ಅನುದಿನದ ಮನ್ನಾ
ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
Wednesday, 20th of December 2023
2
2
450
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ದೈವೀಕ ಮಾರ್ಗದರ್ಶನವನ್ನು ಆನಂದಿಸುವುದು.
" [ಯೆಹೋವನು] - ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು [ಅನ್ನುತ್ತಾನಲ್ಲಾ]." (ಕೀರ್ತನೆಗಳು 32:8).
ದೇವರು ನಮ್ಮನ್ನು ಅಂಧಕಾರದಲ್ಲಿ ಬಿಟ್ಟುಬಿಡುವವನಲ್ಲ. ನಮ್ಮನ್ನು ನೀತಿಯ ಮಾರ್ಗದಲ್ಲೇ ನಡೆಸುತ್ತೇನೆಂದು ಆತನು ವಾಗ್ದಾನ ಮಾಡಿದ್ದಾನೆ.ಆತನೇ ನಮ್ಮನ್ನು ನಡೆಸಬೇಕು ಎಂದು ನಾವು ಬಯಸುವವರಾದರೆ ನಾವು ಆತನ "ಚಿತ್ತಕ್ಕೆವಿಧೇಯರಾಗಬೇಕು"(ಯೆಶಾಯ 1:19). ಆತನು ನಮಗೆ ಇಷ್ಟ ಬಂದ ರೀತಿಯಲ್ಲಿ ಆಯ್ಕೆ ಮಾಡುವ ಸ್ವಾತಂತ್ರ್ಯ ಕೊಟ್ಟು ನಮ್ಮನ್ನು ರೂಪಿಸಿರುವುದರಿಂದ ನಾವು ಆತನ ಮಾರ್ಗದಲ್ಲೇ ನಡೆಯಬೇಕು ಎಂದು ಆತನು ನಮ್ಮನ್ನು ಎಂದಿಗೂ ಬಲತ್ಕರಿಸುವುದಿಲ್ಲ.ನಮ್ಮಿಷ್ಟದಂತೆ ನಾವು ಮಾರ್ಗವನ್ನು ಆಯ್ಕೆ ಮಾಡಿ ಕೊಳ್ಳಬಹುದು ಮತ್ತು ಅದಕ್ಕೆ ತಕ್ಕಂತೆ ಆಶೀರ್ವಾದಗಳನ್ನು ಅಥವಾ ಅದರ ಪರಿಣಾಮವನ್ನು ನಾವೇ ಅನುಭವಿಸಬಹುದು.
ಇವುಗಳ ನಡುವೆ ನಾವು ದೈವೀಕ ಮಾರ್ಗದರ್ಶನವನ್ನೇ ಆಯ್ಕೆ ಮಾಡುವ ಅವಶ್ಯಕತೆ ನಮಗಿದೆ. ದೈವೀಕ ಮಾರ್ಗದರ್ಶನ ನಮಗಿಲ್ಲದಿದ್ದರೆ ನಾವು ಅತ್ಯುತ್ತಮ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲಾರೆವು. ನಮಗೆ ಸರಿಯಾದ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು, ಸರಿಯಾದ ವ್ಯವಹಾರದಲ್ಲಿ ಹೂಡಿಕೆ ಮಾಡಲು ಮತ್ತು ನಮ್ಮ ದೈನಂದಿನ ಜೀವಿತವನ್ನು ಜೀವಿಸಲು ಎಲ್ಲದಕ್ಕೂ ನಮಗೆ ದೈವೀಕ ಮಾರ್ಗದರ್ಶನ ಬೇಕೇ ಬೇಕು. ಬಹುತೇಕ ಜನರು ದೈವಿಕ ಮಾರ್ಗದರ್ಶನದ ಕೊರತೆಯಿಂದ ಮರಣದ ಹಾದಿಗೆ ಸಿಲುಕಿಕೊಂಡರು. ಹಾಗೆಯೇ ಅನೇಕರು ವಿಮಾನ ಪ್ರಯಾಣ ಮಾಡಬಾರದೆಂದು ದೈವೀಕ ಮಾರ್ಗದರ್ಶನ ಹೊಂದಿ ಅದಕ್ಕೆ ವಿಧೇಯರಾಗಿ ವಿಮಾನ ಪ್ರಯಾಣ ಮಾಡದಿದ್ದರಿಂದಲೇ ವಿಮಾನ ಪತನದಿಂದ ತಪ್ಪಿಸಿಕೊಂಡು ತಮ್ಮ ಜೀವ ಉಳಿಸಿಕೊಂಡರು ಎಂಬುದನ್ನೂ ನಾನು ಕೇಳಿದ್ದೇನೆ.
ದೈವಿಕ ಮಾರ್ಗದರ್ಶನವು ನಮ್ಮನ್ನು
ಸರಿಯಾದ ಸ್ಥಳದಲ್ಲಿ
ಸರಿಯಾದ ಸಮಯದಲ್ಲಿ
ಸರಿಯಾದ ಕಾರ್ಯವನ್ನು
ಸರಿಯಾದ ವ್ಯಕ್ತಿಗಳೊಂದಿಗೆ ಮಾಡುವಂತೆ ನಮ್ಮನ್ನು ನಡೆಸುತ್ತದೆ
ದೈವಿಕ ಮಾರ್ಗದರ್ಶನದಲ್ಲಿ ನಡೆಯುವುದರಿಂದ ಆಗುವ ಪ್ರಯೋಜನಗಳೇನು?
1. ನೀವು ಮೃತ್ಯುವಿನಿಂದಲೂ -ಕೇಡಿನಿಂದಲೂ ತಪ್ಪಿಸಲ್ಪಡುವಿರಿ.
"ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ ನೀನು ಹತ್ತಿರವಿರುವದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ನಿನ್ನ ಕೋಲೂ ನನಗೆ ಧೈರ್ಯ ಕೊಡುತ್ತವೆ."(ಕೀರ್ತನೆಗಳು 23:4)
2. ರಹಸ್ಯವಾಗಿ ಬಚ್ಚಿಡಲ್ಪಟ್ಟ ಸಂಪತ್ತಿನ ಕಡೆಗೆ ನೀವು ನಡೆಸಲ್ಪಡುವಿರಿ.
"ನಿನ್ನ ಹೆಸರುಹಿಡಿದು ಕರೆಯುವ ನಾನು ಯೆಹೋವನು, ಇಸ್ರಾಯೇಲ್ಯರ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಆಸ್ತಿಪಾಸ್ತಿಯನ್ನೂ ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪವನ್ನೂ ನಿನಗೆ ಕೊಡುವೆನು."
(ಯೆಶಾಯ 45:3).
3. ನೀವು ಅತ್ಯಧಿಕವಾದ ಅಧಿಕಾರದಿಂದ ಕಾರ್ಯ ಮಾಡುವಿರಿ.
ನಾವು ದೈವಿಕ ಮಾರ್ಗದರ್ಶನಕ್ಕೆ ವಿಧೇಯರಾಗಿ ನಡೆಯುವಾಗ ನಾವು ಉನ್ನತವಾದ ಅಧಿಕಾರಿಗಳ ಸ್ಥಾನವನ್ನು ಹೊಂದುವವರಾಗುತ್ತೇವೆ. ನೀವು ಅಧಿಕಾರಕ್ಕೆ ಒಳಪಡದಿದ್ದರೆ ನೀವು ಅಧಿಕಾರಿಯಾಗುವುದಕ್ಕೂ ಸಾಧ್ಯವಿಲ್ಲ. ನಾವು ದೇವರಿಗೆ ಶರಣಾಗತರಾದಾಗ ನಾವು ಹೊಂದಿರುವ ಅಧಿಕಾರವನ್ನು ದೆವ್ವಗಳೂ ಕೂಡ ಗುರುತಿಸುವವು. (ಯಾಕೋಬ 4:7)(ಮತ್ತಾಯ 8:9-1)
ದೈವಿಕ ನಡೆಸುವಿಕೆಯನ್ನು ನಾವು ಆನಂದಿಸುವುದು ಹೇಗೆ?
1. ಇದಕ್ಕಾಗಿ ನೀವು ದೇವರಿಗೆ ಶರಣಾಗಬೇಕು.
"ಇದಲ್ಲದೆ ಆತನು ಎಲ್ಲರಿಗೂ ಹೇಳಿದ್ದೇನಂದರೆ - ಯಾವನಿಗಾದರೂ ನನ್ನ ಹಿಂದೆ ಬರುವದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ದಿನಾಲೂ ಹೊತ್ತುಕೊಂಡು ನನ್ನ ಹಿಂದೆ ಬರಲಿ"(ಲೂಕ 9:23).
"ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; ತಂದೆ ಹೇಳಿದ್ದನ್ನು ಕೇಳಿ ನ್ಯಾಯತೀರಿಸುತ್ತೇನೆ; ಮತ್ತು ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸುವದರಿಂದ ನಾನು ಮಾಡುವ ತೀರ್ಪು ನ್ಯಾಯವಾಗಿದೆ."(ಯೋಹಾನ 5:30)
"ಇತರರನ್ನು ಹೋರಾಟಕ್ಕೆ ಕರೆದ ಮೇಲೆ ನಾನೇ ಅಯೋಗ್ಯನೆನಿಸಿಕೊಂಡೇನೋ ಎಂಬ ಭಯದಿಂದ ನನ್ನ ಮೈಯನ್ನು ಜಜ್ಜಿ ಸ್ವಾಧೀನ ಪಡಿಸಿಕೊಳ್ಳುತ್ತೇನೆ."(1 ಕೊರಿಂಥದವರಿಗೆ 9:27)
2. ನಿಮ್ಮ ಯೋಜನೆಗಳನ್ನು ಆತನಿಗೆ ಒಪ್ಪಿಸಿ ಆತನ ಚಿತ್ತವನ್ನು ತಿಳಿದುಕೊಳ್ಳಲು ಕಾದುಕೊಂಡಿರ್ರಿ.
"ಅದು ತೀರುವಷ್ಟರಲ್ಲೇ ಸಮುವೇಲನು ಬಂದನು. ಸೌಲನು ಅವನನ್ನು ವಂದಿಸುವದಕ್ಕೋಸ್ಕರ ಎದುರಿಗೆ ಹೋಗಲು 11ಸಮುವೇಲನು ಅವನನ್ನು - ಇದೇನು ನೀನು ಮಾಡಿದ್ದು ಎಂದು ಕೇಳಲು ಅವನು - ಜನರು ಚದರಿಹೋಗುವದನ್ನೂ ನೀನು ನಿಯವಿುತಕಾಲದಲ್ಲಿ ಬಾರದಿರುವದನ್ನೂ ಫಿಲಿಷ್ಟಿಯರು ವಿುಕ್ಮಾಷಿನಲ್ಲಿ ನಮಗೆ ವಿರೋಧವಾಗಿ ಕೂಡಿಕೊಂಡಿರುವದನ್ನೂ ನೋಡಿ - 12ನಾನು ಯೆಹೋವನಿಗೆ ಶಾಂತ್ಯರ್ಪಣೆಯನ್ನು ಸಲ್ಲಿಸುವದಕ್ಕಿಂತ ಮೊದಲೇ ಫಿಲಿಷ್ಟಿಯರು ಗಿಲ್ಗಾಲಿಗೆ ಬಂದು ನನ್ನ ಮೇಲೆ ಬಿದ್ದಾರೆಂದು ಭಯಪಟ್ಟು ಸರ್ವಾಂಗಹೋಮವನ್ನು ಸಮರ್ಪಿಸುವದಕ್ಕೆ ಮುಂಗೊಂಡೆನು ಅಂದನು. 13 ಆಗ ಸಮುವೇಲನು - ನೀನು ಬುದ್ಧಿಹೀನಕಾರ್ಯವನ್ನು ಮಾಡಿದೆ; ನೀನು ನಿನ್ನ ದೇವರಾದ ಯೆಹೋವನ ಆಜ್ಞೆಯನ್ನು ಕೈಕೊಳ್ಳಲಿಲ್ಲ. ಕೈಕೊಂಡಿದ್ದರೆ ಆತನು ನಿನ್ನ ರಾಜ್ಯವನ್ನು ಇಸ್ರಾಯೇಲ್ಯರಲ್ಲಿ ಶಾಶ್ವತವಾಗಿ ಸ್ಥಿರಪಡಿಸುತ್ತಿದ್ದನು. 14ಈಗಲಾದರೋ ನಿನ್ನ ಅರಸುತನವು ನಿಲ್ಲುವದಿಲ್ಲ; ನೀನು ಯೆಹೋವನ ಆಜ್ಞೆಯನ್ನು ಕೈಕೊಳ್ಳದೆಹೋದದರಿಂದ ಆತನು ತನಗೆ ಒಪ್ಪುವ ಬೇರೊಬ್ಬ ಪುರುಷನನ್ನು ತನ್ನ ಪ್ರಜೆಯ ಮೇಲೆ ಪ್ರಭುವಾಗಿ ನೇವಿುಸಿದ್ದಾನೆ ಎಂದು ಹೇಳಿದನು."(1 ಸಮುವೇಲನು 13:10-14).
"ಮನುಷ್ಯನು ತನ್ನ ಮನದಂತೆ ದಾರಿಯನ್ನಾರಿಸಿಕೊಂಡರೂ ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು."(ಜ್ಞಾನೋಕ್ತಿಗಳು 16:9).
3. ಆತ್ಮದಿಂದ ಪ್ರಾರ್ಥಿಸಿರಿ.
ನಾವು ಏನು ಪ್ರಾರ್ಥಿಸಬೇಕೋ ಅದು ನಮಗೆ ತಿಳಿಯದೆ ಇರುವಂತದ್ದು ನಮ್ಮ ಒಂದು ಬಲಹೀನತೆಯಾಗಿದೆ. ಆದ್ದರಿಂದ ನಾವು ಪವಿತ್ರಾತ್ಮನ ಸಹಾಯದಿಂದ ಅನ್ಯಭಾಷೆಯಲ್ಲಿ ಪ್ರಾರ್ಥಿಸುವಾಗಲೆಲ್ಲಾ ನಾವು ಪವಿತ್ರಾತ್ಮನ ಮೇಲೆ ಆಧಾರಗೊಂಡಿರುತ್ತೇವೆ ಆಗ ನಾವು ನಮ್ಮ ಜ್ಞಾನವಿವೇಕಗಳನ್ನು ಮೀರಿದ ವಿಚಾರಗಳನ್ನು ಕುರಿತು ಪ್ರಾರ್ಥಿಸುತ್ತೇವೆ. ನಿಮಗೆ ದೈವಿಕ ಮಾರ್ಗದರ್ಶನ ಬೇಕೆನ್ನಿಸಿದಾಗಲೆಲ್ಲಾ ಆತ್ಮದಿಂದ ಪ್ರಾರ್ಥಿಸಲು ಆರಂಭಿಸಿ ಆಗ ನಿಮ್ಮ ಆತ್ಮೀಕ ಮನುಷ್ಯನಿಗೆ ಸ್ಪಷ್ಟತೆಯು ಲಭಿಸುತ್ತದೆ.
"26 ಹಾಗೆ ಪವಿತ್ರಾತ್ಮನು ಸಹ ನಮ್ಮ ಅಶಕ್ತಿಯನ್ನು ನೋಡಿ ಸಹಾಯಮಾಡುತ್ತಾನೆ. ಹೇಗಂದರೆ ನಾವು ತಕ್ಕ ಪ್ರಕಾರ ಏನು ಬೇಡಿಕೊಳ್ಳಬೇಕೋ ನಮಗೆ ಗೊತ್ತಿಲ್ಲದ್ದರಿಂದ ಪವಿತ್ರಾತ್ಮನು ತಾನೇ ಮಾತಿಲ್ಲದಂಥ ನರಳಾಟದಿಂದ ನಮಗೋಸ್ಕರ ಬೇಡಿಕೊಳ್ಳುತ್ತಾನೆ. 27ಆದರೆ ಹೃದಯಗಳನ್ನು ಶೋಧಿಸಿ ನೋಡುವಾತನಿಗೆ ಪವಿತ್ರಾತ್ಮನ ಮನೋಭಾವವು ಏನೆಂದು ತಿಳಿದದೆ; ಆ ಆತ್ಮನು ದೇವರ ಚಿತ್ತಾನುಸಾರವಾಗಿ ದೇವಜನರಿಗೋಸ್ಕರ ಬೇಡಿಕೊಳ್ಳುವನೆಂದು ಆತನು ಬಲ್ಲನು."(ರೋಮಾಪುರದವರಿಗೆ 8:26-27)
ದೇವರು ನಮ್ಮನ್ನು ನಡೆಸಬಹುದಾದ ವಿವಿಧ ವಿಧಾನಗಳು.
1. ದೇವರ ವಾಕ್ಯ.
ದೇವರವಾಕ್ಯವು ದೇವರು ನಮ್ಮನ್ನು ನಡೆಸಲು ಉಪಯೋಗಿಸುವ ಪ್ರಾರ್ಥಮಿಕ ಮೂಲವಾಗಿದೆ. ಬರೆದಿಟ್ಟ ವಾಕ್ಯಗಳೇ ಮೊದಲು ದೇವರಾಡಿದಂತಹ ಮಾತುಗಳಾಗಿವೆ.ದೇವರು ಸತ್ಯವೇದದ ಲೇಖಕರ ಹೃದಯದಲ್ಲಿ ಮಾತಾಡಿದನು. ಬರೆದಿಟ್ಟಂತ ಈ ದೇವರವಾಕ್ಯಗಳು ದೇವರು ಆಡಿದ ಮಾತುಗಳಷ್ಟೇ ಶಕ್ತಿಶಾಲಿಯಾಗಿವೆ. ಬರೆದಿಟ್ಟ ವಾಕ್ಯಗಳನ್ನು ಅಧ್ಯಯನ ಮಾಡುವಾಗ ನಿಮ್ಮ ಆತ್ಮೀಕ ಮನುಷ್ಯನು ಪ್ರಕಟಿಸಲ್ಪಟ್ಟ ವಾಕ್ಯಗಳನ್ನು (ರೇಮ)ಹೊಂದಿಕೊಳ್ಳುತ್ತಾನೆ.(ಯೋಹಾನ1:1).
2. ಮನಃಸಾಕ್ಷಿ ಮತ್ತು ದೇವರಾತ್ಮನ ಸ್ವರ.
ನಿಮ್ಮ ಮನಃ ಸಾಕ್ಷಿಯು ನೀವು ತೆಗೆದು ಕೊಳ್ಳಲಿರುವ ನಿರ್ಣಯವು ಸರಿಯೋ ತಪ್ಪೋ ಎಂಬುದಕ್ಕೆ ಭರವಸೆಯಾಗಿದೆ. ನಿಮ್ಮ ಆತ್ಮೀಕ ಮನುಷ್ಯನಿಗೆ ನಿಮ್ಮ ಮನಃ ಸಾಕ್ಷಿಯು ಹಸಿರು ದೀಪ , ಹಳದಿ ದೀಪ ಅಥವಾ ಕೆಂಪು ದೀಪದ ಹಾಗೆ ಕಾರ್ಯ ಮಾಡುತ್ತದೆ.ಕೆಲವೊಮ್ಮೆ ನೀವು ನಿರ್ಧಾರ ತೆಗೆದು ಕೊಂಡಾಗ ಸಮಾಧಾನ ಅನಿಸುತ್ತದೆ. ಮತ್ತೂ ಕೆಲವೊಮ್ಮೆ ಏನೋ ಒಂದು ರೀತಿಯ ಭಯ -ಆತಂಕ ಕಾಡಿ ಆ ಒಂದು ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ವಿರಾಮ ಬೇಕು ಎನಿಸುತ್ತದೆ. ಇದನ್ನೇ ಅನೇಕರು ಮನಃಸಾಕ್ಷಿ ಎಂದು ಕರೆಯುತ್ತಾರೆ. ನೀವು ಈ ಮನಃಸಾಕ್ಷಿಗೆ ಕಿವಿಗೊಡುವುದನ್ನು ಕಲಿಯಬೇಕು ಮತ್ತು ಅದರಂತೆ ನಡೆಯುವುದನ್ನು ಅಭ್ಯಾಸಿಸಬೇಕು.
"ನಾವು ದೇವರ ಮಕ್ಕಳಾಗಿದ್ದೇವೆಂಬದಕ್ಕೆ ಪವಿತ್ರಾತ್ಮನೇ ನಮ್ಮ ಆತ್ಮದೊಂದಿಗೆ ಸಾಕ್ಷಿಹೇಳುತ್ತಾನೆ."(ರೋಮಾಪುರದವರಿಗೆ 8:16).
"ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು."(ರೋಮಾಪುರದವರಿಗೆ 8:14).
3.ವಿವೇಕದ ಆಲೋಚನೆಗಳನ್ನು ಕೇಳುವುದು.
ಮೋಶೆಯು ತನ್ನ ಮಾವನಾದ ಇತ್ರೋನನ ಆಲೋಚನೆಗಳನ್ನು ಕೇಳಿ ಅದನ್ನು ಅಳವಡಿಸಿಕೊಂಡು ಜನರೊಂದಿಗಿನ ತನ್ನ ದೈನಂದಿನ ಜಂಜಾಟವನ್ನು ಕಡಿಮೆಗೊಳಿಸಿಕೊಂಡ.
"ನನ್ನ ಮಾತನ್ನು ಕೇಳು, ನಾನು ನಿನಗೆ ಒಂದು ಆಲೋಚನೆಯನ್ನು ಹೇಳುತ್ತೇನೆ; ಮತ್ತು ದೇವರು ನಿನ್ನ ಸಂಗಡ ಇರಲಿ. ನೀನು ಜನರಿಗೂ ದೇವರಿಗೂ ಮಧ್ಯಸ್ಥನಾಗಿದ್ದು ಜನರ ವ್ಯಾಜ್ಯಗಳನ್ನು ದೇವರ ಹತ್ತಿರಕ್ಕೆ ತರಬೇಕು;"(ವಿಮೋಚನಕಾಂಡ 18:19).
4. ದೇವದೂತರ ಪ್ರಕಟಣೆಗಳು.
ಆಗಾಗ ದೇವದೂತರು ಸಹ ಪ್ರತ್ಯಕ್ಷರಾಗಿ ಆಲೋಚನೆಗಳನ್ನು ಹೇಳಿಕೊಡುವುದುಂಟು ಆದರೆ ಈ ರೀತಿಯ ದೇವದೂತರ ದರ್ಶನವಾದಾಗ ನಾವು ಬಹಳ ಎಚ್ಚರದಿಂದ ಇರಬೇಕು. ಮೂಲಭೂತವಾಗಿ ದೇವರು ತನ್ನ ವಾಕ್ಯದ ಮೂಲಕ ಹಾಗೂ ತನ್ನ ಆತ್ಮನ ಮೂಲಕ ನಮ್ಮನ್ನು ನಡೆಸುತ್ತಾನೆ.ಯಾವುದೇ ದೇವದೂತರ ಪ್ರತ್ಯಕ್ಷತೆಯಾಗಿರಲಿ,ಅವರ ಆಲೋಚನೆಗಳೇ ಆಗಿರಲಿ ಅವು ದೇವರವಾಕ್ಯದ ಅಧಿಕಾರಕ್ಕೆ ಒಳಪಟ್ಟಿರಬೇಕು.ಯಾವ ದೇವದೂತನ ಮಾತಾಗಿರಲಿ ಅದು ದೇವರ ವಾಕ್ಯಕ್ಕೆ ಸರಿಹೊಂದದಿದ್ದರೆ ಅಂತ ಅಲೌಖಿಕ ದರ್ಶನಗಳನ್ನು ಬಿಟ್ಟು ದೇವರವಾಕ್ಯಕ್ಕೆ ಅಂಟಿಕೊಳ್ಳಬೇಕು. ದೇವದೂತರು ನಮಗೆ ದರ್ಶನ ಕೊಡಬೇಕೆ ಬೇಡವೇ ಎಂಬುದನ್ನು ದೇವರು ನಿರ್ಧರಿಸಬೇಕೇ ವಿನಃ ನಾವು ದೇವದೂತರ ದರ್ಶನಕ್ಕಾಗಿ ಪ್ರಾರ್ಥಿಸಬಾರದು.
"3ಮಧ್ಯಾಹ್ನದ ಮೇಲೆ ಸುಮಾರು ಮೂರು ಗಂಟೆಗೆ ಅವನಿಗೆ ಒಂದು ದರ್ಶನ ಉಂಟಾಗಿ ಒಬ್ಬ ದೇವದೂತನು ತನ್ನ ಬಳಿಗೆ ಬಂದು - ಕೊರ್ನೇಲ್ಯನೇ ಎಂದು ಕರೆಯುವದನ್ನು ಅವನು ಪ್ರತ್ಯಕ್ಷವಾಗಿ ಕಂಡನು. 4ಅವನು ಆ ದೂತನನ್ನು ದೃಷ್ಟಿಸಿನೋಡಿ ಭಯಹಿಡಿದವನಾಗಿ - ಏನು ಸ್ವಾಮೀ ಎಂದು ಕೇಳಲು ದೂತನು ಅವನಿಗೆ - ನಿನ್ನ ಪ್ರಾರ್ಥನೆಗಳೂ ನಿನ್ನ ದಾನಧರ್ಮಗಳೂ ದೇವರ ಮುಂದೆ ಜ್ಞಾಪಕಾರ್ಥವಾಗಿ ಏರಿ ಬಂದವು. 5ಈಗ ನೀನು ಯೊಪ್ಪಕ್ಕೆ ಜನರನ್ನು ಕಳುಹಿಸಿ ಪೇತ್ರನೆನಿಸಿಕೊಳ್ಳುವ ಸೀಮೋನನನ್ನು ಕರೆಯಿಸಬೇಕು. 6 ಅವನು ಚರ್ಮಕಾರನಾದ ಸೀಮೋನನ ಬಳಿಯಲ್ಲಿ ಇಳುಕೊಂಡಿದ್ದಾನೆ; ಈ ಸೀಮೋನನ ಮನೆಯು ಸಮುದ್ರದ ಬಳಿಯಲ್ಲಿ ಅದೆ ಎಂದು ಹೇಳಿದನು. 7 ಕೊರ್ನೇಲ್ಯನು ತನ್ನ ಸಂಗಡ ಮಾತಾಡಿದ ದೇವದೂತನು ಹೊರಟುಹೋದ ಮೇಲೆ ತನ್ನ ಪರಿಚಾರಕರಲ್ಲಿ ಇಬ್ಬರನ್ನೂ ತನ್ನ ಹತ್ತಿರ ಯಾವಾಗಲೂ ಇರುತ್ತಿದ್ದ ಸಿಪಾಯಿಗಳಲ್ಲಿ ಒಬ್ಬ ದೇವಭಕ್ತನನ್ನೂ ಕರೆದು"(ಅಪೊಸ್ತಲರ ಕೃತ್ಯಗಳು 10:3-7).
5. ಕನಸುಗಳು ಮತ್ತು ದರ್ಶನಗಳು.
ನಾವು ದೇವರ ಜೊತೆಯಲ್ಲಿ ಅನ್ಯೋನ್ಯವಾಗಿರುವಾಗ ಆತನ ನಡೆಸುವಿಕೆಯನ್ನು ನಾವು ಹೊಂದಬಹುದು.
"ತರುವಾಯ ನಾನು ಎಲ್ಲಾ ಮನುಷ್ಯರ ಮೇಲೆ ನನ್ನ ಆತ್ಮವನ್ನು ಸುರಿಸುವೆನು; ನಿಮ್ಮಲ್ಲಿರುವ ಗಂಡಸರೂ ಹೆಂಗಸರೂ ಪ್ರವಾದಿಸುವರು; ನಿಮ್ಮ ಹಿರಿಯರಿಗೆ ಕನಸುಗಳು ಬೀಳುವವು, ನಿಮ್ಮ ಯೌವನಸ್ಥರಿಗೆ ದಿವ್ಯದರ್ಶನಗಳಾಗುವವು;"(ಯೋವೇಲ 2:28).
ಇಂದಿನಿಂದ ನೀವೂ ಸಹ ಯೇಸುನಾಮದಲ್ಲಿ ದೇವರಮಾರ್ಗದರ್ಶನವನ್ನು ಆನಂದದಿಂದ ಅನುಭವಿಸುವಿರಿ.
ಹೆಚ್ಚಿನ ಅಧ್ಯಯನಕ್ಕೆ :ಧರ್ಮೋಪದೇಶ ಕಾಂಡ 32:12-14, ಜ್ಞಾನೋಕ್ತಿ 16:25.
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ಓ ಕರ್ತನೇ, ನೀನು ಹೇಳುವ ಮಾತುಗಳನ್ನು ಕೇಳುವಂತೆ ನನ್ನ ಆತ್ಮೀಕ ಕಿವಿಗಳನ್ನು ಯೇಸುನಾಮದಲ್ಲಿ ತೆರೆಯಿರಿ. (ಪ್ರಕಟಣೆ 2:7)
2. ತಂದೆಯೇ, ನಿಮ್ಮನ್ನು ಇನ್ನೂ ಹೆಚ್ಚು ಹೆಚ್ಚಾಗಿ ತಿಳಿದುಕೊಳ್ಳುವಂತೆ ತಿಳುವಳಿಕೆಯ ಆತ್ಮವನ್ನು ದರ್ಶನದ ಆತ್ಮವನ್ನು ಯೇಸುನಾಮದಲ್ಲಿ ನನಗೆ ಅನುಗ್ರಹಿಸಿ. (ಎಫಸ್ಸೆ 1:17).
3. ಕರ್ತನೇ ನನ್ನ ಜೀವಿತದಲ್ಲಿ ನಿನ್ನ ಚಿತ್ತವೇ ಯೇಸುನಾಮದಲ್ಲಿ ನೆರವೇರಲಿ. (ಮತ್ತಾಯ 6:10).
4. ಕರ್ತನೇ ನಿನ್ನನ್ನು ಹಿಂಬಾಲಿಸುವಂತೆ ಸರಿಯಾದ ಮಾರ್ಗವನ್ನು ನನಗೆ ತೋರ್ಪಡಿಸು. (ಕೀರ್ತನೆ 25:4-5)
5. ಕರ್ತನೇ, ನಿನ್ನ ಚಿತ್ತಕ್ಕೆ ವಿರೋಧವಾದ ಯಾವುದೇ ನಿರ್ಣಯದಲ್ಲೂ -ಮಾರ್ಗದಲ್ಲೂ ನಾನಿದ್ದರೆ ದಯಮಾಡಿ ನನ್ನನ್ನು ಯೇಸುನಾಮದಲ್ಲಿ ನಿನ್ನ ಕಡೆಗೆ ತಿರುಗಿಸಿಕೋ. (ಜ್ಞಾನೋಕ್ತಿ 3:5-6).
6. ಕರ್ತನೇ,ನನ್ನ ಮನೋನೇತ್ರಗಳನ್ನು ಆತ್ಮೀಕ ಕಿವಿಗಳನ್ನು ಯೇಸುನಾಮದಲ್ಲಿ ತೆರೆಮಾಡು.ಆಗ ನಾನು ಒಳ್ಳೆಯದಾವುದು ಕೆಟ್ಟದ್ದದಾವುದು ಎಂದು ವಿವೇಚಿಸಲು ಸಾಧ್ಯವಾಗುವುದು. (ಎಫಸ್ಸೆ 1:18)
7. ನನ್ನನ್ನು ದೇವರಿಂದ ದೂರಮಾಡಲು ದುರ್ಮಾರ್ಗಕ್ಕೆ ಎಳೆಯಲು ಪ್ರಯತ್ನಿಸುವ ಎಲ್ಲಾ ದುರಾತ್ಮನ ಕಾರ್ಯಗಳನ್ನು ಯೇಸುನಾಮದಲ್ಲಿ ನಿಷ್ಕ್ರಿಯೆಗೊಳಿಸುತ್ತೇನೆ. (1ಯೋಹನ 4:6)
8. ತಂದೆಯೇ, ನನ್ನ ಜೀವನದ ಯಾವುದೇ ವಿಚಾರದಲ್ಲಿಯಾದರೂ ನಿನ್ನ ಸ್ವರಕ್ಕೆ ಅವಿಧೇಯತೆ ತೋರಿದ್ದರೆ ಯೇಸುನಾಮದಲ್ಲಿ ನನ್ನನ್ನು ಮನ್ನಿಸು. (1ಯೋಹಾನ 1:9).
9. ನನ್ನ ಕನಸಿನ ಜೀವಿತವು ಯೇಸುನಾಮದಲ್ಲಿ ಸಾಕಾರಗೊಳ್ಳಲಿ. (ಯೋವೇಲ 2:28).
10. ನನ್ನ ಕನಸಿನ ಜೀವಿತವನ್ನು ಅದಲುಬದಲು ಮಾಡುವ ಎಲ್ಲಾ ದುರಾತ್ಮನ ಕಾರ್ಯಗಳನ್ನು ಯೇಸುನಾಮದಲ್ಲಿ ನಾನು ತಡೆಯುತ್ತೇನೆ. (2ಕೊರಿಯಂತೆ 10:4-5).
11. ತಂದೆಯೇ, ನನ್ನ ದೈನಂದಿನ ಕ್ರಿಸ್ತೀಯ ಜೀವಿತವನ್ನು ನಡೆಸಲು ಯೇಸುನಾಮದಲ್ಲಿ ನನಗೆ ತಿಳುವಳಿಕೆಯ ಆತ್ಮವನ್ನು ವಿವೇಚಿಸುವ ಆತ್ಮವನ್ನು ಅನುಗ್ರಹಿಸು.(ಯಾಕೋಬ 1:5)
12. ನನ್ನ ಆತ್ಮೀಕ ಕಿವಿಗಳನ್ನು ಮುಚ್ಚುವ ಯಾವುದೇ ಆಗಲಿ ಯೇಸುನಾಮದಲ್ಲಿ ಅದು ತೆಗೆಯಲ್ಪಡಲಿ (ಮಾರ್ಕ್ 7:35).
13. ನಾನು ಕರ್ತನಮಾರ್ಗದಲ್ಲಿ ನಡೆಯದಂತೆ ನನ್ನನ್ನು ಗೊಂದಲಪಡಿಸುವ ಮತ್ತು ಹಠಮಾರಿಯನ್ನಾಗಿ ಮಾಡುವ ಎಲ್ಲಾ ದುರಾತ್ಮಗಳನ್ನು ಯೇಸುನಾಮದಲ್ಲಿ ಪ್ರತಿರೋಧಿಸುತ್ತೇನೆ. (1ಕೊರಿಯಂತೆ 14:33)
14. ಕರ್ತನೇ ನೀನು ನನಗಾಗಿ ಇಟ್ಟಿರುವ ಆಶೀರ್ವಾದದ ಸ್ಥಳದಲ್ಲಿ ನಾನು ನನ್ನ ಹೆಜ್ಜೆಗಳನ್ನಿಡುವಂತೆ ನನ್ನ ದಾರಿಯನ್ನು ಯೇಸುನಾಮದಲ್ಲಿ ಬೆಳಗಿಸು. (ಕೀರ್ತನೆ 119:105).
15.ಓ ದೇವರೇ, ನನ್ನ ಮಾರ್ಗವನ್ನು ತಪ್ಪಿಸಲು ಸೈತಾನನಿಂದ ನನ್ನ ಜೀವಿತದಲ್ಲಿ ನೆಡಲ್ಪಟ್ಟಿರುವ ಯಾರೇ ಆಗಲಿ ಯೇಸುನಾಮದಲ್ಲಿ ಅವರನ್ನು ಕಿತ್ತು ಬಿಸಾಡು. (ಮತ್ತಾಯ 15:13).
Join our WhatsApp Channel
Most Read
● ದಿನ 26:40ದಿನಗಳ ಉಪವಾಸ ಪ್ರಾರ್ಥನೆ● ಸಮಯದ ಸೂಚನೆಗಳ ವಿವೇಚನೆ.
● ಸ್ಥಿರತೆಯಲ್ಲಿರುವ ಶಕ್ತಿ
● ಆ ಸಂಗತಿಗಳನ್ನು ಸಕ್ರಿಯ ಗೊಳಿಸಿ
● ನೀವು ದೇವರಿಂದ ನೇಮಿಸಲ್ಪಡುವ ಮುಂದಿನ ಬಿಡುಗಡೆ ನಾಯಕರು ನೀವಾಗಬಹುದು
● ಬಲವಾದ ಮೂರುಹುರಿಯ ಹಗ್ಗ
● ನಿಮ್ಮ ಗತಿಸಿ ಹೋದ ಕಾಲವು ನಿಮ್ಮ ಹೆಸರಾಗುವುದಕ್ಕೆ ಅವಕಾಶ ಕೊಡಬೇಡಿರಿ.
ಅನಿಸಿಕೆಗಳು