ಅನುದಿನದ ಮನ್ನಾ
2
0
69
ಮನುಷ್ಯರ ಸಂಪ್ರದಾಯಗಳು
Monday, 31st of March 2025
Categories :
ನಂಬಿಕೆಗಳನ್ನು(Beliefs)
ರೂಪಾಂತರ(transformation)
"ಅವನಿಗೆ ತನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕಾದದ್ದಿಲ್ಲ ಅನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿವಿುತ್ತ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ."(ಮತ್ತಾಯ 15:6)
ನಮ್ಮೆಲ್ಲರಿಗೂ ನಮ್ಮ ಕಾರ್ಯಗಳನ್ನು ಮತ್ತು ಸಂಬಂಧಗಳನ್ನು ಮಾರ್ಗದರ್ಶಿಸುವ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳಿವೆ. ಈ ಸಂಪ್ರದಾಯಗಳು ಆಯಾ ಸ್ಥಳಗಳು ಮತ್ತು ಆಯಾ ಪ್ರದೇಶಗಳಿಗೆ ತಕ್ಕಂತೆ ವಿಶಿಷ್ಟವಾಗಿರುತ್ತವೆ. ಕೆಲವು ಜನರು ನಿರ್ದಿಷ್ಟ ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟ ರೀತಿಯಲ್ಲಿ ಉಡುಗೆ ತೊಡುತ್ತಾರೆ; ಕೆಲವು ಸಂಪ್ರದಾಯಗಳು ನಿಮ್ಮ ಕೈಯಿಂದಲೇ ಕೆಲವು ಆಹಾರಗಳನ್ನು ತಿನ್ನಬೇಕೆಂದು ಒತ್ತಾಯಿಸುತ್ತವೆ, ಆದರೆ ಕೆಲವು ಜನರು ತಿನ್ನಲು ಮರದ ಕಡ್ಡಿಗಳನ್ನು ಬಳಸುತ್ತಾರೆ. ಕೆಲವು ಸಂಪ್ರದಾಯಗಳು ಕೆಲವು ವಿವಾಹ ವಿಧಿಗಳೊಂದಿಗೆ ಉತ್ತಮವಾಗಿರುತ್ತವೆ, ಆದರೆ ಮತ್ತೆ ಬೇರೆಡೆಯಲ್ಲಿ ಅವು ನಿಷಿದ್ಧವಾಗಿದೆ.
ಸಂಪ್ರದಾಯಗಳು ನಮ್ಮ ದೈನಂದಿನ ಜೀವನದಲ್ಲಿ ಹೆಣೆಯಲ್ಪಟ್ಟಂತೆ ಇದ್ದು ಕೆಲವೊಮ್ಮೆ ನಾವು ದೇವರ ವಾಕ್ಯಕ್ಕಿಂತ ಅವುಗಳನ್ನು ಉನ್ನತೀಕರಿಸಿದಾಗ ದೇವರ ಆಶೀರ್ವಾದಗಳನ್ನು ಆನಂದಿಸುವುದನ್ನು ತಡೆಯುವ ತಡೆಗೋಡೆಯಾಗಿ ನಿಲ್ಲುತ್ತವೆ. ಮತ್ತಾಯ 15:3-6 ರಲ್ಲಿ, ದೇವರ ಆಜ್ಞೆಗಳಿಗಿಂತ ಮನುಷ್ಯರ ಸಂಪ್ರದಾಯಗಳಿಗೆ ಆದ್ಯತೆ ನೀಡಿದ್ದಕ್ಕಾಗಿ ಯೇಸು ಫರಿಸಾಯರನ್ನು ಖಂಡಿಸಿದನು. ಈ ಸಂಪ್ರದಾಯಗಳು ಸಾಮಾನ್ಯವಾಗಿ ಕೇವಲ ಸಂಪ್ರದಾಯವಾಗುವ ಬದಲು ಬೋದನೆಗಳೇ ಆಗಿಬಿಟ್ಟು ದೇವರ ವಾಕ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಅವುಗಳಿಗೆ ನೀಡಲಾಗುತ್ತದೆ. ಇವು ದೇವರ ಸತ್ಯದಲ್ಲಿಡಬೇಕಾದ ನಮ್ಮ ತಿಳುವಳಿಕೆಯನ್ನು ತಡೆದು ಆತನ ಆಶೀರ್ವಾದಗಳನ್ನು ಅನುಭವಿಸುವುದಂತೆ ತಡೆಯುತ್ತವೆ. ಭೂಮಿಯು ದೇವರ ವಾಕ್ಯದಿಂದ ರೂಪಿಸಲ್ಪಟ್ಟಿದೆ ಎಂಬುದನ್ನು ನಾವು ಮರೆತುಬಿಡುತ್ತೇವೆ, ಆದ್ದರಿಂದ ನಾವು ದೇವರ ವಾಕ್ಯದ ಸತ್ಯವನ್ನು ಅನುಸರಿಸುವ ಬದಲು ಈ ಮಾನವ ಸಂಪ್ರದಾಯಕ್ಕೆ ವಿಧೇಯರಾಗಿ ನಮ್ಮ ಜೀವನವನ್ನು ನಡೆಸುವವರಾಗುತ್ತೇವೆ.
"ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ದೇಶದ ಜನಾಂಗಗಳನ್ನು ನಿಮ್ಮ ದೇವರಾದ ಯೆಹೋವನು ನಿಮ್ಮ ಮುಂದೆ ನಾಶಮಾಡಿದ ತರುವಾಯ ನೀವು ಅವರ ದೇಶವನ್ನು ತೆಗೆದುಕೊಂಡು ಅದರಲ್ಲಿ ವಾಸವಾಗಿರುವಾಗ ನೀವು ಭ್ರಮೆಗೊಂಡು ನಿಮ್ಮ ಎದುರಿನಿಂದ ನಾಶವಾಗಿ ಹೋದವರ ದುಷ್ಪದ್ಧತಿಗಳನ್ನು ಅನುಸರಿಸಬಾರದು ನೋಡಿರಿ. ನೀವು - ಈ ದೇಶದ ಜನರು ತಮ್ಮ ದೇವರುಗಳನ್ನು ಹೇಗೆ ಸೇವಿಸುತ್ತಿದ್ದರು? ಹಾಗೆಯೇ ನಾವೂ ಸೇವಿಸುವೆವು ಎಂದು ಹೇಳಿಕೊಳ್ಳುವವರಾಗಿ ಅವರ ದೇವರುಗಳ ವಿಷಯದಲ್ಲಿ ವಿಚಾರಣೆಯನ್ನು ಎಷ್ಟು ಮಾತ್ರವೂ ಮಾಡಬಾರದು. ಯೆಹೋವನಿಗೆ ಅಸಹ್ಯವಾಗಿರುವ ಹಲವು ಹೇಸಿಗೆ ಕೆಲಸಗಳನ್ನು ಅವರು ತಮ್ಮ ದೇವತೆಗಳಿಗೋಸ್ಕರ ನಡಿಸುತ್ತಾರಲ್ಲಾ; ತಮ್ಮ ಗಂಡು ಹೆಣ್ಣು ಮಕ್ಕಳನ್ನು ತಮ್ಮ ದೇವತೆಗಳಿಗೋಸ್ಕರ ಬೆಂಕಿಯಲ್ಲಿ ಸುಡುತ್ತಾರಲ್ಲಾ. ನೀವು ನಿಮ್ಮ ದೇವರಾದ ಯೆಹೋವನನ್ನು ಹಾಗೆ ಸೇವಿಸಲೇಬಾರದು."
ಎಂದು ಧರ್ಮೋಪದೇಶಕಾಂಡ 12:29-32 ರಲ್ಲಿ ದೇವರು ಇಸ್ರಾಯೇಲ್ಯರನ್ನು ಎಚ್ಚರಿಸಿದನು.
ಅವರು ಸ್ವಾಧೀನಪಡಿಸಿಕೊಳ್ಳಲು ಹೋಗುತ್ತಿರುವ ದೇಶದ ಜನರ ಜೀವನ ವಿಧಾನಗಳು ಮತ್ತು ಸಂಪ್ರದಾಯಗಳ ಬಗ್ಗೆ ಎಷ್ಟು ಮಾತ್ರಕ್ಕೂ ಆಸಕ್ತಿ ವಹಿಸಬೇಡಿ ಎಂದು ಆತನು ಅವರಿಗೆ ಹೇಳಿದ್ದನು . "ಅವರ ಸಂಪ್ರದಾಯದ ಬಗ್ಗೆ ವಿಚಾರಿಸದೇ ನನ್ನ ಆಜ್ಞೆಗೆ ಅಂಟಿಕೊಳ್ಳಿ ; ನಿಮ್ಮ ಜೀವನವನ್ನು ನನ್ನ ವಾಕ್ಯವು ಆಳಲಿ ಮತ್ತು ನಿಯಂತ್ರಿಸಲಿ" ಎಂದು ದೇವರು ಹೇಳುತ್ತಾನೆ.
"ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕ ಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ." ಎಂದು ಅಪೊಸ್ತಲನಾದ ಪೌಲನು ಕೊಲೊಸ್ಸೆ 2:8 ರಲ್ಲಿ ಎಚ್ಚರಿಸುತ್ತಾನೆ. ಹಾಗಾದರೆ, ದೇವರ ಬಹುಮುಖ ಶಕ್ತಿಯನ್ನು ಕಾರ್ಯಮಾಡುವುದನ್ನು ತಡೆಯುವ ಯಾವ ಸಂಪ್ರದಾಯವನ್ನು ನೀವು ಹಿಡಿದಿಟ್ಟುಕೊಂಡಿದ್ದೀರಿ?
ಅನೇಕ ಕ್ರೈಸ್ತರು ಕರ್ತನನ್ನು ಆಳವಾಗಿ ಪ್ರೀತಿಸುತ್ತಿದ್ದರೂ, 1 ಕೊರಿಂಥ 12:7-10 ರಲ್ಲಿ ಪಟ್ಟಿ ಮಾಡಲಾದ ಪವಿತ್ರಾತ್ಮನ ಒಂಬತ್ತು ವರಗಳು ಇಂದಿಗೂ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಕೆಲವರು ನಂಬುವುದೇ ಇಲ್ಲ. ಅಪೊಸ್ತಲನಾದ ಯೋಹಾನನು ಸತ್ತ ನಂತರ ಸ್ವಸ್ತತೆಯ ವರವು ನಿಂತುಹೋಯಿತು ಎಂದು ಕೆಲವರು ನಂಬುತ್ತಾರೆ. ಈ ವಿಶ್ವಾಸಿಗಳನ್ನು "ನಂಬಿಕೆಯಿಲ್ಲದ ವಿಶ್ವಾಸಿಗಳು" ಎಂದು ಪರಿಗಣಿಸಬಹುದು ಏಕೆಂದರೆ ಅವರು ಸತ್ಯವೇದವನ್ನು ನಂಬುತ್ತಾರೆ, ಆದರೆ ಮಾನವ ನಿರ್ಮಿತ ದೇವತಾಶಾಸ್ತ್ರದ ಸಂಪ್ರದಾಯಗಳಿಗೆ ಅವರಿಗಿರುವ ಬದ್ಧತೆಯು ಪವಿತ್ರಾತ್ಮನ ಶಕ್ತಿಯನ್ನು ಸಂಪೂರ್ಣವಾಗಿ ಸ್ವೀಕರಿಸುವುದನ್ನು ತಡೆಯುವ ಆತ್ಮೀಕ ತಡೆಗೋಡೆಯನ್ನು ಸೃಷ್ಟಿಸುತ್ತದೆ.
ಈ ತಡೆಗೋಡೆಯು ಇಬ್ರಿಯ ಜನರು ಎದುರಿಸಿದ ಕೋಟೆಕೊತ್ತಲುಗಳಿಂದ ಕೂಡಿದ ನಗರಗಳಿಗೆ ಹೋಲುತ್ತದೆ, ಅವು ಅವರ ವಾಗ್ದತ್ತ ಭೂಮಿಯನ್ನು ಪಡೆದುಕೊಳ್ಳಲು ಅವರನ್ನು ತಡೆಯಿತು. ತಡೆಗೋಡೆಯನ್ನು ದಾಟುವ ಬದಲು, ನಿಷ್ಕ್ರಿಯರಾಗುವುದು ಮತ್ತು ಆತ್ಮೀಕ ವರಗಳು ಮಾಡುವ ಕಾರ್ಯವನ್ನು ತಮಗೆ ಸಂಬಂಧಿಸಿದಲ್ಲ ಎಂದು ತಳ್ಳಿಹಾಕುವುದು ನಿಮಗೆ ಸುಲಭವಾಗಿರಬಹುದು. ಆದ್ದರಿಂದ, ಇಂದಿನಿಂದ, ಪ್ರತಿಯೊಂದು ಸಂಪ್ರದಾಯ ಮತ್ತು ಸಾಂಸ್ಕೃತಿಕ ಮೌಲ್ಯವನ್ನು ದೇವರ ವಾಕ್ಯದೊಂದಿಗೆ ತೂಗಿಸಿ ನೋಡಿ. ದೇವರನ್ನು ಮೆಚ್ಚಿಸಲು ಮತ್ತು ಆತನ ಚಿತ್ತವನ್ನು ಮಾಡುವಲ್ಲಿ ನಿಮ್ಮ ಹೃದಯವು ಹರ್ಷಚಿತ್ತದಿಂದ ಕಾಪಾಡಿಕೊಳ್ಳಿ . ನೀವು ಹಾಗೆ ಮಾಡುವಾಗ, ನಿಮ್ಮ ಜೀವನವು ಅಲೌಕಿಕತೆಯ ಅಭಿವ್ಯಕ್ತಿಗೆ ವೇದಿಕೆಯಾಗುತ್ತದೆ.
Bible Reading: Ruth 2-4
ಪ್ರಾರ್ಥನೆಗಳು
ತಂದೆಯೇ, ನಿನ್ನ ವಾಕ್ಯದ ಮೂಲಕ ನಾನಿಂದು ಪಡೆದ ಬೆಳಕಿಗಾಗಿ ಯೇಸುನಾಮದಲ್ಲಿ ನಿನಗೇ ಸ್ತೋತ್ರ. ನಿನ್ನ ವಾಕ್ಯಕ್ಕೆ ವಿಧೇಯನಾಗಿ ಇರುವಂತೆ ನನಗೆ ಸಹಾಯ ಮಾಡಬೇಕೆಂದು ಪ್ರಾರ್ಥಿಸುತ್ತೇನೆ. ನಿನ್ನ ವಾಕ್ಯದ ಸತ್ಯವು ನನ್ನ ಜೀವನವನ್ನು ನಡೆಸಲಿ. ನಿನ್ನ ಅನುಗ್ರಹವು ನನ್ನ ಮೇಲೆ ಯಾವಾಗಲೂ ಸುರಿಸಲ್ಪಡಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನನ್ನ ಜೀವನದ ಮೇಲೆ ಹೇರಲ್ಪಡುವ ಮನುಷ್ಯರ ಸಂಪ್ರದಾಯಗಳ ಪ್ರತಿಯೊಂದು ಮಿತಿಯಿಂದ ಮುಕ್ತನಾಗುತ್ತೇನೆ ಎಂದು ಯೇಸುನಾಮದಲ್ಲಿ ಆದೇಶಿಸುತ್ತೇನೆ ಆಮೆನ್
Join our WhatsApp Channel

Most Read
● ನೆಪ ಹೇಳುವ ಕಲೆ● ದಿನ 39 :40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ದಿನ 18:40ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಅಂತ್ಯಕಾಲದ ಸಮಯದ 7 ಪ್ರಮುಖವಾದ ಪ್ರವಾದನಾ ಸೂಚನೆಗಳು: #2
● ದಿನ 33:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
● ಶುದ್ಧೀಕರಣದ ತೈಲ
● ದಿನ 21:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ.
ಅನಿಸಿಕೆಗಳು