ಅನುದಿನದ ಮನ್ನಾ
ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
Saturday, 30th of March 2024
2
2
337
Categories :
ನಿರೀಕ್ಷಣೆ (Waiting)
ನಮ್ಮ ಕ್ರಿಸ್ತೀಯ ಜೀವಿತದ ಪ್ರಯಾಣದಲ್ಲಿ ದೇವರು ಅನುಗ್ರಹಿಸಿದ ತಲಾಂತುಗಳನ್ನು ಉಪಯೋಗಿಸಿಕೊಂಡು ಅದೇ ಸಮಯದಲ್ಲಿ ಪವಿತ್ರಾತ್ಮನ ಮಾರ್ಗದರ್ಶನದ ಮೇಲೆಯೂ ಆಧಾರಗೊಂಡು ನಮಗೆ ಸಂಕೀರ್ಣ ಎನಿಸುವ ಕ್ಷೇತ್ರಗಳ ಕಡೆಗೆ ಸಾಗುವುದನ್ನು ಆಗಾಗ್ಗೆ ನಾವು ಕಾಣುತ್ತಿರುತ್ತೇವೆ.
"ವರಗಳಲ್ಲಿ ಬೇರೆ ಬೇರೆ ವಿಧಗಳುಂಟು, ದೇವರಾತ್ಮನು ಒಬ್ಬನೇ; 5ಸೇವೆಗಳಲ್ಲಿ ಬೇರೆ ಬೇರೆ ವಿಧಗಳುಂಟು, ಕರ್ತನು ಒಬ್ಬನೇ; 6ಕಾರ್ಯಗಳಲ್ಲಿ ಬೇರೆ ಬೇರೆ ವಿಧಗಳುಂಟು, ಸರ್ವರಲ್ಲಿಯೂ ಸರ್ವಕಾರ್ಯಗಳನ್ನು ಸಾಧಿಸುವ ದೇವರು ಒಬ್ಬನೇ" ಎಂದು ಅಪೋಸ್ತಲನಾದ ಪೌಲನು 1 ಕೊರಿಂಥದವರಿಗೆ 12:4-6 ರಲ್ಲಿ ನಮಗೆ ನೆನಪಿಸುತ್ತಾನೆ.
ನಮ್ಮ ಸೃಷ್ಟಿಕರ್ತನಾದಂತ ದೇವರು ನಮಗೆ ದಯಪಾಲಿಸಿರುವ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳುವುದು ಮತ್ತು ಅವುಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾದರೂ ಈ ವರಗಳಲ್ಲಿ ಮಾತ್ರ ನಮ್ಮ ನಂಬಿಕೆಯನ್ನು ಕೇಂದ್ರೀಕರಿಸಿದಂತೆ ನಾವು ಬಹಳ ಜಾಗರೂಕತೆಯಿಂದ ಇರಬೇಕು."ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. [6] ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು." ಎಂದು ಜ್ಞಾನೋಕ್ತಿಗಳು 3:5-6 ನಮಗೆ ಬೋದಿಸುತ್ತದೆ.
ನಾವು ನಮ್ಮ ನಿರ್ದಿಷ್ಟವಾದ ಕ್ಷೇತ್ರದಲ್ಲಿ ಬೆಳೆಯುತ್ತಾ ಹೋದಂತೆ ಮತ್ತು ಅದರ ಶ್ರೇಷ್ಠತೆಯ ಮಟ್ಟವನ್ನು ಮುಟ್ಟುವಾಗ ಈ ಎಲ್ಲಾ ಸಾಧನೆಗಳು ನಮ್ಮ ಸ್ವಂತ ಪ್ರಯತ್ನದ ಫಲವೋ ಅಥವಾ ನಮ್ಮಲ್ಲಿ ಕಾರ್ಯ ಮಾಡಿದ ಪವಿತ್ರಾತ್ಮನಿಂದ ಆದದ್ದೋ ಎಂಬುದನ್ನು ವಿವೇಚಿಸುವುದೇ ಒಂದು ಸವಾಲಾಗಿ ಪರಿಣಮಿಸಿಬಿಡುತ್ತದೆ.ನಮ್ಮೆಲ್ಲಾ ತಲಾಂತುಗಳನ್ನು ದೇವರ ಪಾದಕ್ಕೆ ಸಮರ್ಪಿಸುವ ಪ್ರಾಮುಖ್ಯತೆಯು ಇಲ್ಲಿಯೇ ಬರುವಂತದ್ದು. ಕುಂಬಾರನು ಜೇಡಿ ಮಣ್ಣಿನಿಂದ ತನಗೆ ಬೇಕಾದ ಪಾತ್ರೆಯನ್ನು ರೂಪಿಸುವಂತೆ ನಮ್ಮೆಲ್ಲಾ ಸಾಮರ್ಥ್ಯಗಳು ಆತನ ದೈವಿಕ ಯೋಜನೆಯನ್ನು ಪೂರ್ಣಗೊಳಿಸುವ ಸಾಧನಗಳಾಗಿವೆ ಎಂಬುದನ್ನು ಗುರುತಿಸಿಕೊಂಡು ನಾವು ನಮ್ಮನ್ನು ಆತನ ಚಿತ್ತಕ್ಕೆ ಅನುಗುಣವಾದ ಮಾರ್ಗದಲ್ಲಿ ಆತನು ನಡೆಸಲು ಆತನ ಕರಗಳಿಗೆ ನಮ್ಮನ್ನು ಒಪ್ಪಿಸಿಕೊಡಬೇಕು.
ನ್ಯಾಯಸ್ಥಾಪಕರು 7ನೇ ಅಧ್ಯಾಯದಲ್ಲಿನ ಗಿದ್ಯೋನನ ಕಥೆಯು ಒಂದು ಗಣನೆಗೆ ಬಾರದಂತ ಸಂಪನ್ಮೂಲಗಳನ್ನೂ ಸಹ ತನ್ನ ಮಹತ್ವದ ಕಾರ್ಯ ಸಾಧಿಸಲು ದೇವರು ಹೇಗೆಲ್ಲಾ ಬಳಸಿಕೊಳ್ಳುತ್ತಾನೆ ಎಂಬ ಪ್ರಬಲವಾದ ಎಚ್ಚರಿಕೆ ಗಂಟೆಯಾಗಿ ನಮ್ಮಲ್ಲಿ ಕಾರ್ಯ ಮಾಡುತ್ತದೆ.ಗಿದ್ಯೋನನು ಮಿದ್ಯಾನರ ಮೇಲೆ ಯುದ್ಧ ಮಾಡಬೇಕಾದ ಒಂದು ಭಯಾನಕ ಪರಿಸ್ಥಿತಿಯಲ್ಲಿ, ಗಿದ್ಯೋನನು ಮೊದಲು 32 ಸಾವಿರ ಸೈನಿಕರನ್ನು ಕೂಡಿಸುತ್ತಾನೆ. ಆಗ ದೇವರು ಅವನಿಗೆ 300 ಜನರಿಗೆ ಈ ಸಂಖ್ಯೆಯನ್ನು ಇಳಿಸಲು ಸೂಚಿಸುತ್ತಾನೆ ಯಾಕೆಂದರೆ ಈ ಯುದ್ಧದ ಜಯವು ಮನುಷ್ಯರ ಬಲದಿಂದ ಆಗದೇ ಅದು ದೇವರ ಮಧ್ಯಪ್ರವೇಶಿಕೇಯಿಂದಲೇ ಉಂಟಾಯಿತು ಎಂಬ ಕೀರ್ತಿ ಆತನಿಗೇ ಸಲ್ಲಬೇಕೆಂದು ಅವರಿಗೆ ಮನದಟ್ಟಾಗಬೇಕೆಂದು ಹೀಗೆ ಸೂಚಿಸಿದ್ದನು.
ಹೀಗೆ, ನಾವೂ ಸಹ ಯಾವುದೇ ಕಾರ್ಯ ಮಾಡುವ ಮೊದಲು ಕರ್ತನಿಗಾಗಿ ಕಾದಿದ್ದು ಆತನ ಸ್ವರವನ್ನು ಕೇಳಬೇಕು. ಆಗ ಯೇಶಾಯ 40:31ರಲ್ಲಿ ಆತನು ನಮಗೆ ವಾಗ್ದಾನ ಮಾಡಿದಂತೆ "ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು; ಹದ್ದುಗಳಂತೆ ರೆಕ್ಕೆಗಳನ್ನು ಚಾಚಿಕೊಂಡು [ಏರುವರು]; ಓಡಿ ದಣಿಯರು, ನಡೆದು ಬಳಲರು." ಎಂಬುದು ನೆರವೇರುತ್ತದೆ.ನಾವು ತಾಳ್ಮೆಯ ನಡುವಳಿಕೆಯನ್ನು ಬೆಳೆಸಿಕೊಳ್ಳುವ ಮುಖಾಂತರ ಮತ್ತು ಎಚ್ಚರವಾಗಿದ್ದು ಆತನಿಗಾಗಿ ಕಾಯುವ ಮುಖಾಂತರ ನಾವು ದೇವರ ಮಾರ್ಗದರ್ಶನವನ್ನು ಹೊಂದುವ ಸ್ಥಾನವನ್ನು ತಲುಪುವವರಾಗುತ್ತೇವೆ.ಜೊತೆಗೆ ಅದು ನಾವು ನಮ್ಮ ಸ್ವಬುದ್ಧಿಯ ಮೇಲೆ ಆಧಾರಗೊಂಡು ಹಳ್ಳಕ್ಕೆ ಬೀಳದಂತೆ ನಮ್ಮನ್ನು ತಪ್ಪಿಸುತ್ತದೆ.
ಅದಕ್ಕಿಂತ ಹೆಚ್ಚಾಗಿ ನಮ್ಮ ತಲಾಂತುಗಳಾಗಲೀ ವರಗಳಾಗಲೀ ನಮ್ಮ ವೈಯಕ್ತಿಕ ಲಾಭಕ್ಕಾಗಿಯೋ ಅಥವಾ ಮಹಿಮೆಗಾಗಿಯೋ ಇರುವಂತದ್ದಲ್ಲ, ಬದಲಾಗಿ ಅದು ಕ್ರಿಸ್ತನ ದೇಹವೆಂಬ ಸಭೆಯ ಭಕ್ತಿವೃದ್ಧಿಗಾಗಿಯೂ, ದೇವರ ರಾಜ್ಯದ ವಿಸ್ತರಣೆಗಾಗಿಯೂ ಅನುಗ್ರಹಿಸಲ್ಪಟ್ಟಿದೆ ಎಂಬುದನ್ನು ಗುರುತಿಸಿಕೊಳ್ಳುವುದು ಒಂದು ನಿರ್ಣಾಯಕ ಅಂಶವಾಗಿದೆ. "ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ." ಎಂದು 1 ಪೇತ್ರನು 4:10 ನಮ್ಮನ್ನು ಎಚ್ಚರಿಸುತ್ತದೆ.
ಹಾಗಾಗಿ, ದೇವರ ಆತ್ಮನ ಮೇಲೆಯೇ ಆಧಾರಗೊಳ್ಳುವ ಮತ್ತು ಆತ್ಮನ ವರಗಳನ್ನು ಬಳಸಿಕೊಳ್ಳುವುದರ ನಡುವಿನ ಸೂಕ್ಷ್ಮವಾದ ಸಮತೋಲನವನ್ನು ಕಾಯ್ದುಕೊಳ್ಳುವುದರ ಕೀಲಿಕೈ ದೀನತ್ವ ಮತ್ತು ಸಮರ್ಪಣಾ ಹೃದಯವನ್ನು ಕಾಪಾಡಿಕೊಳ್ಳುವುದರಲ್ಲಿಯೇ ಅಡಗಿದೆ.
ನಿರಂತರವಾಗಿ ಕರ್ತನ ಮಾರ್ಗದರ್ಶನವನ್ನು ಎದುರು ನೋಡುವ ಮೂಲಕ, ಕರ್ತನ ಮಾರ್ಗವನ್ನೇ ಕಾಯುವುದರ ಮೂಲಕ ಮತ್ತು ಆತನ ಮಹಿಮೆಗಾಗಿ ಸಾಮರ್ಥ್ಯಗಳನ್ನು ಬಳಸಿಕೊಳ್ಳುವುದರ ಮೂಲಕ ನಾವು ದೇವರ ಅಲೌಖಿಕವಾದ ಬಲವು ನಮ್ಮಲ್ಲಿ ಕಾರ್ಯ ಮಾಡುವುದನ್ನು ಅನುಭವಿಸಬಹುದು. ನಾವು ಹೀಗೆ ಮಾಡುವುದಾದರೆ ಫಿಲಿಪ್ಪಿ 4:13ರಲ್ಲಿ ಹೇಳಿರುವ "ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ." ಎಂಬ ವಾಕ್ಯಕ್ಕೆ ಸತ್ಯಸಾಕ್ಷಿಗಳಾಗಿರುತ್ತೇವೆ.
ಪ್ರಾರ್ಥನೆಗಳು
ತಂದೆಯೇ, ನಿನ್ನ ಸ್ವರವನ್ನು ಆಲಿಸುವಂತೆ ನನಗೆ ಬೋಧಿಸು. ನನ್ನ ಜೀವನದ ಪ್ರತಿಯೊಂದು ನಿರ್ಧಾರವೂ ನಿನ್ನ ಆತ್ಮನಿಂದ ನಡೆಸಲ್ಪಡಲಿ ಎಂದು ಯೇಸು ನಾಮದಲ್ಲಿ ಪ್ರಾರ್ಥಿಸುತ್ತೇನೆ ತಂದೆಯೇ ಆಮೆನ್.
Join our WhatsApp Channel
Most Read
● ನಾವು ಸಭೆಯಾಗಿ ನೇರವಾಗಿ ಕೂಡಿಕೊಳ್ಳದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ಸಭೆಯ ಆರಾಧನೆಯಲ್ಲಿ ಭಾಗವಹಿಸಬಹುದೇ?● ಕೆಂಪು ದೀಪದ ಎಚ್ಚರಿಕೆ ಗಂಟೆ
● ದಿನ 10:40 ದಿನಗಳ ಉಪವಾಸ ಪ್ರಾರ್ಥನೆ.
● ಆರಾಧನೆಗೆ ಬೇಕಾದ ಇಂಧನ
● ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ಕೊಟ್ಟನು
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ಸಾಲದಿಂದ ಹೊರಬನ್ನಿ : ಕೀಲಿಕೈ #2
ಅನಿಸಿಕೆಗಳು