ಅನುದಿನದ ಮನ್ನಾ
ದಿನ 11:40 ದಿನಗಳ ಉಪವಾಸ ಪ್ರಾರ್ಥನೆ.
Monday, 2nd of December 2024
6
2
140
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ಕೃಪೆಯಿಂದ ಮೇಲಕ್ಕೆತ್ತಲ್ಪಡುವುದು.
"ಆತನು ದೀನನನ್ನು ಧೂಳಿಯಿಂದ ಎತ್ತಿ ದರಿದ್ರನನ್ನು ತಿಪ್ಪೆಯಿಂದ ಎಬ್ಬಿಸಿ ಪ್ರಭುಗಳೊಂದಿಗೆ ಕುಳ್ಳಿರಿಸಿ ಅವನಿಗೆ ಮಹಿಮಾಸನವನ್ನು ಬಾಧ್ಯತೆಯಾಗಿ ಅನುಗ್ರಹಿಸುವವನಾಗಿದ್ದಾನೆ... (1 ಸಮುವೇಲನು 2:8 ).
ಕೃಪೆಯಿಂದ ಮೇಲೇಕ್ಕೆತ್ತುವುದು ಎಂಬುದನ್ನು ದೈವೀಕವಾಗಿ ಉದ್ದರಿಸಲ್ಪಡುವುದು ಎಂದೂ ಹೇಳಬಹುದು.ನೀವು ನಿಮ್ಮ ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಜೀವನದ ಸಫಲತೆ ವಿಚಾರದಲ್ಲಿ ನೀವು ಯಾವ ಹಂತದಲ್ಲಿದ್ದರೂ ಸರಿಯೇ,ಇನ್ನೂ ಅಧಿಕವಾದ ಅತ್ಯುತ್ತಮವಾದ ಹಂತವು ನಿಮಗಾಗಿ ಇಡಲ್ಪಟ್ಟಿದೆ. ಪರಿಪೂರ್ಣವಾದ ಆ ದಿನದವರೆಗೂ ನಮ್ಮ ಪಥವು ಇನ್ನೂ ಅಧಿಕಾಧಿಕವಾಗಿ ಹೊಳೆಯುತ್ತಾ ಹೋಗಬೇಕು. (ಮತ್ತಾಯ 5:14, ಜ್ಞಾನೋಕ್ತಿ 4:18)
ಕೃಪೆ ಎಂಬುದು ನಾವು ಅಯೋಗ್ಯರಾಗಿದ್ದಾಗಲೂ ದೇವರಿಂದ ಹೊಂದಬಹುದಾದ ದಯೆಯಾಗಿದೆ. ನಮಗೆ ಇದನ್ನು ಹೊಂದಲು ಅರ್ಹತೆ ಇಲ್ಲ. ನಾವು ಇದನ್ನು ಸಂಪಾದಿಸಲು ಸಾಧ್ಯವಿಲ್ಲ.ಆತನು ಕೃಪೆಯಿಂದ ಕೃಪೆಯನ್ನು ನಮಗೆ ದಯಪಾಲಿಸಿದ್ದಾನಷ್ಟೇ. ಸತ್ಯವೇದವು ಇದನ್ನೇ ನಮಗೆ ವಿವರಿಸುತ್ತದೆ. ಅದೇನೆಂದರೆ ಯೇಸುಕ್ರಿಸ್ತನು ಕೃಪೆಯಿಂದಲೂ ಸತ್ಯತೆಯಿಂದಲೂ ತುಂಬಿದ ಮನುಷ್ಯನಾಗಿ ನಮ್ಮ ಬಳಿಗೆ ಕಳುಹಿಸಲ್ಪಟ್ಟನು ಎಂದು (ಯೋಹಾನ 1:14,1:17). ಯೇಸುಕ್ರಿಸ್ತನು ರೋಗಿಗಳನ್ನು ವಾಸಿ ಮಾಡುವ ಮೂಲಕ, ಸತ್ತವರನ್ನು ಎಬ್ಬಿಸುವ ಮೂಲಕ, ಹಸಿದವರಿಗೆ ಆಹಾರ ನೀಡುವ ಮೂಲಕ ಹಾಗೆಯೇ ಕಾನಾ ಊರಿನಲ್ಲಿ ಆದ ಮದುವೆಯಲ್ಲಿ ಅವರನ್ನು ನಾಚಿಕೆಗೆ ಈಡಾಗದಂತೆ ತಪ್ಪಿಸುವ ಮೂಲಕ ದೇವರ ಕೃಪೆಯನ್ನು
ಪ್ರಕಟಪಡಿಸಿದನು.ಯೇಸುಕ್ರಿಸ್ತನು ಮಾಡಿದ ಎಲ್ಲಾ ಕಾರ್ಯಗಳು ದೇವರ ಕೃಪೆಯು ಜನರ ಜೀವಿತದಲ್ಲಿ ಏನೆಲ್ಲಾ ಮಾಡಬಹುದು ಎಂಬುದನ್ನು ನಮಗೆ ಪ್ರಕಟಪಡಿಸುತ್ತದೆ.ಹಾಗಾಗಿ ಸ್ನೇಹಿತರೇ, ನಿಮಗೆ ದೇವರ ಕೃಪೆಯ ಅವಶ್ಯಕತೆ ಇದೆ.
ನಮಗೆ ನಿಜವಾಗಲೂ ದೇವರ ಕೃಪೆಯ ಅಗತ್ಯವಿದೆಯೇ? ಮನುಷ್ಯರ ಜೀವಿತದಲ್ಲಿ ದೇವರ ಕೃಪೆಯು ಮಾಡುವ ಕಾರ್ಯಗಳೇನು? ದೇವರ ಕೃಪೆಯ ಕೊರತೆ ಉಂಟಾದರೆ ಏನಾಗುತ್ತದೆ?
ದೇವರ ಕೃಪೆಯ ಮಹತ್ವ.
1. ನಿಮ್ಮ ಮಾನವ ಸಹಜ ಬಲವೆಲ್ಲಾ ವಿಫಲವಾಗಿ ನೀವು ಸೋತು ಹೋದಾಗ ದೇವರ ಕೃಪೆಯು ಬೇಕೇ ಬೇಕು.
ಒಂದು ಕಾಲ ಬರುತ್ತದೆ ಆ ಕಾಲದಲ್ಲಿ ನೀವು ನಿಮ್ಮ ಬಲವೆಲ್ಲಾ ಉಪಯೋಗಿಸಿದರೂ ಯಾವುದೇ ಪ್ರಯೋಜನ ಕಾಣುವುದಿಲ್ಲ. ಆ ಒಂದು ಸಮಯದಲ್ಲಿ ನೀವು ಅಸಹಾಯಕರಾಗಿ ಬಿಡುತ್ತೀರಿ. ಇನ್ನು ನಿಮ್ಮ ಕೈಯಲ್ಲಿ ಬಗ್ಗಲು ಸಾಧ್ಯವೇ ಇಲ್ಲ ದೇವರನ್ನು ಬಿಟ್ಟರೆ ಇನ್ಯಾರೂ ನಮ್ಮನ್ನು ಕಾಪಾಡಲು ಸಾಧ್ಯವೇ ಇಲ್ಲ ಎಂದು ದೇವರನ್ನೇ ಆತುಕೊಳ್ಳುವ ಪರಿಸ್ಥಿತಿ ಬರುತ್ತದೆ. ಆಗ ನೀವು 2 ಕೊರಿಂಥದವರಿಗೆ 12:9ರಲ್ಲಿ ಕರ್ತನು ಹೇಳಿರುವ ಈ ಮಾತನ್ನು ನೆನಪಿಸಿಕೊಳ್ಳಿರಿ.
"ನನ್ನ ಕೃಪೆಯೇ ನಿನಗೆ ಸಾಕು;ನಿನ್ನ ಬಲಹೀನತೆಯಲ್ಲಿಯೇ ನನ್ನ ಬಲವು ಪೂರ್ಣಸಾಧಕವಾಗುತ್ತದೆ ಎಂದು ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು." ಎಂದು.
2. ಅಸಾಧ್ಯ ಎನಿಸುವ ಸವಾಲುಗಳನ್ನು ಎದುರಿಸಲು ದೇವರ ಕೃಪೆಯು ಅವಶ್ಯ.
"ಪರಾಕ್ರಮದಿಂದಲ್ಲ, ಬಲದಿಂದಲ್ಲ, ನನ್ನ ಆತ್ಮದಿಂದಲೇ ಎಂಬದು ಸೇನಾಧೀಶ್ವರ ಯೆಹೋವನ ನುಡಿ 7ಎಂಬೀ ಮಾತನ್ನು ಯೆಹೋವನು ಜೆರುಬ್ಬಾಬೆಲನಿಗೆ(ಇಲ್ಲಿ ನಿಮ್ಮ ಹೆಸರನ್ನು ತೆಗೆದುಕೊಳ್ಳಿರಿ) ದಯಪಾಲಿಸಿದ್ದಾನೆ. ದೊಡ್ಡ ಬೆಟ್ಟವೇ, ನೀನು ಯಾರು? ಜೆರುಬ್ಬಾಬೆಲನ ಮುಂದೆ ನೆಲಸಮವಾಗುವಿ; ಅವನು ಕಲಶದ ಕಲ್ಲನ್ನು ಕೋಲಾಹಲದೊಡನೆ ಮೆರವಣಿಗೆಮಾಡುವನು; ಇದರ ಮೇಲೆ ದೇವರ ದಯೆಯಿರಲಿ, ದೇವರ ದಯೆಯಿರಲಿ ಎಂಬ ಜನಘೋಷವಾಗುವದು."(ಜೆಕರ್ಯ 4:6-7).
3. ಎಲ್ಲಾ ನಿರೀಕ್ಷೆಗಳು ಹುಸಿಯಾದಾಗ ದೇವರ ಕೃಪೆಯು ಅತ್ಯಾವಶ್ಯಕ.
"ಅದಕ್ಕೆ ಸೀಮೋನನು - ಗುರುವೇ, ನಾವು ರಾತ್ರಿಯೆಲ್ಲಾ ಪ್ರಯಾಸಪಟ್ಟರೂ ಏನೂ ಸಿಕ್ಕಲಿಲ್ಲ; ಆದರೆ ನಿನ್ನ ಮಾತಿನ ಮೇಲೆ ಬಲೆಗಳನ್ನು ಹಾಕುತ್ತೇನೆ ಅಂದನು."(ಲೂಕ 5:5). ಬೇರೆ ಯಾವ ನಿರೀಕ್ಷೆಯೂ ಇಲ್ಲ ಎಂದುಕೊಂಡಾಗ ಪೇತ್ರನಿಗೆ ಕರ್ತನು ಅದ್ಭುತ ಮಾಡಿದಂತೆ ದೇವರು ನಿಮಗೂ ಸಹ ಅಸಾಧ್ಯವಾದದನ್ನು ನಿಮ್ಮ ಜೀವಿತದಲ್ಲಿ ಸಾಧ್ಯ ಮಾಡುತ್ತಾನೆ.
4. ಜನರೆಲ್ಲಾ ನಿಮ್ಮನ್ನು ನೋಡಿ ಇವರಿಂದ ಇನ್ನೇನು ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ ಎಂದು ಹೇಳುವಾಗ ದೇವರ ಕೃಪೆಯು ಅವಶ್ಯವಾಗಿ ಬೇಕೇ ಬೇಕು.
"ನತಾನಯೇಲನು - ಒಳ್ಳೇದೇನಾದರೂ ನಜರೇತಿನಿಂದ ಬರುವದುಂಟೇ? ಅಂದಾಗ ಫಿಲಿಪ್ಪನು - ಬಂದು ನೋಡು ಅಂದನು."(ಯೋಹಾನ 1:46)
"ಆಗ ಗಿದ್ಯೋನನು ಆತನಿಗೆ - ಸ್ವಾಮೀ, ನಾನು ಇಸ್ರಾಯೇಲ್ಯರನ್ನು ರಕ್ಷಿಸುವದು ಹೇಗೆ? ಮನಸ್ಸೆ ಕುಲದಲ್ಲಿ ನನ್ನ ಮನೆಯು ಕನಿಷ್ಠವಾದದ್ದು; ಮತ್ತು ನಾನು ನಮ್ಮ ಕುಟುಂಬದಲ್ಲಿ ಅಲ್ಪನು ಅನ್ನಲು 16 ಯೆಹೋವನು ಅವನಿಗೆ - ನಾನು ನಿನ್ನ ಸಂಗಡ ಇರುವದರಿಂದ ನೀನು ವಿುದ್ಯಾನ್ಯರೆಲ್ಲರನ್ನೂ ಒಬ್ಬ ಮನುಷ್ಯನನ್ನೋ ಎಂಬಂತೆ ಸಂಹರಿಸಿಬಿಡುವಿ ಅಂದನು."(ನ್ಯಾಯಸ್ಥಾಪಕರು 6:15-16).
5. ನಿಮಗೆ ಅರ್ಹತೆಯೇ ಇಲ್ಲದ ಆಶೀರ್ವಾದವನ್ನು ಅನುಭವಿಸಲು ದೇವರ ಕೃಪೆಯು ಅತ್ಯಾವಶ್ಯ.
"ನೀವು ಕಷ್ಟಮಾಡದಂಥ ಬೆಳೆಯನ್ನು ಕೊಯ್ಯುವದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು; ಬೇರೊಬ್ಬರು ಕಷ್ಟಮಾಡಿದ್ದಾರೆ; ನೀವು ನಡುವೆ ಅವರ ಕಷ್ಟದಲ್ಲಿ ಸೇರಿದ್ದೀರಿ ಎಂದು ಹೇಳಿದನು."(ಯೋಹಾನ 4:38)
6. ನೀವು ಮಹತ್ತರವಾದ ಕಾರ್ಯಗಳನ್ನು ಮಾಡಲು ನಿಮಗೆ ದೇವರ ಕೃಪೆಯು ಬೇಕೇ ಬೇಕು.
"ನಿಮಗೆ ನಿಜನಿಜವಾಗಿ ಹೇಳುತ್ತೇನೆ, ನನ್ನನ್ನು ನಂಬುವವನು ನಾನು ನಡಿಸುವ ಕ್ರಿಯೆಗಳನ್ನು ತಾನೂ ನಡಿಸುವನು; ಮತ್ತು ಅವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ನಡಿಸುವನು. ಯಾಕಂದರೆ ನಾನು ತಂದೆಯ ಬಳಿಗೆ ಹೋಗುತ್ತೇನೆ."
(ಯೋಹಾನ 14:12)
ಆತನು ತನ್ನ ಪವಿತ್ರಾತ್ಮನನ್ನು ನಮಗೆ ಅನುಗ್ರಹಿಸಿರುವುದರಿಂದ ಯಾರೂ ಸಹ ಸಬೂಬು ಹೇಳಲು ಸಾಧ್ಯವಿಲ್ಲ. ಆದ್ದರಿಂದ ದೇವರ ಕೃಪೆಯ ಸಂಪೂರ್ಣ ಪ್ರಯೋಜನವನ್ನು ಪಡೆದು ಕೊಂಡು ಕರ್ತನಿಗಾಗಿ ಮಹತ್ತರವಾದ ಕಾರ್ಯಗಳನ್ನು ಮಾಡಿರಿ.
7. ದೇವರಿಂದ ಏನಾದರೂ ಪಡೆದುಕೊಳ್ಳಲು ದೇವರ ಕೃಪೆಯು ಬೇಕೇ ಬೇಕು.
ದೇವರ ಅನುಗ್ರಹವಿಲ್ಲದೆ ದೇವರ ಬಳಿ ನಿಮಗೆ ಏನು ಬೇಕೋ ಅದನ್ನು ನೀವು ಕೇಳಿ ಕೊಳ್ಳಲು ಸಾಧ್ಯವಿಲ್ಲ.
"ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ."
(ಇಬ್ರಿಯರಿಗೆ 4:16).
8. ನೀವು 30 ವರ್ಷದಿಂದ ಕಷ್ಟ ಪಟ್ಟರೂ ಸಿಗದಂತದನ್ನು ಕೇವಲ 3 ತಿಂಗಳಲ್ಲಿ ನಿಮಗೆ ಕೊಡಿಸಲು ದೇವರ ಕೃಪೆಯು ಅತ್ಯಗತ್ಯ.
ನೀವು ನಿಮ್ಮ ಸುತ್ತಲೂ ಇರುವ ಈಗಾಗಲೇ ಯಶಸ್ವಿಯಾದ ಜನರಿಗಿಂತ ಅಲೌಖಿಕವಾದ ವೇಗದಲ್ಲಿ ಮುನ್ನುಗ್ಗುವ ಸಾಮರ್ಥ್ಯ ಹೊಂದಲು ದೇವರ ಕೃಪೆಯು ನಿಮಗೆ ಅವಶ್ಯ.ಅತ್ಯಂತ ಕಡಿಮೆಯ ಅವಧಿಯಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ರದ್ದು ಮಾಡಿ ಎಲ್ಲಾ ರಾಜಾಜ್ಞೆಗಳನ್ನು ಮೀರಿ ದೈವೀಕ ರೀತಿಯಲ್ಲಿ ನಿಮ್ಮನ್ನು ಮುನ್ನೆಲೆಗೆ ತರುವಂತ ಕಾರ್ಯವನ್ನು ದೇವರ ಕೃಪೆಯು ಮಾಡುತ್ತದೆ.
"ಯೆಹೋವನ ಹಸ್ತವು ಎಲೀಯನ ಸಂಗಡ ಇದ್ದದರಿಂದ ಅವನು ನಡುಕಟ್ಟಿಕೊಂಡು ಅಹಾಬನ ಮುಂದೆ ಓಡುತ್ತಾ ಇಜ್ರೇಲನ್ನು ಸೇರಿದನು."(1 ಅರಸುಗಳು 18:46). ಪ್ರವಾದಿಯಾದ ಎಲೀಯನ ಮೇಲಿದ್ದ ಅದೇ ಕರ್ತನ ತ್ರಾಣವುಳ್ಳ ಹಸ್ತವು ನನ್ನ ಹಾಗೂ ನಿಮ್ಮೆಲ್ಲರ ಮೇಲಿದ್ದು ಇತರರಿಗಿಂತ ನಮ್ಮನ್ನು ಮುಂದಕ್ಕೆ ತರಲಿ ಎಂದು ಯೇಸುನಾಮದಲ್ಲಿ ಪ್ರಾರ್ಥಿಸುತ್ತೇನೆ.
ವರಗಳಿಂದ ತುಂಬಿದವರಾಗಿದ್ದರೂ ಮೇಲಕ್ಕೆ ಎತ್ತಲ್ಪಡದವರಾಗಿರಲು ಸಾಧ್ಯ. ನಮ್ಮ ಸಮಾಜದಲ್ಲಿ ಎಷ್ಟೋ ಬುದ್ದಿವಂತರು ಇಂದು ನಿರುದ್ಯೋಗಗಳಾಗಿಯೇ ಇದ್ದಾರೆ. ಎಷ್ಟೋ ಜನ ಸುಂದರ ಯುವಕ ಯುವತಿಯರೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಮದುವೆಯಾಗಿ ಜೀವನದಲ್ಲಿ ಸಫಲತೆ ಕಾಣಲು, ಉತ್ತಮ ಉದ್ಯೋಗ ಹೊಂದಲು ಮತ್ತು ಜೀವನವನ್ನು ಆನಂದಿಸಲು ದೇವರ ಕೃಪೆಯಿಂದ ಮಾತ್ರ ಸಾಧ್ಯ. ಜೀವನವನ್ನು ಸುಮಧುರವಾಗಿಟ್ಟುಕೊಳ್ಳಲು ಕೆಲವು ಸದ್ಗುಣಗಳು ಬೇಕು ಅದರಲ್ಲಿ ದೇವರ ಕೃಪೆಯೂ ಒಂದು. ಕೃಪೆಯ ಕೊರತೆಯಿಂದ ಕೂಡಿದ ಜೀವಿತವು ಸೆಣೆಸಾಟದಿಂದ ತುಂಬಿರುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಯಾವುದು ಅಸಾಧ್ಯವೋ ಅದು ದೇವರ ಕೃಪೆಯಿಂದ ಸಾಧ್ಯ.
ಇಂದು ದೇವರು ತನ್ನ ಕೃಪೆಯನ್ನು ನಿಮಗೆ ಅನುಗ್ರಹಿಸಬೇಕೆಂದು ನೀವು ಮೊರೆಯಿಡಬೇಕಾಗಿ ನಾನು ಬಯಸುತ್ತೇನೆ. ನೀವು ಎಷ್ಟು ಹೆಚ್ಚು ಹೆಚ್ಚಾಗಿ ದೇವರ ಕೃಪೆಯ ಪರಿಜ್ಞಾನ ಹೊಂದಿಕೊಳ್ಳುತ್ತೀರೋ ಅಷ್ಟೇ ಹೆಚ್ಚು ಹೆಚ್ಚಾಗಿ ಅದರ ಕಾರ್ಯವನ್ನೂ ನೋಡುವವರಾಗುತ್ತೀರಿ.
ಕೃಪೆಯಿಂದ ಮೇಲಕ್ಕೆ ಎತ್ತಲ್ಪಟ್ಟ ಸತ್ಯವೇದ ಆಧಾರಿತ ವ್ಯಕ್ತಿಗಳು.
ಎ.ಮೆಫಿಬೋಶೇತ್.
ಆ ಕಾಲದಲ್ಲಿ ಕುಂಟರಿಗೆ ಅರಮನೆಯೊಳಗೆ ಪ್ರವೇಶಿಸಲು ಅನುಮತಿಯಿರಲಿಲ್ಲ ಆದರೆ ದೇವರ ಕೃಪೆಯ ಮೂಲಕ ಕುಂಟನಾದ ಮೆಫಿಬೋಶೇತನು ಮೇಲೇತ್ತಲ್ಪಟ್ಟನು. ಅರಸನಾಗಿದ್ದ ಸೌಲನ ಮನೆಯ ಸೇವಕನಾದ ಚೀಬನನ್ನು ದಾವೀದನು ಕರೆಸಿ ಮಾತಾಡಿದ ದಿನದಲ್ಲಿ ಈ ಕಾರ್ಯ ಉಂಟಾಯಿತು. ದಾವೀದನು ಚೀಬನಿಗೆ ಕೇಳಿದ ಪ್ರಶ್ನೆ ಇದಾಗಿತ್ತು.
"ಅರಸನು ಅವನಿಗೆ - ಸೌಲನ ಕುಟುಂಬದವರಲ್ಲಿ ಯಾರಾದರೂ ಉಳಿದಿದ್ದರೆ ಹೇಳು; ನಾನು ದೇವರನ್ನು ನೆನಸಿ ಅವರಿಗೆ ದಯೆತೋರಿಸುತ್ತೇನೆ ಅಂದನು. ಆಗ ಚೀಬನು ಅರಸನಿಗೆ - ಯೋನಾತಾನನಿಗೆ ಎರಡು ಕಾಲೂ ಕುಂಟಾದ ಒಬ್ಬ ಮಗನಿರುತ್ತಾನೆ ಎಂದು ಹೇಳಿದನು."(2ಸಮುವೇಲನು 9:3) ದಾವೀದನು ಪ್ರಾಮಾಣಿಕವಾಗಿ ಅವನಿದ್ದ ಲೋ-ದೇಬಾರ್ನಿಂದ ಅವನನ್ನು ತನ್ನ ಅರಮನೆಗೆ ಕರೆಸಿಕೊಂಡನು. (2ಸಮುವೇಲನು 9:1-13 ರವರೆಗೂ ಓದಿರಿ).
ಬಿ. ಯೋಸೆಫನು.
ಯೋಸೆಫನು ವಿದೇಶಿಗನಾಗಿ ಐಗುಪ್ತ ದೇಶವನ್ನು ಆಳುವಷ್ಟು ಅರ್ಹತೆಯನ್ನು ಹೊಂದಿರಲಿಲ್ಲ. ಆದರೆ ಕೃಪೆಯಿಂದ ಅವನು ಅರ್ಹತೆ ಹೊಂದಿದನು. ನಮ್ಮ ವೈರಿಗಳ ಮಧ್ಯೆ ನನ್ನಂಥ ನಿಮ್ಮಂಥ ಸಾಧಾರಣ ಮನುಷ್ಯರು ಸಹ ಆಳ್ವಿಕೆ ನಡೆಸುವಂತೆ ದೇವರ ಕೃಪೆಯು ಮಾಡಬಲ್ಲದು.
"ಫರೋಹನು ತನ್ನ ಪರಿವಾರದವರಿಗೆ - ಈತನಲ್ಲಿ ದೇವರ ಆತ್ಮ ಉಂಟಲ್ಲಾ; 39ಈತನಿಗಿಂತ ಯೋಗ್ಯನಾದ ಪುರುಷನು ನಮಗೆ ಸಿಕ್ಕಾನೇ ಎಂದು ಹೇಳಿ ಯೋಸೇಫನಿಗೆ - ದೇವರು ಇದನ್ನೆಲ್ಲಾ ನಿನಗೇ ತಿಳಿಸಿರುವದರಿಂದ ನಿನಗೆ ಸಮಾನನಾದ ಬುದ್ಧಿ ವಿವೇಕಗಳುಳ್ಳ ಪುರುಷನು ಯಾವನೂ ಇಲ್ಲ;40 ನೀನೇ ಅರಮನೆಯಲ್ಲಿ ಸರ್ವಾಧಿಕಾರಿಯಾಗಿರಬೇಕು; ನಿನ್ನ ಅಪ್ಪಣೆಯ ಮೇರೆಗೆ ಪ್ರಜೆಗಳೆಲ್ಲರೂ ನಡೆದುಕೊಳ್ಳಬೇಕು; ಸಿಂಹಾಸನದ ವಿಷಯದಲ್ಲಿ ಮಾತ್ರ ನಾನು ನಿನಗಿಂತ ದೊಡ್ಡವನಾಗಿರುವೆನು ಎಂದು ಹೇಳಿದನು. 41ಫರೋಹನು ಯೋಸೇಫನಿಗೆ - ನೋಡು ಐಗುಪ್ತದೇಶದ ಮೇಲೆಲ್ಲಾ ನಿನ್ನನ್ನು ಅಧಿಕಾರಿಯನ್ನಾಗಿ ಇಟ್ಟಿದ್ದೇನೆ ಎಂದು ಹೇಳಿ 42 ತನ್ನ ಕೈಯಿಂದ ಮುದ್ರಿಕೆಯನ್ನು ತೆಗೆದು ಯೋಸೇಫನ ಕೈಗೆ ಇಟ್ಟು ಅವನಿಗೆ ನಾರುಮಡಿಯನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಸರಪಣಿಯನ್ನು ಹಾಕಿಸಿ 43 ತನಗಿದ್ದ ಎರಡನೆಯ ರಥದಲ್ಲಿ ಕುಳ್ಳಿರಿಸಿ ಅವನ ಮುಂದೆ ಅಡ್ಡಬೀಳಿರಿ ಎಂದು ಪ್ರಕಟಣೆಮಾಡಿಸಿ ಅವನನ್ನು ಐಗುಪ್ತದೇಶಕ್ಕೆ ಸರ್ವಾಧಿಕಾರಿಯನ್ನಾಗಿ ಇಟ್ಟನು. 44 ಇನ್ನೂ ಫರೋಹನು ಅವನಿಗೆ - ನಾನು ಫರೋಹನು; ನಿನ್ನ ಅಪ್ಪಣೆಯಿಲ್ಲದೆ ಐಗುಪ್ತದೇಶದಲ್ಲೆಲ್ಲಾ ಒಬ್ಬನೂ ಕೈಯನ್ನಾಗಲಿ ಕಾಲನ್ನಾಗಲಿ ಕದಲಿಸಕೂಡದು ಎಂದು ಹೇಳಿದನು."
(ಆದಿಕಾಂಡ 41:38-44).
ಸಿ) ಎಸ್ತೆರಳು.
ಕೃಪೆಯಿಂದಲೇ ಒಬ್ಬ ದಾಸಿಯಾಗಿದ್ದ ಹುಡುಗಿಯು ವಿದೇಶದಲ್ಲಿ ರಾಣಿಯಾಗಿ ಮಾಡಲ್ಪಟ್ಟಳು.ಕೃಪೆಗೆ ರಾಜಾಜ್ಞೆಯನ್ನು ಮುರಿಯುವ ಶಕ್ತಿಇದೆ. ಅರಸನು ಎಸ್ತೆರಳನ್ನು ಎಲ್ಲಾ ಸ್ತ್ರೀಯರಿಗಿಂತಲೂ ಹೆಚ್ಚಾಗಿ ಪ್ರೀತಿಸಿದನು ಮತ್ತು ಎಸ್ತೆರಳು ಉಳಿದ ಎಲ್ಲಾ ಕನ್ಯೆಯರಿಗಿಂತಲೂ ಹೆಚ್ಚಿನ ದಯೆಯನ್ನೂ ಕೃಪೆಯನ್ನೂ ಅರಸನ ದೃಷ್ಟಿಯಲ್ಲಿ ಹೊಂದಿದಳು.
"ಎಲ್ಲಾ ಕನ್ಯೆಯರಲ್ಲಿ ಆಕೆಯು ಅವನ ದಯೆಗೂ ಪ್ರೀತಿಗೂ ಪಾತ್ರಳಾದದರಿಂದ ಅವನು ರಾಜಮುಕುಟವನ್ನು ಆಕೆಯ ತಲೆಯ ಮೇಲಿಟ್ಟು ಆಕೆಯನ್ನು ವಷ್ಟಿಗೆ ಬದಲಾಗಿ ರಾಣಿಯನ್ನಾಗಿ ಮಾಡಿಕೊಂಡನು. "(ಎಸ್ತೇರಳು 2:17).
ಡಿ) ದಾವೀದನು.
ಕೃಪೆಯಿಂದಲೇ ದಾವೀದನ ಜೀವಿತವು ಹಿನ್ನೆಲೆಯಿಂದ ಮುನ್ನೆಲೆಗೆ ಬಂದಿತು. ಕುರಿಯನ್ನು ಮೇಯಿಸುತ್ತಿದ್ದ ದಾವೀದನು ದೈವೀಕವಾಗಿ ಎತ್ತಲ್ಪಟ್ಟು ಇಡೀ ರಾಷ್ಟ್ರವನ್ನು ಆಳುವವನಾದನು.
"ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನಂದರೆ - ಸೇನಾಧೀಶ್ವರನಾದ ಯೆಹೋವನು ಹೀಗನ್ನುತ್ತಾನೆ - ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ತೆಗೆದುಕೊಂಡು ನನ್ನ ಪ್ರಜೆಗಳಾದ ಇಸ್ರಾಯೇಲ್ಯರ ಮೇಲೆ ನಾಯಕನನ್ನಾಗಿ ನೇವಿುಸಿದೆನು."(2 ಸಮುವೇಲನು 7:8)
ದಾವೀದನನ್ನು ಉದ್ದರಿಸಿದ ದೇವರ ಕೃಪೆಯು ನಿಮಗೂ ಸಿಗಬಹುದು.
ಕೃಪೆಯನ್ನು ಆನಂದಿಸಲು ಮತ್ತು ಕೃಪೆಯಲ್ಲಿ ಬೆಳೆಯಲು ಏನು ಮಾಡಬೇಕು?
1. ಕೃಪೆಗಾಗಿ ಪ್ರಾರ್ಥಿಸಬೇಕು.
"ನನಗೆ ನಿನ್ನ ದಯೆ ದೊರಕಿದ್ದಾದರೆ ನಾನು ನಿನ್ನನ್ನು ಬಲ್ಲವನಾಗಿರುವಂತೆ ನಿನ್ನ ಮಾರ್ಗವನ್ನು ನನಗೆ ತೋರಿಸು; ಆಗ ನಿನ್ನ ದಯೆ ನನಗೆ ದೊರೆಯಿತೆಂದು ನನಗೆ ತಿಳಿದಿರುವದು; ಈ ಜನವು ನಿನ್ನ ಪ್ರಜೆಯೆಂದು ಜ್ಞಾಪಕಮಾಡಿಕೋ ಎಂದು ಅರಿಕೆಮಾಡಿದನು."(ವಿಮೋಚನಕಾಂಡ 33:13)
2.ದೀನತೆಯಿಂದ ವರ್ತಿಸಿ.
"ಆತನು ನಮ್ಮ ಮೇಲೆ ಅತಿಶಯವಾದ ಕೃಪೆಯನ್ನು ಇಡುತ್ತಾನೆ. ಆದುದರಿಂದ - ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ ಎಂದು ಶಾಸ್ತ್ರವು ಹೇಳುತ್ತದೆ."(ಯಾಕೋಬನು 4:6)
3.ಮತ್ತೊಬ್ಬರಿಗೆ ಕರುಣೆ ತೋರಿಸಿ.
"ಕರುಣೆಯುಳ್ಳವರು ಧನ್ಯರು; ಅವರು ಕರುಣೆಹೊಂದುವರು."(ಮತ್ತಾಯ 5:7)
4. ದೇವರ ಕೃಪೆಯ ಬಗ್ಗೆ ಪ್ರಜ್ಞಾವಂತಾರಾಗಿರ್ರಿ ಮತ್ತು ಅದರ ಕುರಿತು ಹೆಚ್ಚು ಹೆಚ್ಚಾಗಿ ಅಧ್ಯಯನ ಮಾಡಿರಿ.
"ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು. ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ ಉಪದೇಶಿಸುವವನೂ ಆಗಿರು."(2 ತಿಮೊಥೆಯನಿಗೆ 2:15).
5. ಸಣ್ಣ ವಿಚಾರವಾಗಲೀ ದೊಡ್ಡದ್ದಾಗಿರಲೀ ಪ್ರತಿಯೊಂದು ವಿಚಾರಕ್ಕೂ ದೇವರಿಗೆ ಸ್ತೋತ್ರ ಸಲ್ಲಿಸಿ.
"ಎಲ್ಲಾದರಲ್ಲಿಯೂ ಕೃತಜ್ಞತಾಸ್ತುತಿಮಾಡಿರಿ; ಇದೇ ನಿಮ್ಮ ವಿಷಯವಾಗಿ ಕ್ರಿಸ್ತ ಯೇಸುವಿನಲ್ಲಿ ತೋರಿ ಬಂದ ದೇವರ ಚಿತ್ತ." (1 ಥೆಸಲೋನಿಕದವರಿಗೆ 5:18)
6. ದೇವರ ಕೃಪೆಯನ್ನು ಹೊಂದಿದಂತ ದೇವಮನುಷ್ಯರ ಕೃಪೆಯಲ್ಲಿ ಭಾಗಿಯಾಗುವುದರ ಮಹತ್ವವನ್ನೂ ಎದುರುನೋಡಿ.
ಕೃಪೆಯನ್ನು ಹೊಂದಿದ ಪಾತ್ರೆಗಳಾದ ದೇವ ಮನುಷ್ಯರ ಹಸ್ತಾರ್ಪಣೆಯಿಂದಲೂ ಕೃಪೆಯನ್ನು ಹೊಂದಬಹುದು.
"ನಾನು ಅಲ್ಲಿಗೆ ಇಳಿದುಬಂದು ನಿನ್ನ ಸಂಗಡ ಮಾತಾಡುವೆನು. ಅದಲ್ಲದೆ ನಾನು ನಿನಗೆ ಅನುಗ್ರಹಿಸಿರುವ ಆತ್ಮೀಯ ವರಗಳಲ್ಲಿ ಕೆಲವನ್ನು ಅವರಿಗೂ ಪಾಲುಕೊಡುವೆನು. ಆಗ ನೀನೊಬ್ಬನೇ ಈ ಜನರ ಭಾರವನ್ನು ವಹಿಸಬೇಕಾಗಿರುವದಿಲ್ಲ; ನಿನ್ನ ಜೊತೆಯಲ್ಲಿ ಇವರೂ ವಹಿಸುವರು."
(ಅರಣ್ಯಕಾಂಡ 11:17)
Bible Reading Plan: Luke 10- 13
ಪ್ರಾರ್ಥನೆಗಳು
1.ನನ್ನನ್ನು ಹಿಂದುಳಿಯುವಂತೆ ಮಾಡುವ ಮತ್ತು ನನ್ನನ್ನು ಜಡ ಪಡಿಸುವ ಎಲ್ಲಾ ದುರಾತ್ಮಗಳನ್ನು ಯೇಸುನಾಮದಲ್ಲಿ ನಾನು ನಿರಾಕರಿಸುತ್ತೇನೆ. (ಫಿಲಿಪ್ಪಿ 3:13-14)
2. ಯೇಸುವಿನ ಬಲವಾದ ನಾಮದಲ್ಲಿ ನಾನು ಮಹಿಮೆಯಿಂದ ಮಹಿಮೆಗೆ ಸಾಗುತ್ತೇನೆ. (2ಕೊರಿಯಂತೆ 3:18)
3. ತಂದೆಯೇ, ನಾನು ಅಸಾಧ್ಯವಾದ ಪ್ರಗತಿಯನ್ನು ನಾನು ಹೊಂದುವಂತೆ ಯೇಸುನಾಮದಲ್ಲಿ ನಿನ್ನ ಕೃಪೆಯನ್ನು ನನಗೆ ಅನುಗ್ರಹಿಸು.(ರೋಮ 5:2)
4.ತಂದೆಯೇ, ನನಗೆ ಚತುರತೆಯ ಆತ್ಮವನ್ನು ಯೇಸುನಾಮದಲ್ಲಿ ಅನುಗ್ರಹಿಸು (ದಾನಿಯೇಲ 6:3)
5. ಕರ್ತನೇ ನನ್ನ ಜೀವಿತದ ಪ್ರತಿಯೊಂದು ಆಯಾಮದಲ್ಲೂ ನನ್ನ ಗೌರವವವನ್ನು ಯೇಸುನಾಮದಲ್ಲಿ ಹೆಚ್ಚಿಸು. (ಕೀರ್ತನೆ 71:21)
6. ಕರ್ತನೇ, ನಿನ್ನ ಕೃಪೆಯಿಂದ ಯೇಸುನಾಮದಲ್ಲಿ ನನ್ನನ್ನು ಉದ್ದಾರ ಮಾಡು. (ಕೀರ್ತನೆ 75:6-7)
7. ತಂದೆಯೇ, ನನ್ನನ್ನು ಆಶೀರ್ವಾದದ ನಿಧಿಯಾಗಿ ಯೇಸುನಾಮದಲ್ಲಿ ಮಾರ್ಪಡಿಸು. (ಧರ್ಮೋಪದೇಶ ಕಾಂಡ 28:2)
8.ತಂದೆಯೇ, ನಾನು ನಿನ್ನ ದೃಷಿಯಲ್ಲಿ ದಯೆ ದೊರಕಿದವನಾಗಿ/ಳಾಗಿ ಕಾಣಿಸಿಕೊಂಡು ನೀನು ನನ್ನನ್ನು ಅತ್ಯುತ್ತಮ ಎಂದು ಆರಿಸಿಕೊಳ್ಳುವಂತೆ ಯೇಸುನಾಮದಲ್ಲಿ ಕೃಪೆ ತೋರಿಸು (1ಸಮುವೇಲ 16:12)
9. ಕರ್ತನೇ, ನಿನ್ನ ಕೃಪೆಯು ಉನ್ನತ ಸ್ಥಳಗಳಲ್ಲಿ ನನಗಾಗಿ ಯೇಸುನಾಮದಲ್ಲಿ ಮಾತನಾಡಲಿ. (ಎಸ್ತೆರಳು5:2)
10. ದೇವರ ಕೃಪೆಯಿಂದ ಯೇಸುನಾಮದಲ್ಲಿ ನಾನು ಅಂಗೀಕರಿಸಲ್ಪಟ್ಟವನೇ/ವಳೇ ಹೊರತು ಕೈಬಿಡಲ್ಪಟ್ಟವನಲ್ಲ /ವಳಲ್ಲ. ನಾನು ಯೇಸುನಾಮದಲ್ಲಿ ಎಲ್ಲರ ಮೇಲಿರುತ್ತೇನೆಯೇ ವಿನಃ ಯಾರ ಕಾಲ ಕೆಳಗೂ ಇರುವುದಿಲ್ಲ. ನಾನು ಯೇಸುನಾಮದಲ್ಲಿ ನಾನು ಸಾಲ ಕೊಡುವೆನೇ ಹೊರತು ಸಾಲ ತೆಗೆದುಕೊಳುವುದಿಲ್ಲ.(ಧರ್ಮೋಪದೇಶ ಕಾಂಡ 28:13)
11. ತಂದೆಯೇ, ಈ 40 ದಿನಗಳ ಉಪವಾಸ ಪ್ರಾರ್ಥನೆಯಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಅವರ ಕುಟುಂಬದವರನ್ನೂ ಯೇಸುನಾಮದಲ್ಲಿ ನಿನ್ನ ಕೃಪೆಯಿಂದ ಉನ್ನತಸ್ಥಾನಕ್ಕೆ ಏರಿಸು. (ಯೆಶಾಯ 58:11).
12.ಕರ್ತನೇ,ನನ್ನ ವಿರುದ್ಧವಾಗಿ ವೈರಿಯು ಮಾಡುವ ಸಕಲ ಆಲೋಚನೆಗಳನ್ನು ಯೇಸುನಾಮದಲ್ಲಿ ನಿರರ್ಥಕ ಪಡಿಸು. ನಿನ್ನ ಕೃಪಾ ಸತ್ಯತೆಯು ನನ್ನನ್ನು ಗುರಾಣಿಯಂತೆಯೂ ಖೇಡ್ಯದಂತೆಯೂ ಯೇಸುನಾಮದಲ್ಲಿ ಕಾಯಲಿ(ಕೀರ್ತನೆ 91:4)
Join our WhatsApp Channel
Most Read
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.● ಸಹವಾಸದಲ್ಲಿರುವ ಅಭಿಷೇಕ
● ಒಂದು ಗಂಟೆ ಹಾಗೂ ಒಂದು ದಾಳಿಂಬ ಹಣ್ಣು
● ನಿಮ್ಮ ಆರಾಮದಾಯಕ ವಲಯದಿಂದ ಹೊರಬನ್ನಿ.
● ಉತ್ತೇಜನಕಾರಿಯಾಗಿ ವಿವೇಕ ಮತ್ತು ಪ್ರೀತಿ
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
● ಪ್ರಾರ್ಥನಾ ಜೀವಿತ ಜೀವಿಸಲು ಕೆಲವು ಪ್ರಾಯೋಗಿಕ ಸಲಹೆಗಳು.
ಅನಿಸಿಕೆಗಳು