ಅನುದಿನದ ಮನ್ನಾ
ಶಾಂತಿಯು ನಮ್ಮ ಬಾಧ್ಯತೆಯಾಗಿದೆ.
Sunday, 28th of January 2024
5
1
592
Categories :
ಸಮಾಧಾನ(Peace)
"ಶಾಂತಿಯನ್ನು ನಿಮಗೆ ಬಿಟ್ಟುಹೋಗುತ್ತೇನೆ, ನನ್ನಲ್ಲಿರುವಂಥ ಶಾಂತಿಯನ್ನು ನಿಮಗೆ ಕೊಡುತ್ತೇನೆ; ಲೋಕವು ಕೊಡುವ ರೀತಿಯಿಂದ ನಾನು ನಿಮಗೆ ಕೊಡುವದಿಲ್ಲ. ನಿಮ್ಮ ಹೃದಯವು ಕಳವಳಗೊಳ್ಳದಿರಲಿ, ಹೆದರದಿರಲಿ." ಎಂಬ ಯೋಹಾನ 14:27ರಲ್ಲಿರುವ ಹೃದಯದಾಳದಲ್ಲಿ ಅಲೆಗಳನ್ನು ಎಬ್ಬಿಸುವಂತ ಈ ವಾಕ್ಯಗಳನ್ನು ತನ್ನ ಶಿಷ್ಯರಿಗೆ ಕರ್ತನಾದ ಯೇಸುವು ಹೇಳುತ್ತಾ 'ಶಾಂತಿ ಎಂಬ ಸ್ವಾಸ್ತ್ಯವನ್ನು' ಕುರಿತು ಅದರಲ್ಲಿರುವ ಮಹತ್ತರವಾದ ಸತ್ಯವನ್ನು ವಿವರಿಸುತ್ತಾನೆ. ಕರ್ತನಾದ ಯೇಸುವು ತಾನು ಈ ಭೂಲೋಕವನ್ನು ಬಿಟ್ಟು ಹೋಗಲು ಸಿದ್ಧವಾಗುತ್ತಿದ್ದೇನೆ ಎಂದು ಘೋಷಿಸುತ್ತಾ ಶಾಂತಿಯ ಸ್ವರೂಪದ ಈ ಕೆಳಕಂಡ ಸತ್ಯಗಳನ್ನು ಅನಾವರಣಗೊಳಿಸುತ್ತಾನೆ.
1. ಶಾಂತಿಯು ಒಂದು ದೈವಿಕ ವರವಾಗಿದೆ.
ಎ) ಶಾಂತಿ ಎಂಬುದು ನಿಮ್ಮೊಳಗೆ ಇದೆ ಎಂದು ಲೋಕವು ಹೇಳುವ ಮಾತಿಗೆ ವ್ಯತಿರಿಕ್ತವಾಗಿ ಶಾಂತಿಯು ಒಂದು ದೈವಿಕವಾಗಿ ಇಳಿದು ಬರಬೇಕಾದ ವರವೆಂದು ಸತ್ಯವೇದವು ಶಾಂತಿಯನ್ನು ಮಹಿಮೆ ಪಡಿಸುತ್ತದೆ. ಯೋಹಾನ 14:27ರಲ್ಲಿ ಯೇಸುವು ತಾನು ಕೊಡುವ ಶಾಂತಿಯನ್ನು ಈ ಲೋಕ ಹೇಳುವ ಶಾಂತಿಯಿಂದ ವಿಭಜಿಸುತ್ತಾನೆ. ಫಿಲಿಪ್ಪಿ 4:7 ರ ಈ ವಾಕ್ಯವೂ ಸಹ ಇದನ್ನೇ ಪ್ರತಿಧ್ವನಿಸುತ್ತದೆ.
"ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು."ಈ ದೈವಿಕ ಶಾಂತಿಯು ಮಾನವ ನಿರ್ಮಿತ ಪ್ರಯಾಸದಿಂದ ಬರದೆ ದೇವರಿಂದ ದೊರೆತಿರುವ ವರವಾಗಿದೆ.
ಬಿ). ಅನನ್ಯ ಶರಣಾಗತಿಯ ಮೂಲಕ ದೊರೆಯುವ ಶಾಂತಿ.
ಲೂಕ 10:38-42 ರಲ್ಲಿನ ಮಾರ್ಥಾ ಮತ್ತು ಮರಿಯಳ ಚರಿತ್ರೆಯು ಮಾನವ ಪ್ರಯತ್ನ ಮತ್ತು ದೈವಿಕ ಶಾಂತಿ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. ಮಾರ್ಥಳು ತನ್ನ ಕೆಲಸದ ಗಡಿಬಿಡಿಯಲ್ಲಿಯೇ ಸಿಕ್ಕಿಹಾಕಿಕೊಂಡಿರುವಾಗ ಮರಿಯಳು ಯೇಸುವಿನ ಪಾದದ ಬಳಿ ಕುಳಿತುಕೊಳ್ಳುವುದನ್ನು ಆರಿಸಿಕೊಂಡಿದ್ದಳು. ಈ ಒಂದು ಸನ್ನಿವೇಶದಲ್ಲಿ ಶರಣಾಗತಿ ಮತ್ತು ಮಾನವ ಗ್ರಹಿಕೆ ಎರಡೂ ಸಹ ಸಾಕಾರಗೊಂಡಿದೆ.. ನಿಜವಾದ ಶಾಂತಿಯು ನಿಶ್ಚಲತೆಯಿಂದ ದೇವರ ಪ್ರಸನ್ನತೆಯಲ್ಲಿ ಮುಳುಗುವುದರಲ್ಲಿಯೇ ಇದೆಯೇ ಹೊರತು ಭಾವೊನ್ಮತ್ತ ಚಟುವಟಿಕೆಗಳಿಂದ ದೊರೆಯುವುದಿಲ್ಲ ಎಂಬುದನ್ನು ಸೂಚಿಸುತ್ತದೆ.
2.ಅದು ಆತ್ಮನ ಫಲವಾಗಿದೆ.
"ಆದರೆ ದೇವರಾತ್ಮನಿಂದ ಉಂಟಾಗುವ ಫಲವೇನಂದರೆ - ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ. [23] ಇಂಥವುಗಳನ್ನು ಯಾವ ಧರ್ಮಶಾಸ್ತ್ರವೂ ಆಕ್ಷೇಪಿಸುವದಿಲ್ಲ."(ಗಲಾತ್ಯದವರಿಗೆ 5:22-23).
ಈ ಒಂದು ವಾಕ್ಯವು ಶಾಂತಿ ಎಂಬುದು ನಾವು ಪವಿತ್ರಾತ್ಮನೊಂದಿಗೆ ಅನ್ಯೋನ್ಯತೆಯಿಂದ ಇರುವಾಗ ನಮ್ಮೊಳಗೆ ಬೆಳೆಯುವ ಫಲವಾಗಿದೆ ಎಂಬುದನ್ನು ವಿವರಿಸುತ್ತದೆ. ಈ ಶಾಂತಿಯೆ ನಿಮ್ಮ ಆತ್ಮಿಕ ಪ್ರಭುದ್ದತೆಯನ್ನು ಗುರುತಿಸುವ ಅಂಶವಾಗಿದೆ ಮತ್ತು ಇದುವೇ ದೇವರೊಂದಿಗಿನ ನಿಮ್ಮ ಆಳವಾದ ಅನ್ಯೋನ್ಯತೆಯಿಂದ ಹೊರಹೊಮ್ಮುವ ನೆಮ್ಮದಿಯ ಭರವಸೆಯಾಗಿದೆ.
3.ಶಾಂತಿಯ ಸಾಧನವಾಗಿ ಮಾರ್ಪಡುವಿಕೆ.
ಎ) ಶಾಂತಿಯನ್ನು ಪ್ರಸಾರ ಮಾಡುವುದು.
ನಾವು ದೇವರಿಂದಲೇ ಶಾಂತಿಯನ್ನು ಹೊಂದಿಕೊಳ್ಳುವವರಾಗಿರುವುದರಿಂದ ಕ್ರೈಸ್ತರಾಗಿ ಈ ಸಂಕಟಮಯವಾದ ಲೋಕದಲ್ಲಿ ಶಾಂತಿಯ ರಾಯಭಾರಿಗಳಾಗಿರಲು ಕರೆಯಲ್ಪಟ್ಟಿದ್ದೇವೆ. ಮತ್ತಾಯ 5:9 ಹೇಳುತ್ತದೆ.. "ಸಮಾಧಾನ ಪಡಿಸುವವರು ಧನ್ಯರು; ಅವರು ದೇವರ ಮಕ್ಕಳು ಅನ್ನಿಸಿಕೊಳ್ಳುವರು." ಎಂದು ಈ ಸಮಾಧಾನ ಪಡಿಸುವ ಕಾರ್ಯವು ಸುಪ್ತವಾದ ಕಾರ್ಯವಾಗಿರದೆ ನಾವು ದೇವರಿಂದ ಹೊಂದಿದ ಶಾಂತಿಯನ್ನು ಹರಡುವಂತ ಚಟುವಟಿಕೆಯಿಂದ ಕೂಡಿರುವ ಕಾರ್ಯವಾಗಿದೆ.
ಬಿ). ಬಿರುಗಾಳಿಯ ಮಧ್ಯೆ ಸಮಾಧಾನ.
ಜೀವನದ ಬಿರುಗಾಳಿಯಲ್ಲಿ ದೇವರ ಶಾಂತಿಯಲ್ಲಿ ನಿವಾಸಿಸುವುದು ಲಂಗರಿನ ಹಾಗೆ ಕಾರ್ಯ ಮಾಡುತ್ತದೆ.
"ಬಿಡಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿದುಕೊಳ್ಳಿರಿ. " ಕೀರ್ತನೆ 46:10 ನಮಗೆ ಸಲಹೆ ನೀಡುವಂತೆ,ಯಾರು ಆತನ ಮೇಲೆ ಭರವಸೆಯಿಂದ ಇರುತ್ತಾರೆಯೋ ಅವರಿಗೆ ಅಲೌಕಿಕವಾದ ವಿಶ್ರಾಂತಿಯು ದೊರೆಯುತ್ತದೆ ಬಿರುಗಾಳಿಯ ಗಲಿಬಿಲಿಗಳ ಮಧ್ಯದಲ್ಲೂ ಕೂಡ ನಾವು ಅದನ್ನು ಹೊಂದುಕೊಳ್ಳುವವರಾಗಿದ್ದೇವೆ.
4.ಪ್ರತಿನಿತ್ಯವೂ ಶಾಂತಿಯನ್ನು ಪಾಲಿಸಿ ಪೋಷಿಸುವುದು.
ಎ). ನಿಮ್ಮ ದಿನವನ್ನು ದೇವರೊಂದಿಗೆ ಆರಂಭಿಸಿರಿ.
ಪ್ರತಿನಿತ್ಯವೂ ದೇವರ ವಾಕ್ಯಗಳನ್ನು ಓದುವ ಮೂಲಕ ಪ್ರಾರ್ಥಿಸುವ ಮೂಲಕ ದೇವರೊಂದಿಗೆ ಐಕ್ಯತೆಯಲ್ಲಿ ದಿನವನ್ನು ಆರಂಭಿಸುವಂಥದ್ದು ಶಾಂತಿಯನ್ನು ಪೋಷಿಸಲು ಇರುವ ಪ್ರಮುಖ ಮಾರ್ಗವಾಗಿದೆ. ಯೇಶಾಯ 26:3ರ ದೇವರವಾಕ್ಯವು "ಸ್ಥಿರಚಿತ್ತನನ್ನು ಶಾಂತಿಯಲ್ಲಿ ನೆಲೆಗೊಳಿಸಿ ಕಾಯುವಿ; ಅವನಿಗೆ ನಿನ್ನಲ್ಲಿ ಭರವಸವಿದೆ."ಎಂಬ ವಾಗ್ದಾನವನ್ನು ನೀಡಿದೆ. ಆದ್ದರಿಂದ ಈ ಒಂದು ದೈನಂದಿನ ಅಭ್ಯಾಸವನ್ನು ನಾವು ಸಂಪ್ರದಾಯದಂತೆ ರೂಡಿಸಿಕೊಳ್ಳದೆ ದೇವರ ಪ್ರಸನ್ನತೆಯೊಂದಿಗೆ ನಮ್ಮ ಹೃದಯವನ್ನು ಒಗ್ಗೂಡಿಸಿಕೊಳ್ಳುವ ಮಾರ್ಗವಾಗಿ ಮಾಡಿಕೊಳ್ಳಬೇಕು..
ಬಿ). ಶಾಂತಿಯಲ್ಲಿ ಪ್ರಬುದ್ಧತೆ ಹೊಂದಿರಿ.
ಹೀಗೆ ಪ್ರತಿನಿತ್ಯವೂ ನಾವು ನಡೆಯುತ್ತಿದ್ದರೆ ದೇವರ ಶಾಂತಿಯು ನಮ್ಮೊಳಗೆ ಆಳವಾಗಿ ಬೆಳೆಯುತ್ತಾ ಹೋಗಿ ನಮ್ಮನ್ನು ಪ್ರಬುದ್ಧಗೊಳಿಸುತ್ತಾ ಹೋಗುತ್ತದೆ. ಇದಕ್ಕೆ ಅಪೋಸ್ತಲನಾದ ಪೌಲನ ಜೀವಿತವೇ ಸಾಕ್ಷಿಯಾಗಿದೆ. ಅಪೋಸ್ತಲನಾದ ಪೌಲನು 2 ಕೊರಿಯಂತ 12: 9-10 ರಲ್ಲಿ ಅನೇಕ ಕಷ್ಟಗಳ- ಹಿಂಸೆಗಳ ಮಧ್ಯದಲ್ಲೂ ಅವನು ಶಾಂತಿಯಲ್ಲಿ ಹೇಗೆ ನೆಲೆಗೊಂಡಿದ್ದನು ಎಂಬುದನ್ನು ವಿವರಿಸುತ್ತಾನೆ.
"ಅದಕ್ಕಾತನು - ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ ಎಂದು ನನಗೆ ಹೇಳಿದ್ದಾನೆ. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲಸಿಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾವಸ್ಥೆಗಳ ವಿಷಯದಲ್ಲಿಯೇ ಬಹುಸಂತೋಷವಾಗಿ ಹೆಚ್ಚಳಪಡುವೆನು. [10] ಆದದರಿಂದ ಕ್ರಿಸ್ತನ ನಿವಿುತ್ತ ನನಗೆ ನಿರ್ಬಲಾವಸ್ಥೆಯೂ ತಿರಸ್ಕಾರವೂ ಕೊರತೆಯೂ ಹಿಂಸೆಯೂ ಇಕ್ಕಟ್ಟೂ ಸಂಭವಿಸಿದಾಗ ಸಂತುಷ್ಟನಾಗಿದ್ದೇನೆ. ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ."
ಯೇಸುಕ್ರಿಸ್ತನು ನಮಗೆ ದಯಪಾಲಿಸಿರುವ ಶಾಂತಿಯು ಪ್ರಮುಖವಾದ ಬಾಧ್ಯತೆಯಾಗಿದ್ದು ಲೋಕದ ಗ್ರಹಿಕೆಗೆ ಮೀರಿದಂತದ್ದಾಗಿದೆ. ಇದು ಶರಣಾಗತಿಯ ಮೂಲಕ ಹೊಂದಿಕೊಳ್ಳುವ ವರವಾಗಿದ್ದು, ಅನುದಿನ ದೇವರ ಅನ್ಯೋನ್ಯತೆಯಲ್ಲಿ ಪೋಷಿಸಲ್ಪಟ್ಟು ನಮ್ಮ ಜೀವಿತದಲ್ಲಿ ನಮ್ಮನ್ನು ಶಾಂತಿದೂತರಾಗಿ ಜೀವಿಸುವಂತೆ ಮಾಡುತ್ತದೆ.ಈ ಅವಿಶ್ರಾಂತ ಲೋಕದಲ್ಲಿ ಈ ದೈವಿಕ ಶಾಂತಿಯು ನಿರೀಕ್ಷೆಯ ದೀಪವಾಗಿ ನಿಲ್ಲುತ್ತದೆ ಮತ್ತು ನಮ್ಮ ಹೃದಯಗಳಲ್ಲಿರುವ ಯೇಸು ಕ್ರಿಸ್ತನ ಉಪಸ್ಥಿತಿಗೆ ಲೋಕಕ್ಕೆ ಸಾಕ್ಷಿಯಾಗಿರುತ್ತದೆ.
ಪ್ರಾರ್ಥನೆಗಳು
ತಂದೆಯೇ, ಅತ್ಯಮೂಲ್ಯವಾದ ಯೇಸುವಿನರಕ್ತದ ಮೂಲಕ ನನ್ನ ಹಾಗೂ ನಿನ್ನ ಮಧ್ಯೆ ಸಮಾಧಾನವನ್ನು ಏರ್ಪಡಿಸಿದಕ್ಕಾಗಿ ನಿನಗೆ ಸ್ತೋತ್ರ. ಎಂದೆಂದಿಗೂ ಯೇಸು ಕ್ರಿಸ್ತನೇ ನನ್ನ ಕರ್ತನು ನನ್ನ ರಕ್ಷಕನು ಆಗಿದ್ದಾನೆ. ನಾನು ನಿನ್ನ ಶಾಂತಿಯನ್ನು ನನ್ನ ಜೀವಿತದಲ್ಲಿ ಸ್ವೀಕರಿಸುತ್ತೇನೆ. (ಈಗ ನಿಮ್ಮ ಕೈಗಳನ್ನೆತ್ತಿ ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಧಾನವಾಗಿ ಮೃದುವಾಗಿ ಯೇಸು ಎಂದು ಹೇಳಿರಿ)
ದಯಮಾಡಿ ಪ್ರತಿನಿತ್ಯವೂ ನೀವು ಇದನ್ನು ಮಾಡಿ ನೋಡಿ.ಆಗ ದೇವರೊಂದಿಗಿನ ಮತ್ತು ಮನುಷ್ಯರೊಂದಿಗಿನ ನಿಮ್ಮ ನಡೆನುಡಿಯು ಬದಲಾಗುತ್ತದೆ.
Join our WhatsApp Channel
Most Read
● ಯೇಸುವನ್ನು ನೋಡುವ ಬಯಕೆ● ನೀವು ಎಷ್ಟು ಜೋರಾಗಿ ಮಾತಾಡ ಬಲ್ಲಿರಿ?
● ಕರ್ತನು ಎಂದಿಗೂ ಕೈ ಬಿಡುವುದಿಲ್ಲ
● ದಿನ 12:40 ದಿನಗಳ ಉಪವಾಸ ಪ್ರಾರ್ಥನೆ.
● ಒಳಕೋಣೆ
● ದೇವರು ನನಗಿಂದು ಒದಗಿಸುತ್ತಾನೋ?
● ದಿನ 25:40 ದಿನಗಳ ಉಪವಾಸ ಮತ್ತು ಪ್ರಾರ್ಥನೆ
ಅನಿಸಿಕೆಗಳು