"ಏಕೆಂದರೆ, ಪರಿಣಾಮಕಾರಿಯಾದ ಸೇವೆಗಾಗಿ ದೊಡ್ಡದಾದ ಬಾಗಿಲು ನನಗೆ ತೆರೆದಿದೆ, ಬಹಳ ಜನ ವಿರೋಧಿಗಳೂ ಇದ್ದಾರೆ.
"(1 ಕೊರಿಂಥ 16:9)
ಬಾಗಿಲುಗಳು ಒಂದು ಕೋಣೆಗೆ ಪ್ರವೇಶದ್ವಾರಗಳಾಗಿವೆ. ನಾವೆಲ್ಲರೂ ನಮಗಾಗಿ ಕೃಪೆಯ , ಅವಕಾಶ, ಮದುವೆ, ಸ್ವಸ್ಥತೆ , ಹಣಕಾಸು, ಪ್ರಗತಿ ಇತ್ಯಾದಿಗಳ ಬಾಗಿಲುಗಳನ್ನು ತೆರೆಯ ಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ. ಇದು ನಿಜಕ್ಕೂ ದೇವರು ತನ್ನ ಮಕ್ಕಳಿಗಾಗಿ ಹೊಂದಿರುವ ಬಯಕೆಯಾಗಿದೆ.
"ನಿನ್ನ ಕೃತ್ಯಗಳನ್ನು ಬಲ್ಲೆನು; ನಿನಗಿರುವ ಶಕ್ತಿ ಕೊಂಚವಾಗಿದ್ದರೂ ನೀನು ನನಗೆ ಸೇರಿದವನಲ್ಲವೆಂದು ಹೇಳದೆ ನನ್ನ ವಾಕ್ಯವನ್ನು ಕಾಪಾಡಿದ್ದರಿಂದ ಇಗೋ, ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ; ಯಾರೂ ಅದನ್ನು ಮುಚ್ಚಲಾರರು." ಎಂದು ಪ್ರಕಟನೆ 3:8 ರಲ್ಲಿ ದೇವರು ಹೇಳುತ್ತಾನೆ. ತೆರೆದ ಬಾಗಿಲುಗಳು ನಮ್ಮ ಕಲ್ಪನೆಗಳನ್ನು ಮೀರಿದ ಆಶೀರ್ವಾದಗಳಿಗೆ ಇರುವ ಪ್ರವೇಶವನ್ನು ಸೂಚಿಸುತ್ತವೆ. ನಾವು ಯಾವುದೇ ಕೆಲಸಗಳನ್ನು ಮಾಡಲು ಹೆಣಗಾಡುವುದು ದೇವರ ಬಯಕೆಯಲ್ಲ. ಆದ್ದರಿಂದ, ಶಿಲುಬೆಯಲ್ಲಿ ತನ್ನ ಮಗನಾದ ಯೇಸು ಮಾಡಿದ ತ್ಯಾಗದ ಮೂಲಕ, ನಾವು ಜೀವನದ ಪ್ರತಿಯೊಂದು ಒಳ್ಳೆಯ ಸಂಗತಿಗಳಿಗೆ ಪ್ರವೇಶವನ್ನು ನಮಗಾಗಿ ಇಟ್ಟಿದ್ದಾನೆ .
"ನಮ್ಮನ್ನು ತನ್ನ ಪ್ರಭಾವದಿಂದಲೂ ಗುಣಾತಿಶಯದಿಂದಲೂ ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯ ಶಕ್ತಿಯು ನಮಗೆ ಪರಿಜ್ಞಾನವನ್ನು ಕೊಟ್ಟದ್ದರಲ್ಲಿ ಜೀವಕ್ಕೂ ಭಕ್ತಿಗೂ ಬೇಕಾದದ್ದೆಲ್ಲವು ದೊರೆಯಿತೆಂದು ಬಲ್ಲೆವಷ್ಟೆ. ನೀವು ಲೋಕದಲ್ಲಿ ದುರಾಶೆಯಿಂದುಂಟಾದ ಕೆಟ್ಟತನಕ್ಕೆ ತಪ್ಪಿಸಿಕೊಂಡು ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂಬ ಉದ್ದೇಶದಿಂದ ದೇವರು ತನ್ನ ಪ್ರಭಾವ ಗುಣಾತಿಶಯಗಳಿಂದ ಅಮೂಲ್ಯವಾಗಿಯೂ ಉತ್ಕೃಷ್ಟವಾಗಿಯೂ ಇರುವ ವಾಗ್ದಾನಗಳನ್ನು ನಮಗೆ ದಯಪಾಲಿಸಿದ್ದಾನೆ". ಎಂದು ಸತ್ಯವೇದದ 2 ಪೇತ್ರ 1:3-4 ಹೇಳುತ್ತದೆ.
ಒಬ್ಬ ಒಳ್ಳೆಯ ತಂದೆಯಾಗಿ, ಆತನು ತನ್ನ ಮಕ್ಕಳಿಗೆ ಬಾಧ್ಯತೆಯನ್ನು ಹೊಂದಿದ್ದು ಅವುಗಳೆಲ್ಲವನ್ನು ನಮಗೆ ಅನುಗ್ರಹಿಸಬೇಕೆಂದು ಇಚ್ಛಿಸಿದ್ದಾನೆ. ಅಪೊಸ್ತಲ ಪೌಲನು ತನ್ನ ಮೂರನೇ ಮಿಷನರಿ ಪ್ರಯಾಣದಲ್ಲಿ ಎಫೆಸದಲ್ಲಿದ್ದುಕೊಂಡು ಕೊರಿಂಥದವರಿಗೆ ಪತ್ರಿಕೆ ಬರೆಯುತ್ತಾ, ಅವನು ಕೊರಿಂಥದ ವಿಶ್ವಾಸಿಗಳೊಂದಿಗೆ ಉಳಿದುಕೊಂಡು ಅವರೊಂದಿಗೆ ಕೆಲವು ಮಹತ್ವದ ಸಮಯವನ್ನು ಕಳೆಯುವ ತನ್ನ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ಆದರೂ ಅದಕ್ಕಿಂತ ಹೆಚ್ಚಾಗಿ ದೇವರು ತನಗೆ ಸುವಾರ್ತೆಯನ್ನು ಸಾರಲು ಅವಕಾಶದ ಒಂದು ದೊಡ್ಡ ಬಾಗಿಲನ್ನು ತೆರೆದಿದ್ದಾನೆಂದು ತಿಳಿಸಲು ಅವನು ಉತ್ಸುಕನಾಗಿದ್ದನು. ಇದರ ಫಲಿತವಾಗಿ , ಎಫೆಸದಲ್ಲಿ ಒಂದು ಕಾಲದಲ್ಲಿ ಮಾಂತ್ರಿಕತೆಯ ಹಂಬಲ ಹೊಂದಿದ್ದ ಜನರು ಕ್ರಮೇಣ ಪೌಲನು ಸಾರಿದ ಸುವಾರ್ತೆಯನ್ನು ಕೇಳಿ ಕ್ರಿಸ್ತನನ್ನು ಅಂಗೀಕರಿಸಿಕೊಂಡರು.
ಯೆಹೋಶುವನ ಪುಸ್ತಕವು ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ವಶಪಡಿಸಿಕೊಂಡ ಕಥೆಯನ್ನು ವಿವರಿಸುತ್ತದೆ. ಅವರು ಒಮ್ಮೆ ತಮ್ಮ ಪೂರ್ವಜ ಅಬ್ರಹಾಮನ ಒಡೆತನದಲ್ಲಿದ್ದ ಭೂಮಿಯನ್ನು ಮರಳಿ ಪಡೆದುಕೊಳ್ಳುವರಾದರು. ಅವರು ವಾಗ್ದತ್ತ ದೇಶವನ್ನು ಸ್ವಾಧೀನಪಡಿಸಿಕೊಂಡಾಗ ನಾನೂರು ವರ್ಷಗಳಿಗೂ ಹೆಚ್ಚು ಕಾಲ ಐಗುಪ್ತದಲ್ಲಿ ವಾಸಿಸುತ್ತಿದ್ದ ಇಬ್ರಿಯರು, ಸಾಮಾನ್ಯವಾಗಿ ಕಾನಾನ್ಯರು ಎಂದು ಕರೆಯಲ್ಪಡುವ ವಿಗ್ರಹಾರಾಧಕರಾಗಿದ್ದ ಅನ್ಯ ಜನಾಂಗದವರು (ಆದಿಕಾಂಡ 15:21) ಅಲ್ಲಿ ನಿರ್ಮಿಸಿ ವಾಸಿಸುತ್ತಿದ್ದ ಮನೆಗಳನ್ನು ವಶಪಡಿಸಿಕೊಂಡು ವಾಸಿಸುವರಾದರು.
ಅನೇಕ ಬಾರಿ, ನಾವು ಬಾಗಿಲುಗಳನ್ನು ತಟ್ಟಿದ ಕೂಡಲೇ ಅವು ನಮಗಾಗಿ ತೆರೆದುಕೊಳ್ಳುವುದಿಲ್ಲ. ಬದಲಾಗಿ, ದೇವರು ನಮಗಾಗಿ ಸಿದ್ಧಪಡಿಸಿರುವ ಆಶೀರ್ವಾದಗಳಿಗೆ ನಮ್ಮ ಪ್ರವೇಶವನ್ನು ತಡೆಯಲು ಕೆಲವು ಬಲಗಳು ನಮ್ಮ ವಿರುದ್ಧ ಏಳುತ್ತವೆ. ಉದಾಹರಣೆಗೆ, ಇಸ್ರೇಲ್ ಮಕ್ಕಳು ವಾಗ್ದತ್ತ ದೇಶವನ್ನು ಮತ್ತೆ ಪ್ರವೇಶಿಸಿದ ನಂತರ, ಇಬ್ರಿಯರು ಮೂರು ಪ್ರಮುಖ ಅಡೆತಡೆಗಳನ್ನು ಎದುರಿಸಿದರು. ಅವು ಕ್ರೈಸ್ತರು ತಮ್ಮ ಜೀವನಕ್ಕಾಗಿ ದೇವರ ಆಶೀರ್ವಾದಗಳ ವಾಗ್ದಾನಗಳನ್ನು ಹೊಂದಿಕೊಳ್ಳುವಾಗ ಎದುರಿಸುವ ಮೂರು ಬಗೆಯ ಹೋರಾಟಗಳ ಪ್ರತಿಬಿಂಬವಾಗಿದೆ.
ಎ). ಕೋಟೆಗಳಿಂದ ಸುತ್ತುವರಿದ ನಗರಗಳು (ಅರಣ್ಯಕಾಂಡ 13:28)
ಬಿ). ಉನ್ನತ ಪುರುಷರು (ಅರಣ್ಯಕಾಂಡ 13:33)
ಸಿ). ಏಳು ವಿರುದ್ಧ ರಾಜ್ಯಗಳು (ಧರ್ಮೋಪದೇಶಕಾಂಡ 7:1)
ಇಸ್ರಾಯೇಲ್ಯರಿಗೆ ಪ್ರಗತಿಯ ಹಾದಿಯಲ್ಲಿ ನಿಂತ ಈ ಅಡೆತಡೆಗಳು ಮತ್ತು ಸವಾಲುಗಳಲ್ಲಿ ಪ್ರತಿಯೊಂದೂ ಇಂದಿನ ಕ್ರಿಸ್ತೀಯ ಜೀವಿತಕ್ಕೆ ಅನ್ವಯವಾಗುವಂತದಾಗಿದ್ದು ದೇವರ ವಾಗ್ದಾನಗಳ ಪೂರ್ಣತೆಯನ್ನು ಅನುಭವಿಸುವ ಹಾದಿಯಲ್ಲಿ ಕ್ರೈಸ್ತರು ಅನುಭವಿಸುವ ಅಡೆತಡೆಗಳನ್ನು ಪ್ರತಿನಿಧಿಸುತ್ತದೆ.
ನಾನು ನಿಮ್ಮನ್ನು ಹೆದರಿಸುತ್ತಿಲ್ಲ, ಆದರೆ ಈ ಅಡೆತಡೆಗಳು ವಾಸ್ತವವಾದದೆಂದು ಮತ್ತು ಅವು ಸೈತಾನನ ಶುದ್ಧ ತಂತ್ರವಾಗಿದೆ ಎಂದು ನೀವು ತಿಳಿದಿರುವುದು ಒಳ್ಳೆಯದು. ದೇವರು ಇಸ್ರಾಯೆಲ್ಯರಿಗೆ ಈಗಾಗಲೇ ಆ ಭೂಮಿಯನ್ನು ನೀಡಿದ್ದನು, ಆದರೆ ಸೈತಾನನು ಜನರ ಮನಸ್ಸನ್ನು ತಂತ್ರಗಾರಿಕೆಯಿಂದ ಬಳಸಿಕೊಳ್ಳಲು ಪ್ರಯತ್ನಿಸಿದರಿಂದಾಗಿ ಅವರು ವಾಗ್ದತ್ತ ದೇಶದ ಆಶೀರ್ವಾದಗಳನ್ನು ಯಾವುದೇ ಹೋರಾಟವಿಲ್ಲದೆ ಆನಂದಿಸಲಾಗಲಿಲ್ಲ. ಆದರೆ ಸೈತಾನನು ಅದರಲ್ಲಿ ಯಶಸ್ಸನ್ನು ಹೊಂದಲು ಸಾಧ್ಯವಾಗಲಿಲ್ಲ.
ಕೆಲವು ಜನರು ಅಂತಹ ಅಡೆತಡೆಗಳನ್ನು ಎದುರಿಸುವಾಗ ಸೈತಾನನನ್ನು ದೂಷಿಸುವ ಬದಲು ದೇವರನ್ನು ದೂಷಿಸುತ್ತಾರೆ. ನಿಮ್ಮ ಜೀವನಕ್ಕಾಗಿ ದೇವರು ನೀಡಿದ ವಾಗ್ದಾನಗಳು ಸುಳ್ಳಲ್ಲ ಅವು ಮಾನ್ಯವಾದದ್ದು ಮತ್ತು ಅವು ನೆರವೇರುವಂತವುಗಳಾಗಿವೆ ಎಂಬುದನ್ನು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ.
Bible Reading: Judges 19
ಪ್ರಾರ್ಥನೆಗಳು
ತಂದೆಯೇ, ಇದುವರೆಗೂ ನನಗಾಗಿ ನೀನು ತೆರೆದಿರುವ ಕೃಪೆಯ ಮತ್ತು ನನ್ನನ್ನು ಉನ್ನತೀಕರಿಸುವ ಬಾಗಿಲುಗಳಿಗಾಗಿ ಯೇಸುನಾಮದಲ್ಲಿ ನಿನಗೇ ಸ್ತೋತ್ರ ಸಲ್ಲಿಸುತ್ತೇನೆ . ಈ ತೆರೆದ ಬಾಗಿಲಿನ ವಾಸ್ತವದಲ್ಲಿ ನಾನು ಜೀವಿಸುವಂತ ಕೃಪೆಯನ್ನು ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತೇನೆ. ನನ್ನ ತೆರೆದ ಬಾಗಿಲಿಗೆ ವಿರುದ್ದವಾಗಿರುವ ಪ್ರತಿಯೊಂದು ತಡೆಗೋಡೆಗಳು ಯೇಸುನಾಮದಲ್ಲಿ ನಾಶವಾಗಿ ಹೋಗಲಿ ಎಂದು ಯೇಸುನಾಮದಲ್ಲಿ ಆದೇಶಿಸುತ್ತೇನೆ. ಆಮೆನ್.
Join our WhatsApp Channel

Most Read
● ಸತ್ಯವೇದ ಆಧಾರಿತ ಸಮೃದ್ಧಿಯನ್ನು ಹೊಂದಲಿರುವ ರಹಸ್ಯ● ಆರಾಧನೆ : ಸಮಾಧಾನಕ್ಕಿರುವ ಕೀಲಿ ಕೈ
● ಕೊಡುವ ಕೃಪೆ -2
● ಹನ್ನಾಳ ಜೀವಿತದಿಂದ ಕಲಿಯಬೇಕಾದ ಪಾಠ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಕರ್ತನ ಸೇವೆ ಮಾಡುವುದು ಎಂದರೇನು II
● ದೇವರು ಹೇಗೆ ಒದಗಿಸುತ್ತಾನೆ #2
ಅನಿಸಿಕೆಗಳು