ಅನುದಿನದ ಮನ್ನಾ
ಮಾತಿನಲ್ಲಿರುವ ಶಕ್ತಿ
Sunday, 20th of October 2024
1
0
190
Categories :
ಮಾನಸಿಕ ಆರೋಗ್ಯ (Mental Health)
"ಜೀವ ಮತ್ತು ಮರಣಗಳು ನಾಲಿಗೆಯ ವಶ, ವಚನಪ್ರಿಯರು ಅದರ ಫಲವನ್ನು ಅನುಭವಿಸುವರು"(ಜ್ಞಾನೋ 18:2)
ನಮ್ಮ ಮಾತುಗಳು ನಂಬಲಾಗದ ತೂಕವನ್ನು ಹೊಂದಿರುತ್ತವೆ. ನಾವು ಮಾತನಾಡುವ ಪ್ರತಿಯೊಂದು ವಾಕ್ಯವು ಮೇಲಕ್ಕೆತ್ತಲು ಅಥವಾ ಕೆಡವಲು, ಪ್ರೋತ್ಸಾಹಿಸಲು ಅಥವಾ ನಿರುತ್ಸಾಹಗೊಳಿಸಲು, ಭರವಸೆ ಅಥವಾ ಹತಾಶೆಯನ್ನು ತರುವಷ್ಟು ಶಕ್ತಿಯನ್ನು ಹೊಂದಿದೆ. ವಾಸ್ತವವಾಗಿ, ನಮ್ಮ ಮಾತುಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ, ನಾಲಿಗೆಯು ಜೀವನ ಮತ್ತು ಮರಣ ಎರಡನ್ನೂ ತರಲು ಶಕ್ತವಾಗಿದೆ ಎಂದು ಸತ್ಯವೇದ ವಿವರಿಸುತ್ತದೆ. ನಾವು ನಮ್ಮ ಮಾತಿನಿಂದಾಗುವ ಪರಿಣಾಮದ ಕುರಿತು ವಿಶೇಷವಾಗಿ ನಾವು ಕಷ್ಟದ ಸಮಯವನ್ನು ಹಾದುಹೋಗುವಾಗ ನಾವು ಎಷ್ಟು ಬಾರಿ ಯೋಚಿಸಿದ್ದೇವೆ? ಹೋರಾಟದ ಕ್ಷಣಗಳಲ್ಲಿ, ನಮ್ಮ ಬಾಯಿಂದ ಹೊರಬರುವ ಮಾತುಗಳು ಸಾಮಾನ್ಯವಾಗಿ ನಮ್ಮ ಹೃದಯದ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಮತ್ತು ನಾವು ಜಾಗರೂಕರಾಗಿರದಿದ್ದರೆ, ನಮ್ಮ ಭಾವನಾತ್ಮಕ ಮತ್ತು ಆತ್ಮೀಕ ಹೋರಾಟಗಳಿಂದ ನಮ್ಮನ್ನು ಮೇಲಕ್ಕೆತ್ತುವ ಬದಲು ಆಳವಾದ ಪ್ರಪಾತಕ್ಕೆ ಬೀಳಿಸುವ ಮಾತುಗಳನ್ನೇ ನಾವು ಮಾತನಾಡಬಹುದು.
ಸತ್ಯವೇದದಲ್ಲಿ ಪ್ರಬಲ ಪ್ರವಾದಿಗಳಲ್ಲಿ ಒಬ್ಬನಾದ ಎಲೀಯನು ತನ್ನ ಜೀವನದಲ್ಲಿ ಹತಾಶೆಯ ಆಳವಾದ ಕ್ಷಣವನ್ನು ಅನುಭವಿಸಿದನು. ಅಗಾಧವಾದ ಒತ್ತಡ ಮತ್ತು ಅಪಾಯವನ್ನು ಎದುರಿಸಿದ ನಂತರ, ಎಲೀಯನು ಸಂಪೂರ್ಣವಾಗಿ ಸೋಲನ್ನು ಅನುಭವಿಸುತ್ತಾ ಅರಣ್ಯಕ್ಕೆ ಓಡಿಹೋದನು. ಈ ಸಮಯದಲ್ಲಿ ಅವನು ದೇವರಿಗೆ ಮಾಡಿದ ಪ್ರಾರ್ಥನೆಯು ಆಶ್ಚರ್ಯಕರವಾಗಿದೆ: ಅವನು, “ಯೆಹೋವನೇ ನನಗೆ ಸಾಕಾಯಿತು, ನನ್ನ ಪ್ರಾಣವನ್ನು ತೆಗೆದುಬಿಡು. ನಾನು ನನ್ನ ಪೂರ್ವಿಕರಿಗಿಂತ ಉತ್ತಮನಲ್ಲ” ಎಂದು ದೇವರನ್ನು ಪ್ರಾರ್ಥಿಸಿ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆ ಮಾಡಿದನು." (1 ಅರಸುಗಳು 19:4). ಅದ್ಭುತವಾದ ರೀತಿಯಲ್ಲಿ ದೇವರ ಶಕ್ತಿಯನ್ನು ಕಂಡಿದ್ದ ಎಲೀಯನು, ಅವನ ಹೃದಯವು ಖಿನ್ನತೆಯಿಂದ ಭಾರವಾದಾಗ ಹತಾಶೆಯ ಮತ್ತು ಸೋಲಿನ ಮಾತುಗಳನ್ನು ಹೇಳಿದನು. ಅವನ ಮಾತುಗಳು ಅವನ ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.
ಇದೇ ರೀತಿಯ ಸಂದರ್ಭಗಳಲ್ಲಿ ನಾವು ಎಷ್ಟು ಬಾರಿ ನಮ್ಮನ್ನು ನಾವು ನೋಡಿಕೊಳ್ಳಬಹುದು? ಜೀವನವು ಕಠಿಣವಾದಾಗ, ನಮ್ಮ ಪ್ರಾರ್ಥನೆಗಳಿಗೆ ಉತ್ತರ ಬರುತ್ತಿಲ್ಲ ಎಂದು ತೋರಿದಾಗ ಅಥವಾ ಸಂದರ್ಭಗಳ ಭಾರದಲ್ಲಿ ನಾವು ಮುಳುಗಿದಾಗ, ನಮ್ಮ ಮಾತುಗಳು ಬದಲಾಗಲು ಪ್ರಾರಂಭಿಸುತ್ತವೆ. ನಂಬಿಕೆ ಮತ್ತು ಭರವಸೆಯ ಮಾತುಗಳನ್ನು ಹೇಳುವ ಬದಲು, ನಾವು ವೈಫಲ್ಯದ ಮಾತುಗಳನ್ನು ಹೇಳಲು ಪ್ರಾರಂಭಿಸುತ್ತೇವೆ: "ನಾನು ಇನ್ನು ಮುಂದೆ ಇದನ್ನು ಮಾಡಲು ಸಾಧ್ಯವಿಲ್ಲ," "ಈ ವಿಷಯಗಳು ಎಂದಿಗೂ ಉತ್ತಮಗೊಳ್ಳುವುದಿಲ್ಲ," ಅಥವಾ "ನಾನು ನಿಷ್ಪ್ರಯೋಜಕನಾಗಿದ್ದೇನೆ." ಇವು ಕೇವಲ ಮಾತುಗಳಲ್ಲ - ಅವು ನಮ್ಮನ್ನು ನಿರುತ್ಸಾಹ ಮತ್ತು ಹತಾಶೆಯ ಒಳಗೆ ಆಳವಾಗಿ ಮುಳುಗಿಸುವ ಘೋಷಣೆಗಳಾಗಿವೆ.
ಸತ್ಯವೇದವು ನಮ್ಮ ಮಾತುಗಳಲ್ಲಿ ಇರುವ ಅಗಾಧ ಶಕ್ತಿಯನ್ನು ನಮಗೆ ನೆನಪಿಸುತ್ತದೆ. ಜ್ಞಾನೋಕ್ತಿ 18:21 ಹೇಳುತ್ತದೆ, "ನಾಲಿಗೆಗೆ ಜೀವ ಮತ್ತು ಮರಣದ ಶಕ್ತಿಯಿದೆ ಮತ್ತು ವಚನ ಪ್ರಿಯರು ಅದರ ಫಲವನ್ನು ತಿನ್ನುತ್ತಾರೆ." ಎಂದು. ಇದರರ್ಥ ನಾವು ಹೇಳುವ ವಿಷಯಗಳು ಇತರರಿಗೆ ಮಾತ್ರವಲ್ಲ, ನಮಗೂ ಸಹ ಜೀವವನ್ನು ತರಬಹುದು ಅಥವಾ ಮರಣವನ್ನೂ ತರಬಹುದು - . ನಾವು ವೈಫಲ್ಯತೆಯ ಮಾತುಗಳನ್ನು ಮಾತನಾಡುವಾಗ, ನಾವು ಹೆಚ್ಚಾಗಿ ಸೋಲನ್ನು ಅನುಭವಿಸುತ್ತೇವೆ. ಆದರೆ ನಾವು ನಂಬಿಕೆಯ ಮಾತುಗಳನ್ನು ಮಾತನಾಡುವಾಗ, ಕತ್ತಲೆಯ ಕ್ಷಣಗಳಲ್ಲಿಯೂ ಸಹ, ನಮ್ಮ ಪರಿಸ್ಥಿತಿಗಳ ಮೇಲೆ ದೇವರ ಜೀವ ನೀಡುವ ಶಕ್ತಿಯು ಪ್ರವೇಶಿಸಲು ಬಾಗಿಲು ತೆರೆಯುತ್ತೇವೆ.
ಇದರ ಕುರಿತು ಸ್ವಲ್ಪ ಯೋಚಿಸಿ : ದೇವರು ಜಗತ್ತನ್ನು ಸೃಷ್ಟಿಸಿದಾಗ, ಆತನು ಅದನ್ನು ತನ್ನ ಬಾಯ ಮಾತುಗಳಿಂದ ಉಂಟು ಮಾಡಿದನು. ಆತನು "ಬೆಳಕುಂಟಾಗಲಿ ಎನ್ನಲು ಬೆಳಕುಂಟಾಯಿತು " . ನಮ್ಮ ಮಾತುಗಳು ಕೇವಲ ನಿಷ್ಫಲವಾದ ಶಬ್ದಗಳಲ್ಲ-ಅವುಗಳು ಸೃಷ್ಟಿಸುವಂತಹ ಶಕ್ತಿಯನ್ನು ಒಯ್ಯುತ್ತವೆ. ನಾವು ದೇವರ ವಾಗ್ದಾನಗಳಿಗನುಸಾರ ಮಾತನಾಡುವಾಗ, ನಾವು ಆತನ ಸತ್ಯವನ್ನು ಒಪ್ಪಿಕೊಳ್ಳುತ್ತೇವೆ ಮತ್ತು ಆತನ ಶಕ್ತಿಯನ್ನು ನಮ್ಮ ಜೀವನದಲ್ಲಿ ಕಾರ್ಯ ಮಾಡಲು ಅನುಮತಿಸುತ್ತೇವೆ. ಆದರೆ ನಾವು ನಕಾರಾತ್ಮಕವಾಗಿ ಮಾತನಾಡುವಾಗ, ನಾವು ಸೈತಾನನ ಸುಳ್ಳನ್ನು ಒಪ್ಪುವವರಾಗುತ್ತೇವೆ ಮತ್ತದು ಭಯ, ಅನುಮಾನ ಮತ್ತು ಹತಾಶೆಯಿಂದ ನಮ್ಮನ್ನು ಬಂಧಿಸಲು ಅವಕಾಶ ನೀಡುತ್ತದೆ.
ವಿಶೇಷವಾಗಿ ಸಂಕಟಗಳ ಸಮಯದಲ್ಲಿ, ನಮ್ಮ ನಾಲಿಗೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಖಿನ್ನತೆ, ಆತಂಕ ಮತ್ತು ಒತ್ತಡಗಳು ಹೆಚ್ಚಾಗಿ ನಾವು ಮಾತನಾಡುವ ವಿಧಾನವನ್ನು ಬದಲಾಯಿಸುತ್ತದೆ. ನಾವು ನಮ್ಮ ನೋವನ್ನು ಮಾತಿನಲ್ಲಿ ವ್ಯಕ್ತಪಡಿಸಲು ಪ್ರಾರಂಭಿಸಬಹುದು ಆದರೆ ನಾವು ಹೆಚ್ಚು ನಕಾರಾತ್ಮಕ ವಿಷಯಗಳನ್ನೇ ಹೇಳುತ್ತೇವೆ, ಅದರ ಮುಖಾಂತರ ನಾವು ಆ ನಕಾರಾತ್ಮಕತೆಯ ಕಂದಕಕ್ಕೆ ಹೋಗುತ್ತೇವೆ ಎಂದು ನಾವು ಆಗ ತಿಳಿದುಕೊಳ್ಳುವುದಿಲ್ಲ. ಆದರೆ ನಮ್ಮ ಭಾವನೆಗಳು ನಮ್ಮನ್ನು ವಿರುದ್ಧ ದಿಕ್ಕಿನಲ್ಲಿ ಎಳೆಯುತ್ತಿದ್ದರೂ ಸಹ, ನಮ್ಮ ಮಾತುಗಳನ್ನು ಬದಲಾಯಿಸಲು ನಾವು ಜಾಗೃತ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ಎಲ್ಲವೂ ಸತ್ತಂತೆ ಭಾಸವಾಗಿದ್ದರೂ ಸಹ ಜೀವವನ್ನು ಮಾತನಾಡುವುದು ಬಹಳ ಮುಖ್ಯ.ಇಲ್ಲದನ್ನು ಇರುವುದಾಗಿ ಘೋಷಿಸುವ ರೀತಿ ಮಾತನಾಡಬೇಕು . ಇದು ಎಲ್ಲವೂ ಸರಿಯಾಗಿದೆ ಎಂದು ನಟಿಸುವಂತದ್ದರ ಕುರಿತು ಹೇಳದೇ - ಇದು ನಮ್ಮ ಮಾತುಗಳನ್ನು ದೇವರ ವಾಗ್ದಾನಗಳೊಂದಿಗೆ ಅನುಕರಿಸಿ ಘೋಷಿಸುವ ಕುರಿತ್ತದ್ದಾಗಿದೆ. ಆತನ ವಾಕ್ಯವು ನಮ್ಮ ಪರಿಸ್ಥಿತಿಗಳಿಗಿಂತಲೂ ಹೆಚ್ಚು ಶಕ್ತಿಯುತವಾಗಿದೆ ಎಂದು ನಂಬುವುದಾಗಿದೆ.
ನಿಮ್ಮ ಜೀವನ ಮತ್ತು ನಿಮ್ಮ ಪರಿಸ್ಥಿತಿಯ ಕುರಿತು ನೀವು ಮಾತನಾಡುತ್ತಿರುವ ಮಾತುಗಳನ್ನು ಗಮನಿಸಲು ಇಂದು ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿಮ್ಮ ಮಾತುಗಳು ಜೀವದಿಂದ ತುಂಬಿವೆಯೇ ಅಥವಾ ಅವು ನಿಮ್ಮ ಪರಿಸ್ಥಿತಿಗಳ ಕುರಿತು ಮರಣವನ್ನು ಹೇಳುತ್ತಿದೆಯೇ? ನಿಮಗೆ ಇಷ್ಟವಿಲ್ಲದಿದ್ದರೂ ಸಹ, ನಂಬಿಕೆ, ಭರವಸೆ ಮತ್ತು ಪ್ರೀತಿಯ ಮಾತುಗಳನ್ನು ಉದ್ದೇಶಪೂರ್ವಕವಾಗಿ ಮಾತನಾಡಲು ನಿಮಗೆ ನೀವೇ ಸವಾಲು ಒಡ್ಡಿಕೊಳ್ಳಿ . ನೆನಪಿಡಿ, ನಿಮ್ಮ ಮಾತುಗಳು ನಿಮ್ಮ ವಾಸ್ತವವನ್ನು ರೂಪಿಸುವ ಶಕ್ತಿಯನ್ನು ಹೊಂದಿವೆ.
ನಿಮ್ಮ ಜೀವನದ ಮೇಲೆ ದೇವರ ವಾಗ್ದಾನಗಳನ್ನು ಘೋಷಿಸುವ ಅಭ್ಯಾಸವನ್ನು ಮಾಡಿಕೊಳ್ಳಿ. ನೀವು ಬಲಹೀನರಾಗಿರುವಾಗ, "ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವನ್ನೂ ಮಾಡಬಲ್ಲೆ" ಎಂದು ಹೇಳಿ (ಫಿಲಿಪ್ಪಿ 4:13). ನೀವು ಚಿಂತಿತರಾಗಿರುವಾಗ, "ಎಲ್ಲಾ ಗ್ರಹಿಕೆಯನ್ನು ಮೀರಿದ ದೇವರ ಶಾಂತಿಯು ನನ್ನ ಹೃದಯ ಮತ್ತು ಮನಸ್ಸನ್ನು ಕಾಪಾಡುತ್ತದೆ" ಎಂದು ಘೋಷಿಸಿ (ಫಿಲಿಪ್ಪಿ 4:7). ನಿಮ್ಮ ಮಾತನ್ನು ಮಾರ್ಗದರ್ಶಿಸಲು ದೇವರ ವಾಕ್ಯದ ಸತ್ಯಕ್ಕೆ ಅನುವು ಮಾಡಿಕೊಡಿ.
ಮುಂದಿನ ಏಳು ದಿನಗಳವರೆಗೆ, ವಿಶೇಷವಾಗಿ ಕಷ್ಟಕರ ಸಮಯಗಳಲ್ಲಿ ನೀವು ಮಾತನಾಡುವ ಮಾತುಗಳನ್ನು ಪ್ರಜ್ಞಾಪೂರ್ವಕವಾಗಿ ಮೇಲ್ವಿಚಾರಣೆ ಮಾಡಿ. ಪ್ರತಿ ಬಾರಿಯೂ ನೀವು ಋಣಾತ್ಮಕ ಅಥವಾ ನಿರುತ್ಸಾಹಗೊಳಿಸುವಂತಹದ್ದನ್ನು ಹೇಳುತ್ತಿರುವಾಗ, ಅದನ್ನು ನಿಲ್ಲಿಸಿ ಮತ್ತು ದೇವರವಾಕ್ಯದಿಂದ ಧನಾತ್ಮಕ ಘೋಷಣೆಯೊಂದಿಗೆ ಬದಲಾಯಿಸಿ. ಕಾಲಾನಂತರದಲ್ಲಿ, ನಿಮ್ಮ ಮಾತುಗಳಲ್ಲಿನ ಈ ಬದಲಾವಣೆಯು ನಿಮ್ಮ ಸವಾಲುಗಳನ್ನು ನೀವು ಅನುಭವಿಸುವ ವಿಧಾನವನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ನೀವು ಗಮನಿಸಿ ನೋಡಬಹುದು.
ಪ್ರಾರ್ಥನೆಗಳು
ಕರ್ತನೇ, ನನ್ನ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಲು ಮತ್ತು ನಾನು ಎದುರಿಸುವ ಪ್ರತಿಯೊಂದು ಸನ್ನಿವೇಶದಲ್ಲಿಯೂ ಜೀವವನ್ನೇ ಮಾತನಾಡಲು ನನಗೆ ಯೇಸುನಾಮದಲ್ಲಿ ಸಹಾಯ ಮಾಡಿ. ನನ್ನ ಮಾತುಗಳಲ್ಲಿರುವ ಶಕ್ತಿಯನ್ನು ಯೇಸುನಾಮದಲ್ಲಿ ನನಗೆ ನೆನಪಿಸಿ ಮತ್ತು ನನ್ನ ಜೀವನದಲ್ಲಿ ವಿಶೇಷವಾಗಿ ವಿಷಯಗಳು ಕಠಿಣವಾದಾಗ ನಿಮ್ಮ ಭರವಸೆಗಳನ್ನು ಘೋಷಿಸಲು ನನಗೆ ಮಾರ್ಗದರ್ಶನ ನೀಡಿ . ನಾನು ನಿನ್ನ ವಾಕ್ಯವನ್ನೂ ಮತ್ತು ಅದು ತರುವ ಜೀವವನ್ನೂ ಯೇಸುನಾಮದಲ್ಲಿ ನಂಬುತ್ತೇನೆ. ಆಮೆನ್.
Join our WhatsApp Channel
Most Read
● ಇನ್ನು ಸಾವಕಾಶವಿಲ್ಲ.● ದಿನ 02 : 40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ದೇವರಿಗಾಗಿ ದಾಹದಿಂದಿರುವುದು
● ಉತ್ತೇಜನಕಾರಿಯಾಗಿ ವಿವೇಕ ಮತ್ತು ಪ್ರೀತಿ
● ಕರ್ತನಾದ ಯೇಸುವಿನ ಮುಖಾಂತರ ಕೃಪೆ
● ಮನುಷ್ಯನ ಹೃದಯ
● ನಿಮ್ಮ ಆತ್ಮಿಕ ಬಲವನ್ನು ನವೀಕರಿಸಿ - 1
ಅನಿಸಿಕೆಗಳು