"ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ, ಸಮಾರ್ಯ ಮತ್ತು ಗಲಿಲಾಯ ಪ್ರಾಂತಗಳ ಮಧ್ಯದಲ್ಲಿದ್ದ ಹಳ್ಳಿಯ ಮಾರ್ಗವಾಗಿ ಪ್ರಯಾಣಮಾಡಿದರು. ಯೇಸು ಒಂದು ಹಳ್ಳಿಯನ್ನು ಪ್ರವೇಶಿಸಿದಾಗ, ಹತ್ತು ಮಂದಿ ಕುಷ್ಠರೋಗಿಗಳು ಯೇಸುವಿನ ಕಡೆಗೆ ಬಂದು ದೂರದಲ್ಲಿ ನಿಂತುಕೊಂಡು,...." (ಲೂಕ 17:11-12)
ಆ ಹತ್ತು ಜನರಲ್ಲಿ ಒಬ್ಬರಾಗಿರುವುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿ. ಕುಷ್ಠರೋಗದಿಂದ ಬರುವ ನೋವು, ಒಂಟಿತನ, ತಿರಸ್ಕಾರ ಮತ್ತು ಆ ಭಯವನ್ನು ಊಹಿಸಿಕೊಳ್ಳಿ. ಮೋಶೆಯ ಕಾನೂನಿನ ಪ್ರಕಾರ, ಯಾವಾಗಲೂ ಅವರು ಇತರರಿಂದ ದೂರವಿರಬೇಕು, ತಮ್ಮ ಬಟ್ಟೆಗಳನ್ನು ಹರಿದುಕೊಂಡು "ನಾವು ಅಶುದ್ಧರು , ಅಶುದ್ಧರು " ಎಂದು ಕೂಗಿಕೊಂಡು ಓಡಾಡಬೇಕು ಎಂಬುದನ್ನು ಕಲ್ಪಿಸಿಕೊಳ್ಳಿ. ಅವರ ಹೃದಯಗಳಲ್ಲಿ ತುಂಬಿರಬಹುದಾದ ನಿರಾಶೆ ಮತ್ತು ಹತಾಶೆಯನ್ನು ಊಹಿಸಿ.
ಆದರೂ, ಈ ಕುಷ್ಠರೋಗಿಗಳು ನಮ್ಮಲ್ಲಿ ಅನೇಕರು ಮರೆತುಹೋಗುವ ಒಂದು ವಿಷಯವನ್ನು ತಿಳಿದಿದ್ದರು:ಅದೇನೆಂದರೆ ಕರುಣೆಗಾಗಿ ಹೇಗೆ ಮೊರೆಯಿಡ ಬೇಕೆಂಬುದು ಅವರಿಗೆ ತಿಳಿದಿತ್ತು.ಆದ್ದರಿಂದ ಅವರು “ಯೇಸುವೇ, ಗುರುವೇ, ನಮ್ಮನ್ನು ಕರುಣಿಸು!” ಎಂದು ತಮ್ಮ ಧ್ವನಿಯೆತ್ತಿ ಕೂಗಿದರು. (ಲೂಕ 17:13).
ನಿಮ್ಮ ಧ್ವನಿಯನ್ನು ಎತ್ತಿ ಮೊರೆಯಿಡುವಂತದ್ದು ಪ್ರಾರ್ಥನೆಯ ಸಂಕೇತವಾಗಿದೆ. ನಿಮ್ಮ ಯಾವುದೇ ಪರಿಸ್ಥಿತಿಯಲ್ಲಿ ದೇವರು ಮಧ್ಯಪ್ರವೇಶಿಸಬೇಕೆಂದು ನೀವು ಬಯಸುವುದಾದರೆ, ನೀವು ಪ್ರಾರ್ಥನೆಯಲ್ಲಿ ನಿಮ್ಮ ಧ್ವನಿಯನ್ನು ಎತ್ತಿ ಮೊರೆಯಿಡುವುದು ಕಡ್ಡಾಯವಾಗಿದೆ.
ಅವರು ಯೇಸುವೇ ತಮ್ಮ ಏಕೈಕ ಭರವಸೆ ಎಂಬುದನ್ನು ಗುರುತಿಸಿ ಆತನ ಕರುಣೆಗಾಗಿ ಆತನನ್ನು ಬೇಡಿಕೊಂಡರು. ಆಗ ಯೇಸು ಏನು ಮಾಡಿದನು? ಆತನು "ಅವರನ್ನು ನೋಡಿ, 'ನೀವು ಹೋಗಿ ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿ' ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಅವರೆಲ್ಲಾ ಶುದ್ಧರಾದರು" (ಲೂಕ 17:14).
ಆದಾಗ್ಯೂ, ಅವರಲ್ಲಿ ಒಬ್ಬನು ಮಾತ್ರ ತಾನು ಗುಣಮುಖನಾಗಿರುವುದನ್ನು ನೋಡಿ, ಹಿಂತಿರುಗಿ ಬಂದು ದೇವರನ್ನು ಮಹಾ ಧ್ವನಿಯಿಂದ ಸ್ತುತಿಸಿದನು. ಅವನು ಯೇಸುವಿನ ಪಾದಗಳಿಗೆ ಬಿದ್ದು ಆತನಿಗೆ ಧನ್ಯವಾದ ಹೇಳಿದನು. ಅವನು ಸಮಾರ್ಯದವನಾಗಿದ್ದನು. (ಲೂಕ 17:15-16)
ಅನೇಕರು ಸ್ವಸ್ಥತೆ ಮತ್ತು ಬಿಡುಗಡೆಯನ್ನು ಹೊಂದುಕೊಳ್ಳುತ್ತಾರೆ ಆದರೆ ಕೆಲವೇ ಜನರು ಮಾತ್ರವೇ ಬಂದು ಸಾಕ್ಷಿ ಹೇಳುವ ಮೂಲಕ ಕರ್ತನಿಗೆ ಮಹಿಮೆ ಸಲ್ಲಿಸುತ್ತಾರೆ. ಈ ಕಥೆಯು ಕೃತಜ್ಞತೆಯ ಕುರಿತು ನಮಗೆ ಹಲವಾರು ಪಾಠಗಳನ್ನು ಕಲಿಸುತ್ತದೆ.
ಮೊದಲನೆಯದಾಗಿ, ಕೃತಜ್ಞತೆ ಸಲ್ಲಿಸುವುದು ಒಂದು ಆಯ್ಕೆಯಾಗಿದೆ. ನಮ್ಮಲ್ಲಿಲ್ಲದಿರುವದರ ಮೇಲೆ ನಮ್ಮ ದೃಷ್ಟಿಯನ್ನು ನಾವು ಕೇಂದ್ರೀಕರಿಸಬೇಕೆಂಬ ಆಯ್ಕೆಯನ್ನಾದರೂ ನಾವು ಮಾಡಬಹುದು, ಅಥವಾ ನಾವು ಏನೆಲ್ಲಾ ಈಗಾಗಲೇ ಹೊಂದಿಕೊಂಡಿದ್ದೇವೊ ಅದನ್ನು ನೆನೆಸಿ ನಾವು ಅದಕ್ಕಾಗಿ ಕೃತಜ್ಞರಾಗಿರುವ ಆಯ್ಕೆಯನ್ನಾದರೂ ಮಾಡಬಹುದು. ಯೇಸುವಿನ ಬಳಿಗೆ ಹಿಂತಿರುಗಿದ ಕುಷ್ಠರೋಗಿಯು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕೆಂಬ ಪ್ರಜ್ಞಾಪೂರ್ವಕ ಆಯ್ಕೆಯನ್ನು ಮಾಡಿಕೊಂಡು ತನ್ಮೂಲಕ ಅವನು ಆಶೀರ್ವದಿಸಲ್ಪಟ್ಟನು.
ಎರಡನೆಯದಾಗಿ, ಕೃತಜ್ಞತೆಯು ಆರಾಧನೆಯ ಒಂದು ರೂಪವಾಗಿದೆ. ನಾವು ದೇವರಿಗೆ ಆತನು ಅನುಗ್ರಹಿಸಿದ ಆಶೀರ್ವಾದಗಳಿಗಾಗಿ ಧನ್ಯವಾದ ಹೇಳುವಾಗ, ಆತನ ಒಳ್ಳೆಯತನ, ಪ್ರೀತಿ ಮತ್ತು ಕರುಣೆಯನ್ನು ಅಂಗೀಕರಿಸಿಕೊಳ್ಳುವವರಾಗುತ್ತೇವೆ. ನಾವು ಆತನನ್ನು ಮಹಿಮೆಪಡಿಸುತ್ತಾ ಆತನಿಗೆ ಯೋಗ್ಯವಾದ ಗೌರವವನ್ನು ಸಲ್ಲಿಸುವವರಾಗುತ್ತೇವೆ.
ಕಡೆಯದಾಗಿ, ಕೃತಜ್ಞತೆಯು ಸಾಂಕ್ರಾಮಿಕವಾಗಿದೆ. ನಾವು ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ, ನಾವು ಇತರರಿಗೂ ಸಹ ಅದೇ ರೀತಿ ಮಾಡಲು ಸ್ಫೂರ್ತಿ ನೀಡುವವರಾಗುತ್ತೇವೆ. ನಾವು ಸಂತೋಷ ಮತ್ತು ಭರವಸೆಯನ್ನು ಹರಡುವವರಾಗಿ ನಮ್ಮ ಸುತ್ತಮುತ್ತಲಿನವರಿಗೆ ನಾವು ಆಶೀರ್ವಾದನಿಧಿಗಳಾಗುತ್ತೇವೆ.
ನಾವು ನಮ್ಮ ದೈನಂದಿನ ಜೀವನವನ್ನು ನಡೆಸುವಾಗ, ಕುಷ್ಠರೋಗಿಗಳನ್ನು ಮತ್ತು ಕರುಣೆಗಾಗಿ ಅವರಿಟ್ಟ ಮೊರೆಯನ್ನು ನೆನಪಿಸಿಕೊಳ್ಳೋಣ. ಯೇಸುವಿಗೆ ಧನ್ಯವಾದ ಹೇಳಲು ಹಿಂದಿರುಗಿದವರನ್ನೂ ಸಹ ನೆನಪಿಸಿಕೊಳ್ಳೋಣ ಮತ್ತು ಅವರ ಮಾದರಿಯನ್ನು ಅನುಸರಿಸೋಣ. ನಾವು ಕೃತಜ್ಞರಾಗಿರಲು, ದೇವರನ್ನು ಆರಾಧಿಸಲು ಮತ್ತು ನಾವು ಹೋಗುವ ಕಡೆಗಳಲೆಲ್ಲಾ ಕರ್ತನನ್ನೂ ಮತ್ತು ಆತನ ಭರವಸೆಯ ಸಂತೋಷವನ್ನು ಹರಡುವುದನ್ನೇ ಆರಿಸಿಕೊಳ್ಳೋಣ.
Bible Reading: 1 Samuel 22-24
ಪ್ರಾರ್ಥನೆಗಳು
ತಂದೆಯೇ, ಇಂದು ಕೃತಜ್ಞತಾ ಹೃದಯದಿಂದ ನಿನ್ನ ಸನ್ನಿಧಿಗೆ ಬರುತ್ತೇನೆ. ನನಗೂ ಮತ್ತು ನನ್ನ ಕುಟುಂಬಕ್ಕೂ ನೀನು ತೋರಿಸಿದ ಕರುಣೆಗಾಗಿ ನಿನಗೆ ಧನ್ಯವಾದಗಳು; ಅವು ದಿನದಿನವೂ ಹೊಸದಾಗಿವೆ . ನಾನು ಎಲ್ಲಿಗೆ ಹೋದರೂ ನಿಮ್ಮ ಆಶೀರ್ವಾದವನ್ನು ಹರಡುವ ನಾಲೆಯನ್ನಾಗಿ ನನ್ನನ್ನು ಮಾಡಿ ಎಂದು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೆನ್!
Join our WhatsApp Channel

Most Read
● ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಎಸ್ತರಳ ರಹಸ್ಯವೇನು?
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿಕೊಳ್ಳುವುದು ಹೇಗೆ-2
● ಸಂತೃಪ್ತಿಯ ಭರವಸೆ
● ಕರ್ತನೇ ನನ್ನ ದೀಪವನ್ನು ಬೆಳಗಿಸು.
ಅನಿಸಿಕೆಗಳು