ಅನುದಿನದ ಮನ್ನಾ
ಸ್ವಸ್ಥ ಚಿತ್ತತೆ ಎಂಬುದು ಒಂದು ವರ
Wednesday, 16th of October 2024
2
1
180
Categories :
ಸಮಾಧಾನ(Peace)
"ದೇವರು ನಮಗೆ ಕೊಟ್ಟಿರುವ ಆತ್ಮವು ಬಲ, ಪ್ರೀತಿ, ಸಂಯಮಗಳ ಆತ್ಮವೇ ಹೊರತು ಹೇಡಿತನದ ಆತ್ಮವಲ್ಲ."
(2 ತಿಮೊ 1:7)
ಧಾವಂತವಾಗಿ ಓಡುತ್ತಿರುವ ಇಂದಿನ ಲೋಕದಲ್ಲಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಒಂದು ಮುಖ್ಯ ಸಮಸ್ಯೆಯಾಗಿದೆ. ನಮ್ಮಲ್ಲಿ ಅನೇಕರು ಇಂದು ಭಯ ಆತಂಕ ಮತ್ತು ಖಿನ್ನತೆಯಲ್ಲಿ ಓಲಾಡುತ್ತಿದ್ದಾರೆ. ಈ ಮಾನಸಿಕ ಹೋರಾಟಗಳು ಕೇವಲ ಸಾಮಾಜಿಕ ಅಥವಾ ದೈಹಿಕ ಸಮಸ್ಯೆಗಳಷ್ಟೇ ಅಲ್ಲ. ಅವು ಆತ್ಮೀಕಾ ಸಮಸ್ಯೆಗಳು ಸಹ ಆಗಿವೆ. ಆದರೆ ಇವುಗಳ ನಡುವೆಯೂ ಸತ್ಯವೇದ ನಿಮಗೆ ನಮ್ಮಲಾಗದಂತ ಒಂದು ವಾಗ್ದಾನ ಕೊಡುತ್ತದೆ: ಅದೇನೆಂದರೆ ದೇವರು ನಮಗೆ ಸ್ವಸ್ಥಚಿತ್ತದ ವರವನ್ನು ಅನುಗ್ರಹಿಸಿದ್ದಾನೆ: ಇದುವೇ ಭಯ - ಆತಂಕಗಳು ನಮ್ಮನ್ನು ಆಳ್ವಿಕೆ ಮಾಡಲು ಬಿಡದಂತ ಚಿತ್ತ. ಇದುವೇ ದೇವರ ಹೃದಯದಿಂದ ಹೊರಡುವ ಶಾಂತಿಯಲ್ಲಿಯೂ -ಸ್ಥಿರತೆಯಲ್ಲಿಯೂ ನಮ್ಮನ್ನು ನೆಲೆಗೊಳಿಸುವ ವರ.
ಭಯ ಎನ್ನುವಂಥದ್ದು ನಮ್ಮ ವಿರುದ್ದ ಸೈತಾನನು ಬಳಸುವ ಅತ್ಯಂತ ಶಕ್ತಿಶಾಲಿ ಅಸ್ತ್ರಗಳಲ್ಲಿ ಒಂದಾಗಿದೆ. ಇದು ನಮ್ಮ ಮನಸ್ಸಿನಲ್ಲಿ ಬೇರು ಬಿಟ್ಟು ಹೃದಯದಲ್ಲಿ ಬಳ್ಳಿಯೊಡೆದು ಆಗಾಗ್ಗೆ ಆತಂಕ ಮತ್ತು ಚಿಂತೆಯ ವೇಷ ತೊಟ್ಟುಕೊಂಡು ದೇವರು ನಮಗಾಗಿ ಉದ್ದೇಶಸಿ ಇಟ್ಟಿರುವ ಸಂಪೂರ್ಣತೆಯನ್ನು ಅನುಭವಿಸದಂತೆ ತಡೆಯುತ್ತಿರುತ್ತದೆ. ಸೈತಾನನು ನಮ್ಮೊಳಗೆ ಅಭದ್ರತೆ, ಅಸಮರ್ಪಕತೆ ಮತ್ತು ಪ್ರಕ್ಷುಬ್ದತೆಯನ್ನು ಉಂಟುಮಾಡಲು ಭಯವನ್ನೇ ಬಳಸುತ್ತಾನೆ. ಇದರಿಂದ ಹೊರಬರಲು ಅನೇಕರು ತಾತ್ಕಾಲಿಕ ಪರಿಹಾರಗಳ ಮೊರೆ ಹೋಗುತ್ತಾರೆ. ಕೆಲವರು ನಿದ್ರೆ ಮಾತ್ರೆಗಳು, ಕೆಲವರು ಮಧ್ಯಪಾನ ಅಥವಾ ಅತಿಯಾದ ಮನೋ ರಂಜನ ಕಾರ್ಯಕ್ರಮಗಳನ್ನು ವೀಕ್ಷಿಸುವುದು ಇತ್ಯಾದಿಗಳ ಮೊರೆ ಹೋಗುತ್ತಾರೆ. ಆದರೆ ಈ ಎಲ್ಲಾ ಮಾರ್ಗಗಳು ಕೇವಲ ಕ್ಷಣಿಕ ಪರಿಹಾರ ಕೊಟ್ಟರೂ ನಿಜವಾದ ಸಮಾಧಾನವನ್ನು ಒದಗಿಸಲಾರದು. ಏಕೆ? ಏಕೆಂದರೆ ನಮಗೆ ಬೇಕಾಗಿರುವ ಶಾಂತಿಯು ಈ ಲೋಕದ ವಸ್ತುಗಳಿಂದ ಸಿಗುವಂಥದ್ದಲ್ಲ.
ದೇವರು ಕೊಡುವ ಶಾಂತಿಯು ಈ ಲೋಕ ಕೊಡುವ ಶಾಂತಿಯಲ್ಲ. ಅದು ಆಳವಾಗಿ, ಉನ್ನತವಾಗಿ ಮತ್ತು ದೀರ್ಘ ಕಾಲಿಕವಾಗಿರುತ್ತದೆ. "ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ." ಎಂದು ಕರ್ತನಾದ ಯೇಸು ಯೋಹಾನ 14:27 ರಲ್ಲಿ ಯಾರೂ ನಂಬಲಾಗದಂತ ಒಂದು ವಾಗ್ದಾನಮಾಡಿದ್ದಾನೆ. ಯೇಸು ಕೊಡುವ ಈ ಶಾಂತಿಯು ನಮ್ಮ ಸನ್ನಿವೇಶಗಳ ಮೇಲೆ ಅವಲಂಬಿತವಾಗಿರುವುದಿಲ್ಲ ಅಥವಾ ನಾವು ಅದನ್ನು ಸಂಪಾದಿಸಬಹುದಾದ ಸಂಗತಿಯೂ ಸಹ ಅಲ್ಲ. ಇದು ಆತನ ವರವಾಗಿದೆ! ಇದು ನಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಅಷ್ಟೇ ಅಲ್ಲದೆ ನಮ್ಮ ಜೀವನವು ಅಸ್ತವ್ಯಸ್ತವಾಗಿರುವಾಗಲೂ ಅವುಗಳ ಮಧ್ಯದಲ್ಲೂ ನಮಗೆ ವಿಶ್ರಾಂತಿ ನೀಡುತ್ತದೆ.
ಹಾಗಾದರೆ ಸ್ವಸ್ಥ ಚಿತ್ತದಿಂದ ಜೀವಿಸುವಂತಹ ಅನುಭವ ಹೇಗಿರುತ್ತದೆ?
ಅದು ಭಯ ಎಂಬುದು ನಿಮ್ಮ ಆಲೋಚನೆಗಳ ಮೇಲೆ ಹಿಡಿತ ಸಾಧಿಸಲು ಅನುಮತಿಸುವುದಿಲ್ಲ. ನಿಮ್ಮ ಸುತ್ತಲಿನ ಪ್ರಪಂಚವು ನಿಯಂತ್ರಣ ಮೀರಿ ಹೋಗಿದ್ದರೂ ಸಹ ಎಲ್ಲವೂ ದೇವರು ನಿಯಂತ್ರಣದಲ್ಲಿದೆ ಎನ್ನುವ ನಂಬಿಕೆ ಹುಟ್ಟಿಸುತ್ತದೆ. ಸ್ವಸ್ಥ ವಾದ ಚಿತ್ತವಿದ್ದಲ್ಲಿ ರಾತ್ರಿ ನೆಮ್ಮದಿಯಾಗಿ ಮಲಗಲು ನಿಮಗೆ ಮದ್ಯಪಾನದ ಅಗತ್ಯವಿರುವುದಿಲ್ಲ, ಇನ್ನೊಬ್ಬರ ಅರ್ಹತಾ ಪ್ರಮಾಣ ಪತ್ರದ ಅಗತ್ಯವೂ ನಿಮಗೆ ಬೇಕಿಲ್ಲ. ಇದರ ಬದಲು ದೇವರ ಪ್ರೀತಿ ಮತ್ತು ದೇವರ ಬಲವೇ ಸಾಕಾದದ್ದು ಎಂಬ ಸತ್ಯವನ್ನು ನಿಮ್ಮಲ್ಲಿ ತುಂಬಿಸಿರುತ್ತದೆ.
ಸ್ವಸ್ಥ ಚಿತ್ತವನ್ನು ಹೊಂದಿರುವುದು ಎಂದರೆ ಭಯವು ದೇವರಿಂದ ಬರುವಂತದಲ್ಲ ಎಂಬುದನ್ನು ಗುರುತಿಸಿಕೊಳ್ಳುವಂತದ್ದಾಗಿದೆ. 2 ತಿಮೋತಿ 1:7 ಅದನ್ನು ಸ್ಪಷ್ಟ ಪಡಿಸುತ್ತದೆ. ದೇವರು ನಮಗೆ ಕೊಟ್ಟಿರುವ ಆತ್ಮವು ಹೇಡಿತನದ / ಭಯದ ಆತ್ಮವಲ್ಲ ಬದಲಾಗಿ ಆತನು ನಮಗೆ ಬಲ, ಪ್ರೀತಿ, ಮತ್ತು ಸ್ಪಷ್ಟವಾಗಿ ಯೋಚಿಸುವ ವಿವೇಕಯುತವಾಗಿ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಸಮಾಧಾನದಿಂದಿರುವ ಸಾಮರ್ಥ್ಯವನ್ನು ನೀಡಿದ್ದಾನೆ. ನೀವು ಸತ್ಯವಾಗಿ ಸ್ವಸ್ಥ ಚಿತ್ತ ಎಂಬುದು ದೇವರ ವರ ಎಂಬುದನ್ನು ಗ್ರಹಿಸಿಕೊಂಡರೆ ಯಾವುದೇ ಹೊರಗಿನ ಬಿರುಗಾಳಿಯೂ ಸಹ ನಿಮ್ಮ ಆಂತರಿಕ ಶಾಂತಿಯನ್ನು ಕದಲಿಸಲು ಸಾಧ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲಾರಂಭಿಸುವಿರಿ.
ನಿಮ್ಮನ್ನು ನೀವು ಹೀಗೆ ಪ್ರಶ್ನೆಸಿಕೊಳ್ಳಲು ಸ್ವಲ್ಪ ಸಮಯ ಕೊಡಿ :
ಯಾವುದಾದರೂ ವಿಚಾರದಲ್ಲಿ ನಿಮ್ಮ ಮನಸ್ಸನ್ನು ನಿಯಂತ್ರಿಸಲು ಭಯ ಮತ್ತು ಆತಂಕಕ್ಕೆ ನೀವು ಅನುಮತಿ ಕೊಟ್ಟಿರುವಿರಾ? ನೀವು ದೇವರಿಗೆ ಹೊರಾತಾದ ವಿಚಾರಗಳ ಮೂಲಕ ಶಾಂತಿಯನ್ನು ಪಡೆಯಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ದರೆ ಆ ಕ್ಷೇತ್ರಗಳನ್ನು ಆತನಿಗೆ ಸಮರ್ಪಸಿ ಕೊಡಬೇಕಾದ ಸಮಯ ಇದಾಗಿದೆ. ನೀವು ಸ್ವಸ್ಥ ಚಿತ್ತರಾಗಿ ನಡೆಯಬೇಕೆಂದು ದೇವರು ಬಯಸುತ್ತಿದ್ದಾನೆಯೇ ಹೊರತು ಹೇಡಿತನದ ಆಳ್ವಿಕೆಯಲ್ಲಿರುವ ಚಿತ್ತದಿಂದಲ್ಲ. "ಎಲ್ಲಾ ಗ್ರಹಿಕೆಯನ್ನು ಮೀರಿದ ದೇವರ ಶಾಂತಿಯು ಕ್ರಿಸ್ತ ಯೇಸುವಿನಲ್ಲಿ ನಮ್ಮ ಹೃದಯ ಮತ್ತು ಮನಸನ್ನು ಕಾಪಾಡುತ್ತದೆ" ಎಂದು ಫಿಲಿಪ್ಪಿ 4:7ನಮಗೆ ಬೋಧಿಸುತ್ತದೆ. ಇದರರ್ಥ ನಾವು ನಮ್ಮ ಚಿಂತಾಭಾರವನ್ನು ಯಹೋವನಿಗೆ ಅರ್ಪಿಸಿದಾಗ ಆತನು ತನ್ನ ಶಾಂತಿಯನ್ನು ನಮ್ಮ ಹೃದಯ ಮತ್ತು ಮನಸ್ಸಿನ ಸುತ್ತಲೂ ರಕ್ಷಣಾತ್ಮಕ ಕವಚದಂತೆ ಕಾವಲಿರಿಸುತ್ತಾನೆ.
ಇಂದು ನೀವು ಪ್ರಯತ್ನಿಸಬಹುದಾದ ಸರಳ ಅಭ್ಯಾಸ ಒಂದು ಇಲ್ಲಿದೆ :
ಪ್ರಸ್ತುತ ನಿಮ್ಮನ್ನು ಕಾಡುತ್ತಿರುವ ಒತ್ತಡ, ಭಯವನ್ನು ಅಥವಾ ಆತಂಕವನ್ನು ಉಂಟು ಮಾಡುತ್ತಿರುವ ವಿಚಾರಗಳನ್ನು ಒಂದೆಡೆ ಬರೆಯಿರಿ. ನಂತರ ಪ್ರತಿಯೊಂದು ವಿಚಾರಕ್ಕಾಗಿ ಅದರ ಮೇಲೆ ಕೈ ಇಟ್ಟು ಪ್ರಾರ್ಥಿಸಿರಿ. ಅದನ್ನು ದೇವರಿಗೆ ನೀಡಿ. ಈ ವಿಚಾರದಲ್ಲಿ ಶಾಂತಿಯನ್ನು ಅನುಗ್ರಹಿಸಲು ಬೇಡಿಕೊಳ್ಳಿರಿ. ಅದರ ಮುಂದಿನ ವಾರದಲ್ಲಿ ಪ್ರತಿದಿನ ಫಿಲಿಪ್ಪಿ 4:7ರ ವಾಕ್ಯವನ್ನು ಧ್ಯಾನಿಸಲು ಬದ್ಧರಾಗಿ. ಇದು ದೇವರು ವಾಗ್ದಾನ ಮಾಡಿರುವಂತಹ ಶಾಂತಿಯನ್ನು ನಿಮಗೆ ನೆನಪಿಸಿಕೊಡಲು ಅನುವು ಮಾಡಿ ಕೊಡುತ್ತದೆ.
ಪ್ರಾರ್ಥನೆಗಳು
ತಂದೆಯೇ, ಸ್ವಸ್ಥ ಚಿತ್ತದ ವರಕ್ಕಾಗಿ ನಿನಗೆ ಸ್ತೋತ್ರ. ಭಯ ಮತ್ತು ಆತಂಕದಿಂದ ನನ್ನ ಮನಸ್ಸನ್ನು ಕಾಪಾಡಿಕೊಂಡು ನಿನ್ನ ಶಾಂತಿಯಲ್ಲಿ ನೆಲೆಗೊಳ್ಳಲು ನನಗೆ ಯೇಸು ನಾಮದಲ್ಲಿ ಸಹಾಯ ಮಾಡಿ. ಆಮೆನ್.
Join our WhatsApp Channel
Most Read
● ನಿಮ್ಮ ಆಶೀರ್ವಾದಗಳನ್ನು ಹೆಚ್ಚಿಸಿಕೊಳ್ಳುವ ಖಚಿತವಾದ ಮಾರ್ಗ● ದೇವರು ಹೇಗೆ ಒದಗಿಸುತ್ತಾನೆ #2
● ಒತ್ತಡವನ್ನು ಓಡಿಸಲು ಇರುವ ಮೂರು ಶಕ್ತಿಯುತ ಮಾರ್ಗಗಳು
● ಸ್ಥಿರತೆಯಲ್ಲಿರುವ ಶಕ್ತಿ
● ಪ್ರೀತಿಯ ಭಾಷೆ
● ದಿನ 35:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಬೆಟ್ಟಗಳ ಮತ್ತು ತಗ್ಗಿನ ದೇವರು.
ಅನಿಸಿಕೆಗಳು