ಲೂಕ 18:34 ರಲ್ಲಿ, ಶಿಷ್ಯರ ಜೀವನದಲ್ಲಿ ನಾವು ಬಹಳ ಮನಮುಟ್ಟುವಂತ ಮತ್ತು ಮಹತ್ವದ ಕ್ಷಣವನ್ನು ಕಾಣುತ್ತೇವೆ. ಕರ್ತನಾದ ಯೇಸು ತನ್ನ ಬರಲಿರುವ ಯಾತನೆ, ಮರಣ ಮತ್ತು ಪುನರುತ್ಥಾನದ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದನು. ಆದರೂ ಶಿಷ್ಯರಿಗೆ ಆತನು ಏನು ಹೇಳುತ್ತಿದ್ದಾನೆಂದು ಅರ್ಥಮಾಡಿಕೊಳ್ಳಲಾಗಲಿಲ್ಲ ಎಂದು ಬೈಬಲ್ ನಮಗೆ ಹೇಳುತ್ತದೆ.
ವಚನ ಹೇಳುತ್ತದೆ:
“ ಅವರು ಈ ಸಂಗತಿಗಳಲ್ಲಿ ಒಂದನ್ನಾದರೂ ಗ್ರಹಿಸಲಿಲ್ಲ, ಈ ಮಾತುಗಳು ಅವರಿಗೆ ಮರೆಯಾಗಿದ್ದವು, ಅವುಗಳ ಅರ್ಥ ಅವರಿಗೆ ಗೊತ್ತಾಗಲಿಲ್ಲ.” (ಲೂಕ 18:34)
ಇದು ಗಮನಾರ್ಹವಾದ ಸಂಗತಿಯಾಗಿದೆ. ಶಿಷ್ಯರು ಭೌತಿಕ ವಾಗಿ ಯೇಸುವಿಗೆ ಹತ್ತಿರವಾಗಿದ್ದರು. ಅವರು ಆತನ ಧ್ವನಿಯನ್ನು ದಿನಾಲು ಕೇಳುತ್ತಿದ್ದರು. ಅವರು ಆತನ ಮುಖವನ್ನು ನೋಡುತ್ತಿದ್ದರು. ಅವರು ಪ್ರತಿದಿನ ಆತನೊಂದಿಗೆ ನಡೆಯುತಿದ್ದರು. ಆದರೂ ಆತನ ಮಾತುಗಳ ಅರ್ಥವು ಅವರಿಂದ ಮರೆಮಾಡಲ್ಪಟ್ಟಿತ್ತು. ಅವರ ಈ ತಿಳುವಳಿಕೆಯ ಕೊರತೆಯು ಅವರಿಗಿದ್ದ ಅಸಡ್ಡೆ, ಮೂರ್ಖತ್ವ ಅಥವಾ ಆಸಕ್ತಿಯಿಲ್ಲದ ಕಾರಣದಿಂದಲ್ಲ. ಆದರೆ ಅರ್ಥವು ಅವರಿಂದ ಮರೆಮಾಡಲ್ಪಟ್ಟಿತ್ತು ಎಂದು ಧರ್ಮಗ್ರಂಥವು ನಮಗೆ ಸ್ಪಷ್ಟವಾಗಿ ಹೇಳುತ್ತದೆ.
ದೇವರು ತನ್ನ ಜ್ಞಾನದಲ್ಲಿ, ಕೆಲವೊಮ್ಮೆ ಉನ್ನತ ಉದ್ದೇಶಕ್ಕಾಗಿ ತಿಳುವಳಿಕೆಯನ್ನು ತಡೆಹಿಡಿಯುತ್ತಾನೆ ಎಂಬುದನ್ನು ಇದು ನಮಗೆ ತೋರಿಸುತ್ತದೆ.
ಈ ಸತ್ಯವು ನಮಗೆ ಆದರಣೆ ಕೊಡುತ್ತದೆ. ಏಕೆಂದರೆ ನಮ್ಮ ಜೀವನದಲ್ಲಿ ದೇವರು ಏನು ಮಾಡುತ್ತಿದ್ದಾನೆ ಅಥವಾ ಕೆಲವು ವಿಷಯಗಳು ಏಕೆ ನಡೆಯುತ್ತಿವೆ ಎಂದು ನಮಗೆ ಅರ್ಥವಾಗದ ಅನೇಕ ಸಂದರ್ಭಗಳಿವೆ. ಇದರರ್ಥ ನಮಗೆ ಯಾವಾಗಲೂ ನಂಬಿಕೆ ಅಥವಾ ಆತ್ಮೀಕ ಪರಿಪಕ್ವತೆಯ ಕೊರತೆಯಿದೆ ಎಂದಲ್ಲ. ಕೆಲವೊಮ್ಮೆ, ಆ ಪ್ರಕಟಣೆಯ ಪೂರ್ಣ ತೂಕವನ್ನು ಹೊರಲು ನಾವು ಇನ್ನೂ ಸಿದ್ಧರಾಗಿಲ್ಲ ಎಂಬುದು ದೇವರಿಗೆ ತಿಳಿದಿದೆ.
ಕರ್ತನಾದ ಯೇಸುವೇ ಸ್ವತಃ ಇದನ್ನು ಒಪ್ಪಿಕೊಂಡನು:
"ನಿಮಗೆ ಹೇಳಲು ಇನ್ನೂ ಅನೇಕ ವಿಷಯಗಳಿವೆ, ಆದರೆ ನೀವು ಈಗ ಅವುಗಳನ್ನು ಹೊರಲು ಸಾಧ್ಯವಿಲ್ಲ." (ಯೋಹಾನ 16:12)
ಬೇರೆ ರೀತಿಯಲ್ಲಿ ಹೇಳುವುದಾದರೆ, ಸತ್ಯ ಎಂದರೆ ಪ್ರಕಟಿಸಲ್ಪಟ್ಟಾಗ ಮಾತ್ರವಲ್ಲದೆ ಪ್ರಕಟಿಸಲ್ಪಡದೆ ಹೋಗಿದ್ದರೂ ಅದು ಸತ್ಯವೇ. ದೇವರು ಅದನ್ನು ಸ್ವೀಕರಿಸುವ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂತ ಹಂತವಾಗಿ ಅದರ ತಿಳುವಳಿಕೆಯನ್ನು ಬಿಡುಗಡೆ ಮಾಡುತ್ತಾನೆ.
ಶಿಷ್ಯರು ಹೋರಾಡಲು ಒಂದು ಪ್ರಮುಖ ಕಾರಣವೆಂದರೆ ಜಯಶಾಲಿಯಾದ ಆಳ್ವಿಕೆ ಮಾಡಲು ಬರಬೇಕಾದ ಮೆಸ್ಸೀಯನ ಬಲವಾದ ನಿರೀಕ್ಷೆ. ಮೆಸ್ಸೀಯನು ರೋಮ್ ಸಾಮ್ರಾಜ್ಯವನ್ನು ಉರುಳಿಸಿ ತಕ್ಷಣವೇ ಒಂದು ಈ ಲೋಕದಲ್ಲಿಯೇ ಕಣ್ಣಿಗೆ ಕಾಣುವಂತ ರಾಜ್ಯವನ್ನು ಸ್ಥಾಪಿಸುತ್ತಾನೆ ಎಂಬುದಾಗಿ ಅವರು ನಂಬಿದ್ದರು. ಆದರಿಂದ ಮೆಸ್ಸೀಯನು ಸಂಕಟ ಅನುಭವಿಸುತ್ತಾನೆ, ತಿರಸ್ಕರಿಸಲ್ಪಡುತ್ತಾನೆ ಮತ್ತು ಶಿಲುಬೆಯ ಮೇಲೆ ಸಾಯುತ್ತಾನೆ ಎಂಬ ಕಲ್ಪನೆಯು ಅವರ ತಿಳುವಳಿಕೆಗೆ ಸ್ವೀಕರಿಸಲು ಸಾಧ್ಯವಾಗಲಿಲ್ಲ.
ಯಹೂದಿ ಸಂಪ್ರದಾಯದ ಪ್ರಕಾರ ಇಬ್ಬರು ಮೆಸ್ಸೀಯರ ಕುರಿತು ಮಾತನಾಡಲಾಗುತ್ತದೆ. ಒಬ್ಬನನ್ನು ಮೆಸ್ಸೀಯ ಬೆನ್ ಜೋಸೆಫ್ ಎಂದು ಕರೆಯಲಾಗುತ್ತಿದ್ದು ಅವರು ಹಳೆಯ ಒಡಂಬಡಿಕೆಯಲ್ಲಿ ಜೋಸೆಫ್‌ನಂತೆಯೇ ಉನ್ನತೀಕರಿಸಲ್ಪಡುವ ಮೊದಲು ಬಳಲಿ ಸಂಕಟ ಅನುಭವಿಸಿ ಸಾಯಬೇಕಿತ್ತು, ಇನ್ನೊಬ್ಬರು ಮೆಸ್ಸೀಯ ಬೆನ್ ಜೂದ, ಅರಸನಾದ ದಾವೀದನ ಹಾಗೆ ಅಧಿಕಾರದಲ್ಲಿ ಆಳುವ ಜಯಶಾಲಿಯಾದ ಅರಸನಾಗಿದ್ದನು. ಇವರು ಇಬ್ಬರು ಪ್ರತ್ಯೇಕ ವ್ಯಕ್ತಿಗಳಾಗಿದ್ದಾರೆ ಎಂದು ಬಹುತೇಕರು ನಂಬಿದ್ದರು.
ಅವರಿಗೆ ಇನ್ನೂ ನಂಬಲು ಸಾಧ್ಯವಾಗದ ಸಂಗತಿಯೆಂದರೆ ಯೇಸು ಎರಡೂ ಪಾತ್ರಗಳನ್ನು ಪೂರೈಸಿದನು. ಆತನು ಮೊದಲು ಬಳಲಿ ಸಾಯುತ್ತಾನೆ ನಂತರ ಆಳುತ್ತಾನೆ. ಆತನು ಕಿರೀಟಕ್ಕೆ ಮೊದಲು ಶಿಲುಬೆಗೆ ಹೋಗುತ್ತಾನೆ. ಶಿಷ್ಯರು ಈ ಎಲ್ಲಾ ಸಾಂಸ್ಕೃತಿಕ ಮತ್ತು ಧಾರ್ಮಿಕ ನಿರೀಕ್ಷೆಗಳಿಂದ ರೂಪಿಸಲ್ಪಟ್ಟ ಕಾರಣ, ಅವರು ಒಬ್ಬ ಮೆಸ್ಸೀಯನಲ್ಲಿ ಎರಡೂ ಸತ್ಯಗಳನ್ನು ಸ್ವೀಕರಿಸಲು ಹೆಣಗಾಡಿದರು.
ಈ ಹೋರಾಟವು ನಮಗೆ ಒಂದು ಪ್ರಮುಖ ಪಾಠವನ್ನು ಕಲಿಸುತ್ತದೆ. ತಪ್ಪು ತಿಳುವಳಿಕೆ - ಅಥವಾ ಅಪೂರ್ಣ ತಿಳುವಳಿಕೆ - ದೇವರು ನಿಜವಾಗಿ ಏನು ಮಾಡುತ್ತಿದ್ದಾನೆಂದು ನೋಡುವುದನ್ನು ತಡೆಯಬಹುದು. ಸೈತಾನನು ಅರಣ್ಯದಲ್ಲಿ ಯೇಸುವನ್ನು ಪ್ರಲೋಭಿಸಿದಾಗ ಈ ಅಪಾಯದ ಪ್ರಬಲ ಉದಾಹರಣೆ ಕಂಡುಬರುತ್ತದೆ. ಬೈಬಲ್ ಹೇಳುತ್ತದೆ:
"ಇದಲ್ಲದೆ ಅವನು ಆತನನ್ನು ಯೆರೂಸಲೇವಿುಗೆ ಕರೆದುಕೊಂಡು ಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ -
ನೀನು ದೇವರ ಮಗನಾಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು.ನಿನ್ನನ್ನು ಕಾಯುವದಕ್ಕೆ ಆತನು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆ ಕೊಡುವನು; ಮತ್ತು ನಿನ್ನ ಕಾಲು ಕಲ್ಲಿಗೆ ತಗಲೀತೆಂದು ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು ಎಂಬದಾಗಿ ಬರೆದದೆಯಲ್ಲಾ ಎಂದು ಹೇಳಿದನು.(ಲೂಕ 4:9–11)
ಇಲ್ಲಿ ಒಂದು ಮುಖ್ಯವಾದ ವಿಷಯವನ್ನು ಗಮನಿಸಿ. ಸೈತಾನನು ದೇವರವಾಕ್ಯವನ್ನು ಉಲ್ಲೇಖಿಸಿದನು - ಆದರೆ ಅವನು ಅದನ್ನು ತಪ್ಪಾಗಿ ಮತ್ತು ಸಂದರ್ಭಕ್ಕೆ ಮೀರಿ ಉಲ್ಲೇಖಿಸಿದನು.
ಬೈಬಲ್ ವಚನಗಳನ್ನು ತಿಳಿದುಕೊಳ್ಳುವುದು ಮಾತ್ರ ಸಾಕಾಗುವುದಿಲ್ಲ ಬದಲಾಗಿ ಅದರ ಸತ್ಯವನ್ನು ಸರಿಯಾಗಿ ಅರ್ಥಮಾಡಿಕೊಂಡು ಬುದ್ಧಿವಂತಿಕೆಯಿಂದ ಅದನ್ನು ಅನ್ವಯಿಸಬೇಕು ಎಂಬುದನ್ನು ಇದು ನಮಗೆ ತೋರಿಸುತ್ತದೆ. ದೇವರವಾಕ್ಯವನ್ನು ಒಳಗೊಂಡಿದ್ದರೂ ಸಹ,ಒಂದು ತಪ್ಪು ಸಿದ್ಧಾಂತವು ದೇವರ ನಿಜವಾದ ಉದ್ದೇಶಕ್ಕೆ ಕಣ್ತೆರೆಯದಂತೆ ಜನರನ್ನು ಕುರುಡಾಗಿಸಬಹುದು.
ಹಾಗಾದರೆ ತಪ್ಪು ತಿಳುವಳಿಕೆಯ ಮುಸುಕು ಹೇಗೆ ತೆಗೆಯಲ್ಪಡುತ್ತದೆ?
ಉತ್ತರವು ದೀನತೆ ಮತ್ತು ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ದೇವರು ತನ್ನ ಸತ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತಾನೆ ಎಂದು ಯೇಸು ಭರವಸೆ ನೀಡಿದನು:
"ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು."(ಯೋಹಾನ 14:26)
ನಾವು ನಮ್ಮನ್ನು ತಗ್ಗಿಸಿಕೊಂಡಾಗ, ನಮ್ಮ ಊಹೆಗಳನ್ನು ಬದಿಗಿಟ್ಟು, ಪವಿತ್ರಾತ್ಮನನ್ನು ನಮಗೆ ಬೋದಿಸಬೇಕೆಂದು ಬೇಡುವಾಗ, ದೇವರು ನಮ್ಮ ಕಣ್ಣುಗಳನ್ನು ತೆರೆಯಲು ಪ್ರಾರಂಭಿಸುತ್ತಾನೆ. ಒಮ್ಮೆ ಗೊಂದಲಮಯವಾಗಿ ಕಾಣುತ್ತಿದ್ದ ಸತ್ಯವು ನಿಧಾನವಾಗಿ ಸ್ಪಷ್ಟವಾಗಲು ಆರಂಭವಾಗುತ್ತದೆ.
ದೇವರು ತನ್ನ ಪರಿಪೂರ್ಣ ಸಮಯಕ್ಕೆ ಅನುಗುಣವಾಗಿ ಸತ್ಯವನ್ನು ಪ್ರಕಟಪಡಿಸುತ್ತಾನೆ. ಕರ್ತನಾದ ಯೇಸು ಸತ್ತವರೊಳಗಿಂದ ಎದ್ದ ನಂತರ, ಶಿಷ್ಯರು ಇದ್ದಕ್ಕಿದ್ದಂತೆ ಅವರು ಮೊದಲು ಗ್ರಹಿಸಲು ಸಾಧ್ಯವಾಗದದ್ದನ್ನು ಅರ್ಥಮಾಡಿಕೊಂಡರು. ಮುಸುಕು ತೆಗೆಯಲ್ಪಟ್ಟಿತು. ಒಂದು ಕಾಲದಲ್ಲಿ ಅವರನ್ನು ಗೊಂದಲಕ್ಕೀಡುಮಾಡಿದ್ದದ್ದು ಈಗ ಅದುವೇ ಅವರನ್ನು ಬಲಪಡಿಸಿತು.
ಈ ಮಾದರಿಯನ್ನು ದೇವರವಾಕ್ಯದಲ್ಲಿಯೂ ಮತ್ತು ನಮ್ಮ ಜೀವನದಲ್ಲಿಯೂ ಮತ್ತೆ ಮತ್ತೆ ಕಾಣಬಹುದು. ನಾವು ಅದನ್ನು ಬೇಡುವಾಗಲೇ ಪ್ರಕಟವಾಗುವುದಿಲ್ಲ, ಆದರೆ ನಾವು ಅದನ್ನು ಸ್ವೀಕರಿಸಲು ಸಿದ್ಧರಾಗುವಾಗ ಅದು ಅನಾವರಣಗೊಳ್ಳುತ್ತದೆ. ಶಿಷ್ಯರು ಹೋರಾಡಿದ ಎಲ್ಲದರ ಕೇಂದ್ರಬಿಂದುವಾಗಿ ಶಿಲುಬೆ ಇತ್ತು. ಆದರೆ ಆ ಶಿಲುಬೆ ವಿಜಯದಂತೆ ಕಾಣುತ್ತಿರಲಿಲ್ಲ. ಬದಲಾಗಿ ಅದು ಸೋಲಿನಂತೆ ಕಾಣುತ್ತಿತ್ತು. ಆದರೂ ಅಪೊಸ್ತಲ ಪೌಲನು ಈ ರಹಸ್ಯವನ್ನು ಸ್ಪಷ್ಟವಾಗಿ ವಿವರಿಸುತ್ತಾನೆ:
" ಶಿಲುಬೆಯ ವಿಷಯವಾದ ಮಾತು ನಾಶನದ ಮಾರ್ಗದಲ್ಲಿರುವವರಿಗೆ ಹುಚ್ಚುಮಾತಾಗಿದೆ, ರಕ್ಷಣೆಯ ಮಾರ್ಗದಲ್ಲಿರುವ ನಮಗಾದರೋ ದೇವರ ಶಕ್ತಿಯಾಗಿದೆ."
(1 ಕೊರಿಂಥ 1:18)
ಲೋಕವು ದೌರ್ಬಲ್ಯವೆಂದು ನೋಡುವುದನ್ನು ದೇವರು ಶಕ್ತಿ ಎಂದು ಪ್ರಕಟಿಸುತ್ತಾನೆ . ಶಿಲುಬೆಯು ದೇವರ ಪ್ರೀತಿ, ಜ್ಞಾನ ಮತ್ತು ವಿಜಯವನ್ನು ಸಂಪೂರ್ಣವಾಗಿ ಪ್ರಕಟಿಸುವ ಸ್ಥಳವಾಗಿದೆ. ವಿಶ್ವಾಸಿಗಳಾಗಿ, ನಾವು ದೇವರೊಂದಿಗಿನ ನಮ್ಮ ನಡಿಗೆಯಲ್ಲಿ ತಾಳ್ಮೆಯನ್ನು ಕಲಿಯಬೇಕು. ಆತ್ಮೀಕ ತಿಳುವಳಿಕೆ ಹಂತ ಹಂತವಾಗಿ ಬೆಳೆಯುತ್ತದೆ. ಬೈಬಲ್ ಇದನ್ನು ಈ ರೀತಿ ವಿವರಿಸುತ್ತದೆ:
"ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ,
ಇಲ್ಲಿ ಸ್ವಲ್ಪ,
ಅಲ್ಲಿ ಸ್ವಲ್ಪ [ಪ್ರಕಟಿಸುತ್ತಾನಲ್ಲಾ ಇತ್ಯಾದಿ].
(ಯೆಶಾಯ 28:10)
ದೇವರ ಕಾಲದಲ್ಲಿ, ಒಮ್ಮೆ ಮರೆಮಾಡಲ್ಪಟ್ಟದ್ದು ಒಂದು ಸಮಯದಲ್ಲಿ ಸ್ಪಷ್ಟವಾಗುತ್ತದೆ. ಮತ್ತು ಒಮ್ಮೆ ನಮ್ಮನ್ನು ಗೊಂದಲಕ್ಕೀಡುಮಾಡಿದ್ದು ಆತನೊಂದಿಗಿನ ಆಳವಾದ, ಬಲವಾದ ಸಂಬಂಧಕ್ಕೆ ಅಡಿಪಾಯವಾಗುತ್ತದೆ.
Bible Reading: Exodus 9-11
ಪ್ರಾರ್ಥನೆಗಳು
ತಂದೆಯೇ, ಪ್ರಕಟಣೆಯು ನಿಮ್ಮ ಸಮಯದಲ್ಲಿ ಉಂಟಾಗುವವವರೆಗೂ ನಾವು ನಂಬಿಕೆಯಲ್ಲಿ ನಿಲ್ಲುವಂತೆ ನಮಗೆ ಕೃಪೆಯನ್ನು ನೀಡು. ನಿಮ್ಮ ಸತ್ಯವನ್ನು ಕಾಣುವಂತೆ ನಮ್ಮ ಕಣ್ಣುಗಳನ್ನು ತೆರೆಮಾಡಿ ನಿಮ್ಮ ರಾಜ್ಯದ ರಹಸ್ಯಗಳನ್ನು ಸಂಪೂರ್ಣವಾಗಿ ಸ್ವೀಕರಿಸಲು ನಮ್ಮ ಹೃದಯಗಳನ್ನು ಯೇಸುನಾಮದಲ್ಲಿ ಸಿದ್ಧಪಡಿಸಿ. ಆಮೆನ್.
Join our WhatsApp Channel
Most Read
● ನಮ್ಮ ಆಯ್ಕೆಯ ಪರಿಣಾಮಗಳು● ನರಕ ಎನ್ನುವುದು ನಿಜವಾಗಿ ಇರುವಂಥ ಸ್ಥಳ
● ದೇವರ ಪ್ರೀತಿಯನ್ನು ಅನುಭವಿಸುವುದು
● ಶುಭವಾರ್ತೆಯನ್ನು ಸಾರಿರಿ.
● ನೆಪ ಹೇಳುವ ಕಲೆ
● ದಿನ 20:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಜನರು ನೆಪಗಳನ್ನು ಹೇಳಲು ಇರುವ ಕಾರಣಗಳು - ಭಾಗ 1
ಅನಿಸಿಕೆಗಳು
