದಲ್ಲಿ ನಿಮಗೆ ಸಂಕಟಗಳುಂಟು ಎಂದೇ ಹೇಳಿದ್ದಾನೆ. ( ಯೋಹಾ 16:33) ಯೇಸು ನೀಡುವ ಶಾಂತಿಯು ಬಿರುಗಾಳಿಯಿಂದ ತಪ್ಪಿಸಿಕೊಳ್ಳುವ ಕುರಿತು ಆಗಿರದೆ ಅವುಗಳ ಮಧ್ಯದಲ್ಲಿಯೂ ಶಾಂತವಾಗಿ ನೆಲೆಗೊಳ್ಳುವ ಸಾಮರ್ಥ್ಯವನ್ನು ಹೊಂದಿರುವಂತಹದ್ದಾಗಿದೆ.
ಮಾರ್ಕ್ 4 :39ರಲ್ಲಿ ಯೇಸು ಚಂಡಮಾರುತವನ್ನು ಶಾಂತಗೊಳಿಸಿದ ಕ್ಷಣವನ್ನು ಯೋಚಿಸಿ. ಬಿರುಗಾಳಿ ಬೀಸಿ ಅಲೆಗಳು ಅಬ್ಬರಿಸಿ ದೋಣಿಯನ್ನು ಅಲ್ಲ ಕಲ್ಲೋಲ ಗೊಳಿಸುವಾಗ ಶಿಷ್ಯರೆಲ್ಲರೂ ಭಯಭೀತರಾದರು. ಆದರೆ ಯೇಸು ಎದ್ದು ನಿಂತು ಬಿರುಗಾಳಿಗೆ ಆಜ್ಞಾಪಿಸಿದನು. ತಕ್ಷಣವೇ ಸಮಾಧಾನವನ್ನು ಅಲ್ಲಿಗೆ ತಂದನು. ಗಾಳಿಯ ಮೇಲೆಯೂ ಸಮುದ್ರದ ಅಲೆಗಳ ಮೇಲೂ ಅಧಿಕಾರ ಹೊಂದಿರುವ ಇದೇ ಯೇಸು ನಮಗೆ ತನ್ನಲ್ಲಿರುವ ಸಮಾಧಾನವನ್ನು ನೀಡಿದ್ದಾನೆ. ಜೀವನವು ಅಗಾಧವಾಗಿದ್ದಾಗಲೂ ಸಹ ಸ್ಥಿರವಾಗಿರುವಂತೆ ಅನವು ಮಾಡಿಕೊಡುವ ರೀತಿಯ ಸಮಾಧಾನವಾಗಿದೆ. ಏಕೆಂದರೆ ಎಲ್ಲವೂ ಆತನ ನಿಯಂತ್ರಣದಲ್ಲಿದೆ ಎಂಬುದು ನಮಗೆ ತಿಳಿದದೆ.
ಈ ಲೋಕವು ತಾತ್ಕಾಲಿಕವಾದ ಶಾಂತಿಯನ್ನು ನೀಡಬಹುದು. ಆದರೆ ಯೇಸು ಕೊಡುವ ಶಾಂತಿಯು ಶಾಶ್ವತವಾದದ್ದು. ಲೋಕದ ಶಾಂತಿಯು ಪರಿಸ್ಥಿತಿಗಳೊಂದಿಗೆ ಬರುತ್ತದೆ: ಇದು ಸಂಗತಿಗಳೆಲ್ಲಾ ಚೆನ್ನಾಗಿ ನಡೆಯುವುದು ಆರಾಮದಾಯಕವಾಗಿರುವುದು ಅಥವಾ ನಮಗೆ ಬಯಸುವಂಥದೆಲ್ಲ ಹೊಂದಿಕೊಳ್ಳುವುದರಿಂದ ಸಿಗುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಯೇಸುವಿನಲ್ಲಿರುವ ಸಮಾಧಾನ ಇವೆಲ್ಲವೂಗಳನ್ನು ಮೀರಿದ್ದಾಗಿದೆ ಫಿಲಿಪಿ 4:7 ನಮಗೆ ನೆನಪಿಸುವಂತೆ ಅದು ನಮ್ಮ ಹೃದಯ ಮತ್ತು ಮನಸ್ಸನ್ನು ಕಾಪಾಡುತ್ತದೆ ಮತ್ತು ನಮ್ಮ ಸುತ್ತಲಿರುವ ಎಲ್ಲಾ ಪರಿಸ್ಥಿತಿಗಳು ಅನಿಶ್ಚಿತತೆಯಿಂದ ಕೂಡಿರುವಾಗಲು ಭಯವಿಲ್ಲದೆ ಬದುಕಲು ನಮಗೆ ಅನುವು ಮಾಡಿಕೊಡುತ್ತದೆ.
ಯೇಸುವನ್ನು ಬಿಟ್ಟು ನೀವು ಹೊರಗಡೆ ಎಲ್ಲಿ ಸಮಾಧಾನವನ್ನು ಹುಡುಕಲು ಯತ್ನಿಸುತ್ತಿದ್ದೀರಿ ಎಂಬುದನ್ನು ಕಂಡುಕೊಳ್ಳಲು ಎಂದು ಸ್ವಲ್ಪ ಸಮಯ ತೆಗೆದುಕೊಳ್ಳಿರಿ. ನೀವು ಹಂಬಲಿಸುವ ವಿಶ್ರಾಂತಿಯನ್ನು ಯೇಸುವನ್ನು ಬಿಟ್ಟು ಉಳಿದೆಡೆ ಹುಡುಕುತ್ತಿದ್ದೀರಾ? ಆಗಿದ್ದಲ್ಲಿ ನಿಮ್ಮ ಹೃದಯವನ್ನು ಸಮಾಧಾನದ ನಿಜವಾದ ಮೂಲವಾದ ಯೇಸುವಿನ ಕಡೆಗೆ ತಿರುಗಿಸಿ. ಯೋಹಾನ 14:27ನ್ನು ಧ್ಯಾನಿಸಿ ಮತ್ತು ಏನೆಲ್ಲಾ ಪರಿಸ್ಥಿತಿಯನ್ನು ಹಾದು ಹೋಗುತ್ತಿದ್ದೀರಿ ಎಂಬುದರ ಹೊರತಾಗಿಯೂ ಆತನಲ್ಲಿನ ಶಾಂತಿಯು ಈಗಲೂ ನಿಮಗೆ ಲಭ್ಯವಿದೆ ಎಂಬುದನ್ನು ನೆನಪಿಡಿರಿ.
ನಿಮ್ಮ ದೈನಂದಿನ ಅಭ್ಯಾಸದೊಳಗೆ ನಿಮ್ಮ ಜೀವನದ ಯಾವ ಕ್ಷೇತ್ರದಲ್ಲಿ ಆತಂಕ ಅಥವಾ ಸಂಕಟವನ್ನು ಅನುಭವಿಸುತ್ತಿದ್ದೀರಿ ಎಂಬುದನ್ನು ಒಂದೆಡೆ ಬರೆಯಿರಿ. ಅದರ ಮೇಲೆ ಕೈ ಇಟ್ಟು ಪ್ರಾರ್ಥಿಸಿರಿ. ಈ ಕ್ಷೇತ್ರದಲ್ಲಿ ತನ್ನ ಶಾಂತಿಯನ್ನು ತರಬೇಕೆಂದು ಸಮಾಧಾನದ ಕರ್ತನಾದ ಯೇಸುವಿನಲ್ಲಿ ಬೇಡಿಕೊಳ್ಳಿರಿ. ನಂತರ ದಿನವಿಡೀ ಆತಂಕವು ನಿಮ್ಮೆಡೆಗೆ ಬರುವಾಗಲೆಲ್ಲ ವಿಶ್ರಮಿಸಿಕೊಂಡು ಯೋಹಾನ 14: 27ನ್ನು ನೆನಪಿಸಿಕೊಳ್ಳಿ. "ಯೇಸುವೇ ನೀನು ನನಗೆ ನಿನ್ನ ಸಮಾಧಾನವನ್ನು ಕೊಟ್ಟಿರುವೆ" ಎಂದು ಆತನ ವಾಗ್ದಾನವನ್ನು ಜೋರಾಗಿ ಹೇಳಿಕೊಳ್ಳಿ.
ಪ್ರಾರ್ಥನೆಗಳು
ಕರ್ತನಾದ ಯೇಸುವೇ ನೀನೇ ನಿಜವಾದ ಸಮಾಧಾನದ ಮೂಲವಾಗಿರುವುದಕ್ಕಾಗಿ ನಿನಗೆ ಸ್ತೋತ್ರ. ನನ್ನನ್ನು ತೃಪ್ತಿಗೊಳಿಸದಂತಹ ಸಂಗತಿಗಳಲ್ಲಿ ನೀನು ಕೊಡುವ ಶಾಂತಿಯನ್ನು ಹುಡುಕಲು ನಾನು ಹೋಗದಂತೆ ನನಗೆ ಸಹಾಯ ಮಾಡು. ಬದಲಾಗಿ ನಿನ್ನ ಪ್ರಸನ್ನತೆಯಲ್ಲಿ ವಿಶ್ರಾಂತಿ ಗೊಳಿಸು. ಮತ್ತು ನಾನು ಯಾವ ಬಿರುಗಾಳಿಯನ್ನು ಎದುರಿಸುತ್ತಿದ್ದರೂ ಚಿಂತೆ ಇಲ್ಲ. ನೀನು ನನ್ನನ್ನು ಬಲಪಡಿಸುವಂತಹ ನಿನ್ನ ಶಾಂತಿಯಲ್ಲಿ ನಿನ್ನ ಅಮೂಲ್ಯವಾದ ನಾಮದಲ್ಲಿ ಭರವಸದಿಂದ ಇರುತ್ತೇನೆ. ಆಮೇನ್.
Join our WhatsApp Channel
Most Read
● ದೇವರ ಪರಿಪೂರ್ಣ ಚಿತ್ತಕ್ಕಾಗಿ ಪ್ರಾರ್ಥಿಸಿರಿ● ಮೂರು ನಿರ್ಣಾಯಕ ಪರೀಕ್ಷೆಗಳು
● ದಿನ 01:40 ದಿನಗಳ ಉಪವಾಸ ಹಾಗೂ ಪ್ರಾರ್ಥನೆ
● ಮನುಷ್ಯನ ಹೃದಯ
● ದುಷ್ಟ ಮಾದರಿಗಳಿಂದ ಹೊರಬರುವುದು.
● ಯಹೂದವು ಮುಂದಾಗಿ ಹೊರಡಲಿ
● ಈ ದಿನಗಳಲ್ಲಿ ಇದನ್ನು ಮಾಡಿರ
ಅನಿಸಿಕೆಗಳು