ಅನುದಿನದ ಮನ್ನಾ
ದಿನ 17:40 ದಿನಗಳ ಉಪವಾಸ ಪ್ರಾರ್ಥನೆ
Sunday, 8th of December 2024
4
0
103
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಅಗ್ನಿಯ ಅಭಿಷೇಕ
"ಸೋತವನಿಗೆ ತ್ರಾಣವನ್ನು ಅನುಗ್ರಹಿಸಿ ನಿರ್ಬಲನಿಗೆ ಬಹು ಬಲವನ್ನು ದಯಪಾಲಿಸುತ್ತಾನೆ. [30] ಯುವಕರೂ ದಣಿದು ಬಳಲುವರು, ತರುಣರೂ ಸೊರಗಿ ಮುಗ್ಗರಿಸುವರು. 31 ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು."(ಯೆಶಾಯ 40:29-31).
ಹಳೆಯ ಒಡಂಬಡಿಕೆಯಲ್ಲಿ ಅಗ್ನಿ ಎಂಬುದು ದೇವರ ಬಲವನ್ನು ಅಥವಾ ದೇವರ ಪ್ರಸನ್ನತೆಯನ್ನು ಸೂಚಿಸಲು ಬಳಕೆಯಾಗುತ್ತಿತ್ತು. ಎಲೀಯನು ಯೆಹೋವನೇ ನಿಜವಾದ ಇಸ್ರಾಯೆಲ್ಯರ ದೇವರೆಂದು ಸಾಬೀತುಪಡಿಸಲು ಬಯಸಿದಾಗ, ದೇಶಗಳ ಜನರಿಗೆ ಸತ್ಯವಾದ ದೇವರು ಯಾರು ಎಂಬುದಕ್ಕೆ ಅಗ್ನಿಯನ್ನು ತರುವಂತ ದೇವರೇ ಸತ್ಯವಾದ ದೇವರು ಎಂದು ತೋರಿಸುವ ಪರೀಕ್ಷೆಯನ್ನು ಇಟ್ಟನು.ಅವನು " ಬೆಂಕಿಯ ಮೂಲಕ ಉತ್ತರಿಸುವ ದೇವರೇ ಸತ್ಯದ ದೇವರಾಗಿರಲಿ" ಎಂದು ಹೇಳಿದನು. (1ಅರಸು 18:24).
ಅಗ್ನಿಯ ಅಭಿಷೇಕವನ್ನು ಬಲದ ಅಭಿಷೇಕ ಅಥವಾ ನೂತನ ಅಭಿಷೇಕ ಎಂದು ಸಂಬೋಧಿಸಲಾಗಿದೆ. ಶತ್ರುವಾದ ಸೈತಾನನಿಗೆ ಅರ್ಥವಾಗುವ ಭಾಷೆ ಎಂದರೆ ಅದು "ಬಲ". ನೀವು ಅಂಧಕಾರ ಶಕ್ತಿಗಳೊಡನೆ ಹೋರಾಡುವಾಗಲೆಲ್ಲಾ ದೇವರ ಬಲವು ಬಿಡುಗಡೆಯಾಗಬೇಕು.
ಒಬ್ಬ ವಿಶ್ವಾಸಿಯು ಆತ್ಮಿಕವಾಗಿ ಬಲಹೀನನಾಗಿರಬಹುದು. ಅವನಿಗೆ ದೇವರ ಮಹಾ ಮಹಿಮೆಯಾದ ಶಕ್ತಿಯು ದೊರಕಿದರೂ ದೇವರ ಜ್ಞಾನದಲ್ಲಿಯೂ ಪ್ರಾರ್ಥನೆಯಲ್ಲಿಯೂ ಅವನು ಬೆಳೆಯದಿದ್ದರೆ ಆ ವಿಶ್ವಾಸಿ ಬಲಹೀನನಾಗಿಯೇ ಉಳಿದುಬಿಡುತ್ತಾನೆ.
ದೇವರ ಆತ್ಮವನ್ನು 'ಅಭಿಷೇಕ' 'ಅಗ್ನಿ' ಮತ್ತು 'ದೇವರ ಬಲ' ಎಂದು ಸಂಬೋಧಿಸಲಾಗುತ್ತದೆ. ಅಳತೆಗೆ ತಕ್ಕ ಹಾಗೆ ಪವಿತ್ರಾತ್ಮ ವರವನ್ನು ನಿಮಗೆ ಅನುಗ್ರಹಿಸಲ್ಪಡುತ್ತದೆ ಎಂಬುದನ್ನು ನೀವು ತಿಳಿದಿರಬೇಕೆಂದು ನಾನು ಬಯಸುತ್ತೇನೆ. ಹಾಗಾಗಿ ನೀವು ಯಾವಾಗೆಲ್ಲ ಅಗ್ನಿಯ ಅಭಿಷೇಕಕ್ಕಾಗಿ ಪ್ರಾರ್ಥಿಸುತ್ತೀರೋ ಆಗೆಲ್ಲಾ ನೀವು ಮಹತ್ತರ ಅಳತೆಯ 'ಅಗ್ನಿಯನ್ನು' 'ಅಭಿಷೇಕವನ್ನು' 'ದೇವರ ಬಲವನ್ನು' ಎದುರು ನೋಡುತ್ತಿದ್ದೀರಿ ಎಂದು ತಿಳಿದಿರಿ. ಕ್ರಿಸ್ತನು ಅಳತೆಯೇ ಇಲ್ಲದಷ್ಟು ಪವಿತ್ರಾತ್ಮನನ್ನು ಹೊಂದಿಕೊಂಡನು ಮತ್ತು ನಾವಾದರೋ ಕ್ರಿಸ್ತನ ಸಾರೂಪ್ಯಕ್ಕೆ ಬರುವವರೆಗೂ ಈ ಅಭಿಷೇಕವನ್ನು ಹೊಂದಿಕೊಳ್ಳುತ್ತಾ ಬೆಳೆಯುತ್ತಾ ಹೋಗಬೇಕು.
"ಹೇಗಂದರೆ ದೇವರು ಯಾರನ್ನು ಕಳುಹಿಸಿದ್ದಾನೋ ಆತನಿಗೆ ಆತ್ಮವರವನ್ನು ಅಳತೆಮಾಡದೆ ಅನುಗ್ರಹಿಸುವದರಿಂದ ಆತನು ದೇವರ ಮಾತುಗಳನ್ನೇ ಆಡುತ್ತಾನೆ."(ಯೋಹಾನ 3:34).
ದೀಕ್ಷಾಸ್ನಾನದ ವಿಧಗಳು
1.ನೀರಿನ ದೀಕ್ಷಾ ಸ್ನಾನ.
ನೀರಿನ ದೀಕ್ಷಾ ಸ್ನಾನವು ನಮ್ಮನ್ನು ಕ್ರಿಸ್ತನೆಂಬ ದೇಹದೊಂದಿಗೆ ಕೂಡಿಸುತ್ತದೆ
"ಯೆಹೂದ್ಯರಾಗಲಿ ಗ್ರೀಕರಾಗಲಿ ದಾಸರಾಗಲಿ ಸ್ವತಂತ್ರರಾಗಲಿ ನಾವೆಲ್ಲರು ಒಂದೇ ದೇಹವಾಗುವದಕ್ಕಾಗಿ ಒಂದೇ ಆತ್ಮನಲ್ಲಿ ದೀಕ್ಷಾಸ್ನಾನಮಾಡಿಸಿಕೊಂಡೆವು; ಒಂದೇ ಆತ್ಮ ನಮ್ಮೆಲ್ಲರಿಗೂ ಪಾನವಾಗಿ ಕೊಡಲ್ಪಟ್ಟಿತು."(1 ಕೊರಿಂಥದವರಿಗೆ 12:13).
2. ಅಗ್ನಿಯ ದೀಕ್ಷಾಸ್ನಾನ.
ಅಗ್ನಿಯ ದೀಕ್ಷಾಸ್ನಾನವು ಕ್ರಿಸ್ತನ ಬಲದ ಪಕ್ಷಕ್ಕೆ ನಮ್ಮನ್ನು ಸೇರಿಸುತ್ತದೆ.
ಈ ಅಗ್ನಿಯ ದೀಕ್ಷಾಸ್ನಾನವು ಅನ್ಯ ಭಾಷೆಯ ಸಾಕ್ಷಿಯೊಂದಿಗೆ ನಮ್ಮ ಮೇಲೆ ಇಳಿದುಬರುತ್ತದೆ.
"ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇವಿುನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗಿರಬೇಕು ಅಂದನು."(ಅಪೊಸ್ತಲರ ಕೃತ್ಯಗಳು1:8).
ಅಗ್ನಿಯ ಅಭಿಷೇಕ ನಿಮಗೆ ಏಕೆ ಬೇಕು?
1.ನೀವು ಯೇಸು ಕ್ರಿಸ್ತನ ಸುವಾರ್ತೆಗೆ ಪರಿಣಾಮಕಾರಿಯಾದ ಸಾಕ್ಷಿಯಾಗಿ ಜೀವಿಸಲು ಅಗ್ನಿಯ ಅಭಿಷೇಕದ ಅವಶ್ಯಕತೆ ಇದೆ.
2.ನೀವು ಸೈತಾನನ ದಾಳಿಯ ಮೇಲೆ ಜಯ ಹೊಂದಲು ನಿಮಗೆ ಅಗ್ನಿಯ ಅಭಿಷೇಕದ ಅಗತ್ಯವಿದೆ.
"ನೀವು ದೇವರಿಗೆ - ನಿನ್ನ ಕೃತ್ಯಗಳು ಎಷ್ಟೋ ಭಯಂಕರವಾಗಿವೆ; ನಿನ್ನ ಪರಾಕ್ರಮದ ಮಹತ್ತಿನ ದೆಸೆಯಿಂದ ನಿನ್ನ ಶತ್ರುಗಳು ನಿನ್ನ ಮುಂದೆ ಮುದುರಿಕೊಳ್ಳುವರು; (ಕೀರ್ತನೆ 66:3)
3. ನೀವು ದೇವರ ರಾಜ್ಯಕ್ಕಾಗಿ ಮಹತ್ತಾದ ಕಾರ್ಯಗಳನ್ನು ಮಾಡಲು ನಿಮಗೆ ಅಗ್ನಿಯ ಅಭಿಷೇಕದ ಅವಶ್ಯಕತೆ ಇದೆ.
" ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು. ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ."(ಯೋಹಾನ 14:12)
4. ಸೈತಾನನ ನೊಗಗಳನ್ನು ಮುರಿಯಲು ಅಂಧಕಾರದ ರಾಜ್ಯದ ಕ್ರಿಯೆಗಳನ್ನು ಬದಲಾಯಿಸಲು ರಾಜ್ಯಗಳನ್ನು ನಿಗ್ರಹಿಸಲು ನಿಮಗೆ ಅಗ್ನಿಯ ಅಭಿಷೇಕದ ಅವಶ್ಯಕತೆ ಇದೆ.
" ನಂಬಿಕೆಯ ಮೂಲಕ ಅವರು ರಾಜ್ಯಗಳನ್ನು ಸ್ವಾಧೀನಮಾಡಿಕೊಂಡರು; ನೀತಿಯನ್ನು ನಡಿಸಿದರು; ವಾಗ್ದಾನಗಳನ್ನು ಪಡಕೊಂಡರು;34ಸಿಂಹಗಳ ಬಾಯಿ ಕಟ್ಟಿದರು; ಬೆಂಕಿಯ ಬಲವನ್ನು ಆರಿಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು; ನಿರ್ಬಲರಾಗಿದ್ದು ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಪರರ ದಂಡುಗಳನ್ನು ಓಡಿಸಿಬಿಟ್ಟರು. 35ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಪುನರುತ್ಥಾನದಿಂದ ತಿರಿಗಿ ಹೊಂದಿದರು. ಕೆಲವರು ತಾವು ಯಾತನೆಯ ಯಂತ್ರಕ್ಕೆ ಕಟ್ಟಲ್ಪಟ್ಟಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದು ಹೇಳಿ ಮುರಿಸಿಕೊಂಡು ಸತ್ತರು."(ಇಬ್ರಿಯರಿಗೆ 11:33-35).
5.ಬಂಧನಗಳನ್ನು ಬಿಡುಗಡೆಗೊಳಿಸಲು ನಿಮಗೆ ಅಗ್ನಿಯ ಅಭಿಷೇಕದ ಅವಶ್ಯಕತೆ ಇದೆ.
"ಯೆಹೋವನು ಹೀಗನ್ನುತ್ತಾನೆ - ಶೂರನ ಸೆರೆಯವರೂ ಅಪಹರಿಸಲ್ಪಡುವರು, ಭೀಕರನ ಕೊಳ್ಳೆಯೂ ತೆಗೆಯಲ್ಪಡುವದು; ನಿನ್ನೊಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ಉದ್ಧರಿಸುವೆನು."(ಯೆಶಾಯ 49:25).
6. ದೆವ್ವಗಳನ್ನು ಬಿಡಿಸಲು ದುರಾತ್ಮಗಳ ರಾಜ್ಯದಲ್ಲಿ ಭಯ ಹುಟ್ಟಿಸಲು ನಿಮಗೆ ಅಗ್ನಿಯ ಅಭಿಷೇಕದ ಅವಶ್ಯಕತೆ ಇದೆ.
"ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ನನ್ನ ಹೆಸರನ್ನು ಹೇಳಿ ದೆವ್ವಗಳನ್ನು ಬಿಡಿಸುವರು; ಹೊಸಭಾಷೆಗಳಿಂದ ಮಾತಾಡುವರು; ಹಾವುಗಳನ್ನು ಎತ್ತುವರು; 18 ವಿಷಪದಾರ್ಥವನ್ನೇನಾದರೂ ಕುಡಿದರೂ ಅವರಿಗೆ ಯಾವ ಕೇಡೂ ಆಗುವದಿಲ್ಲ; ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಗುಣವಾಗುವದು ಎಂದು ಹೇಳಿದನು."("ಮಾರ್ಕ 16:17-18).
7. ನಿಮ್ಮೊಳಗೆ ದೇವರ ಬಲವಿಲ್ಲದಿದ್ದರೆ ದುರಾತ್ಮಗಳು ತಮ್ಮ ಗುಪ್ತ ಸ್ಥಳದಲ್ಲಿ ಅಡಗಿಕೊಳ್ಳುತ್ತವೆ. ದೇವರಾತ್ಮನ ಬಲದಿಂದ ಮಾತ್ರ ಅವುಗಳನ್ನು ಹೊರಗೆಡೆದು ಓಡಿಸಲು ಸಾಧ್ಯ ನಮ್ಮ ಉಳಿವಿಗಾಗಿ ಮತ್ತು ಜಯಕ್ಕಾಗಿ ದೇವರ ಬಲ ಬೇಕೇ ಬೇಕು.
"ನನ್ನ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ನನಗೆ ವಿಧೇಯರಾಗುವರು; ದೇಶಾಂತರದವರು ನನ್ನ ಮುಂದೆ ಮುದುರಿಕೊಳ್ಳುವರು. [45] ಅವರು ಧೈರ್ಯಗುಂದಿದವರಾಗಿ ತಮ್ಮ ತಮ್ಮ ಕೋಟೆಗಳಿಂದ ನಡುಗುತ್ತಾ ಬರುವರು."(ಕೀರ್ತನೆಗಳು 18:44-45).
ದೇವರಾತ್ಮನನ್ನು ನಂದಿಸುವಂತಹ ಸಂಗತಿಗಳಾವುವು?
"ದೇವರಾತ್ಮನನ್ನು ನಂದಿಸಬೇಡಿರಿ."(1ಥೆಸಲೋನಿಕ 5:19).
1 ಕಾಮಾದಾಶೆಗಳು ಮತ್ತು ಪಾಪಮಾಯವಾದ ಆಲೋಚನೆಗಳು. (ಮತ್ತಾಯ 15:10-11)
2. ಜೀವನದ ಕುರಿತಾದ ಚಿಂತೆಗಳು.
(ಮಾರ್ಕ್ 4:9).
3. ಪ್ರಾರ್ಥನಾ ರಹಿತ ಜೀವಿತ. (ಲೂಕ 18:1).
4. ಕ್ಷಮಾಗುಣ ಇಲ್ಲದಿರುವಂಥದ್ದು. (ಎಫಸೆ 4:30).
5. ಸುಳ್ಳು, ಆತಂಕ, ಸಂದೇಹ ಮತ್ತು ಅಪನಂಬಿಕೆ (ರೋಮ 14:23).
ನಮ್ಮೊಳಗೆ ಆತ್ಮಿಕ ಬಲವನ್ನು ಹೇಗೆ ಉತ್ಪಾದಿಸಿಕೊಳ್ಳಬಹುದು.
1. ಉಪವಾಸ ಮತ್ತು ಪ್ರಾರ್ಥನೆ ಮೂಲಕ.
ಉಪವಾಸದ ಮೂಲಕ ಉನ್ನತವಾದ ಆತ್ಮಿಕ ಆಯಾಮವನ್ನು ನಿರ್ಮಿಸಿಕೊಳ್ಳಬಹುದು. ನಾವು ಉಪವಾಸ ಮಾಡುವಾಗಲೆಲ್ಲಾ ದೇವರೊಂದಿಗೆ ನೂತನವಾದ ಸಂಬಂಧವನ್ನು ಗಳಿಸುತ್ತಾ ಹೋಗುತ್ತೇವೆ. ನೀವು ದೇವರೊಂದಿಗೆ ನೂತನವಾದ ಸಂಬಂಧವನ್ನು ಹೊಂದದೆ ಹೋದರೆ ಆತ್ಮಿಕವಾಗಿ ಬಲಹೀನರಾಗಿ ಬಿಡುತ್ತೀರಿ. ಪ್ರತಿ ಬಾರಿ ದೇವರೊಂದಿಗೆ ಸಂಪರ್ಕ ಹೊಂದುವಾಗ ನೂತನವಾದ ಅಗ್ನಿಯನ್ನು ಅದು ಉತ್ಪಾದಿಸುತ್ತದೆ.
2. ದೇವರ ವಾಕ್ಯ.
ದೇವರ ವಾಕ್ಯವು ಬಲದಿಂದ ತುಂಬಿಸಲ್ಪಟ್ಟಿದ್ದಾಗಿದೆ. ನೀವು ವಾಕ್ಯವನ್ನು ಧ್ಯಾನಿಸುವಾಗಲೆಲ್ಲಾ ನಿಮ್ಮಲ್ಲಿ ನೂತನವಾದ ಬಲವು ಶೇಖರಿಸಲ್ಪಡುತ್ತಾ ಹೋಗುತ್ತದೆ.
"ಯಾಕಂದರೆ ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ."(ಇಬ್ರಿಯರಿಗೆ 4:12)
ದೇವರ ವಾಕ್ಯದಲ್ಲಿ ದೇವರ ಶಕ್ತಿಯೂ,ದೇವರಾತ್ಮನ ಅಗ್ನಿಯೂ ಅಡಕವಾಗಿದೆ.ದೇವರ ವಾಕ್ಯವು ದೇವರಾತ್ಮನ ಅಭಿಷೇಕದಿಂದ ಕೂಡಿದೆ.ನೀವು ವಾಕ್ಯಧ್ಯಾನದಲ್ಲಿ ಸಮಯ ಕಳೆಯುವಾಗ ದೇವರ ಆತ್ಮನ ಬಲವನ್ನು ಕೂಡಿಸಿಕೊಳ್ಳುತ್ತಾ ಇರುತ್ತೀರಿ.
"ನಾನು ಯೆಹೋವನ ವಿಷಯವನ್ನು ಪ್ರಕಟಿಸೆನು, ಆತನ ಹೆಸರಿನಲ್ಲಿ ಇನ್ನು ಮಾತಾಡೆನು ಎಂದುಕೊಂಡರೆ ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ; ತಡೆದು ತಡೆದು ಆಯಾಸಗೊಂಡಿದ್ದೇನೆ, ಸಹಿಸಲಾರೆ. "(ಯೆರೆಮೀಯ 20:9).
3. ಶರೀರ ಭಾವವನ್ನು ಕೊಲ್ಲುವ ಮುಖಾಂತರ
ಶರೀರಾಧೀನ ಭಾವವು ಸಾಯದಿದ್ದರೆ ದೇವರ ಬಲವು ನಿಮ್ಮಲ್ಲಿ ಅಭಿವೃದ್ಧಿ ಹೊಂದಲಾರದು. ಮತ್ತು ದೇವರ ಬಲವನ್ನು ದೇವರ ಉದ್ದೇಶಕ್ಕಾಗಿಯೇ ಬಳಸಿಕೊಳ್ಳಬೇಕು. ಶರೀರಾಧೀನ ಭಾವವು ಶಿಲುಬೆಗೆ ಏರಿಸಲ್ಪಡದಿದ್ದರೆ ದೇವರ ಬಲವನ್ನು ನಾವು ನಮ್ಮ ಸ್ವಾರ್ಥದಾಸೆಗೆ ಬಳಸಿಕೊಳ್ಳಲು ಆರಂಭಿಸುತ್ತೇವೆ.
"ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಗೋದಿಯ ಕಾಳು ಭೂವಿುಯಲ್ಲಿ ಬಿದ್ದು ಸಾಯದಿದ್ದರೆ ಒಂದೇಯಾಗಿ ಉಳಿಯುವದು; ಸತ್ತರೆ ಬಹಳ ಫಲಕೊಡುವದು."(ಯೋಹಾನ 12:24 )
Bible Reading Plan : John 15-19
ಪ್ರಾರ್ಥನೆಗಳು
1. ತಂದೆಯೇ ಅಗ್ನಿಯಿಂದ ನನ್ನನ್ನು ಯೇಸು ನಾಮದಲ್ಲಿ ಅಭಿಷೇಕಿಸು. (ಮತ್ತಾಯ 3:11).
2. ತಂದೆಯೇ ಯೇಸುನಾಮದಲ್ಲಿ ನಾನು ನಿನ್ನ ಬಲವನ್ನು ದುರ್ಬಳಕೆ ಮಾಡದಂತೆ ನಿನ್ನಲ್ಲಿ ದೃಢವಾಗಿ ನಿಲ್ಲುವಂತೆ ನನ್ನನ್ನು ಬಲಪಡಿಸು. (ದಾನಿಯೇಲ 11:32).
3. ತಂದೆಯೇ ಯೇಸು ನಾಮದಲ್ಲಿ ನಾನು ಸಂಪತ್ತನ್ನು ಹೊಂದುವಂತೆ ನನಗೆ ಬಲವನ್ನು ಅನುಗ್ರಹಿಸು. (ಧರ್ಮೋಪದೇಶಕಾಂಡ.8:18).
4. ಸೈತಾನನ ಎಲ್ಲಾ ಕೋಟೆ ಕೊತ್ತಲುಗಳನ್ನು ಅವನ ಮಿತಿಗಳನ್ನು ಮುರಿದು ಹಾಕಲು ಯೇಸು ನಾಮದಲ್ಲಿ ಬಲವನ್ನು ಹೊಂದಿಕೊಳ್ಳುತ್ತೇನೆ. (2 ಕೊರಿಯಂತ 10:4).
5. ತಂದೆಯೇ, ಆತ್ಮಗಳನ್ನು ಆದಾಯ ಮಾಡಲು ನೂತನ ಅಭಿಷೇಕವನ್ನು ಯೇಸು ನಾಮದಲ್ಲಿ ನನಗೆ ಅನುಗ್ರಹಿಸು. (ಲೂಕ 12:49).
6. ತಂದೆಯೇ ಪವಿತ್ರಾತ್ಮನ ಒಂಬತ್ತು ವರಗಳು ನನ್ನಲ್ಲಿ ಕಾರ್ಯ ಮಾಡಬೇಕೆಂದು ಯೇಸುನಾಮದಲ್ಲಿ ಆಶಿಸುತ್ತೇನೆ. (1ಕೊರಿಯಂತೆ 12:4-11)
7. ತಂದೆಯೇ, ಅಗ್ನಿ ಅಭಿಷೇಕವನ್ನು ನಾನು ಹೊಂದುವುದಕ್ಕೆ ತಡೆಯಾಗಿರುವ ಎಲ್ಲಾ ಅಡೆತಡೆಗಳನ್ನು ಯೇಸು ನಾಮದಲ್ಲಿ ನಿರ್ಮೂಲ ಮಾಡು. (ಮತ್ತಾಯ 15:13).
8. ಓ ಕರ್ತನೇ, ನನ್ನ ಜೀವಿತದ ಎಲ್ಲಾ ಪಾಪಮಯ ಆಸೆಗಳು ಅಭ್ಯಾಸಗಳು ಯೇಸು ನಾಮದಲ್ಲಿ ನಿನ್ನ ಅಗ್ನಿಯಿಂದ ಸುಟ್ಟು ಬೂದಿಯಾಗಲಿ. (ರೋಮ 6:12-14).
9. ಓ ಕರ್ತನೆ ನಿನ್ನ ಪವಿತ್ರಾತ್ಮನ ಅಗ್ನಿಯು ನನ್ನ ಪ್ರಾಣಾತ್ಮ ಶರೀರಗಳನ್ನು ಯೇಸುನಾಮದಲ್ಲಿ ಶುದ್ಧೀಕರಿಸಲಿ. (1 ಥೆಸಲೋನಿಕ5:18).
10. ನನ್ನ ಜೀವಿತ ವ್ಯರ್ಥವಾಗುವುದಿಲ್ಲ ಎಂದು ಯೇಸುನಾಮದಲ್ಲಿ ಘೋಷಿಸುತ್ತೇನೆ. (ಕೀರ್ತನೆ 90:12).
11. ತಂದೆಯೇ ನಿನ್ನ ನೂತನ ಅಭಿಷೇಕವನ್ನು ನನ್ನಲ್ಲಿ ನೀನು ತುಂಬಬೇಕೆಂದು ಯೇಸುನಾಮದಲ್ಲಿ ಆಶಿಸುತ್ತೇನೆ. (ಎಫಸ್ಸೆ 5:18).
12. ಶ್ರೇಷ್ಠತೆಯ ಅಭಿಷೇಕವು ನನ್ನ ಹಾಗೂ ಈ 40 ದಿನಗಳ ಉಪವಾಸ ಪ್ರಾರ್ಥನಾ ಕೂಟದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೂ ಯೇಸು ನಾಮದಲ್ಲಿ ನೆಲೆಗೊಳ್ಳಲಿ. (ಯೆಶಾಯ 10:27)
Join our WhatsApp Channel
Most Read
● ಆಳವಾದ ನೀರಿನೊಳಗೆ● ದ್ವಾರ ಪಾಲಕರು / ಕೋವರ ಕಾಯುವವರು
● ಯೇಸು ಕುಡಿದ ದ್ರಾಕ್ಷಾರಸ
● ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು
● ದಿನ 19:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಸಮಾಧಾನದ ಮೂಲ :ಕರ್ತನಾದ ಯೇಸು
● ದಿನ 16:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು