ನಮ್ಮ ಜೀವಿತವನ್ನು ಕುರಿತು ಸತ್ಯವೇದವು ಲೋಕ ಬೋಧನೆಗೆ ವಿಭಿನ್ನವಾಗಿ ನಮಗೆ ಬೋಧಿಸುತ್ತದೆ
ಮತ್ತು ಹಣಕಾಸಿನ ವಿಚಾರಕ್ಕೆ ಬಂದಾಗ ಇದು ವಿಶೇಷವಾಗಿ ಸತ್ಯವೂ ಹೌದು. ಕ್ರೈಸ್ತರಾಗಿ ನಮಗಿರುವ ಜೀವನದ ಬಹುದೊಡ್ಡ ಪರೀಕ್ಷೆ ಯಾವುದೆಂದರೆ ಅದು ನಾವು ಹಣದ ನಿರ್ವಹಣೆ ಮಾಡುವುದರಲ್ಲಿ ಕ್ರಿಸ್ತನಿಗೆ ತೋರುವ ವಿಧೇಯತೆ. ನಾವು ಹೇಗೆ ಹಣವನ್ನು ಗಳಿಸುತ್ತೇವೆ ಹೇಗೆ ಅದನ್ನು ಖರ್ಚು ಮಾಡುತ್ತೇವೆ ಎಂಬುದನ್ನು ದೇವರು ಮಾತ್ರ ಗಮನಿಸುತ್ತಿರುವುದಿಲ್ಲ ಬದಲಾಗಿ ನಮ್ಮ ಮಕ್ಕಳೂ ಸಹ ನಮ್ಮ ಖರ್ಚು ಮಾಡುವ ಅಭ್ಯಾಸಗಳಿಗೆ ಸಾಕ್ಷಿಗಳಾಗಿರುತ್ತಾರೆ.ನಾವು ಹೇಗೆ ಹಣವನ್ನು ಖರ್ಚು ಮಾಡುತ್ತಿದ್ದೇವೆಯೋ ಅದೇ ನಾವು ಯಾವುದಕ್ಕೆ ನಿಜವಾಗಿ ಪ್ರಾಶಾಸ್ತ್ಯ ಕೊಡುತ್ತಿದ್ದೇವೆ ಎಂಬುದನ್ನು ಪ್ರಕಟಿಸುತ್ತಿರುತ್ತದೆ.
ದೇವರ ವಾಕ್ಯ ಹೇಳುತ್ತದೆ "ನಿನ್ನ ಗಂಟು ಇದ್ದಲ್ಲಿಯೇ ನಿನ್ನ ಮನಸ್ಸೂ ಇರುವದಷ್ಟೆ." ಎಂದು (ಮತ್ತಾಯ 6:21).
ಹಣದ ಬಗ್ಗೆ ನಮ್ಮ ನಡವಳಿಕೆಯೇ ನಮ್ಮ ಹೃದಯ ಎಂಥದ್ದು ಎಂಬುದನ್ನು ಮತ್ತು ಹಣದ ನಿರ್ವಹಣೆ ಮಾಡುವಾಗ ನಮ್ಮ ಹೃದಯದ ವಿಚಾರ ಭಾವ ಎಂತದ್ದಾಗಿರುವುದು ಎಂಬುದನ್ನು ಎತ್ತಿ ತೋರಿಸುತ್ತದೆ.
ಇಂದು ಬಹುತೇಕ ಜನರ ಸಮಸ್ಯೆ ಏನೆಂದರೆ ಅದು ಅವರ ಹೃದಯವು ಅವರ ತಲೆಗೆ ಅಂಟಿಕೊಂಡಿರುವಂತದ್ದು ಮತ್ತು ಆ ತಲೆಯು ಎಂದಿಗೂ ಸತ್ಯವೇದಕ್ಕನುಸಾರವಾಗಿ ಚಿಂತಿಸುವುದೇ ಇಲ್ಲದಿರುವುದು. ಪ್ರವಾದಿಯಾದ ಯೆಶಾಯ ಈ ಕುರಿತು"ಆಹಾರವಲ್ಲದ್ದಕ್ಕೆ ಹಣವನ್ನು ಏಕೆ ವ್ರಯಮಾಡುತ್ತೀರಿ? ತೃಪ್ತಿಗೊಳಿಸದ ಪದಾರ್ಥಕ್ಕೆ ನಿಮ್ಮ ದುಡಿತವನ್ನು ವೆಚ್ಚಮಾಡುವದೇಕೆ? ಕಿವಿಗೊಟ್ಟು ನನ್ನ ಮಾತನ್ನು ಕೇಳಿರಿ, ಒಳ್ಳೇದನ್ನೇ ಉಂಡು ಮೃಷ್ಟಾನ್ನದಲ್ಲಿ ಆನಂದಪಡಿರಿ." ಎಂದು ದೇವರು ಅನ್ನುತ್ತಾನೆ ಎಂದು ಹೇಳುತ್ತಾನೆ. (ಯೆಶಾಯ 55:2)
ವಿವೇಕಯುತವಾಗಿ ಹಣವನ್ನು ಬಳಕೆ ಮಾಡುವಂತದ್ದು ನಿಜಕ್ಕೂ ಒಂದು ಸವಾಲೇ ಸರಿ. ಆದರೆ ಅದರಿಂದಾಗುವ ಉಪಯೋಗವು ಬೆಲೆಕಟ್ಟಲಾಗದಂತದ್ದು. ಹಣವು ಮಾತಾಡಬಲ್ಲದು. ಪ್ರಸಂಗಿ 10:19 ರಲ್ಲಿ ಬರೆದಿರುವಂತೆ "ನಗುವಿಗಾಗಿ ಔತಣವು, ದ್ರಾಕ್ಷಾರಸದಿಂದ ಜೀವನಕ್ಕೆ ಆನಂದವು; ಧನವು ಎಲ್ಲವನ್ನೂ ಒದಗಿಸಿಕೊಡುವದು."
ಹಣವು ನಮ್ಮೊಡನೆ ಮಾತಾಡಬಲ್ಲದು. ಅನೇಕ ವಿಚಾರಗಳನ್ನು ಕುರಿತು ಅದು ಹೇಳಬಲ್ಲದು. ನಿಜಕ್ಕೂ ಹಣವು ಬಹು ಮುಖ್ಯ ಸಂಗತಿಯೆ. ಆಂತರ್ಯದಲ್ಲಿ ನಾವೇನಾಗಿದ್ದೇವೆ ಎಂಬುದನ್ನು ಹಣವು ಬಯಲು ಪಡಿಸುತ್ತದೆ. ಆದ್ದರಿಂದಲೇ ಹಣವು ಕ್ರೈಸ್ತರ ಜೀವಿತದಲ್ಲಿ ಅನೇಕ ಒಳ್ಳೆ ಸಂಗತಿಗಳಿಗೂ ಕಾರಣವಾಗಿದೆ.
ನಾವು ಹಣಕ್ಕಿರುವ ಬಲದ ಪ್ರಕಾರ ನಾವದನ್ನು ಹೇಗೆ ನಿರ್ವಹಿಸುತ್ತಿವೋ ಅದೇ ರೀತಿ ನಮ್ಮನ್ನು ನಾವು ಆತ್ಮಿಕವಾಗಿ ನಿಭಾಯಿಸಲು ಅನುಮತಿಸುತ್ತೇವೆ. ಹಣಕ್ಕೆ ನಮ್ಮನ್ನು ಆತ್ಮೀಕವಾಗಿ ತೀವ್ರವಾಗಿ ಬೆಳೆಯುವಂತೆ ಮಾಡುವ ಹಾಗೆಯೇ ನಮ್ಮನ್ನು ಆತ್ಮಿಕ ಬೆಳವಣಿಗೆಯಲ್ಲಿ ತೀವ್ರವಾಗಿ ಕುಂಠಿತಗೊಳಿಸುವ ಸಾಮರ್ಥ್ಯವು ಅದಕ್ಕಿದೆ.
ಕ್ರೈಸ್ತರಾಗಿ ನಮಗೆ ಸಿಕ್ಕಿರುವ ಲೌಕಿಕ ಸಂಪತ್ತುಗಳನ್ನು ಒಳ್ಳೆಯ ಮನವಾರ್ತೆಯವರಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿಕೊಳ್ಳುವಂಥದ್ದು ಬಹು ಮುಖ್ಯ ಅಂಶವಾಗಿದೆ. ಹಣವೇ ನಮ್ಮ ಮನಸ್ಸನ್ನೂ ಮತ್ತು ದೇವರ ಬಗ್ಗೆ ನಮ್ಮ ಹೃದಯದ ಭಾವವನ್ನು ನಿರ್ಧರಿಸುತ್ತದೆ.ಹಣದೊಂದಿಗೆ ನಮಗಿರುವ ಸಂಬಂಧವೇ ದೇವರೊಂದಿಗೆ ನಮಗಿರುವ ಸಂಬಂಧವೂ ಆಗಿರುತ್ತದೆ.ಅಪೋಸ್ತಲನಾದ ಪೌಲನು ಹೀಗೆ ಬರೆಯುತ್ತಾನೆ "ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿಯೊಂದು ಕೊರತೆಯನ್ನು ನೀಗಿಸುವನು."(ಫಿಲಿಪ್ಪಿಯವರಿಗೆ 4:19). ನಾವು ನಮಗೆ ಬೇಕಾದವುಗಳಿಗಾಗಿ ಕರ್ತನ ಮೇಲೆ ಭರವಸೆ ಇಡುವವರಾಗಿದ್ದು ನಮ್ಮ ಸಂಪತ್ತುಗಳಿಂದ ಆತನನ್ನು ಸನ್ಮಾನಿಸುವವರಾದರೆ ನಿಜವಾಗಿಯೂ ನಾವು ಆ ವಿದೇಯತೆಯಿಂದ ದೊರಕುವ ಸಮೃದ್ಧಿಯನ್ನು ಸಂತುಷ್ಟಿಯನ್ನು ಅನುಭವಿಸುವವರಾಗುತ್ತೇವೆ.
ಸತ್ಯವೇದ ಆಧಾರಿತವಾಗಿ ಹಣದ ನಿರ್ವಹಣೆಯ ಒಂದು ಕೀಲಿ ಕೈ ತತ್ವವವೇನೆಂದರೆ, ಅದು ದಶಮಾಂಶ ಕೊಡುವಂತದ್ದು. ಮಲಾಕಿ 3:10 ರಲ್ಲಿ ದೇವರು ತನ್ನ ಜನರಿಗೆ ಅವರ ಹಣಕಾಸಿನ ವಿಚಾರದಲ್ಲಿ ಆತನನ್ನು ನಂಬಿ ನೋಡುವಂತೆ ಸವಾಲೆಸೆಯುತ್ತಾನೆ. "ನನ್ನ ಆಲಯವು ಆಹಾರಶೂನ್ಯವಾಗದಂತೆ ನೀವು ದಶಮಾಂಶ ಯಾವತ್ತನ್ನೂ ಬಂಡಾರಕ್ಕೆ ತೆಗೆದುಕೊಂಡು ಬನ್ನಿರಿ; ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳ ಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ. "ಎಂದು. ನಾವು ನಮ್ಮೆಲ್ಲಾ ಆದಾಯಗಳಲ್ಲಿ ದೇವರಿಗೆ ಆದ್ಯತೆ ನೀಡಿ ನಮ್ಮೆಲ್ಲಾ ಕೊರತೆಗಳನ್ನು ನೀಗಿಸಲು ಆತನ ಮೇಲೆ ಭರವಸೆ ಇಡುವರಾದರೆ, ನಾವು ಆತನ ಮೇಲಿನ ನಂಬಿಕೆಯನ್ನು ವಿದೇಯತೆಯನ್ನು ಪ್ರದರ್ಶಿಸುವವರಾಗಿದ್ದು ಆತನಿಂದ ದೊರಕುವ ಆಶೀರ್ವಾದಗಳಿಗೆ ನಮ್ಮನ್ನು ನಾವು ಒಪ್ಪಿಸಿಕೊಡುವವರಾಗುತ್ತೇವೆ.
ಸಾಲವನ್ನು ನಿಯಂತ್ರಿಸಲು ಇರುವ ಇನ್ನೊಂದು ತತ್ವವಿದೆ.
"ಬಲ್ಲಿದನು ಬಡವನಿಗೆ ಒಡೆಯ, ಸಾಲಗಾರನು ಸಾಲಕೊಟ್ಟವನಿಗೆ ಸೇವಕ."ಎಂದು ಜ್ಞಾನೋಕ್ತಿಗಳು 22:7 ಎಚ್ಚರಿಸುತ್ತದೆ.ನಾವು ಸಾಲದ ಸುಳಿಯಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟರೆ ನಮ್ಮ ಉದಾರತೆಯ ಸಾಮರ್ಥ್ಯವು ಸೀಮಿತಗೊಂಡು ದೇವರು ನಮ್ಮನ್ನು ನಡೆಸುವಂತಹ ಪ್ರಕ್ರಿಯೆಗೆ ಸ್ಪಂದಿಸಲಾರದವರಾಗಿಬಿಡುತ್ತೇವೆ.ಅದರ ಬದಲಾಗಿ ನಾವು ನಮಗಿರುವುದರಲ್ಲಿಯೇ ಸಂತೃಪ್ತರಾಗಿದ್ದು ನಮ್ಮ ಆದಾಯದ ಮಿತಿಯಲ್ಲಿಯೇ ಖರ್ಚನ್ನು ಮಾಡುವವರಾಗಿರಬೇಕು. ಪೌಲನು ಫಿಲಿಪ್ಪಿ 4:11-12 ರಲ್ಲಿ ಬರೆಯುವಂತೆ "ನನ್ನ ಅಗತ್ಯಗಳ ಕುರಿತಾಗಿ ನಾನು ಇದನ್ನು ಹೇಳುತ್ತಿಲ್ಲ, ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತೃಪ್ತನಾಗಿರುವುದನ್ನು ಕಲಿತುಕೊಂಡಿದ್ದೇನೆ.12ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು. ನಾನು ತೃಪ್ತನಾಗಿದ್ದರೂ, ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ, ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದಿದೆ." ಎಂಬುವಂತೆ ನಾವಿರಬೇಕು.
ಕಟ್ಟಕಡೆಯದಾಗಿ ಹೇಳುವುದೇನೆಂದರೆ, ಹಣವು ನಮ್ಮ ಹೃದಯವನ್ನೂ, ನಮ್ಮ ಪ್ರಾಶಸ್ಯಗಳನ್ನೂ ಪ್ರತಿಬಿಂಬಿಸುತ್ತದೆ. ಕರ್ತನಾದ ಯೇಸುಕ್ರಿಸ್ತನು ದೇವರ ವಿಚಾರಗಳಲ್ಲಿ ಐಶ್ವರ್ಯ ವಂತನಾಗದೇ ಹಣದಲ್ಲಿ ಮಾತ್ರ ಐಶ್ವರ್ಯವಂತನಾಗಿದ್ದವನ ಕುರಿತು ಒಂದು ಸಾಮ್ಯ ಹೇಳುವುದನ್ನು ನಾವು ನೋಡಬಹುದು. (ಲೂಕ 12:16-21) “ಎಲ್ಲಾ ದುರಾಶೆಗಳಿಗೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವುದಿಲ್ಲ” ಎಂದು ಆತನು ನಮ್ಮನ್ನು ಎಚ್ಚರಿಸುತ್ತಾನೆ.
"ಹೀಗಿರುವುದರಿಂದ, ನೀವು ಮೊದಲು ದೇವರ ರಾಜ್ಯವನ್ನೂ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು."(ಮತ್ತಾಯ 6:33)
ಕ್ರೈಸ್ತರಾಗಿ ನಮಗಿರುವ ಸಂಪತ್ತಿನಿಂದ ದೇವರನ್ನು ಸನ್ಮಾನಿಸುವ ಹಾಗೂ ಇತರರಿಗೆ ಆಶೀರ್ವಾದವಾಗಿರುವ ಅವಕಾಶ ನಮಗೆ ಇದೆ. ಆತನು ನಮ್ಮ ಮೇಲೆ ಭರವಸೆ ಇಟ್ಟು ನಮಗೆ ಕೊಟ್ಟಿರುವ ಸಂಪನ್ಮೂಲಗಳಲ್ಲಿ ನಾವು ಒಳ್ಳೆಯ ಮನೆವಾರ್ತೆಯವರಾಗಿದ್ದರೆ ಆತನ ಚಿತ್ತಕ್ಕೆ ವಿದೇಯರಾದವರಿಗೆ ದೊರಕುವ ಬಾಧ್ಯತೆಯನ್ನೂ ಅದ್ಭುತ ಬಿಡುಗಡೆಯನ್ನೂ ನಾವು ಅನುಭವಿಸುವವರಾಗುತ್ತೇವೆ. ಹಣದೊಂದಿಗೆ ನಮಗಿರುವ ಸಂಬಂಧವೇ ದೇವರೊಂದಿಗೆ ನಮಗಿರುವ ಸಂಬಂಧವನ್ನು ಪ್ರತಿಬಿಂಬಿಸುತ್ತದೆ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಂಡಿರೋಣ.
ನಾವು ನಮ್ಮ ಹಣಕಾಸನ್ನು ಬಳಕೆ ಮಾಡುವ ವಿಚಾರಗಳು ಆತನ ನಾಮಕ್ಕೆ ಮಹಿಮೆಯನ್ನು ಉಂಟುಮಾಡಲಿ.
ಪ್ರಾರ್ಥನೆಗಳು
ತಂದೆಯೇ, ನೀನು ನನಗೆ ಅನುಗ್ರಹಿಸಿರುವ ಎಲ್ಲಾ ಸಂಪನ್ಮೂಲಗಳನ್ನು ನಾನು ಚೆನ್ನಾಗಿ ನಿರ್ವಹಿಸುವಂತ ಕೃಪೆಯನ್ನು ಯೇಸುನಾಮದಲ್ಲಿ ನನಗೆ ಅನುಗ್ರಹಿಸು. ಆಮೆನ್.
Join our WhatsApp Channel
Most Read
● ಕೊಡುವ ಕೃಪೆ - 1● ನೆಪ ಹೇಳುವ ಕಲೆ
● ದಿನ 05:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಅತ್ಯುನ್ನತವಾದ ರಹಸ್ಯ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಇಂತಹ ಪರಿಶೋಧನೆಗಳು ಏಕೆ?
● ದೇವರ ಪ್ರೀತಿಯನ್ನು ಅನುಭವಿಸುವುದು
ಅನಿಸಿಕೆಗಳು