ಅನುದಿನದ ಮನ್ನಾ
ದೇವರ ಕನ್ನಡಿ
Tuesday, 10th of September 2024
1
0
151
Categories :
ಕ್ರಿಸ್ತನಲ್ಲಿ ನಮ್ಮ ಗುರುತು (our identity in Christ)
ಇತ್ತೀಚಿನ ಸಂಶೋಧನಾ ಪ್ರಕಾರ ಒಬ್ಬ ಸ್ತ್ರೀಯು ದಿನಕ್ಕೆ ಸುಮಾರು 38 ಸಾರಿಗಿಂತಲೂ ಹೆಚ್ಚಾಗಿ ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುತ್ತಾಳಂತೆ. ಪುರುಷನು ಕೂಡ ಇದರಲ್ಲಿ ಹಿಂದೆನೂ ಉಳಿದಿಲ್ಲ ಅವನು ಕೂಡ ದಿನಕ್ಕೆ 18 ಸಾರಿಗಿಂತ ಹೆಚ್ಚಾಗಿ ತನ್ನ ಮುಖವನ್ನು ನೋಡಿಕೊಳ್ಳುತ್ತಾನಂತೆ.
ಹೇಗೂ ಸ್ತ್ರೀಯರು ಪುರುಷರಿಗಿಂತ ಹೊರನೊಟದ ಕುರಿತು ಹೆಚ್ಚು ಸೂಕ್ಷ್ಮ ಮನಸ್ಕರಾಗಿರುತ್ತಾರೆ ಎಂದು ಈ ಅಧ್ಯಯನ ಸ್ಪಷ್ಟಪಡಿಸುತ್ತದೆ. ಈ ಸಂಶೋಧನೆಯು ಕೆಲವು ಸಂದರ್ಭಗಳಲ್ಲಿ ಅಷ್ಟೇನು ಸರಿ ಇಲ್ಲ ಎಂದು ಕಾಣಬಹುದಾದರೂ ಸಾಮಾನ್ಯವಾಗಿ ಹೇಳುವುದಾದರೆ ನಮ್ಮಲ್ಲಿ ಅನೇಕರು ದಿನವಿಡೀ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುತ್ತಾರೆ. ಕೆಲವು ಸಂದರ್ಭಕ್ಕೆ ತಕ್ಕ ಹಾಗೆ ಇದನ್ನು ಹೀಗೆ ನಾವು ನೋಡುತ್ತೇವೆ ಎಂಬುದಂತೂ ಖಚಿತ. ವರ್ಷಾನುಗಟ್ಟಲೆಯಿಂದ ಕನ್ನಡಿ ಏನನ್ನು ಹೇಳುತ್ತದೆ ಅದನ್ನು ನಂಬುವುದನ್ನು ನಾವು ಕಲಿತಿದ್ದೇವೆ. ಏನಾದರೂ ಸರಿ ಇಲ್ಲ ಎನಿಸುತ್ತಿದ್ದರೆ ತಕ್ಷಣವೇ ಅದನ್ನು ಸರಿಪಡಿಸಿಕೊಳ್ಳಲು ಧಾವಿಸುತ್ತೇವೆ.
ಸೆಲ್ಫಿಗಳ ಫಿಲ್ಟರ್ಗಳ ಈ ಜಗತ್ತಿನಲ್ಲಿ ನಿಜವಾದ ಸೌಂದರ್ಯ ಯಾವುದು ಎಂಬುದನ್ನು ಹುಡುಕುವುದೇ ಒಂದು ದೊಡ್ಡ ವಿಷಯ ಎನ್ನುವ ವಿಕೃತ ವ್ಯಾಖ್ಯಾನ ನೀಡುವ ದುಃಖಕರ ಪರಿಸ್ಥಿತಿಗೆ ನಾವು ಬಂದಿದ್ದೇವೆ. ಇತ್ತೀಚಿನ ಗ್ಲಾಮ್ -ಮ್ಯಾಗಳು ನಮಗೆ ಹೇಳುವುದು ನಿಜವಾದ ಸೌಂದರ್ಯವಲ್ಲ. ಅಂತಹ ಸೌಂದರ್ಯವೋ ಕೇವಲ ಚರ್ಮದ ಕುರಿತು ಹೇಳುತ್ತಿದೆ ಅಷ್ಟೇ
ಇದರಿಂದ ಯಾರಿಗೂ ಪ್ರಯೋಜನವಿಲ್ಲ. ನಾವು ನಮ್ಮ ಮನಸ್ಸನ್ನು ಸರಿಪಡಿಸಿಕೊಂಡು ಸತ್ಯವೇದ ಹೇಳುವ ನಿಜವಾದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬೇಕು.
"ಜಡೆಹೆಣೆದುಕೊಳ್ಳುವದು ಚಿನ್ನದ ಒಡವೆಗಳನ್ನು ಇಟ್ಟುಕೊಳ್ಳುವದು ವಸ್ತ್ರಗಳನ್ನು ಧರಿಸಿಕೊಳ್ಳುವದು ಈ ಮೊದಲಾದ ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು."(1 ಪೇತ್ರನು 3:4).
ಈ ಮೇಲಿನ ದೇವರ ವಾಕ್ಯವು ಕೇವಲ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಅನ್ವಯಿಸುತ್ತದೆ ಎಂದು ನಾನು ನಂಬುತ್ತೇನೆ. ಎಂದಿಗೂ ಜನರ ಹೊರನೋಟದಿಂದ ಅವರನ್ನು ಅಳೆಯಬೇಡಿರಿ. ಅಲ್ಲದೆ ನಿಯತಕಾಲಿಕೆಗಳು ನೀವು ಈ ರೀತಿಯದ್ದೇ ಬಾಹ್ಯರೂಪವನ್ನು ಹೊಂದಿರಬೇಕು ಎಂದು ಪ್ರಚೋದಿಸುವ ನೋಟವನ್ನು ನೀವು ಹೊಂದಿರದೆ ಇದ್ದರೆ ನೀವು ತಿರಸ್ಕರಿಸಲ್ಪಟ್ಟವರು ಎಂದು ಭಾವಿಸಬೇಡಿರಿ. ನಿಮ್ಮಲ್ಲಿರುವ ಸಂವಹನಶಕ್ತಿ, ಸೌಮ್ಯತೆ, ದಯೆ ಈ ಗುಣಗಳ ಮೇಲೆ ಲಕ್ಷ ಇಡಿರಿ. ಈ ಗುಣಗಳು ಚರ್ಮದ ಸೌಂದರ್ಯ ಕ್ಕಿಂತಲೂ ಹೆಚ್ಚು ಅಮೂಲ್ಯವಾದದ್ದು.
ಯಾಕೋಬ 1:23 ದೇವರ ವಾಕ್ಯವೇ ಕನ್ನಡಿಯಾಗಿದೆ ಎಂದು ಹೇಳುತ್ತದೆ. ಪ್ರತಿದಿನ ದೇವರ ಈ ಕನ್ನಡಿಯಲ್ಲಿ ಒಂದು ನೋಟವನ್ನು ನೋಡಿರಿ. ಆತನ ವಾಕ್ಯವು ನಿಮ್ಮನ್ನು ಕುರಿತು ಏನನ್ನು ಹೇಳುತ್ತಿದೆ ಎಂಬುದನ್ನು ಗಮನಿಸಿ.
"ನಾವು ಆತನ ನಿರ್ಮಾಣ; ಸತ್ಕಾರ್ಯಗಳನ್ನು ಮಾಡುವದಕ್ಕಾಗಿಯೇ ಕ್ರಿಸ್ತ ಯೇಸುವಿನಲ್ಲಿ ಸೃಷ್ಟಿಸಲ್ಪಟ್ಟೆವು. ನಾವು ಸತ್ಕಾರ್ಯಗಳನ್ನು ನಡಿಸುವವರಾಗಿ ಬದುಕಬೇಕೆಂದು ದೇವರು ನಮ್ಮನ್ನು ಮೊದಲೇ ನೇವಿುಸಿದನು." ಎಂದು ಎಫೆಸದವರಿಗೆ 2:10 ಹೇಳುತ್ತದೆ.
"ನನ್ನ ಅಂತರಿಂದ್ರಿಯಗಳನ್ನು ಉಂಟುಮಾಡಿದವನೂ ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದವನೂ ನೀನಲ್ಲವೋ? ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ."(ಕೀರ್ತನೆಗಳು 139:13-14)
ನೀವು ಇಂತಹ ದೇವರ ವಾಕ್ಯಗಳನ್ನು ನಂಬಿಕೆಯಿಂದ ಸ್ವೀಕರಿಸಬೇಕು ಮತ್ತು ಅವುಗಳಲ್ಲಿ ಕಾರ್ಯಗತರಾಗಬೇಕು. ಆಗ ಇದು ನಿಮ್ಮ ಆಂತರ್ಯದ ಸೌಂದರ್ಯವನ್ನು ನವೀಕರಿಸುತ್ತಾ ಬರುತ್ತದೆ.
ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ವಿಶಿಷ್ಟವಾದ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ನೀಡಲಾಗಿದೆ. ಆದ್ದರಿಂದ ನಾವೇಕೆ ಅವುಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಪ್ರಯತ್ನಿಸಬಾರದು? ಹೀಗಾದರೆ ಈ ಅಂಧಕಾರದ ಲೋಕದಲ್ಲಿ ನೀವು ಬೆಳಗಲಾರಂಭಿಸುವಿರಿ. ಆದ್ದರಿಂದ ಕಪ್ಪೆ ಚಿಪ್ಪಿನೊಳಗೆ ಬಚ್ಚಿಟ್ಟುಕೊಳ್ಳಲು ಹೋಗದೆ, ಹೊರಗೆ ಬಂದು ಯೇಸುವಿಗಾಗಿ ಹೊಳೆಯುವ ನಕ್ಷತ್ರಗಳಾಗಿರಿ.
ಈಗ, ನಮ್ಮ ದೇಹವು ಪವಿತ್ರಾತ್ಮನಿಗೆ ಗರ್ಭಗುಡಿಯಾಗಿದೆ ಎಂದು ನಾನು ನಂಬುತ್ತೇನೆ. ಹಾಗಾಗಿ ಆರೋಗ್ಯಕರ ಆಹಾರ ಪದ್ಧತಿ ಮತ್ತು ವ್ಯಾಯಾಮದ ಮೂಲಕ ನಾವು ಖಂಡಿತವಾಗಿಯೂ ನಮ್ಮ ದೇಹವನ್ನು ಸರಿಯಾಗಿ ನೋಡಿಕೊಳ್ಳಬೇಕು. ಅಲ್ಲದೇ ನಾವು ಯೋಗ್ಯವಾದ ರೀತಿಯಲ್ಲಿ ಉಡುಪುಗಳನ್ನು ಅದಕ್ಕೆ ತೊಡಿಸಬೇಕು.ಆದರೆ ಅದು ನಿಮ್ಮ ಯೋಗ್ಯತೆ ಮತ್ತು ಸೌಂದರ್ಯವನ್ನು ವ್ಯಾಖ್ಯಾನಿಸುವದಿಲ್ಲ. ದೇವರು ನಿನ್ನನ್ನು ಕುರಿತು ಏನನ್ನು ಹೇಳುತ್ತಾನೋ ಅದುವೇ ನಿಜವಾಗಿ ನೀನಾಗಿದ್ದಿಯ. ದೇವರ ಕನ್ನಡಿ ಎಂದಿಗೂ ಸುಳ್ಳಾಡದು.
ಪ್ರಾರ್ಥನೆಗಳು
ತಂದೆಯೇ ಯೇಸುನಾಮದಲ್ಲಿ ನೀವು ನನ್ನನ್ನು ನೋಡುವ ರೀತಿಯಲ್ಲಿಯೇ ನನ್ನನ್ನು ನಾನು ನೋಡಿಕೊಳ್ಳುವಂತೆ ಸಹಾಯ ಮಾಡಿರಿ.
ದೇವರಾತ್ಮನೇ ನಿಮ್ಮ ವಾಕ್ಯದಲ್ಲಿ ನೀವು ನನ್ನ ಕುರಿತು ನನ್ನ ಗುರುತನ್ನು ಮತ್ತು ಮೌಲ್ಯವನ್ನು ಪ್ರಕಟಿಸಿರುವುದನ್ನು ನಾನು ಕಂಡುಕೊಳ್ಳುವಂತೆ ನನ್ನ ಕಣ್ಣುಗಳನ್ನು ಯೇಸು ನಾಮದಲ್ಲಿ ತೆರೆಯಿರಿ.
Join our WhatsApp Channel
Most Read
● ಬೀಜದಲ್ಲಿರುವ ಶಕ್ತಿ -2● ಕರ್ತನ ಆಲೋಚನೆಯನ್ನು ಕೇಳಬೇಕಾದ ಅಗತ್ಯತೆ
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
● ಅಲೌಖಿಕತೆಯನ್ನು ಬೆಳೆಸಿಕೊಳ್ಳುವುದು
● ದಿನ 38:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಪುರುಷರು ಏಕೆ ಪತನಗೊಳ್ಳುವರು -1
ಅನಿಸಿಕೆಗಳು