ಅನುದಿನದ ಮನ್ನಾ
ಅಶ್ಲೀಲತೆಯಿಂದ ಬಿಡುಗಡೆ ಕಡೆಗಿನ ಪಯಣ
Thursday, 15th of August 2024
2
0
196
Categories :
ಬಿಡುಗಡೆ (Deliverance)
ಪ್ರಲೋಭನೆಗಳಿಂದ ತುಂಬಿ ತುಳುಕುತ್ತಿರುವ ಜಗತ್ತಿನಲ್ಲಿ ವ್ಯಕ್ತಿಗಳು ಅಶ್ಲೀಲತೆಯ ಬಲೆಯಲ್ಲಿ ಸಿಲುಕಿ ಬೀಳುವುದು ಇಂದು ಬಹಳ ಸುಲಭ. ವಿನಾಶಕಾರಿ ಶಕ್ತಿಯಾದ ಇದು ಮಾನವನ ಹೃದಯದ ದೌರ್ಬಲ್ಯತೆ ಮೇರೆಗೆ ಬೇಟೆಯಾಡುವಂತದ್ದಾಗಿದೆ. ಇತ್ತೀಚಿಗಷ್ಟೇ ಇಂತ ಒಂದು ವ್ಯಸನದಲ್ಲಿ ಸಿಲುಕಿ ಹಾಕಿಕೊಂಡಿದ್ದ ಹಾಗೂ ಅಂತಿಮವಾಗಿ ಅದರಿಂದ ಹೊರಬಂದ ತನ್ನ ಪಯಣದ ಕುರಿತು ತನ್ನ ಅನುಭವವನ್ನು ಹಂಚಿಕೊಂಡಿದ್ದ ಇಮೇಲ್ ಒಂದನ್ನು ನಾನು ಸ್ವೀಕರಿಸಿದೆ.
ಆ ಯುವಕನು "ನನ್ನ ತಂದೆಯ ಸ್ನೇಹಿತರೊಬ್ಬರು ಇಂತಹ ನಿಯತಕಾಲಿಕ ಪುಸ್ತಕಗಳನ್ನು ಹೊಂದಿದ್ದರು, ಅವರೇ ನನಗೆ ಚಿಕ್ಕವಯಸಿನಲ್ಲಿಯೇ ಇದನ್ನು ಪರಿಚಯಿಸಿದರು ಮತ್ತು ನಾನದಕ್ಕೆ ಬೇಗನೆ ದಾಸನಾದೆ. ಹಾಗೆಯೇ ಅದು ನನ್ನ ಮೇಲೆ ಒಂದು ಹಿಡಿತವನ್ನು ಸಾಧಿಸಿ ನಾನು ಹೈಸ್ಕೂಲ್ನಲ್ಲಿ ಓದುವ ಹೊತ್ತಿಗೆ ಕಾಮದೊಂದಿಗಿನ ಈ ಹೋರಾಟವು ನನ್ನನ್ನು ಬಹುವಾಗಿ ಆವರಿಸಿಕೊಳ್ಳುತ್ತಾ ಹೋಗಿತ್ತು. ಆಗ ಫಾಸ್ಟರ್ ಮೈಕಲ್ ರವರೆ ನೀವು ಏರ್ಪಡಿಸಿದ 21 ದಿನಗಳ ಉಪವಾಸ ಪ್ರಾರ್ಥನೆ ಕೂಟದಲ್ಲಿ ನಾನು ಭಾಗಿಯಾದೆ ಮತ್ತು ಅಂದಿನಿಂದ ಈ ದುಷ್ಟತನದಿಂದ ಮುಕ್ತನಾದೆ" ಎಂದು ಬರೆದಿದ್ದನು.ಅಶ್ಲೀಲತೆಯ ಮೇಲಿನ ಈ ಜಯವೂ ಕೇವಲ ಅವನೊಬ್ಬನ ಜಯವಲ್ಲ. ಅದು ದೇವರ ರಾಜ್ಯದ ವಿಜಯವಾಗಿದೆ ಮತ್ತು ಮೌನವಾಗಿ ಇದರೊಟ್ಟಿಗೆ ಹೋರಾಡುವ ಅಸಂಖ್ಯಾತ ಜನರಿಗೆ ಈ ಸಾಕ್ಷಿಯು ಸ್ಪೂರ್ತಿಯಾಗಿದೆ.
ಅಶ್ಲೀಲತೆ ಎಂಬ ಮಹಾಮಾರಿ
ಅಶ್ಲೀಲತೆ ಎಂಬ ಪಿಡುಗು ಒಬ್ಬ ವ್ಯಕ್ತಿಯ ಒಂದು ವೈಯಕ್ತಿಕ ದುರ್ಗುಣಕಷ್ಟೇ ಸೀಮಿತವಾಗಿರದೆ ಲೈಂಗಿಕ ಪಾಪಗಳಲ್ಲಿ ಪಾಲ್ಗೊಳ್ಳುವಂತೆ ಇತರ ವ್ಯಕ್ತಿಗಳನ್ನು ಪ್ರೇರೇಪಿಸುವಂತಹ ದ್ವಾರವಾಗಿದೆ. ಅಶ್ಲೀಲತೆಯ ಸಂಪೂರ್ಣ ಉದ್ದೇಶವೇ ಕಾಮವನ್ನು ಪ್ರಚೋದಿಸುವುದು ಮತ್ತು ಅದರ ದಾಹ ಹೆಚ್ಚಿಸಿ ಲೈಂಗಿಕ ಪಾಪವನ್ನು ಮಾಡುವಂತೆ ಮಾಡಿ ಕರ್ತನಾದ ಯೇಸುವಿನ ಬೋಧನೆಗಳನ್ನು ಉಲ್ಲಂಘಿಸುವ ಕ್ರಿಯೆಗಳಿಗೆ ಕಾರಣ ಮಾಡುವುದು.ಮತ್ತಾಯ 5:28 ರಲ್ಲಿ
"ಆದರೆ ನಾನು ನಿಮಗೆ ಹೇಳುವದೇನಂದರೆ - ಪರಸ್ತ್ರೀಯನ್ನು ನೋಡಿ ಮೋಹಿಸುವ ಪ್ರತಿ ಮನುಷ್ಯನು ಆಗಲೇ ತನ್ನ ಮನಸ್ಸಿನಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದವನಾದನು." ಎಂದು ಕರ್ತನಾದ ಯೇಸು ಹೇಳುತ್ತಾನೆ. ಪಾಪವು ಅಂತಹ ಚಿಂತನೆಯನ್ನು ಮಾಡುವ ಆಯಾಮದಲ್ಲಿಯೇ ಆರಂಭವಾಗುತ್ತದೆ ಎಂದು ದೇವರ ವಾಕ್ಯ ಸ್ಪಷ್ಟವಾಗಿ ಹೇಳುತ್ತದೆ.
ಕೇವಲ ಒಂದು ಕೆಟ್ಟ ಕುತೂಹಲದಿಂದ ಆರಂಭವಾದ ಅಂತಹ ಈ ವ್ಯಸನವು ಅಷ್ಟೇ ವೇಗವಾಗಿ ಮನಸ್ಸು ಮತ್ತು ಆತ್ಮವನ್ನು ಆವರಿಸಿಕೊಂಡು ಆ ವ್ಯಕ್ತಿಗಳನ್ನು ವಿನಾಶದ ಹಾದಿಗೆ ಕೊಂಡೊಯ್ಯುತ್ತದೆ. 2 ಸಮುವೇಲ 11:2- 4 ರಲ್ಲಿ ಅರಸನದ ದಾವಿದನು ಹಿಂದೆ ಮುಂದೆ ವಿಚಾರಿಸದೆ ಭಕ್ಷಬೆಯಳೊಂದಿಗೆ ವ್ಯಭಿಚಾರದಲ್ಲಿ ತೊಡಗಿದನು. ಇದರ ಪರಿಣಾಮದ ಕಥೆಯು ಕಾಮವು ಎಂಥ ವಿನಾಶಕಾರಿಯಾಗಿ ಪರಿಣಮಿಸಲು ಸಾಧ್ಯ ಎನ್ನುವುದಕ್ಕೆ ಸತ್ಯವೇದದಲ್ಲಿರುವ ಒಂದು ಜ್ವಲಂತ ಉದಾಹರಣೆಯಾಗಿದೆ. ದಾವೀದನ ಒಂದೇ ಒಂದು ಕೆಟ್ಟ ದೃಷ್ಟಿಯು ದಾವೀದನನ್ನು ವ್ಯಭಿಚಾರ ಮತ್ತು ಕೊಲೆ ಎಂಬ ಎರಡು ಭಯಂಕರ ಪಾಪಕ್ಕೆ ದೂಡಿತು. ಒಂದೇ ಒಂದು ಪಾಪದ ಬಯಕೆಯು ಬಹಳ ದೂರದ ಕಾಲಕ್ಕೂ ಕಾಡುವ ಪರಿಣಾಮವನ್ನು ಅವನಿಗೆ ತಂದೊಡ್ಡಿತು.
ಇದು ವಿವಾಹವನ್ನು ಕುಟುಂಬಗಳನ್ನು ನಾಶಪಡಿಸುತ್ತದೆ.
ಅಶ್ಲೀಲತೆಯ ಅತ್ಯಂತ ಹೃದಯವಿದ್ರಾವಕ ಅಂಶವೆಂದರೆ ಅದು ವಿವಾಹಗಳನ್ನು ಕುಟುಂಬಗಳನ್ನು ನಾಶ ಮಾಡುತ್ತದೆ. ಅಶ್ಲೀಲತೆಯು ಲಕ್ಷಾಂತರ ವಿವಾಹಗಳನ್ನು ನಾಶಪಡಿಸಿದೆ ಎಂದು ಹೇಳಿದರೆ ಅದು ಅತಿಶಯೋಕ್ತಿ ಏನಲ್ಲ.
ಅದು ಅನೈಜ ನಿರೀಕ್ಷೆಗಳನ್ನು ಸೃಷ್ಟಿಸುತ್ತದೆ. ನಂಬಿಕೆಗಳನ್ನು ಹಾಳು ಮಾಡುತ್ತದೆ ಮತ್ತು ಭಾವನಾತ್ಮಕವಾಗಿಯೂ ದೈಹಿಕವಾಗಿಯೂ ದಾಂಪತ್ಯ ದ್ರೋಹಕ್ಕೆ ಕಾರಣವಾಗುತ್ತದೆ. ಅಶ್ಲೀಲತೆಯ ವ್ಯಸನವು ವ್ಯಕ್ತಿಯನ್ನು ರಹಸ್ಯ ಕೃತ್ಯಗಳಲ್ಲಿ ತೊಡಗುವಂತೆಯೂ, ಮನುಷ್ಯರಿಗೆ ದೂರವಾಗಿರುವಂತೆಯೂ ಭಾವನಾತ್ಮಕವಾಗಿ ಅಲಭ್ಯ ವಾಗುವಂತೆಯೂ ಮಾಡುತ್ತದೆ. ಜೊತೆಗೆ ಸಂಗಾತಿಗಳ ನಡುವೆ ಭಿನ್ನಾಭಿಪ್ರಾಯವನ್ನು ಉಂಟು ಮಾಡಿ ಕಡೆಗೆ ಸಂಸಾರಗಳನ್ನು ಚಿದ್ರ ಚಿದ್ರಮಾಡುತ್ತದೆ.
ಯೋಬನು 31:1 ರಲ್ಲಿ ಯೋಬನು ಹೇಳುವ
"ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ. ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?" ಎನ್ನುವ ವಾಕ್ಯವು ಈ ಅಶ್ಲೀಲತೆಯ ಅಂಶದಿಂದ ತಮ್ಮ ಹೃದಯವನ್ನು ಮನಸ್ಸನ್ನು ರಕ್ಷಿಸಕೊಳ್ಳಬೇಕೆಂದು ಬಯಸುವವರಿಗೆ ಮಾರ್ಗದರ್ಶನ ನೀಡಬಲ್ಲ ಒಂದು ಪ್ರಬಲ ಘೋಷಣೆಯಂತೆ ಕಾರ್ಯ ಮಾಡುತ್ತದೆ. ಪರಿಶುದ್ಧತೆ ಕಾಯ್ದುಕೊಳ್ಳುವಲ್ಲಿ ಯೋಬನ ಬದ್ಧತೆಯು ಕೇವಲ ದೈಹಿಕ ಕ್ರಿಯೆ ಮಾತ್ರ ಆಗಿರದೆ ಆತ್ಮಿಕ ಮತ್ತು ಮಾನಸಿಕ ಕ್ರಿಯೆಯು ಆಗಿತ್ತು. ನಮ್ಮ ಕಣ್ಣುಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವಂತದ್ದು ಈ ಲೋಕದ ಪ್ರಲೋಭನೆಗಳ ವಿರುದ್ಧವಾಗಿ ನಮ್ಮ ಹೃದಯಗಳನ್ನು ಕಾಪಾಡಿಕೊಳ್ಳಲು ಇಡುವಂತಹ ಒಂದು ಪೂರ್ವಭಾವಿ ಹೆಜ್ಜೆಯಾಗಿದೆ.
ಕಾರ್ಯಗತಗೊಳಿಸಲು ಒಂದು ಕರೆ: ಕ್ರಿಸ್ತನಲ್ಲಿ ಬಿಡುಗಡೆಯನ್ನು ಕಂಡುಕೊಳ್ಳುವುದು.
ನೀವು ಅಥವಾ ನಿಮಗೆ ತಿಳಿದವರು ಯಾರಾದರೂ ಈ ಅಶ್ಲೀಲತೆಯೊಂದಿಗೆ ಹೋರಾಡುತ್ತಿದ್ದರೆ, ನಮಗೆ ಒಂದು ನಿರೀಕ್ಷೆ ಇದೆ ಎಂಬುದನ್ನು ತಿಳಿದವರಾಗಿರಬೇಕು. ಕ್ರಿಸ್ತನಲ್ಲಿರುವ ಬಲದ ಮೂಲಕ ಎಲ್ಲಾ ಬಂಧನಗಳಿಂದ ಬಿಡುಗಡೆ ಹೊಂದಿಕೊಳ್ಳಲು ಸಾಧ್ಯವಿದೆ. ಇ-ಮೇಲ್ ನಲ್ಲಿ ತನ್ನ ಸಾಕ್ಷಿ ಬರೆದಂತ ಯೌವನಸ್ಥನು ನನ್ನ ಜೊತೆಗೆ 21 ದಿನಗಳ ಉಪವಾಸ ಪ್ರಾರ್ಥನೆಯಲ್ಲಿ ಭಾಗವಹಿಸುವ ಮೂಲಕ ಬಿಡುಗಡೆಯನ್ನು ಕಂಡುಕೊಂಡನು. ಪ್ರಾರ್ಥನೆಯೊಂದಿಗೆ ಕೂಡಿದ ಉಪವಾಸ ಮತ್ತು ದೇವರ ವಾಕ್ಯದ ಧ್ಯಾನ ಎಂತದ್ದೇ ಜಾಡ್ಯವಾದ ಚಟಗಳಿಂದಲೂ ನಮ್ಮನ್ನು ಬಿಡಿಸಬಲ್ಲ ಸಾಧನವಾಗಿ ಕಾರ್ಯ ಮಾಡುತ್ತದೆ.
"ಹೀಗಿರಲು ನೀವು ಸ್ವಸ್ಥವಾಗಬೇಕಾದರೆ ನಿಮ್ಮ ಪಾಪಗಳನ್ನು ಒಬ್ಬರಿಗೊಬ್ಬರು ಅರಿಕೆ ಮಾಡಿ ಒಬ್ಬರಿಗೋಸ್ಕರ ಒಬ್ಬರು ದೇವರನ್ನು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ." ಎಂದು ಯಾಕೋಬ 5:16ರ ವಾಕ್ಯ ಹೇಳುತ್ತದೆ. ಅಭಿಶಿಕ್ತ ಸ್ತ್ರೀ ಅಥವಾ ಅಭಿಶಿಕ್ತ ನಾದ ಪುರುಷನಿಂದ ಪ್ರಾರ್ಥಿಸಿಕೊಳ್ಳಲು ಎಂದಿಗೂ ಭಯಪಟ್ಟುಕೊಳ್ಳಬೇಡಿರಿ. (ಒಂದು ಪ್ರಾಯೋಗಿಕ ಸಲಹೆ ಏನೆಂದರೆ ಸ್ತ್ರೀಯರು ಅಭಿಶಿಕ್ತ ಸ್ತ್ರೀಯರ ಬಳಿಯಲ್ಲೂ ಪುರುಷರು ಅಭಿಶಿಕ್ತ ಪುರುಷರಿಂದಲೂ ಪ್ರಾರ್ಥನೆ ಮಾಡಿಸಿಕೊಳ್ಳುವುದು ಒಳ್ಳೆಯದು.)
ಇನ್ನು ಹೆಚ್ಚಾಗಿ, ದೇವರ ವಾಕ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಫಿಲಿಪ್ಪಿ 4:8 ರ ರೀತಿಯ ದೇವರ ವಾಕ್ಯಗಳು ಸತ್ಯವೂ, ಮಾನ್ಯವೂ, ನೀತಿಯೂ, ಶುದ್ಧವೂ ಪ್ರೀತಿಕರವೂ,ಮನೋಹರವೂ ಒಳ್ಳೆ ಸಾಕ್ಷಿ ಹೊಂದಿರುವ ವಿಚಾರಗಳ ಮೇಲೆ ನಮ್ಮ ಲಕ್ಷ್ಯವನ್ನು ಇಡುವಂತೆ ನಮ್ಮನ್ನು ಒತ್ತಾಯ ಪಡಿಸುತ್ತದೆ. ಇವು ನಮ್ಮ ಮನಸ್ಸನ್ನು ನೂತನ ಗೊಳಿಸಿಕೊಳ್ಳಲು ಸಹಾಯ ಮಾಡಿ ಹಾನಿಕರವಾದ ಯೋಚನೆಗಳಿಂದಲೂ ನಡೆತೆಗಳಿಂದಲೂ ನಮ್ಮನ್ನು ದೂರ ಉಳಿಯುವಂತೆಯೂ ನಮಗೆ ಸಹಾಯ ಮಾಡುತ್ತದೆ.
ಬಿಡುಗಡೆಯ ಪಯಣವನ್ನು ಅಪ್ಪಿಕೊಳ್ಳಿ
ಅಶ್ಲೀಲತೆಯ ಚಟವನ್ನು ಜಯಿಸುವಂತದ್ದು ಸುಲಭವಾದ ಪ್ರಯಾಣವಲ್ಲ. ಆದರೆ ಅದು ದೇವರ ಸಹಾಯದಿಂದ ಸಾಧ್ಯವಾಗುತ್ತದೆ. ಆ ಯೌವನಸ್ತನು ಹೇಗೆ ಬಿಡುಗಡೆಯನ್ನು ಹೊಂದಿಕೊಂಡನೋ ಹಾಗೆಯೇ ನೀವೂ ಸಹ ಎದುರು ನೋಡುತ್ತಿರುವಂತಹ ಬಿಡುಗಡೆಯನ್ನು ಹೊಂದಿಕೊಳ್ಳಬಹುದು. ಮತ್ತು ನೀವು ಬಿಡುಗಡೆ ಹೊಂದಿಕೊಂಡ ಪಯಣವು ಕ್ರಿಸ್ತನಲ್ಲಿ ಅದೇ ರೀತಿ ಬಿಡುಗಡೆ ಹೊಂದಿಕೊಳ್ಳಲು ಇತರರನ್ನು ಪ್ರೇರೇಪಿಸುತ್ತದೆ. ಈ ಜಯದ ಹಾದಿಯಲ್ಲಿ ಕರ್ತನು ನಿಮ್ಮನ್ನು ಬಲಪಡಿಸಲಿ ಮತ್ತು ಮಾರ್ಗದರ್ಶಿಸಲಿ.
ಪ್ರಾರ್ಥನೆಗಳು
1) ತಂದೆಯೇ, ಯೇಸು ನಾಮದಲ್ಲಿ ಎಲ್ಲಾ ರೀತಿಯ ಅಶುದ್ಧ ಆಲೋಚನೆಗಳಿಂದಲೂ ಬಯಕೆಗಳಿಂದಲೂ ಬಿಡಿಸಿ ನನ್ನ ಹೃದಯವನ್ನು ಮನಸ್ಸನ್ನು ಶುದ್ಧೀಕರಿಸು. ಸತ್ಯವೂ ಮಾನ್ಯವೂ ಶುದ್ಧವೂ ಆದ ಸಂಗತಿಗಳ ಮೇಲೆ ನನ್ನ ಲಕ್ಷ್ಯ ವಿಡುವಂತೆ ಯೇಸು ನಾಮದಲ್ಲಿ ನನಗೆ ಸಹಾಯ ಮಾಡು. ಆಗ ನಾನು ನಿನ್ನ ಮುಂದೆ ಪರಿಶುದ್ಧವಾಗಿ ನಡೆಯಲು ಸಾಧ್ಯವಾಗುತ್ತದೆ. ನನ್ನ ಮನಸ್ಸನ್ನು ಭೂ ಸಂಬಂಧಿತವಾದವುಗಳ ಮೇಲಿಡದೆ ಮೇಲಿನವುಗಳ ಮೇಲೆಯೇ ಇಡುತ್ತೇನೆ ಎಂದು ಯೇಸು ನಾಮದಲ್ಲಿ ಘೋಷಿಸುತ್ತೇನೆ.
2). ಪವಿತ್ರಾತ್ಮನೇ ನನ್ನ ಆತ್ಮವನ್ನು ನೂತನ ಪಡಿಸಿ ನಿನ್ನ ಬಲದಿಂದ ನನ್ನನ್ನು ತುಂಬಿಸು. ನನ್ನ ಶಾರೀರಿಕ ಆಸೆಗಳೆಲ್ಲಾ ಶಿಲುಬೆಗೇರಿಸಲ್ಪಡಲಿ ಮತ್ತು ನನ್ನ ಜೀವಿತದ ಪ್ರತಿಯೊಂದು ಆಯಾಮದಲ್ಲೂ ನಿನ್ನ ಆತ್ಮದಿಂದ ನಾನು ನಡೆಸಲ್ಪಡುವಂತಾಗಲಿ. ನಾನು ನನ್ನೆಲ್ಲಾ ಇಚ್ಛೆಗಳನ್ನು ನಿನಗೆ ಸಮರ್ಪಿಸುತ್ತೇನೆ ಮತ್ತು ನನ್ನ ಅಂತರ್ಯದಲ್ಲಿ ಸಂಪೂರ್ಣವಾದರೂ ರೂಪಾಂತರ ಮಾಡಬೇಕೆಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ.(ಗಲಾತ್ಯ 5:6).
3) ಪರಲೋಕದ ತಂದೆಯೇ, ಅಶ್ಲೀಲತೆಯ ಪೀಡೆಯು ನನ್ನ ಆತ್ಮ ಮತ್ತು ನನ್ನ ಸಂಬಂಧಗಳಲ್ಲಿ ಮಾಡಿದ ಘಾಸಿಗಳನ್ನು ಸ್ವಸ್ಥಪಡಿಸಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಮುರಿದು ಹೋದವುಗಳನ್ನು ಪುನಃ ಸ್ಥಾಪಿಸು. ನನ್ನ ಮನಸ್ಸು, ಹೃದಯ ಹಾಗೂ ಸಂಬಂಧಗಳನ್ನು ಸ್ವಸ್ಥಪಡಿಸು. ಎಲ್ಲವನ್ನು ಹೊಸದಾಗಿ ಮಾಡುವ ನಿಮ್ಮ ಸಾಮರ್ಥ್ಯದಲ್ಲಿ ಯೇಸು ನಾಮದಲ್ಲಿ ನಾನು ಭರವಸೆ ಇಡುತ್ತೇನೆ. (ಕೀರ್ತನೆ 147:3).
4) ತಂದೆಯೇ, ಯೇಸುವಿನ ನಾಮದಲ್ಲಿ ನನ್ನನ್ನು ಪುನಃ ಅಶ್ಲೀಲತೆಯ ಪಾಪಕ್ಕೆ ಸೆಳೆಯುವಂತಹ ಶತ್ರುವಿನ ಎಲ್ಲಾ ತಂತ್ರಗಳ ವಿರುದ್ಧ ಜಯಿಸುವ ನಿಮ್ಮ ದೈವೀಕ ಸಂರಕ್ಷಣೆಗಾಗಿ ಬೇಡಿಕೊಳ್ಳುತ್ತೇನೆ. ನಾನು ದೇವರು ಅನುಗ್ರಹಿಸುವ ಸರ್ವಾಯುಧಗಳನ್ನೂ ಧರಿಸಿಕೊಂಡಿದ್ದೇನೆ. ಅಂಧಕಾರ ಶಕ್ತಿಗಳ ವಿರುದ್ಧ ದೃಢವಾಗಿ ನಿಲ್ಲುತ್ತೇನೆ. ಮತ್ತು ನನ್ನ ಜೀವಿತದಲ್ಲಿರುವ ಪ್ರತಿಯೊಂದು ವ್ಯಸನದ ಮೇಲೂ ಯೇಸು ನಾಮದಲ್ಲಿ ಜಯವನ್ನು ಘೋಷಿಸುತ್ತೇನೆ. (ಎಫಸ್ಸೆ 6:11-12).
Join our WhatsApp Channel
Most Read
● ನಿಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸಿಕೊಳ್ಳುವುದು● ಕೊಡುವ ಕೃಪೆ - 1
● ದೇವರಿಗೇ ಪ್ರಥಮ ಸ್ಥಾನ ನೀಡುವುದು #2.
● ಕ್ಷಮಿಸಲು ಇರುವ ಪ್ರಾಯೋಗಿಕ ಹಂತಗಳು.
● ದಿನ 37 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ಕ್ರಿಸ್ತನಲ್ಲಿ ಅರಸರೂ ಯಾಜಕರೂ..
ಅನಿಸಿಕೆಗಳು