ಅನುದಿನದ ಮನ್ನಾ
3
1
38
ಗತಕಾಲದ ಸಮಾಧಿಯಲ್ಲಿಯೇ ಹೂತುಹೋಗಬೇಡಿರಿ
Monday, 21st of April 2025
Categories :
ರೂಪಾಂತರ(transformation)
ನೆನಪುಗಳು ನಮ್ಮ ಜೀವನದ ಅತ್ಯಗತ್ಯ ಭಾಗವಾಗಿದೆ. ಅವು ನಮ್ಮ ತಪ್ಪುಗಳಿಂದ ಕಲಿಯಲು, ನಮ್ಮ ಆಶೀರ್ವಾದಗಳನ್ನು ಅನುಭವಿಸಲು ಮತ್ತು ನಮ್ಮ ಭವಿಷ್ಯಕ್ಕಾಗಿ ಒಂದು ಮಾರ್ಗಸೂಚಿಯನ್ನು ಒದಗಿಸಲು ನಮಗೆ ಸಹಾಯ ಮಾಡುತ್ತವೆ. ಆದಾಗ್ಯೂ, ಎಲ್ಲಾ ನೆನಪುಗಳು ಸಮಾನವಾಗಿ ರಚಿಸಲ್ಪಟ್ಟಿರುವುದಿಲ್ಲ. ನಾವೆಲ್ಲರೂ ನಮ್ಮ ಜೀವನದಲ್ಲಿ ಕೆಲವು ಒಳ್ಳೆಯ ಮತ್ತು ಕೆಟ್ಟ ನೆನಪುಗಳನ್ನು ಹೊಂದಿದ್ದೇವೆ. ಒಳ್ಳೆಯ ನೆನಪುಗಳು ಸಂತೋಷ, ಸಾಂತ್ವನ ಮತ್ತು ಭರವಸೆಯನ್ನು ತರುತ್ತವೆಯಾದರೂ, ಕೆಟ್ಟ ನೆನಪುಗಳು ನಮ್ಮನ್ನು ಕಾಡಿ, ನಮ್ಮನ್ನು ಗಾಯಗೊಳಿಸಿ, ನಮ್ಮ ಪ್ರಗತಿಯನ್ನು ಕುಂಠಿತಗೊಳಿಸಬಹುದು.
ಕೆಟ್ಟ ನೆನಪುಗಳು ಮತ್ತು ನಮ್ಮ ಹಿಂದಿನ ಪಾಪದ ಜೀವನವು ನಮ್ಮ ಭವಿಷ್ಯವನ್ನು ನಿಯಂತ್ರಿಸಬಾರದು ಎಂಬುದಾಗಿ ಸತ್ಯವೇದ ನಮಗೆ ಕಲಿಸಿಕೊಡುತ್ತದೆ. "ಹೆಚ್ಚು ಕಡಿಮೆ ಏನೂ ಇಲ್ಲ ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಕಳೆದುಕೊಂದಿದ್ದಾರೆ" (ರೋಮ 3:23). ಕ್ರೈಸ್ತ ಧರ್ಮದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬನಾದ ಅಪೊಸ್ತಲ ಪೌಲನು ಸಹ ಒಂದು ಕಾಲದಲ್ಲಿ ಕುಖ್ಯಾತ ತಾರ್ಸದ ಸೌಲನಾಗಿದ್ದನು, ಅವನು ಕ್ರೈಸ್ತರನ್ನು ಹಿಂಸಿಸಿ ಸ್ತೆಪನನ ಹತ್ಯೆಗೆ ತನ್ನ ಒಪ್ಪಿಗೆ ನೀಡಿದ್ದನು (ಅ. ಕೃ 8:1).
ಆದಾಗ್ಯೂ, ಮಾನಸಾಂತರ ಹೊಂದಿದ ನಂತರ, ಪೌಲನು ಒಬ್ಬ ರೂಪಾಂತರಗೊಂಡ ವ್ಯಕ್ತಿಯಾದನು. ತನ್ನ ಜೀವನವನ್ನೇ ಅವನು ಸುವಾರ್ತೆ ಸಾರುವುದಕ್ಕೆ ಮುಡಿಪಾಗಿಟ್ಟನು ಮತ್ತು ಅವನ ಬರಹಗಳು ಇಂದಿಗೂ ನಮ್ಮೆಲ್ಲರಿಗೂ ಸ್ಪೂರ್ತಿದಾಯಕ ಮತ್ತು ಪ್ರಸ್ತುತವಾಗಿವೆ. ಆದರೆ ಆಗಿನ ಕೆಲವು ಸಭೆಗಳು ಪೌಲನ ಮಾನಸಾಂತರದ ಕುರಿತು ಎಚ್ಚರದಿಂದಿದ್ದವು. ಅವನು ಸಭೆಗೆ ನುಸುಳಿ ಭವಿಷ್ಯದಲ್ಲಿ ಯಾರ್ಯಾರನ್ನು ಬಂಧನ ಪಡಿಸಬೇಕೆಂದು ಹೆಸರುಗಳನ್ನು ಸಂಗ್ರಹಿಸುವ ಆಶಯದೊಂದಿಗೆ ಬಂದು ಅವನು ಕ್ರೈಸ್ತನಂತೆ ನಾಟಕ ಮಾಡುತ್ತಿರಬಹುದೆಂದು ಅವರು ಭಯಪಟ್ಟರು.
ಪೌಲನು ಅವರ ಕಾಳಜಿಯನ್ನು ಅರ್ಥಮಾಡಿಕೊಂಡು " ಸಹೋದರರೇ, ನಾನಂತೂ ಹಿಡಿದುಕೊಂಡವನೆಂದು ನನ್ನನ್ನು ಈವರೆಗೂ ಎಣಿಸಿಕೊಳ್ಳುವದಿಲ್ಲ; ಆದರೆ ಒಂದು, ನಾನು ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆ ಬೊಗ್ಗಿದವನಾಗಿ ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಪರಲೋಕಕ್ಕೆ ಕರೆದು ನಮ್ಮ ಮುಂದೆ ಇಟ್ಟಿರುವ ಬಿರುದನ್ನು ಗುರಿಮಾಡಿಕೊಂಡು ಓಡುತ್ತಾ ಇದ್ದೇನೆ."
ಎಂದು ಫಿಲಿಪ್ಪಿಯರಿಗೆ ತನ್ನ ಪತ್ರಿಕೆಯಲ್ಲಿ ಬರೆದನು (ಫಿಲಿಪ್ಪಿ 3:13-14). ಬೇರೆ ರೀತಿಯಲ್ಲಿ ಹೇಳುವುದಾದರೆ, ಹಿಂದಿನ ಕೆಟ್ಟ ನೆನಪುಗಳು ಸಮಾಧಿಯಲ್ಲಿ ಹೂಳಲ್ಪಡಬೇಕು ಮತ್ತು ಅವು ಎಂದಿಗೂ ಪುನಾರುತ್ತಾನ ಪಡೆಯಬಾರದು ಎಂಬುದು ಪೌಲನಿಗೆ ತಿಳಿದಿತ್ತು.
ಹಾಗಾದರೆ ಒಳ್ಳೆಯ ನೆನಪುಗಳ ಕಥೆ ಏನು? ನಾವು ಅವುಗಳನ್ನು ಸಹ ಮರೆಯಬೇಕೇ? ಖಂಡಿತ ಇಲ್ಲ! ಒಳ್ಳೆಯ ನೆನಪುಗಳು ಅಮೂಲ್ಯವಾದ ನಿಧಿಗಳಾಗಿದ್ದು, ನಮ್ಮ ನಂಬಿಕೆಯನ್ನು ಬಲಪಡಿಸಲು ನಾವು ಅವುಗಳನ್ನು ಪೋಷಿಸಬೇಕು ಮತ್ತು ಬಳಸಿಕೊಳ್ಳಬೇಕು. ದೇವರು ನಮಗಾಗಿ ಹೇಗೆ ಸಹಾಯ ಮಾಡಿದನು, ನಮ್ಮ ಪ್ರಾರ್ಥನೆಗಳಿಗೆ ಹೇಗೆ ಉತ್ತರಿಸಿದನು, ಹೇಗೆಲ್ಲಾ ಅದ್ಭುತ ಮಾಡಿದನು ಅಥವಾ ಹೇಗೆ ಅನಿರೀಕ್ಷಿತ ರೀತಿಯಲ್ಲಿ ನಮ್ಮನ್ನು ಆಶೀರ್ವದಿಸಿದನು ಎಂಬುದನ್ನು ನಾವು ನೆನಪಿಸಿಕೊಳ್ಳುವಾಗ, ನಮಗೆ ಆತನ ಒಳ್ಳೆಯತನ ಮತ್ತು ನಂಬಿಗಸ್ತಿಕೆಯ ನೆನಪಾಗುತ್ತದೆ.
ಉದಾಹರಣೆಗೆ, ಇಸ್ರಾಯೇಲ್ಯರು ಯೋರ್ದನ್ ನದಿಯನ್ನು ದಾಟಿ ವಾಗ್ದತ್ತ ದೇಶವನ್ನು ಪ್ರವೇಶಿಸಿದಾಗ, ದೇವರು ಅವರಿಗೂ ಮತ್ತು ಅವರ ಮುಂದಿನ ಜನಾಂಗಕ್ಕೂ ತನ್ನ ಅದ್ಭುತ ಒದಗಿಸುವಿಕೆಯನ್ನು ನೆನಪಿಸಲು ಆ ನದಿಯಿಂದ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡು ಸ್ಮಾರಕವನ್ನು ನಿರ್ಮಿಸಲು ಆಜ್ಞಾಪಿಸಿದನು (ಯೆಹೋಶುವ 4:1-9). ಅದೇ ರೀತಿ, ಹೊಸ ಒಡಂಬಡಿಕೆಯಲ್ಲಿ, ಯೇಸು ತನ್ನ ಮರಣ ಮತ್ತು ಪುನರುತ್ಥಾನದ ಸ್ಮಾರಕವಾಗಿ ಕರ್ತನ ಭೋಜನವನ್ನು ಸ್ಥಾಪಿಸಿದನು (ಲೂಕ 22:19-20). ಈ ಎರಡೂ ಸ್ಮಾರಕಗಳು ದೇವರ ಶಕ್ತಿ, ಪ್ರೀತಿ ಮತ್ತು ನಂಬಿಗಸ್ತಿಕೆಯ ಸ್ಪಷ್ಟ ಜ್ಞಾಪನೆಗಳಾಗಿ ಕಾರ್ಯನಿರ್ವಹಿಸುವ ಸಂಗತಿಗಳಾಗಿವೆ.
ಹಾಗಾದರೆ, ನಮ್ಮ ನಂಬಿಕೆಯನ್ನು ಬಲಪಡಿಸಿಕೊಂಡು ಜೀವನದಲ್ಲಿ ಮುಂದುವರಿಯಲು ನಾವು ಒಳ್ಳೆಯ ನೆನಪುಗಳನ್ನು ಹೇಗೆ ಬಳಸಬಹುದು? ಕೆಲವು ಸಲಹೆಗಳು ಇಲ್ಲಿವೆ:
1.ಜ್ಞಾಪಿಸಿಕೊಳ್ಳಿ ಮತ್ತು ಅದಕ್ಕಾಗಿ ಕೃತಜ್ಞತೆ ಸಲ್ಲಿಸಿ:
ನಿಮ್ಮ ಹಿಂದಿನ ಒಳ್ಳೆಯ ನೆನಪುಗಳನ್ನು ಅವಲೋಕಿಸಲು ಸಮಯ ತೆಗೆದುಕೊಂಡು ದೇವರ ಆಶೀರ್ವಾದಗಳು, ಒದಗಿಸುವಿಕೆ ಮತ್ತು ಆತನು ನೀಡಿದ ರಕ್ಷಣೆಗಾಗಿ ದೇವರಿಗೆ ಧನ್ಯವಾದ ಹೇಳಿ. ಕೃತಜ್ಞತೆಯು ಭಯ, ಆತಂಕ ಮತ್ತು ಹತಾಶೆಗೆ ಪ್ರಬಲವಾದ ನಿರೋಧಕ ಔಷಧಿಯಾಗಿದೆ. ಮೋಶೆಯು ನಲವತ್ತು ವರ್ಷಗಳ ಕಾಲ ದೇವರ ಜನರನ್ನು ಪೋಷಿಸುತ್ತಾ, "ನಿಮ್ಮ ಕಣ್ಣುಗಳು ನೋಡಿದ ವಿಷಯಗಳನ್ನು ನೀವು ಮರೆತುಹೋಗದಂತೆ ಮತ್ತು ಅವು ನಿಮ್ಮ ಜೀವನದ ಎಲ್ಲಾ ದಿನಗಳಲ್ಲಿ ನಿಮ್ಮ ಹೃದಯದಿಂದ ದೂರವಾಗದಂತೆ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ಕಾಪಾಡಿಕೊಳ್ಳಿ"ಎಂದು ನೆನಪಿಸಿದನು (ಧರ್ಮೋಪದೇಶಕಾಂಡ 4:9)
2. ನಿಮ್ಮ ಸಾಕ್ಷಿಯನ್ನು ಹಂಚಿಕೊಳ್ಳಿ:
ನಿಮ್ಮ ಕಥೆಯು ಇದೇ ರೀತಿಯ ಹೋರಾಟಗಳನ್ನು ಹಾದು ಹೋಗುತ್ತಿರುವ ಇತರರಿಗೆ ಸ್ಫೂರ್ತಿ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ. ದೇವರು ನಿಮ್ಮ ಜೀವನದಲ್ಲಿ ಹೇಗೆಲ್ಲಾ ಕಾರ್ಯ ಮಾಡಿದ್ದಾನೆಂದು ಹಂಚಿಕೊಳ್ಳಲು ಹಿಂಜರಿಯದಿರಿ.
3. ಸ್ಮಾರಕಗಳನ್ನು ನಿರ್ಮಿಸಿ:
ನೀವೇನು ಇಸ್ರಾಯೇಲ್ಯರು ಮಾಡಿದಂತೆ ನೀವು ಭೌತಿಕ ಸ್ಮಾರಕವನ್ನು ನಿರ್ಮಿಸಬೇಕಾಗಿಲ್ಲ, ಆದರೆ ನೀವು ದೇವರ ಒಳ್ಳೆಯತನದ ದೃಶ್ಯ ಜ್ಞಾಪನೆಯನ್ನು ರಚಿಸಬಹುದು. ಉದಾಹರಣೆಗೆ, ನೀವು ನಿಮ್ಮ ಮಾಡಿದ ಪ್ರಾರ್ಥನಾ ವಿಜ್ಞಾಪನೆಗಳು ಮತ್ತು ಅವುಗಳಿಗೆ ಕರ್ತನಿಂದ ದೊರೆತ ಉತ್ತರಗಳನ್ನು ಬರೆಯಬಹುದು, ಸ್ಮರಣೀಯ ಕ್ಷಣಗಳ ಸ್ಕ್ರ್ಯಾಪ್‌ಬುಕ್ ಮಾಡಬಹುದು ಅಥವಾ ದೇವರ ಪ್ರೀತಿಯನ್ನು ನೆನಪಿಸುವ ಹಾಡುಗಳ ಪ್ಲೇಪಟ್ಟಿಯನ್ನು ರಚಿಸಬಹುದು.
4. ದೇವರ ನಂಬಿಗಸ್ತಿಕೆಯಲ್ಲಿ ನಂಬಿಕೆ ಇಡಿ:
ಒಳ್ಳೆಯ ನೆನಪುಗಳು ದೇವರು ನಂಬಿಗಸ್ತನಾಗಿದ್ದು, ಇಂದಿಗೂ ಆತನು ನಮ್ಮ ಅಗತ್ಯಗಳನ್ನು ಪೂರೈಸಲು, ನಮ್ಮ ನಿರ್ಧಾರಗಳಲ್ಲಿ ನಮಗೆ ಮಾರ್ಗದರ್ಶನ ನೀಡಲು ಮತ್ತು ಭವಿಷ್ಯಕ್ಕಾಗಿ ನಮಗೆ ಭರವಸೆ ನೀಡಲು ಶಕ್ತನಾಗಿದ್ದಾನೆ ಎಂದು ನಾವು ನಂಬಬಹುದು ಎಂದು ನಮಗೆ ನೆನಪಿಸುತ್ತವೆ. ನಾವು ಹೊಸ ಸವಾಲುಗಳನ್ನು ಎದುರಿಸುವಾಗ, ದೇವರಲ್ಲಿ ನಮ್ಮ ನಂಬಿಕೆ ಮತ್ತು ವಿಶ್ವಾಸವನ್ನು ಬಲಪಡಿಸಿಕೊಳ್ಳಲು ನಾವು ಆ ನೆನಪುಗಳನ್ನು ಬಳಸಿಕೊಳ್ಳಬಹುದು. "ನಾನು ಕರ್ತನ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತೇನೆ; ಹೌದು, ನೀನು ಮಾಡಿದ ಪುರಾತನ ಅದ್ಭುತಗಳನ್ನು ನೆನಪಿಸಿಕೊಳ್ಳುತ್ತೇನೆ" (ಕೀರ್ತನೆ 77:11).
ಹಿಂದಿನ ಕೆಟ್ಟ ನೆನಪುಗಳನ್ನು ಸಮಾಧಿಯಲ್ಲಿ ಹೂತುಹಾಕಬೇಕು ಎಂಬುದನ್ನು ಮರೆಯಬೇಡಿರಿ, ಆದರೆ ಒಳ್ಳೆಯ ನೆನಪುಗಳನ್ನು ಅಮೂಲ್ಯವಾಗಿ ಸಂಗ್ರಹಿಸಿ ನಮ್ಮ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಬಳಸಿಕೊಳ್ಳಬೇಕು. ಪೌಲನ ಮಾತುಗಳನ್ನು ನೆನಪಿಸಿಕೊಳ್ಳೋಣ ಮತ್ತು ದೇವರ ನಂಬಿಕೆಯಲ್ಲಿ ಕೃತಜ್ಞತೆ ಮತ್ತು ನಂಬಿಕೆಯೊಂದಿಗೆ ನಮ್ಮ ಕರೆಯ ಗುರಿಯತ್ತ ಸಾಗೋಣ.
Bible Reading: 2 Samuel 23-24
ಪ್ರಾರ್ಥನೆಗಳು
ಪರಲೋಕದ ಪ್ರೀತಿಯುಳ್ಳ ತಂದೆಯೇ, ನೀನು ಕೊಟ್ಟ ಎಲ್ಲಾ ಒಳ್ಳೆಯ ನೆನಪುಗಳಿಗಾಗಿ ನಿನಗೆ ಸ್ತೋತ್ರ. ಈ ನೆನಪುಗಳನ್ನು ಕಾದುಕೊಳ್ಳಲು ಮತ್ತು ನಮ್ಮ ನಂಬಿಗಸ್ತಿಕೆ ಮತ್ತು ನಿಮ್ಮ ಮೇಲಿನ ನಂಬಿಕೆಯನ್ನು ಬಲಪಡಿಸಿಕೊಳ್ಳಲು ಅವುಗಳನ್ನು ಬಳಸಿಕೊಳ್ಳುವಂತೆ ಯೇಸುನಾಮದಲ್ಲಿ ನನಗೆ ಸಹಾಯ ಮಾಡಿ. ಹಾಗೆ ದಯವಿಟ್ಟು ಪ್ರತಿಯೊಂದು ಕೆಟ್ಟ ನೆನಪುಗಳನ್ನು ಯೇಸುನಾಮದಲ್ಲಿ ಅಳಿಸಿಹಾಕಿ. ನಮ್ಮ ಕರೆಯ ಗುರಿಯತ್ತ ನಾವು ಸಾಗುತ್ತಿರುವಾಗ ನಮಗೆ ಯೇಸುನಾಮದಲ್ಲಿ ಮಾರ್ಗದರ್ಶನ ನೀಡಿ. ಆಮೆನ್.
Join our WhatsApp Channel

Most Read
● ಮತ್ತೊಬ್ಬರ ಪಾತ್ರೆಯನ್ನು ತುಂಬಿಸುವುದನ್ನು ಬಿಟ್ಟು ಬಿಡಬೇಡಿರಿ.● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ನಿಮ್ಮನ್ನು ನಡೆಸುತ್ತಿರುವವರು ಯಾರು?
● ನಂಬಿಕೆಯ ಶಾಲೆ
● ಆತ್ಮೀಕ ಬಾಗಿಲುಗಳನ್ನು ಮುಚ್ಚುವುದು
● ಸಫಲತೆ ಎಂದರೇನು?
● ನೀವು ಪಾವತಿಸಬೇಕಾದ ಬೆಲೆ
ಅನಿಸಿಕೆಗಳು