ಅನುದಿನದ ಮನ್ನಾ
ದಿನ 28:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
Thursday, 19th of December 2024
3
0
89
Categories :
ಉಪವಾಸ ಮತ್ತು ಪ್ರಾರ್ಥನೆ (Fasting and prayer)
ನಾನು ಕೃಪೆಯನ್ನು ಆನಂದಿಸುವೆ
"ಆತನು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು."(ಯೋಹಾನ 1:14)
ಯೇಸುವಿನಲ್ಲಿ ಕೃಪೆಯೂ ಸತ್ಯವೂ ಸಮೃದ್ಧಿಯಾಗಿದೆ. ಯೋಹಾನ 1:16 ಹೇಳುತ್ತದೆ ಆತನು ಕೃಪೆಯಿಂದ ತುಂಬಿದವನಾಗಿ ಆತನ ಕೃಪೆಯಿಂದಲೇ ಒಂದರ ಮೇಲೆ ಒಂದು ಆಶೀರ್ವಾದಗಳನ್ನು ನಮಗೆ ಅನುಗ್ರಹಿಸಿದ್ದಾನೆ ಎಂದು. (GNT). ದೇವರು ಮೋಶೆಯ ಮುಖಾಂತರ ಧರ್ಮಶಾಸ್ತ್ರವನ್ನು ಕೊಟ್ಟನು ಆದರೆ ಯೇಸುಕ್ರಿಸ್ತನ ಮುಖಾಂತರ ಕೃಪೆಯನ್ನು ಸತ್ಯವನ್ನು ಅನುಗ್ರಹಿಸಿದನು.
ಯೇಸು ಕ್ರಿಸ್ತನು ನಮಗಾಗಿ ಕೃಪೆಯನ್ನು ತಂದನು ಯೇಸು ಬರುವುದಕ್ಕೆ ಮುಂಚಿತವಾಗಿ ಮನುಷ್ಯನಿಗೆ ದೊರೆತದ್ದು ಧರ್ಮಶಾಸ್ತ್ರ ಮಾತ್ರ. ಆದರೆ ಕೃಪೆ- ನಂಬಿಕೆ- ಸತ್ಯ ಇವುಗಳೆಲ್ಲವೂ ಯೇಸುಕ್ರಿಸ್ತನ ಮುಖಾಂತರ ಬಂದಿತು.
ಕೃಪೆ ಎಂದರೇನು?
1. ಕೃಪೆ ಎಂದರೆ ಯೋಗ್ಯತೆಯೇ ಇಲ್ಲದ ನಿಮಗೆ ದೇವರು ತೋರಿಸುವ ಅತ್ಯಧಿಕ ದಯೆಯಾಗಿದೆ.- ಯಾವುದನ್ನು ಹೊಂದಲು ನಿಮಗೆ ಅರ್ಹತೆ ಇಲ್ಲದೇ ಇರುವಂತದ್ದಾಗಿದೆ.
2. ಅರ್ಹತೆಯೇ ಇಲ್ಲದಂತಹ ನೀವು ಅದಕ್ಕೆ ಯೋಗ್ಯರಲ್ಲದಂತಹ ಆಶೀರ್ವಾದವನ್ನು ನೀವು ಅನುಭವಿಸುವಂತದ್ದಾಗಿದೆ.
3.ಇದು ಮನುಷ್ಯ ಸಾಮರ್ಥ್ಯವೇ ಇಲ್ಲದೇ ದೇವರ ಆತ್ಮ ಕಾರ್ಯ ಮಾಡುವಾಗ ಉಂಟಾಗುತ್ತದೆ.
ದೇವರ ಕೃಪೆಯು ನಮಗೆ ಅಸಾಧ್ಯವಾದ ಕಾರ್ಯ ಮಾಡಲು ಸಹಾಯ ಮಾಡುತ್ತದೆ. ಅದು ನಮಗೆ ನಮಗಿರುವ ಮಿತಿಗಳನ್ನು ಮೀರಿ ಸವಾಲುಗಳನ್ನು ಜಯಿಸಲು ನೆರವು ನೀಡುತ್ತದೆ. ಮನುಕುಲದ ಹೋರಾಟ ಜಂಜಾಟಗಳ ಪ್ರಶ್ನೆಗೆ ದೇವರ ಕೃಪೆ ಎಂಬುದು ಉತ್ತರವಾಗಿದೆ.
ಕೃಪೆಯಿಂದ ಉಂಟಾಗುವ ಪರಿಣಾಮಗಳೇನು?
1. ಕೃಪೆಯು ಎಲ್ಲಾ ಶಿಷ್ಟಾಚಾರಗಳನ್ನು ಸಹ ಮುರಿಯಬಲ್ಲದು.
ಎಸ್ತೆರಳು ಯೋಸೇಫ ದಾವೀದ ಮತ್ತು ಪೌಲನ ಜೀವಿತದಲ್ಲಿ ದೇವರ ಕೃಪೆಯು ಕಾರ್ಯ ಮಾಡಿದಂತದ್ದನ್ನು ಸತ್ಯವೇದದಲ್ಲಿ ನಾವು ಕಾಣಬಹುದು.ಎಸ್ತೆರಳು ವಿದೇಶದ ನೆಲದಲ್ಲಿ ದಾಸಿಯಾಗಿದ್ದ ಹುಡುಗಿಯಾಗಿದ್ದಳು ಆದರೂ ಕೃಪೆಯಿಂದಾಗಿ ಆಕೆಗೆ ಮನುಷ್ಯರ ದೃಷ್ಟಿಯಲ್ಲಿ ಹಾಗೂ ರಾಜನ ದೃಷ್ಟಿಯಲ್ಲಿ ದಯೆ ದೊರಕಿತು. ಕೃಪೆಯು ನಿಮ್ಮನ್ನು ಅಜ್ಞಾತ ಸ್ಥಳಗಳಲ್ಲಿಯೂ ದಯೆಯನ್ನು ಅನುಭವಿಸುವಂತೆ ಮಾಡಿ ನೀವು ಅರ್ಹರೆ ಅಲ್ಲದ ಸ್ಥಾನದಲ್ಲಿ ನಿಮ್ಮನ್ನು ಕೂತುಕೊಳ್ಳುವಂತೆ ಮಾಡಬಲ್ಲದು. ( ಎಸ್ತೇರಳು 2:17)
ಯೋಸೆಫನು ಸಹ ಇದಕ್ಕೆ ಮತ್ತೊಂದು ಒಳ್ಳೆಯ ಉದಾಹರಣೆ. ಇವನು ವಿದೇಶಿ ನೆಲದಲ್ಲಿ ದಾಸತ್ವದಲ್ಲಿ ಇದ್ದವನು ಮತ್ತು ಇದು ರಾತ್ರೋರಾತ್ರಿ ಆದದ್ದು. ಅವನು ಅನೇಕ ವರ್ಷಗಳವರೆಗೆ ದಾಸತ್ವದಲ್ಲಿಯೇ ಜೀವಿಸುತ್ತಿದ್ದನು. ಆದರೆ ದೇವರ ಕೃಪೆ ಅವನ ಕಥೆಯನ್ನು ಬದಲಾಯಿಸಿತು. (ಆದಿಕಾಂಡ 41:37-44).
ಅವನು ಕೇವಲ ಸೆರೆಮನೆಯಿಂದ ಹೊರಗೆ ಬಂದದ್ದು ಮಾತ್ರವಲ್ಲದೆ ಇಡೀ ಐಗುಪ್ತಕ್ಕೆ ಅರಸನನ್ನು ಬಿಟ್ಟರೆ ಇವನೇ ಮುಖ್ಯ ಅಧಿಕಾರಿಯಾಗಿ ಮಾಡಲ್ಪಟ್ಟನು. ಇದು ಕೃಪೆಯ ಉತ್ಪನ್ನವಾಗಿದೆ. ಕೃಪೆಯು ನಿಮ್ಮನ್ನು ಮುಂದಕ್ಕೆ ತರುತ್ತದೆ ಇದು ನಿಮ್ಮನ್ನು ಮೇಲಕ್ಕೆ ಎತ್ತುತ್ತದೆ. ಅದು ಲೌಕಿಕ ಶಿಷ್ಟಾಚಾರವನ್ನೇ ನಿಮಗಾಗಿ ಬುಡಮೇಲು ಮಾಡಿಬಿಡುತ್ತದೆ. ಐಗುಪ್ತದಲ್ಲಿ ಅಂತ ಉನ್ನತ ಪದವಿಯನ್ನು ಹೊಂದಲು ಅದರದ್ದೇ ಆದ ಶಿಷ್ಟಾಚಾರಗಳು ಇರುತ್ತಿತ್ತು ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ಆದರೆ ಇಲ್ಲಿ ಕೃಪೆಯು ಕಾರ್ಯ ಮಾಡಿ ಆ ಎಲ್ಲಾ ಶಿಷ್ಟಾಚಾರಗಳನ್ನು ಕಿತ್ತೊಗೆದು ಯೋಸೇಫನು ಕೃಪೆಯಿಂದ ಮೇಲಕ್ಕೆತ್ತಲ್ಪಟ್ಟನು.
ದಾವೀದನು ಸಹ ಕೃಪೆಯನ್ನು ದಯೆಯನ್ನು ಅನುಭವಿಸಿದನು. ಕೃಪೆಯೇ ಕುರುಬನಾಗಿದ್ದ ದಾವೀದನನ್ನು ಜೀವನದಲ್ಲಿ ಮುಂದೆ ಬರುವಂತೆ ಮಾಡಿತು. ತನ್ನ ಹಿಂದಿನ ಜೀವಿತದಲ್ಲಿ ಕುರಿಗಳಿಂದೆ ಹೋಗುತ್ತಿದ್ದ ಅವನನ್ನು ಮುಂದೆ ಅರಸನನ್ನಾಗಿ ಮಾಡಿತು. (2ಸಮುವೇಲ 5:3-4)
ಇವರುಗಳ ಜೀವಿತದಲ್ಲಿ ಕಾರ್ಯ ಮಾಡಿದಂತ ದೇವರೇ ಇಂದು ನಿಮ್ಮ ಜೀವಿತದಲ್ಲಿಯೂ ಯೇಸು ನಾಮದಲ್ಲಿ ಕಾರ್ಯ ಮಾಡಲಿ.
ಪೌಲನು ತನ್ನ ಹಳೆಯ ಜೀವಿತದಲ್ಲಿ ಒಬ್ಬ ಭಯೋತ್ಪಾದಕನಾಗಿದ್ದ ಆನಂತರ ಸುವಾರ್ತೆಯ ಮುಖ್ಯ ಸೇವಕನಾಗಿ ಬದಲಾದ. ಅಪೋಸ್ತಲನಾದ ಪೌಲನು ಇನ್ನುಳಿದ ಇತರೆ ಅಪೋಸ್ತಲರಿಗಿಂತಲೂ ಹೆಚ್ಚಾಗಿ ಕೃಪೆಯ ಬಗ್ಗೆ ಮಾತಾಡಿದ್ದಾನೆ ಏಕೆಂದರೆ ಅವನೊಬ್ಬ ದೇವರ ಕೃಪೆಯ ಉತ್ಪನ್ನ. (1ಕೊರಿಯಂತೆ 15:10)
2.ಕೃಪೆಯು ಅಸಮಾನ್ಯವಾದ ಪ್ರತಿಫಲವನ್ನು ನಿಮಗಾಗಿ ಉತ್ಪಾದಿಸುತ್ತದೆ.
ಪೇತ್ರನು ಬಲೆಯನ್ನು ಹಾಕಿ ರಾತ್ರಿ ಎಲ್ಲಾ ಪ್ರಯಾಸ ಪಟ್ಟರೂ ಅವನಿಗೆ ಏನೂ ದೊರಕಲಿಲ್ಲ ಆದರೆ ಕರ್ತನಾದ ಯೇಸು ತೋರಿಸಿದಾಗ (ಯೇಸುವು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದು ಕೃಪೆಯು ಆತನ ಮುಖಾಂತರವೇ ಬಂದಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು) ಪೇತ್ರನು ಬಲೆ ಹರಿಯುವಷ್ಟು ಮೀನುಗಳನ್ನು ಹಿಡಿಯಲು ಶಕ್ತನಾದನು. (ಲೂಕ 5:1-9). ನೀವು ಸಹ ನಿಮ್ಮ ವ್ಯವಹಾರಗಳಲ್ಲಿ ಎಷ್ಟು ಕಾಲಗಳಿಂದ ಪ್ರಯಾಸ ಪಡುತ್ತಿದ್ದರೂ ಪರವಾಗಿಲ್ಲ ದೇವರು ನನಗೆ ಕೊಟ್ಟಿರುವ ಅಧಿಕಾರದಿಂದ ದೇವರ ಕೃಪೆಯು ನಿಮ್ಮ ಕಥೆಯನ್ನು ಬದಲಾಯಿಸಲಿ ಎಂದುನಿಮ್ಮ ಜೀವಿತದ ಮೇಲೆ ಘೋಷಿಸುತ್ತೇನೆ.
ನಿಮ್ಮ ವೈವಾಹಿಕ ವಿಚಾರಗಳಾಗಲೀ ಅಥವಾ ನಿಮ್ಮ ಜೀವಿತದಲ್ಲಿ ಎಂತಹದ್ದೇ ಬಿರುಗಾಳಿರಲಿ ದೇವರ ಕೃಪೆಯು ಎಲ್ಲವನ್ನು ನಿಮ್ಮ ಹಿತಕ್ಕಾಗಿ ಬದಲಾಯಿಸುವುದು.
3. ಕೃಪೆಯು ನೀವು ನಿಮ್ಮ ಸ್ವಂತ ಬಲದಲ್ಲಿ ಮಾಡಲು ಸಾಧ್ಯವಿಲ್ಲದ್ದದನ್ನು ಮಾಡುವಂತೆ ಬಲಕೊಡುತ್ತದೆ.
"ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ." ಎಂದು ಪೌಲನು ಹೇಳುತ್ತಾನೆ. (ಫಿಲಿಪ್ಪಿಯವರಿಗೆ 4:13)
ದಾವೀದನು ಗೊಲ್ಯಾತನನ್ನು ಎದುರುಗೊಂಡಾಗ ದೇವರ ಕೃಪೆಯೇ ಅವನ ಮೇಲೆ ನೆಲೆಗೊಂಡಿರುವುದರಿಂದ ಅವನನ್ನು ಎದುರಿಸುವ ಸವಾಲನ್ನು ಸ್ವೀಕರಿಸಿದನು.. ದೇವರ ಆತ್ಮನೆ ಕೃಪೆಯ ಆತ್ಮನಾಗಿದ್ದಾನೆ. ಮನುಷ್ಯನಿಗೆ ಅಸಾಧ್ಯವಾದದನ್ನು ಸಾಧಿಸಲು ಬಲ ಕೊಡುತ್ತಾನೆ ಇಡೀ ಇಸ್ರಾಯೇಲ್ ಸೇನೆಯು ಗೊಲ್ಯಾತನನ್ನು ಎದುರಿಸಲು ವಿಫಲವಾಗಿತ್ತು ಏಕೆಂದರೆ ಅವರ ಮೇಲೆ ದೇವರ ಕೃಪೆ ನೆಲೆಗೊಂಡಿರಲಿಲ್ಲ.(1ಸಮುವೇಲ 17). ಅನೇಕ ವಿಚಾರಗಳನ್ನು ನೀವು ನಿಮ್ಮ ಸ್ವಂತ ಬಲದಲ್ಲಿ ಮಾಡಲು ಸಾಧ್ಯವಾಗುವುದಿಲ್ಲ ಆದರೆ ದೇವರ ಕೃಪೆಯು ಅಂತ ಪರಿಸ್ಥಿತಿಗಳಲ್ಲಿ ನಿಮ್ಮ ಜೀವನದಲ್ಲಿ ಬಿಡುಗಡೆಯಾದಾಗ ನೀವು ಅನೇಕ ವರ್ಷಗಳಿಂದ ಈಗಾಗಲೇ ಯಶಸ್ವಿಯಾದವರು ಮಾಡುತ್ತಿರುವಂತಹ ದೊಡ್ಡ ಕಾರ್ಯಗಳನ್ನು ಅದಕ್ಕಿಂತ ಉತ್ತಮವಾಗಿ ನೀವು ಮಾಡಲು ಸಶಕ್ತರಾಗುವಿರಿ. ಇದಕ್ಕಾಗಿ ನಿಮಗೆ ದೇವರ ಕೃಪೆಯ ಅವಶ್ಯಕತೆ ಇದೆ
4.ನೀವು ಕೃಪೆಯಿಂದ ರಕ್ಷಿಸಲ್ಪಟ್ಟವರಾಗಿದ್ದೀರಿ ನಿಮ್ಮ ಪುಣ್ಯ ಕ್ರಿಯೆಗಳಿಂದಲ್ಲ (ಎಫಸ್ಸೆ 2:8-9)
ರಕ್ಷಣೆಯು ಸಹ ಕೃಪೆಯ ಪರಿಣಾಮವಾಗಿದೆ. ನಾವು ನಮ್ಮ ಪುಣ್ಯಕ್ರಿಯೆಗಳಿಂದ ರಕ್ಷಿಸಲ್ಪಟ್ಟವರಲ್ಲ ದೇವರ ಕೃಪಾವರದಿಂದಲೇ ಕೃಪೆಯಿಂದ ರಕ್ಷಣೆಯನ್ನು ಹೊಂದಿದವರಾಗಿದ್ದೇವೆ.
ಕೃಪೆಯನ್ನು ಆನಂದಿಸಲು ನೀವು ಮಾಡಬಹುದಾದ ಕೆಲವು ಕಾರ್ಯಗಳಾವುವು?
1. ದೇವರ ಕೃಪೆಯು ಏನೆಲ್ಲ ಮಾಡಬಹುದು ಎಂಬ ಪರಿಜ್ಞಾನ ನಿಮಗಿರಬೇಕು.
ನಾನು ದೇವರ ಕೃಪೆಯು ಏನೆಲ್ಲಾ ಮಾಡಬಹುದು ಎಂಬುದನ್ನು ಕುರಿತಾಗಿ ಕೆಲವು ವಿಚಾರಗಳನ್ನು ಈಗಾಗಲೇ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಆದ್ದರಿಂದ ನೀವು ಅದರ ಕುರಿತ ಪರಿಜ್ಞಾನ ಹೊಂದಬಹುದು. ಇವುಗಳನ್ನು ನಿಮ್ಮ ಜೀವಿತದಲ್ಲಿ ಬಯಸಿರಿ. ಆಗ ನೀವು ಅದನ್ನು ಅನುಭವಿಸಬಹುದು.
2. ಮತ್ತೊಬ್ಬರಿಗೆ ಕೃಪೆ ತೋರಿಸಿರಿ.
ದೇವರು ನಿಮಗೆ ಏನೆಲ್ಲಾ ಮಾಡಬೇಕೆಂದು ಬಯಸುತ್ತಿರೋ ಅದನ್ನೇ ಇತರರಿಗೂ ನೀವು ಮಾಡಿರಿ ಕೃಪೆ ಉಳ್ಳವರಾಗಿರಿ, ಪ್ರೀತಿಸಿರಿ, ಕರುಣೆಯನ್ನು ತೋರಿಸಿರಿ. ದಯಾಪರ ರಾಗಿರಿ ಅವರು ತಪ್ಪು ಮಾಡಿದ್ದರೂ, ನ್ಯಾಯ ತೀರ್ಪಿಗೂ- ಶಿಕ್ಷೆಗೂ ಅರ್ಹರಾಗಿದ್ದರೂ ಅವರಿಗೆ ದೇವರ ಪ್ರೀತಿಯನ್ನು ತೋರಿಸಿರಿ ಇದರಿಂದ ಅವರು ನಿಮ್ಮ ಮೂಲಕವಾಗಿ ದೇವರ ಕೃಪೆಯನ್ನು ಹೊಂದುತ್ತಾರ. ದೇವರಾತ್ಮನು ನಿಮ್ಮನ್ನು ಸರಿಯಾದ ಸಮಯದಲ್ಲಿ ಸರಿಯಾದ ಕಾರ್ಯವನ್ನು ಮಾಡುವಂತೆ ಮುನ್ನಡೆಸಲಿ.
3.ನೀವು ಮಾಡುವ ಕಾರ್ಯಗಳಳೆಲ್ಲಾ ದೇವರ ಕೃಪೆಯನ್ನು ನಿರೀಕ್ಷಿಸಿರಿ.
ಒಂದು ಕಾಲ ಉಂಟು ನಿನ್ನ ನಿರೀಕ್ಷೆಯು ನಿರರ್ಥಕವಾಗದು ಎಂದು ಹೇಳುವ ದೇವರ ವಾಕ್ಯದ ಒಂದು ಆತ್ಮಿಕ ನಿಯಮವಿದೆ. (ಜ್ಞಾನೋಕ್ತಿ 23:18). ನೀವು ಏನನ್ನು ನಿರೀಕ್ಷಿಸುತ್ತೀರೋ, ಅದನ್ನೇ ಹೊಂದುವಿರಿ ಮತ್ತು ಅನುಭವಿಸುವಿರಿ ದೇವರು ತನ್ನ ಕೃಪೆಯಿಂದ ಕಾರ್ಯ ಮಾಡಲಿ ಎಂದು ನೀವು ನಿರೀಕ್ಷಿಸಿಸದಿದ್ದರೆ, ಆತನು ಕಾರ್ಯ ಮಾಡುವುದಿಲ್ಲ.
4. ಕೃಪೆಯು ಜ್ಞಾನದ ಮೂಲಕ ಹೊರಹೊಮ್ಮುತ್ತದೆ.(2 ಪೇತ್ರ 1:2).
ದೇವರ ಜ್ಞಾನದಲ್ಲಿ ಬೆಳೆಯಿರಿ ಆಗ ಕೃಪೆಯಲ್ಲಿಯೂ ನೀವು ಬೆಳೆಯುವಿರಿ.ಕೃಪೆಯು ಜ್ಞಾನವನ್ನು ಬೆಳೆಸುತ್ತದೆ ಮತ್ತು ಜ್ಞಾನವಿಲ್ಲದವರಿಗೆ ಕೃಪೆಯ ಹರಿವಿಕೆಯು ಸೀಮಿತವಾಗಿರುತ್ತದೆ.
5.ಕೃಪೆಯು ಮಾನವ ಪಾತ್ರೆಗಳ ಹಸ್ತಾರ್ಪಣೆ ಮೂಲಕ ಮತ್ತೊಬ್ಬರಿಗೆ ಹರಿಯಬಲ್ಲದು.
ಕೆಲವರು ದೇವರ ಕೃಪೆಯ ಆಳವಾದ ಜ್ಞಾನದಲ್ಲಿ ಸಂಪನ್ನರಾಗಿರುತ್ತಾರೆ. ಅವರ ಜೀವನದಲ್ಲಿ ದೊಡ್ಡ ಅಳತೆಯ ಕೃಪೆಯ ಆತ್ಮವನ್ನು ಹೊಂದಿದವರಾಗಿರುತ್ತಾರೆ. ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಕೃಪೆ ಇರುತ್ತದೆ ಆದರೆ ಅನೇಕ ವಿಚಾರಗಳಲ್ಲಿ ನಮಗೆ ಕೃಪೆಯ ಕೊರತೆ ಇರುತ್ತದೆ. ಮಾನವ ಪಾತ್ರೆಗಳ ಹಸ್ತಾರ್ಪಣೆ ಮೂಲಕ ವರದಾನದ ಪಾಲುಗಳ ಹರಿವಿಕೆಗೆ ಎರಡು ಉದಾಹರಣೆ ಇಲ್ಲಿದೆ.(1). ಎಲಿಷನು ಎಲಿಯನ ಆತ್ಮದ ಎರಡು ಪಾಲನ್ನು ಹೊಂದಿಕೊಂಡನು (2 ಅರಸು 2:4-18). ಮತ್ತು ಮೋಶೆಯು ಯಹೋಶುವನ ಜೀವಿತಕ್ಕೆ ವಿವೇಕದ ಆತ್ಮವನ್ನು ಬಿಡುಗಡೆ ಮಾಡಿದನು.(ಧರ್ಮೋಪದೇಶಕಾಂಡ 34:9)
ನೀವು ಕೃಪೆಯ ವೃತ್ತಿಯಲ್ಲಿ ಬೆಳೆಯುವವರ ಒಡನಾಡಿ ಆಗಿದ್ದರೆ,ಅವರ ಕೃಪೆಯು ನಿಮ್ಮನ್ನು ಕಬ್ಬಿಣವು ಇನ್ನೊಂದು ಕಬ್ಬಿಣವನ್ನು ಹರಿತ ಮಾಡುವಂತೆ ನಿಮ್ಮನ್ನು ಹರಿತಗೊಳಿಸುತ್ತದೆ. ಒಂದು ಸಭೆಯ ಸೇವಕಾರ್ಯದಲ್ಲಿ ನೀವಿದ್ದರೆ ನಂಬಿಗಸ್ತರಾಗಿ ನೀವು ಸೇವೆಯನ್ನು ಮಾಡುವಾಗ ನಿಮ್ಮ ಜೀವಿತದ ನಿರ್ದಿಷ್ಟ ಕ್ಷೇತ್ರದಲ್ಲೂ ಸಹ ಆ ಕೃಪೆಯು ಹರಿಯುವಂತೆ ಈ ಹಸ್ತಾರ್ಪಣೆ ಮಾಡುತ್ತದೆ.
6.ನಿಮ್ಮನ್ನು ನೀವು ತಗ್ಗಿಸಿಕೊಳ್ಳಿ.
ಯಾಕೋಬ 4:6 ದೇವರು ದೀನರಿಗೆ ಕೃಪೆಯನ್ನು ತೋರಿಸುತ್ತಾನೆ ಎಂದು ಹೇಳುತ್ತದೆ. ಹಾಗಾಗಿ ನೀವು ನಿಮ್ಮನ್ನು ತಗ್ಗಿಸಿಕೊಳ್ಳಿ ಆಗ ನೀವು ಇನ್ನು ಹೆಚ್ಚಾದ ಕೃಪೆಯನ್ನು ಆನಂದಿಸಲು ಸಾಧ್ಯವಾಗುತ್ತದೆ.
ಈ ವರ್ಷಕ್ಕೆ ದೇವರ ಕೃಪೆಯೊಂದೆ ನಿಮಗೆ ಸಾಕಾದದ್ದು. ದೇವರ ಕೃಪೆಯು ನಿಮಗೆ ಸಹಾಯ ನೀಡುತ್ತದೆ ನಿಮ್ಮನ್ನು ಬಲಪಡಿಸುತ್ತದೆ ನೀವು ನಿಮ್ಮ ಸಾಮರ್ಥ್ಯದಿಂದ ಗಳಿಸಲಾರದಂತ ಎಲ್ಲವನ್ನು ದೇವರ ಕೃಪೆಯು ನಿಮಗೆ ಒದಗಿಸಿಕೊಡುತ್ತದೆ ಈಗ ನಿಮ್ಮ ಸ್ವರ ಎತ್ತಿ ಹೇಳಿರಿ" ಈ ವರ್ಷದಲ್ಲಿ ನಾನು ದೇವರ ಕೃಪೆಯನ್ನು ಯೇಸು ನಾಮದಲ್ಲಿ ಆನಂದಿಸುವೆನು" ಎಂದು.
Bible Reading Plan : 1 Corinthians 16-2 Corinthians 9
ಪ್ರಾರ್ಥನೆಗಳು
ಈ ಪ್ರಾರ್ಥನಾ ಕ್ಷಿಪಣಿಗಳು ನಿಮ್ಮ ಹೃದಯದ ಆಳದಿಂದ ಬರುವವರೆಗೂ ಪುನರಾವರ್ತನೆ ಮಾಡಿರಿ. ಆನಂತರವೇ ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗಿರಿ. ಒಂದೊಂದು ಪ್ರಾರ್ಥನಾ ಅಂಶಗಳನ್ನು ವ್ಯಕ್ತಿಗತ ಮಾಡಿಕೊಂಡು ಪ್ರತಿಯೊಂದಕ್ಕೂ ಕನಿಷ್ಠ ಪಕ್ಷ ಒಂದೊಂದು ನಿಮಿಷವಾದರೂ ಮುಡಿಪಾಗಿಡಿ. ಮುಂದಿನ ಪ್ರಾರ್ಥನಾ ಅಂಶಕ್ಕೆ ಹೋಗುವ ಮೊದಲು ನಿಜವಾಗಿಯೂ ಹೃತ್ಪೂರ್ವಕವಾಗಿ ಪ್ರಾರ್ಥಿಸಿದ್ದೀರಿ ಎಂದು ಖಚಿತ ಪಡಿಸಿಕೊಳ್ಳಿ.
1. ತಂದೆಯೇ ನಾನು ನನ್ನ ಕುಟುಂಬದಲ್ಲಿಯೂ ಹಣಕಾಸಿನ ಪರಿಸ್ಥಿತಿಯಲ್ಲಿಯೂ ನಿನ್ನ ಕೃಪೆಯನ್ನು ಆನಂದಿಸುವಂತೆ ಯೇಸುನಾಮದಲ್ಲಿ ಮಾಡು. (ಫಿಲಿಪ್ಪಿ 4:19)
2.ನನ್ನ ಜೀವಿತದಲ್ಲಿಯೂ ನನ್ನ ಹಣಕಾಸಿನ ಪರಿಸ್ಥಿತಿಯಲ್ಲಿಯೂ ಇರುವ ಎಲ್ಲಾ ಕಷ್ಟಗಳನ್ನು ಯೇಸು ನಾಮದಲ್ಲಿ ದೇವರ ಕೃಪೆಯಿಂದ ನಾಶಪಡಿಸುತ್ತೇನೆ. (ಕೀರ್ತನೆ 34:19).
3. ಕರ್ತನೇ, ಅಸಾಧ್ಯವಾದ ಕಾರ್ಯಗಳನ್ನು ಮಾಡಲು ಯೇಸು ನಾಮದಲ್ಲಿ ನನಗೆ ನಿನ್ನ ಕೃಪೆಯನ್ನು ಅನುಗ್ರಹಿಸು.
(ಲೂಕ 1:37)
4. ತಂದೆಯೇ, ನಾನು ಉನ್ನತ ಸ್ಥಿತಿಗೆ ಏರಲು ಯೇಸು ನಾಮದಲ್ಲಿ ನಿನ್ನ ಕೃಪೆಯನ್ನು ಅನುಗ್ರಹಿಸು.(ಧರ್ಮೋಪದೇಶಕಾಂಡ 28:13)
5. ದೇವರ ಕೃಪೆಯೇ ಯೇಸು ನಾಮದಲ್ಲಿ ನನಗಾಗಿ ಸಹಾಯವನ್ನು ಕಳುಹಿಸು (ಇಬ್ರಿಯ 4:16)
6.ದೇವರ ಕೃಪೆಯೇ ಈ ವರ್ಷದಲ್ಲಿ ನನಗಾಗಿ ನೂತನ ಬಾಗಿಲುಗಳನ್ನು ಯೇಸು ನಾಮದಲ್ಲಿ ತೆರೆಮಾಡು (ಪ್ರಕಟಣೆ 3:6)
7. ತಂದೆಯೇ, ನಿನ್ನ ಕೃಪೆಯಿಂದ ನನ್ನ ಬಡ್ತಿಗೂ ಆಶೀರ್ವಾದಗಳಿಗೂ ತಡೆಯಾಗಿ ಅಡ್ಡ ನಿಂತಿರುವ ಎಲ್ಲ ಉನ್ನತ ಪುರುಷರ ಮೇಲೆ ಯೇಸು ನಾಮದಲ್ಲಿ ಜಯ ಸಾಧಿಸುತ್ತೇನೆ. (ರೋಮ 8:37).
8. ತಂದೆಯೇ ನಿನ್ನ ಕೃಪೆಯ ಆಳವಾದ ಪ್ರಕಟಣೆಗಳನ್ನು ಯೇಸುನಾಮದಲ್ಲಿ ನನಗೆ ಅನುಗ್ರಹಿಸು( ಎಫಸ್ಸೆ 1:17)
9. ತಂದೆಯೇ,ನಿನ್ನ ಕೃಪೆಯಿಂದ ಎಲ್ಲಾ ಕೊರತೆಗಳ ಬಡತನದ ಚಕ್ರವನ್ನು ಯೇಸು ನಾಮದಲ್ಲಿ ಮುರಿದು ಹಾಕುವೆನು (2 ಕೊರಿಯಂತೆ 9:8)
10. ತಂದೆಯೇ ಈ ವರ್ಷದಲ್ಲಿ ನಿನ್ನ ಕೃಪೆಯಿಂದಲೂ ದಯೆಯಿಂದಲೂ ಯೇಸು ನಾಮದಲ್ಲಿ ನನಗೆ ಸಂತೃಪ್ತಿಯಾಗಲಿ. (ಕೀರ್ತನೆ 90:17)
Join our WhatsApp Channel
Most Read
● ನಾವು ದೇವದೂತರಿಗೆ ಪ್ರಾರ್ಥನೆ ಮಾಡಬಹುದೇ● ಅಂತ್ಯದಿನಗಳ ಕುರಿತು ಪ್ರವಾದನ ಯುಕ್ತ ಗೂಡಾರ್ಥ ವಿವರಣೆ
● ದೇವರ ಯೋಜನೆಯಲ್ಲಿರುವ ತಂತ್ರಗಾರಿಕೆಯ ಶಕ್ತಿ
● ತುರ್ತು ಪ್ರಾರ್ಥನೆ.
● ಮೂರ್ಖತನದಿಂದ ನಂಬಿಕೆಯನ್ನು ಪ್ರತ್ಯೇಕಿಸುವುದು
● ಒಳಕೋಣೆ
● ನಿಮ್ಮ ಭೂಮಿಯನ್ನು ಉತ್ತು ಹದಮಾಡಿರಿ
ಅನಿಸಿಕೆಗಳು