"ಜಯಶಾಲಿಗೆ ಹೀಗೆ ಶುಭ್ರವಸ್ತ್ರಗಳನ್ನು ಹೊದಿಸುವರು. ಜೀವಬಾಧ್ಯರ ಪಟ್ಟಿಯಿಂದ ಅವನ ಹೆಸರನ್ನು ನಾನು ಅಳಿಸಿಬಿಡದೆ ಅವನು ನನ್ನವನೆಂದು ನನ್ನ ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್ಪುವೆನು."(ಪ್ರಕಟನೆ 3:5)
ಈ ಒಂದು ಶುಭ್ರವಸ್ತ್ರವು ಕ್ರಿಸ್ತನನ್ನು ನಂಬುವ ಮೂಲಕ ದೊರಕುವಂತಹ ನಿರ್ಮಲತೆ ಮತ್ತು ಪರಿಶುದ್ಧತೆಯನ್ನು ಸೂಚಿಸುತ್ತದೆ. ಅದು ನಮ್ಮ ಪಾಪಗಳನ್ನು ಮುಚ್ಚಿಹಾಕಿ ಪವಿತ್ರ ದೇವರ ಮುಂದೆ ನಮ್ಮನ್ನು ನಿಷ್ಕಳಂಕರಾಗಿ ನಿಲ್ಲಿಸುವಂತಹ ಕರ್ತನಾದ ಯೇಸುವಿನ ಪರಿಪೂರ್ಣವಾದ ನೀತಿವಂತಿಕೆಯನ್ನು ಪ್ರತಿನಿಧಿಸುತ್ತದೆ.
ಆದಾಮ ಮತ್ತು ಹವ್ವರು ಪಾಪ ಮಾಡಿದ ಮೇಲೆ ಅವರು ತಾವು ಬೆತ್ತಲಾಗಿದ್ದೇವೆಂದು ಅರಿತುಕೊಂಡು ತಮ್ಮ ಬೆತ್ತಲುತನವನ್ನು ಅಂಜೂರದ ಎಲೆಗಳಿಂದ ಮುಚ್ಚಿಕೊಂಡರು. (ಆದಿಕಾಂಡ 3:7). ಅದಾಗಿಯೂ ಅವರು ತಮ್ಮ ನಾಚಿಕೆಯನ್ನು ಮತ್ತು ಪಾಪದ ಮನಸಾಕ್ಷಿಯನ್ನು ಮುಚ್ಚಿಕೊಳ್ಳಲು ಮಾಡಿದ ಈ ಸ್ವ ಪ್ರಯತ್ನವು ನಿರರ್ಥಕವಾಯಿತು.ಅದಕ್ಕಾಗಿ ದೇವರು ಅವರಿಗೆ ಚರ್ಮದ ವಸ್ತ್ರಗಳನ್ನು ತೊಡಿಸಿದನು(ಆದಿಕಾಂಡ 3:21). ಇದು ಕರ್ತನಾದ ಯೇಸು ಕ್ರಿಸ್ತನ ಮೂಲಕ ಮುಂದೆ ಬರಲಿರುವ ಅತ್ಯುನ್ನತ ನೀತಿ ವಸ್ತ್ರದ ಪೂರ್ವ ಛಾಯೆಯಾಗಿದೆ.
ಹೇಗೆ ಆಧಾಮ ಹವ್ವರಿಗೆ ದೇವರಿಂದ ಚರ್ಮದ ವಸ್ತ್ರವನ್ನು ಪಡೆದುಕೊಳ್ಳುವ ಅಗತ್ಯವಿತ್ತೋ, ಹಾಗೆಯೇ ನಮಗೂ ಸಹ ನಮ್ಮ ಸ್ವ ಪ್ರಯತ್ನದಿಂದ ದೊರಕದ ನೀತಿ ವಸ್ತ್ರದ ಅಗತ್ಯವಿದೆ. "ನಾವೆಲ್ಲರು ಅಶುದ್ಧನ ಹಾಗಿದ್ದೇವೆ, ನಮ್ಮ ಧರ್ಮಕಾರ್ಯಗಳೆಲ್ಲಾ ಹೊಲೆಯ ಬಟ್ಟೆಯಂತಿವೆ; ನಾವೆಲ್ಲರೂ ತರಗೆಲೆಯೋಪಾದಿಯಲ್ಲಿ ಒಣಗಿ ಹೋಗಿದ್ದೇವೆ; ನಮ್ಮ ಅಪರಾಧಗಳು ಬಿರುಗಾಳಿಯ ಪ್ರಕಾರ ನಮ್ಮನ್ನು ಬಡಿದುಕೊಂಡು ಹೋಗಿವೆ." ಎಂದು ಪ್ರವಾದಿಯಾದ ಯೇಶಾಯನು ಘೋಷಿಸುತ್ತಾನೆ (ಯೆಶಾಯ 64:6 )
ಹೌದು ನೀತಿವಂತಿಕೆಯನ್ನು ಪಡೆದುಕೊಳ್ಳಲು ನಾವು ಮಾಡುವ ಎಲ್ಲಾ ಪ್ರಯತ್ನಗಳು ದೇವರ ಪರಿಪೂರ್ಣವಾದ ಮಟ್ಟದ ಮುಂದೆ ಬಿದ್ದು ಹೋಗುವಂತವುಗಳಾಗಿವೆ. ಆದರೆ ಒಂದು ಶುಭ ಸಮಾಚಾರವೆಂದರೆ ಕ್ರಿಸ್ತ ನಂಬಿಕೆಯ ಮುಖಾಂತರ ನಾವು ನೀತಿ ವಸ್ತ್ರವನ್ನು ಹೊಂದಿಕೊಳ್ಳಬಹುದು. ಅಪೋಸ್ತಲನಾದ ಪೌಲನು ಬರೆಯುವ ಹಾಗೆ "ದೇವರಿಂದಾಗುವ ಆ ನೀತಿಯು ಯಾವದಂದರೆ ಯೇಸು ಕ್ರಿಸ್ತನನ್ನು ನಂಬುವದರಿಂದಲೇ ನಂಬುವವರೆಲ್ಲರಿಗೆ ದೊರಕುವಂಥದು."(ರೋಮಾ 3:22)
ನಾವು ಕ್ರಿಸ್ತನ ನೀತಿಯನ್ನು ಧರಿಸಿಕೊಂಡಾಗ ದೇವರ ಸನ್ನಿಧಾನವನ್ನು ಭರವಸದಿಂದ ಪ್ರವೇಶಿಸ ಬಲ್ಲೆವು.ಇಬ್ರಿಯರಿಗೆ ಬರೆದ ಪತ್ರಿಕೆಯು ನಮಗೆ ನೆನಪಿಸುವುದೇನೆಂದರೆ, "ಹೀಗಿರುವಲ್ಲಿ ಸಹೋದರರೇ, ಯೇಸು ನಮಗೋಸ್ಕರ ಪ್ರತಿಷ್ಠಿಸಿದ ಜೀವವುಳ್ಳ ಹೊಸ ದಾರಿಯಲ್ಲಿ ಆತನ ರಕ್ತದ ಮೂಲಕ ಆತನ ಶರೀರವೆಂಬ ತೆರೆಯ ಮುಖಾಂತರ ದೇವರ ಸಮಕ್ಷಮದಲ್ಲಿ ಪ್ರವೇಶಿಸುವದಕ್ಕೆ ನಮಗೆ ಧೈರ್ಯವುಂಟಾಯಿತು.21ದೇವರ ಮನೆಯ ಮೇಲೆ ಅಧಿಕಾರಿಯಾಗಿರುವ ಶ್ರೇಷ್ಠನಾದ ಯಾಜಕನು ನಮಗಿದ್ದಾನೆ.22ಆದಕಾರಣ ನೀನಪರಾಧಿಯೆಂದು ನಮ್ಮ ಮನಸ್ಸು ನಮಗೆ ಸಾಕ್ಷಿಹೇಳದಂತೆ ನಾವು ಹೃದಯವನ್ನು ಪ್ರೋಕ್ಷಿಸಿಕೊಂಡು ದೇಹವನ್ನು ತಿಳಿನೀರಿನಿಂದ ತೊಳೆದುಕೊಂಡು ಪರಿಪೂರ್ಣವಾದ ನಂಬಿಕೆಯುಳ್ಳವರಾಗಿಯೂ ಯಥಾರ್ಥ ಹೃದಯವುಳ್ಳವರಾಗಿಯೂ ದೇವರ ಬಳಿಗೆ ಬರೋಣ."(ಇಬ್ರಿಯರಿಗೆ 10:19-22)
ಸರಿಯಾದ ಮದುವೆ ವಸ್ತ್ರ ಇಲ್ಲದೆ ಮದುವೆ ಔತಣಕ್ಕೆ ಹೋದ ಮನುಷ್ಯನ ಬಗ್ಗೆ ಯೇಸು ವಿವರಿಸಿದ್ದಾನೆ. (ಮತ್ತಾಯ 22:11-14). ಆ ಮನುಷ್ಯನು ಕೇಳಿದ ಪ್ರಶ್ನೆಗೆ ಉತ್ತರ ನೀಡಲಾಗದೆ ಕತ್ತಲೆಗೆ ತಳ್ಳಲ್ಪಡುತ್ತಾನೆ. ಹಾಗೆಯೇ ನಾವೂ ಸಹ ನಮ್ಮ ಸ್ವ ನೀತಿಯಿಂದ ದೇವರ ಸನ್ನಿಧಾನಕ್ಕೆ ಪ್ರವೇಶಿಸಲು ಸಾಧ್ಯವಿಲ್ಲ ಎಂಬುದನ್ನು ಈ ಸಾಮ್ಯವು ನಮಗೆ ಬೋಧಿಸುತ್ತದೆ.ಅದಕ್ಕಾಗಿ ನಂಬಿಕೆಯ ಮೂಲಕ ಉಚಿತವಾಗಿದೊರಕುವ ಕ್ರಿಸ್ತನ ನೀತಿ ವಸ್ತ್ರವನ್ನು ನಾವು ಧರಿಸಿಕೊಳ್ಳಬೇಕು.
ಅಪೋಸ್ತಲನಾದ ಪೌಲನು ಕ್ರಿಸ್ತ ನಂಬಿಕೆಯಲ್ಲಿ ನಾವಿರುವಾಗ ಏನೆಲ್ಲಾ ವಿನಿಮಯಗಳಾಗುತ್ತವೆ ಎಂಬುದನ್ನು ಸುಂದರವಾಗಿ ವರ್ಣಿಸುತ್ತಾನೆ
"ನಾವು ಆತನಲ್ಲಿ ದೇವರಿಗೆ ಸಮರ್ಪಕರಾದ ನೀತಿಸ್ವರೂಪಿಗಳಾಗುವಂತೆ ದೇವರು ಪಾಪಜ್ಞಾನವಿಲ್ಲದ ಆತನನ್ನು ನಮಗೋಸ್ಕರ ಪಾಪ ಸ್ವರೂಪಿಯಾಗ ಮಾಡಿದನು."(2 ಕೊರಿಂಥದವರಿಗೆ 5:21 ). ನಮ್ಮ ಪಾಪಗಳನ್ನು ಆತನ ಮೇಲೆ ಹೊತ್ತುಕೊಂಡು ಆತನ ನೀತಿ ವಸ್ತ್ರವನ್ನು ನಮಗೆ ಕೊಟ್ಟನು. ಎಂತಹ ಅತಿಶಯವಾದ ವರವಲ್ಲವೇ!
ನೀವು ಕ್ರಿಸ್ತನ ನೀತಿವಂತಿಕೆಯ ವರವನ್ನು ಸ್ವೀಕರಿಸಿದ್ದೀರಾ? ದೇವರೊಂದಿಗೆ ಸಮಾಧಾನ ಮಾಡಿಕೊಳ್ಳಲು ನಿಮ್ಮ ಸ್ವನೀತಿಯ ಮೇಲೆ ಆಧಾರಗೊಂಡಿದ್ದೀರಾ? ಅಥವಾ ಯೇಸುವು ಶಿಲುಬೆಯ ಮೇಲೆ ಮಾಡಿ ಮುಗಿಸಿದ ಕಾರ್ಯಗಳ ಮೇಲೆ ಭರವಸೆ ಇಟ್ಟಿದ್ದೀರಾ? ದೇವರು ಅನುಗ್ರಹಿಸಿರುವ ಅದ್ಭುತವಾದ ಕೃಪೆಯ ಮೇಲೆ ಗಮನಹರಿಸಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿರಿ.
ನೀವಿನ್ನೂ ಕ್ರಿಸ್ತನಲ್ಲಿರುವ ನೀತಿಯನ್ನು ಹೊಂದಿಕೊಳ್ಳದೇ ಹೋಗಿದ್ದರೆ ಆ ಉಚಿತಾರ್ಥವಾದ ರಕ್ಷಣೆ ಎಂಬ ವರವನ್ನು ಅಪ್ಪಿಕೊಳ್ಳಲು ಇಂದಿನ ದಿನವೇ ಶುಭದಿನವಾಗಿದೆ. ನಿಮ್ಮ ಜೀವನವೂ ಆತನ ಕೃಪೆಯಿಂದ ರೂಪಾಂತರಗೊಂಡು ಆತನ ಅದ್ಭುತ ಶಕ್ತಿಗೆ ಸಾಕ್ಷಿಯಾಗಿರಲಿ.
ಕ್ರಿಸ್ತನು ನಮಗೆ ಅನುಗ್ರಹಿಸಿರುವ ರಕ್ಷಣೆ ಎಂಬ ಅಮೂಲ್ಯ ವಸ್ತ್ರವನ್ನು ನಾವು ಎಂದಿಗೂ ಹಗುರವಾಗಿ ಎಣಿಸದೇ ಇರೋಣ. ನಾವು ಹೊಂದಿಕೊಂಡ ನೀತಿವಂತಿಕೆಗೆ ಅನುಗುಣವಾಗಿ ನಮ್ಮ ಅನುದಿನದ ಜೀವಿತವನ್ನು ಕೃತಜ್ಞತೆಯಿಂದಲೂ -ಯೋಗ್ಯವಾಗಿಯೂ ನಡೆಸೋಣ.
ಪ್ರಾರ್ಥನೆಗಳು
ಪರಲೋಕದ ತಂದೆಯೇ, ನಿನ್ನ ಮಗನ ನೀತಿ ವಸ್ತ್ರದಿಂದ ನಮ್ಮನ್ನು ಹೊದಿಸಿದ್ದಕ್ಕಾಗಿ ನಿಮಗೆ ಸ್ತೋತ್ರ. ನಾನು ಎಂದಿಗೂ ಈ ಅಮೂಲ್ಯವಾದ ವರವನ್ನು ಹಗುರವಾಗಿ ಎಣಿಸದೇ ಪ್ರತಿದಿನವೂ ಕೃತಜ್ಞತೆಯಿಂದಲೂ,ಭಯ- ಭಕ್ತಿಯಿಂದಲೂ ಜೀವಿಸುವಂತಾಗಲಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ. ಆಮೆನ್.
Join our WhatsApp Channel
Most Read
● ಜೀವಿಸುವವರಿಗಾಗಿ ಸತ್ತವನ ಪ್ರಾರ್ಥನೆ● ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದು
● ನಿರ್ಣಾಯಕ ಅಂಶವಾಗಿರುವ ವಾತಾವರಣದ ಒಳನೋಟಗಳು -4
● ಕ್ರಿಸ್ತನಲ್ಲಿ ಅರಸರೂ ಯಾಜಕರೂ..
● ದೈವಿಕ ಶಾಂತಿಯನ್ನು ಪ್ರವೇಶಿಸುವುದು ಹೇಗೆ
● ನಂಬಿಕೆಯಲ್ಲಿ ದೃಢವಾಗಿ ನಿಲ್ಲುವುದು
● ದೇವರ ರೀತಿಯ ನಂಬಿಕೆ
ಅನಿಸಿಕೆಗಳು